ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ

ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ

ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರ ಸಂಗಮವಾಗುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಾಘಮಾಸದ ಪುಣ್ಯಸ್ನಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಮೈಸೂರಿನ ತಿ. ನರಸೀಪುರದಲ್ಲಿ ನಡೆಯಲಿರುವ 13ನೇ ಕುಂಭಮೇಳಕ್ಕೆ ನಾಳೆ (ಫೆ.10) ಚಾಲನೆ ಸಿಗಲಿದೆ.

ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ
ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ

ಅತ್ತ ಪ್ರಯಾಗ್‌​ರಾಜ್‌​​ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಕೋಟ್ಯಂತರ ಭಕ್ತರು ದೇಶ-ವಿದೇಶಗಳಿಂದ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಪುಣ್ಯಸ್ನಾನಕ್ಕಾಗಿ ದೂರದ ಉತ್ತರ ಪ್ರದೇಶಕ್ಕೆ ಹೋಗಲು ಸಾಧ್ಯವಾಗದವರಿಗೆ ಕರ್ನಾಟಕದ ಕುಂಭಮೇಳ ಕೈಬೀಸಿ ಕರೆಯುತ್ತಿದೆ. ಅದು ಕೂಡಾ ನಮ್ಮ ಕರ್ನಾಟಕದಲ್ಲಿಯೇ ಕುಂಭಮೇಳ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯ ತಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ (ಫೆ.10) 3 ದಿನಗಳ ಕಾಲ ಅದ್ಧೂರಿ ಕುಂಭಮೇಳ ನಡೆಯುತ್ತಿದ್ದು, ಅಂತಿಮ ಹಂತದ ಸಿದ್ಧತೆ ನಡೆದಿದೆ. ತಿ. ನರಸೀಪುರದ ತಿರುಮಕೂಡಲಿಗೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳ ಜನರು ಕೂಡಾ ಮೈಸೂರು ಕುಂಭಮೇಳಕ್ಕೆ ಬರುವ ನಿರೀಕ್ಷೆ ಇದೆ.

ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿಯಾಗಿರುವ ಸ್ಫಟಿಕ ಸರೋವರ ಸಂಗಮವಾಗುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಾಘಮಾಸದ ಪುಣ್ಯಸ್ನಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಸಚಿವ ಡಾ ಹೆಚ್. ಸಿ‌ ಮಹದೇವಪ್ಪ ನಾಳೆ 13ನೇ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಆದಿ ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸೇರಿ ಹಲವರು‌ ಭಾಗಿಯಾಗಲಿದ್ದಾರೆ. ಕುಂಭಮೇಳಕ್ಕೆ ಬರುವ ಭಕ್ತಾದಿಗಳಿಗೆ ಮೂಲಸೌಕರ್ಯ ಸೇರಿದಂತೆ ಹಲವು ವ್ಯವಸ್ಥೆ ಕೂಡ ಮಾಡಲಾಗಿದೆ.

ಏಳು ವರ್ಷಗಳ ಬಳಿಕ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುತ್ತಿರುವ ಹಿನ್ನೆಲೆ, ತ್ರಿವೇಣಿ ಸಂಗಮದಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ತ್ರಿವೇಣಿ ಸಂಗಮಕ್ಕೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ನೀಡಿ ಕುಂಭಮೇಳ ನಡೆಯಲಿರುವ ಸ್ಥಳ ಪರಿಶೀಲನೆ ನಡೆಸಿದ್ದರು. ಧಾರ್ಮಿಕ ಕಾರ್ಯಕ್ರಮ ನಡೆಯುವ ವೇದಿಕೆ, ಪುಣ್ಯಸ್ನಾನ ಮಾಡುವ ಸ್ಥಳ ಪರಿಶೀಲನೆ ನಡೆಸಿದರು. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕುಂಭಮೇಳಕ್ಕೆ ಆಗಮಿಸುತ್ತಾರೆ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಕುಂಭಮೇಳದ ಯಶಸ್ವಿಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಯಾವುದೇ ಲೋಪದೋಷಗಳು ಆಗದ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ಮಲಾನಂದ ನಾಥ ಸ್ವಾಮಿಜಿ ಸಲಹೆ ನೀಡಿದರು.

ಫೆ. 10ರಂದು ಅಂಕುರಾರ್ಪಣೆ ಮತ್ತು ಧ್ವಜಾರೋಹಣ

ಫೆ. 10ರಂದು ಬೆಳಗ್ಗೆ 8.30ಕ್ಕೆ ಶ್ರೀ ಅಗಸ್ತ್ಯೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಙಾ ಕಾರ್ಯಕ್ರಮ ಅಂಕುರಾರ್ಪಣೆ ಮತ್ತು ಧ್ವಜಾರೋಹಣ ನೇರವೇರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಉಪಸ್ಥಿತರಿರಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಸಚಿವ ಕೆ.ವೆಂಕಟೇಶ್, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಇರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಶಾಸಕ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಬೋಸ್ ಅವರು ಆಗಮಿಸಲಿದ್ದಾರೆ.

ಫೆಬ್ರುವರಿ 11ರಂದು ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಫೆ. 12ರಂದು ಬೆಳಗ್ಗೆ 12 ಗಂಟೆಗೆ ಧರ್ಮ ಸಭೆಯನ್ನು ಏರ್ಪಡಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಎಲ್ಲೆಲ್ಲಿ ಸ್ನಾನಕ್ಕೆ ವ್ಯವಸ್ಥೆ?

ಅಗಸ್ತೇಶ್ವರ, ಗುಂಜಾ ನರಸಿಂಹ ಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನಘಟ್ಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣದಿಂದ, ವೃದ್ಧರು ಮತ್ತು ಮಕ್ಕಳು ಮುಳುಗದಂತೆ ಕ್ರಮ ವಹಿಸಲಾಗುತ್ತಿದೆ. ಸ್ನಾನ ಮಾಡುವವರು ಮೂರು ಅಡಿ ಆಳದವರೆಗೆ ಹೋಗಿ ಸ್ನಾನ ಮಾಡಲು ಅವಕಾಶವಿದೆ. ಮೂರು ಅಡಿ ಆಳದ ನಂತರ ಬ್ಯಾರಿಕೇಡ್ ನಹಾಕಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಈ ಬಾರಿ ತೇಲುವ ಸೇತುವೆಯನ್ನೂ ನಿರ್ಮಾಣ ಮಾಡುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ 15ಕ್ಕೂ ಹೆಚ್ಚು ಬೋಟ್ ನಿಯೋಜಿಸಲು ವ್ಯವಸ್ಥೆ ಮಾಡಿದೆ. ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಕಾಲ್ತುಳಿತ ಸಂಭವಿಸದಂತೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕುಂಭಮೇಳ ಸ್ಥಳದಲ್ಲಿ ಸ್ವಚ್ಛತೆ ಮರೀಚಿಕೆ

ಕುಂಭಮೇಳ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಇಲ್ಲ ಎಂಬ ಆರೋಪ ಕೇಳಿಬಂದಿದೆ. ಕಾಟಾಚಾರಕ್ಕೆ ಕುಂಭಮೇಳ ಆಚರಣೆ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾಡಳಿತ ಹಾಗೂ ತಿ. ನರಸೀಪುರ ತಾಲ್ಲೂಕು ಆಡಳಿತದ ವಿರುದ್ಧ ಜನರು ಕಿಡಿಕಾರಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಪುಣ್ಯಸ್ನಾನಕ್ಕೆ ಆಗಮಿಸುತ್ತಾರೆ. ಪುಣ್ಯಸ್ನಾನ ಮಾಡುವ ಸ್ಥಳದಲ್ಲೇ ಸ್ವಚ್ಛತೆ ಇಲ್ಲದಂತಾಗಿದೆ. ಕುಂಭಮೇಳ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಅವರು ಕುಂಭಮೇಳ ಆಚರಣೆಗೆ ಹೆಚ್ಷಿನ ಉತ್ಸಾಹ ತೋರುತ್ತಿಲ್ಲ. ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕುಂಭಮೇಳ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಒತ್ತಾಯಿಸಿದ್ದಾರೆ.

Whats_app_banner