ಪೂರ್ವ ಮುಂಗಾರು: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಾತ್ರ ಮಳೆ ಸಾಮಾನ್ಯ, 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ
ಕನ್ನಡ ಸುದ್ದಿ  /  ಕರ್ನಾಟಕ  /  ಪೂರ್ವ ಮುಂಗಾರು: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಾತ್ರ ಮಳೆ ಸಾಮಾನ್ಯ, 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ

ಪೂರ್ವ ಮುಂಗಾರು: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಾತ್ರ ಮಳೆ ಸಾಮಾನ್ಯ, 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಪೂರ್ವ ಮುಂಗಾರು ಜೋರಾಗಿಯೇ ಇದೆ. ಕೆಲವು ಜಿಲ್ಲೆಗಳಲ್ಲಂತೂ ವಾಡಿಕೆಗಿಂತ ಅಧಿಕ ಮಳೆ ಮೇ ಮೂರು ವಾರಗಳಲ್ಲಿ ಆಗಿದೆ.

ಬೆಂಗಳೂರಲ್ಲಿ ಮೇ ತಿಂಗಳ ಮಳೆ ಪ್ರಮಾಣ ಅಧಿಕವಾಗಿದೆ.
ಬೆಂಗಳೂರಲ್ಲಿ ಮೇ ತಿಂಗಳ ಮಳೆ ಪ್ರಮಾಣ ಅಧಿಕವಾಗಿದೆ. (The Hindu)

ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಈ ಬಾರಿ ಬಹುತೇಕ ಜಿಲ್ಲೆಗಳಲ್ಲಿ ಬಂಪರ್‌ ಎನ್ನಿಸಿದೆ. ಅದರಲ್ಲೂ ಮೇ 1 ರಿಂದ ಮೇ 21 ರವರೆಗಿನ ಮೂರು ವಾರಗಳ ಮಳೆ ಮೂರು ಜಿಲ್ಲೆಗಳನ್ನು ಹೊರತುಪಡಿಸಿ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚೇ ಸುರಿದಿದೆ. ಕೋಲಾರ, ವಿಜಯಪುರ, ಬೆಂಗಳೂರು, ಕಲಬುರಗಿ ಸಹಿತ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಮೂರ್ನಾಲ್ಕು ದಿನದಲ್ಲಿ ಭಾರೀ ಪ್ರಮಾಣದಲ್ಲಿ ಆಗಿದೆ.ಬೆಂಗಳೂರು ನಗರ,ಕೋಲಾರ, ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳಂತೂ ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಮಳೆಯಾಗಿರುವುದು ವಿಶೇಷ. ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆಯಾಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸುವ ಮುನ್ಸೂಚನೆಯಿದ್ದು. ಅಲ್ಲಿವರಗೂ ಕರ್ನಾಟಕದಲ್ಲಿ ಪೂರ್ವ ಮುಂದುವರೆಯುವ ಮಾಹಿತಿಯೂ ಇದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ

  • ಉತ್ತರ ಕರ್ನಾಟಕದಲ್ಲಿ ಬರದ ಜಿಲ್ಲೆ ಎಂದು ಹೆಸರುವಾಸಿಯಾಗಿ ಈಗ ನೀರಾವರಿ ಯೋಜನೆಗಳಿಂದ ಗಮನ ಸೆಳೆದಿರುವ ವಿಜಯಪುರ ಜಿಲ್ಲೆಯಲ್ಲೂ 90 ಮಿ.ಮೀ ಮಳೆಯಾಗಿದ್ದು, ಶೇ.375 ರಷ್ಟು ಮಳೆಯಾದ ಮಾಹಿತಿ ಒದಗಿಸಲಾಗಿದೆ.
  • ಬರದ ನಾಡು ಎಂದೇ ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮಳೆ ಮೂರು ವಾರಗಳ ಅವಧಿಯಲ್ಲಿ ಆಗಿದೆ. ಕೋಲಾರ ಜಿಲ್ಲೆಯಲ್ಲಿ 198 ಮಿ.ಮೀ ಮಳೆಯಾಗಿದ್ದು, ಶೇ. 324 ರಷ್ಟು ಮಳೆಯಾದ ಮಾಹಿತಿಯಿದೆ.
  • ಕಲ್ಯಾಣ ಕರ್ನಾಟಕದಲ್ಲಿ ಕೃಷ್ಣಾ ಹಾಗೂ ಭೀಮಾ ನದಿ ತೀರದ ಯಾದಗಿರಿ ಜಿಲ್ಲೆಯಲ್ಲಿ 83 ಮಿ.ಮೀ ಮಳೆಯಾಗಿದ್ದು, ಶೇ.310 ರಷ್ಟು ಮಳೆಯಾದ ಮಾಹಿತಿ ನೀಡಲಾಗಿದೆ.
  • ಬರವನ್ನೇ ಹೊದ್ದು ನಿಂತಿರುವ ರಾಯಚೂರು ಜಿಲ್ಲೆಯಲ್ಲಿ ಈ ಅವಧಿಯಲ್ಲಿ 95 ಮಿ.ಮೀ ಮಳೆಯಾಗಿದ್ದು, ಶೇ.296 ರಷ್ಟು ಮಳೆಯಾದ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.
  • ಬೆಂಗಳೂರು ನಗರದಲ್ಲಿ ಮೂರು ದಿನಗಳ ಕಾಲವಂತೂ ಎಡಬಿಡದೇ ಮಳೆ ಸುರಿದಿದೆ.ಮೂರು ವಾರದ ಅವಧಿಯಲ್ಲಿ 220 ಮಿ.ಮೀ ಮಳೆಯಾಗಿದ್ದು, ಶೇ. 268 ರಷ್ಟು ಮಳೆಯಾದ ಮಾಹಿತಿಯನ್ನು ನೀಡಲಾಗಿದೆ.
  • ಕೃಷ್ಣಾ, ಮಲಪ್ರಭ, ಘಟಪ್ರಭಾ ನದಿಗಳು ಹರಿಯುವ ಬಾಗಲಕೋಟೆ ಜಿಲ್ಲೆಯಲ್ಲಿ 91 ಮಿ.ಮೀ ಮಳೆಯಾಗಿದ್ದು, ಶೇ.262 ರಷ್ಟು ಮಳೆಯಾದ ಮಾಹಿತಿಯಿದೆ.
  • ಬಿರು ಬಿಸಿಲಿನ ಕಲಬುರಗಿ ಜಿಲ್ಲೆಯಲ್ಲಿ 67 ಮಿ.ಮೀ ಮಳೆಯಾಗಿದ್ದು, ಶೇ.253 ರಷ್ಟು ಮಳೆಯಾದ ಮಾಹಿತಿಯನ್ನು ಹವಾಮಾನ ಇಲಾಖೆ ಒದಗಿಸಿದೆ.
  • ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿ 90 ಮಿ.ಮೀ ಮಳೆಯಾಗಿದ್ದು, ಶೇ.217 ರಷ್ಟು ಮಳೆಯಾದ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
  • ಅತಿ ಹೆಚ್ಚು ಅರಣ್ಯ ಪ್ರದೇಶವಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ 110 ಮಿ.ಮೀ ಮಳೆಯಾಗಿದ್ದು, ಶೇ.202 ರಷ್ಟು ಮಳೆಯಾದ ಮಾಹಿತಿಯಿದೆ.
  • ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ 80 ಮಿ.ಮೀ ಮಳೆಯಾಗಿದ್ದು, ಶೇ.195 ರಷ್ಟು ಮಳೆಯಾದ ಮಾಹಿತಿ ಲಭಿಸಿದೆ.
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 127 ಮಿ.ಮೀ ಮಳೆಯಾಗಿದ್ದು, ಶೇ. 188 ರಷ್ಟು ಮಳೆಯಾದ ಮಾಹಿತಿಯಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 166 ಮಿ.ಮೀ ಮಳೆಯಾಗಿದ್ದು, ಶೇ. 185 ರಷ್ಟು ಮಳೆಯಾದ ಮಾಹಿತಿಯಿದೆ.
  • ರಾಮನಗರ ಜಿಲ್ಲೆಯಲ್ಲಿ 194 ಮಿ.ಮೀ ಮಳೆಯಾಗಿದ್ದು, ಶೇ. 184 ರಷ್ಟು ಮಳೆಯಾದ ಮಾಹಿತಿ ನೀಡಲಾಗಿದೆ.
  • ಕರ್ನಾಟಕದ ಗಡಿ ನಾಡು ಬೆಳಗಾವಿ ಜಿಲ್ಲೆಯಲ್ಲಿ 84 ಮಿ.ಮೀ ಮಳೆಯಾಗಿದ್ದು, ಶೇ. 159ರಷ್ಟು ಮಳೆಯಾದ ಮಾಹಿತಿಯಿದೆ.
  • ಮಧ್ಯ ಕರ್ನಾಟಕದ ಯಾಲಕ್ಕಿ ನಾಡು ಹಾವೇರಿ ಜಿಲ್ಲೆಯಲ್ಲಿ 106 ಮಿ.ಮೀ ಮಳೆಯಾಗಿದ್ದು, ಶೇ. 157 ರಷ್ಟು ಮಳೆಯಾದ ಮಾಹಿತಿಯಿದೆ.
  • ಹಂಪಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ವಿಜಯನಗರ ಜಿಲ್ಲೆಯಲ್ಲಿ 93 ಮಿ.ಮೀ ಮಳೆಯಾಗಿದ್ದು, ಶೇ.152 ರಷ್ಟು ಮಳೆಯಾದ ಮಾಹಿತಿಯಿದೆ.
  • ಮಧ್ಯ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ದಾವಣಗೆರೆ ಜಿಲ್ಲೆಯಲ್ಲಿ 96 ಮಿ.ಮೀ ಮಳೆಯಾಗಿದ್ದು, ಶೇ. 148 ರಷ್ಟು ಮಳೆಯಾದ ಮಾಹಿತಿಯಿದೆ.
  • ಧಾರವಾಡ ಜಿಲ್ಲೆಯಲ್ಲಿ 97 ಮಿ.ಮೀ ಮಳೆಯಾಗಿದ್ದು, ಶೇ. 142 ರಷ್ಟು ಮಳೆಯಾದ ಮಾಹಿತಿ ನೀಡಲಾಗಿದೆ.
  • ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ 118 ಮಿ.ಮೀ ಮಳೆಯಾಗಿದ್ದು, ಶೇ.134 ರಷ್ಟು ಮಳೆಯಾದ ಮಾಹಿತಿ ನೀಡಲಾಗಿದೆ.
  • ಕರ್ನಾಟಕದ ಗಡಿ ಜಿಲ್ಲೆಯಾದ ಬೀದರ್‌ ಜಿಲ್ಲೆಯಲ್ಲಿ 42 ಮಿ.ಮೀ ಮಳೆಯಾಗಿದ್ದು, ಶೇ.132 ರಷ್ಟು ಮಳೆಯಾದ ಮಾಹಿತಿಯಿದೆ.
  • ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಭಾರೀ ಮಳೆಯಾಗಿದೆ. ಅದರಲ್ಲೂ ಮೂರು ವಾರದಲ್ಲಿ 171 ಮಿ.ಮೀ ಮಳೆಯಾಗಿದ್ದು, ಶೇ. 125ರಷ್ಟು ಮಳೆಯಾದ ಮಾಹಿತಿಯಿದೆ.
  • ಗದಗ ಜಿಲ್ಲೆಯಲ್ಲಿ 76 ಮಿ.ಮೀ ಮಳೆಯಾಗಿದ್ದು, ಶೇ. 109ರಷ್ಟು ಮಳೆಯಾದ ಮಾಹಿತಿಯಿದೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 164 ಮಿ.ಮೀ ಮಳೆಯಾಗಿದ್ದು, ಶೇ. 90 ರಷ್ಟು ಮಳೆಯಾದ ಮಾಹಿತಿಯಿದೆ.
  • ಚಿತ್ರದುರ್ಗ ಜಿಲ್ಲೆಯಲ್ಲಿ 78 ಮಿ.ಮೀ ಮಳೆಯಾಗಿದ್ದು, ಶೇ.90 ರಷ್ಟು ಮಳೆಯಾದ ಮಾಹಿತಿಯಿದೆ.
  • ಚಿಕ್ಕಮಗಳೂರು ಜಿಲ್ಲೆಯಲ್ಲಿ 110 ಮಿ.ಮೀ ಮಳೆಯಾಗಿದ್ದು, ಶೇ. 88 ರಷ್ಟು ವಾಡಿಕೆ ಮಳೆಯಾದ ಮಾಹಿತಿ ಒದಗಿಸಲಾಗಿದೆ.
  • ಮಂಡ್ಯ ಜಿಲ್ಲೆಯಲ್ಲಿ 123 ಮಿ.ಮೀ ಮಳೆಯಾಗಿದ್ದು, ಶೇ. 87 ರಷ್ಟು ಮಳೆಯಾದ ಮಾಹಿತಿಯಿದೆ.
  • ಶಿವಮೊಗ್ಗ ಜಿಲ್ಲೆಯಲ್ಲಿ 84 ಮಿ.ಮೀ ಮಳೆಯಾಗಿದ್ದು, ಶೇ. 76 ರಷ್ಟು ಮಳೆಯಾದ ಮಾಹಿತಿ ನೀಡಲಾಗಿದೆ.
  • ಹಾಸನ ಜಿಲ್ಲೆಯಲ್ಲಿ 102 ಮಿ.ಮೀ ಮಳೆಯಾಗಿದ್ದು, ಶೇ.60 ರಷ್ಟು ಮಳೆಯಾದ ಮಾಹಿತಿಯಿದೆ.

ಸಾಮಾನ್ಯ ಮಳೆ ಎಲ್ಲೆಲ್ಲಿ

  • ಕೊಡಗು ಜಿಲ್ಲೆಯಲ್ಲಿ 96 ಮಿ.ಮೀ ಮಳೆಯಾಗಿದ್ದು, ಶೇ. 12 ರಷ್ಟು ಮಳೆಯಾದ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.
  • ಮೈಸೂರು ಜಿಲ್ಲೆಯಲ್ಲಿ 79 ಮಿ.ಮೀ ಮಳೆಯಾಗಿದ್ದು, ಶೇ.1 ರಷ್ಟು ಮಳೆಯಾದ ಮಾಹಿತಿ ಒದಗಿಸಲಾಗಿದೆ.
  • ಚಾಮರಾಜನಗರ ಜಿಲ್ಲೆಯಲ್ಲಿ 76 ಮಿ.ಮೀ ಮಳೆಯಾಗಿದ್ದು, ಶೇ.1 ರಷ್ಟು ಮಳೆ ಕೊರತೆಯಾದ ಮಾಹಿತಿಯಿದೆ.

ಕರ್ನಾಟಕ ಮೇ ತಿಂಗಳ ಮಳೆ ಪ್ರಮಾಣ
ಕರ್ನಾಟಕ ಮೇ ತಿಂಗಳ ಮಳೆ ಪ್ರಮಾಣ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.