ಪೂರ್ವ ಮುಂಗಾರು ಮಧ್ಯ ಕರ್ನಾಟಕದಲ್ಲಿ ಚುರುಕು; ತುಂಗಭದ್ರಾ ಜಲಾಶಯ ನೀರಿನ ಒಳ ಹರಿವಿನಲ್ಲಿ ಭಾರೀ ಏರಿಕೆ
ಕಳೆದ ವರ್ಷ ತುಂಬಿದರೂ ಗೇಟ್ ಮುರಿದು ತೊಂದರೆಯಾಗಿದ್ದ ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಈ ಬಾರಿ ಪೂರ್ವ ಮುಂಗಾರು ಮಳೆಯಿಂದಲೇ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ವಿಜಯನಗರ: ಮಲೆನಾಡು ಹಾಗೂ ಮಧ್ಯಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾದರೆ ಯಥೇಚ್ಛ ನೀರು ಹರಿದು ತುಂಬುವ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದಲ್ಲಿ ಇರುವ ತುಂಗಭದ್ರಾ ಜಲಾಶಯಕ್ಕೆ ಈ ಬಾರಿ ಮಳೆಗಾಲಕ್ಕೆ ಮುನ್ನವೇ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನಾಲ್ಕೈದು ದಿನಗಳಿಂದ ಹಾವೇರಿ, ದಾವಣಗೆರೆ, ಗದಗ, ಕೊಪ್ಪಳ ಹಾಗೂ ವಿಜಯನಗರ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮವಾಗಿ ಅಲ್ಲಿಂದ ಹಳ್ಳ ಕೊಳ್ಳಗಳ ಮೂಲಕ ಹರಿದ ನೀರು ವಿಜಯನಗರ ಜಲಾಶಯವನ್ನು ಸೇರುತ್ತಿದೆ. ಎರಡು ದಿನದಿಂದಲೂ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ 10000 ಕ್ಯೂಸೆಕ್‌ನಷ್ಟಿದೆ. ಎರಡು ದಿನದಲ್ಲೇ ಸುಮಾರು ಎರಡು ಅಡಿಯಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದ್ದು. ಇನ್ನೂ ಹೆಚ್ಚುವ ನಿರೀಕ್ಷೆಯಿದೆ.
ತುಂಗಭದ್ರಾ ಜಲಾಶಯಕ್ಕೆ ಗುರುವಾರ ಬೆಳಿಗ್ಗೆಯ ಹೊತ್ತಿಗೆ 9,993 ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಬುಧವಾರವೂ ಇಷ್ಟೇ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟವು 1,587.07 ಅಡಿಗೆ ಏರಿಕೆಯಾಗಿದೆ.
ಜಲಾಶಯದಲ್ಲಿ ಸದ್ಯ 10.06 ಟಿಎಂಸಿ ನೀರು ಸಂಗ್ರಹವಾಗಿದೆ. ಎರಡು ದಿನದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಜಲಾಶಯದಲ್ಲಿ 105.33 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಜಲಾಶಯದಲ್ಲಿ ಗರಿಷ್ಠ 1633 ಅಡಿ ನೀರು ಸಂಗ್ರಹಿಸಬಹುದು. ಜಲಾಶಯದಿಂದ ಸುಮಾರು 2,100 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ದಿನ ಅವಧಿಯಲ್ಲಿ ಜಲಾಶಯಕ್ಕೆ 487 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು ಹೊರ ಹರಿವಿನ ಪ್ರಮಾಣವು 479 ಕ್ಯೂಸೆಕ್ ಇತ್ತು. ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 3.38 ಟಿಎಂಸಿ ನೀರು ಸಂಗ್ರಹವಿತ್ತು. ನೀರಿನ ಸಂಗ್ರಹವು 1,577 ಅಡಿಯಷ್ಟಿತ್ತು.
ಉತ್ತರ ಕರ್ನಾಟಕದ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾದ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುವುದು ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಉತ್ತಮ ಮಳೆಯಾಗಿ ತುಂಗಭದ್ರಾ ನದಿ ನೀರು ಹರಿದು ಬರುವ ಮೂಲಕ. ಕಳೆದ ವರ್ಷವಂತೂ ಜಲಾಶಯ ಬೇಗನೇ ತುಂಬಿತ್ತು. ಅದರ ಹಿಂದಿನ ವರ್ಷ ತುಂಬಲು ಆಗಿರಲಿಲ್ಲ.
ಆದರೆ ಹಿಂದಿನ ವರ್ಷ ತುಂಬುವ ಹೊತ್ತಿಗೆ ಕ್ರಸ್ಟ್ ಗೇಟ್ ಮುರಿದು ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗಿತ್ತು. ಆನಂತರ ವಾರದೊಳಗೆ ಕ್ರಸ್ಟ್‌ಗೇಟ್ ದುರಸ್ತಿಗೊಳಿಸಲಾಗಿತ್ತು.
ಆನಂತರ ಮತ್ತೆ ಮಳೆಯಾಗಿದ್ದರಿಂದ ಜಲಾಶಯ ತುಂಬಿತ್ತು. ಈ ಬಾರಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜತೆಗೆ ಕರ್ನಾಟಕದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳ ಬೆಳೆಗಳಿಗೆ ನೀರು ಹರಿಸಲಾಗಿತ್ತು. ಇದರಿಂದ ಜಲಾಶಯದ ಮಟ್ಟವು ತೀವ್ರ ಮಟ್ಟಕ್ಕೆ ಕುಸಿದಿದೆ. ಕರ್ನಾಟಕದಲ್ಲಿ ಅತಿ ಕಡಿಮೆ ನೀರು ಸಂಗ್ರಹವಾಗಿರುವುದು ತುಂಗಭದ್ರಾ ಜಲಾಶಯದಲ್ಲಿಯೇ. ಈಗ ಮಳೆ ಬರುತ್ತಿರುವುದು ಸಂತಸ ತಂದಿದೆ.
ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುವುದು ಮಲೆನಾಡಿನ ಉತ್ತಮ ಮಳೆಯಿಂದಲೇ. ಕಳೆದ ವರ್ಷ ಕ್ರಸ್ಟ್ ಗೇಟ್ ಸಮಸ್ಯೆ ನಡುವೆಯೂ ಜಲಾಶಯಕ್ಕೆ ನೀರು ಬಂದಿತ್ತು. ಸರ್ಕಾರದ ನಿರ್ದೇಶನದಂತೆ ನೀರನ್ನು ಬೇಸಿಗೆ ಬೆಳೆಗೆ ನೀಡಲಾಗಿತ್ತು. ಕುಡಿಯಲು ನೀರನ್ನು ಒದಗಿಸಲಾಗಿತ್ತು. ಈಗ ಪೂರ್ವ ಮುಂಗಾರು ಕಾರಣಕ್ಕೆ ಒಳಹರಿವು ಚೆನ್ನಾಗಿದೆ. ಮುಂಗಾರು ಮುಂದಿನ ವಾರ ಆರಂಭವಾಗುವ ಮುನ್ಸೂಚನೆ ಇರುವುದರಿಂದ ಜಲಾಶಯಕ್ಕೆ ಮುಂದಿನ ಕೆಲ ದಿನಗಳಲ್ಲಿ ನೀರು ಹೆಚ್ಚು ಬರಬಹುದು ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹೇಳುತ್ತಾರೆ.