ಕನ್ನಡ ಸುದ್ದಿ  /  Karnataka  /  Preparing To Present Karnataka's Argument In The Supreme Court Over Border Dispute Says Cm Bommai

CM Bommai on border dispute: ಗಡಿ ವಿವಾದ; ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕದ ವಾದ ಮಂಡಿಸಲು ಸಿದ್ಧತೆ - ಸಿಎಂ ಬೊಮ್ಮಾಯಿ

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕದ ವಾದವನ್ನು ಮಂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ವಾದಕ್ಕೆ ಗಟ್ಟಿಯಾದ ಆಧಾರವೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕದ ವಾದವನ್ನು ಮಂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ವಾದಕ್ಕೆ ಗಟ್ಟಿಯಾದ ಆಧಾರವೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಗೃಹ ಕಚೇರಿ ಕೃಷ್ಣಾದಲ್ಲಿ ಗಡಿ ವಿವಾದ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಸಭೆ ನಡೆಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಗಡಿವಿವಾದ ಪ್ರಕರಣವಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಗ್ಗೆ ಮಾತುಕತೆ ಮೂಲಕವೂ ವಿವಾದ ಬಗೆಹರಿಸಿಕೊಳ್ಳುವ ಚಿಂತನೆಯಿರುವುದಾಗಿ ತಿಳಿಸಿರುವ ಮಾಹಿತಿ ದೊರೆತಿದೆ ಎಂದರು.

ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಅವರು ದಾವೆ ಹೂಡಿದ್ದಾರೆ. ಸರ್ವೋಚ್ಛ ನ್ಯಾಯಾಯಲದಲ್ಲಿ ವಾದ ಮಂಡನೆಯ ನಿರ್ಣಯವನ್ನು ಸರ್ವಪಕ್ಷ ಸಭೆ ಹಾಗೂ ಗಡಿಪ್ರಾಧಿಕಾರದೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಕರ್ನಾಟಕ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುವುದಾಗಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಮುಂದಿನ ವಾರ ಸರ್ವಪಕ್ಷ ಸಭೆ

ಮುಂದಿನ ವಾರ ಸರ್ವಪಕ್ಷ ಸಭೆ ಕರೆಯಲಿದ್ದು, ಮಹಾರಾಷ್ಟ್ರ ರಾಜ್ಯದ ಮಾತುಕತೆ ಮೂಲಕ ವಿವಾದ ಬಗೆಹರಿಸುವ ಇಂಗಿತ ಸೇರಿದಂತೆ ಎಲ್ಲ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿರುವುದಾಗಿ ತಿಳಿಸಿದರು. ಗಡಿವಿವಾದವೇ ಮುಗಿದುಹೋಗಿದೆ. ಆದರೆ ಮಹಾರಾಷ್ಟ್ರ ರಾಜ್ಯದವರು ಮತ್ತೆ ವಿವಾದವನ್ನು ಎಬ್ಬಿಸಿದ್ದಾರೆ. ಗ್ರಾಮಪಂಚಾಯತಿ ನಿರ್ಣಯ ಹಾಗೂ ಪೂರಕ ವರದಿಗಳೆಲ್ಲವೂ ಇದೆ. ಬರುವ ದಿನಗಳಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.

ಗಡಿ ವಿವಾದ: ಕರ್ನಾಟಕಕ್ಕೆ 'ಮಹಾ' ಡಿಸಿಎಂ ಫಡ್ನವೀಸ್‌ ಸವಾಲು: ಸಿಎಂ ಬೊಮ್ಮಾಯಿ ಪ್ರತಿ ಸವಾಲು!

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ನಾಯಕರು, ಇದೀಗ ಕರ್ನಾಟಕವನ್ನು ಕೆಣಕುವ ಭಂಡತನ ಪ್ರದರ್ಶಿಸುತ್ತಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಬೆಳಗಾವಿ ಹಾಗೂ ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ಸಿದ್ಧ ಎಂದು ಹೇಳಿದ್ದಾರೆ.

ಕರ್ನಾಟಕ - ಮಹಾರಾಷ್ಟ್ರದ ಗಡಿಯಲ್ಲಿನ ಗ್ರಾಮಗಳನ್ನು ನಮ್ಮ ವಶಕ್ಕೆ ಪಡೆಯುತ್ತೇವೆ. ಮಹಾರಾಷ್ಟ್ರಕ್ಕೆ ಸೇರಬೇಕಾದ ಒಂದೇ ಒಂದು ಗ್ರಾಮವನ್ನೂ ನಾವು ಕರ್ನಾಟಕಕ್ಕೆ ಬಿಟ್ಟುಕೊಡುವುದಿಲ್ಲ ಎಂದು ದೇವೇಂದ್ರ ಫಡ್ನವಿಸ್‌ ಗುಡುಗಿದ್ದಾರೆ. ಮರಾಠಿ ಬುಹುಸಂಖ್ಯಾತರಿರುವ ಬೆಳಗಾವಿ-ಕಾರವಾರ-ನಿಪ್ಪಾಣಿಯ ಗ್ರಾಮಗಳನ್ನು, ಮಹಾರಾಷ್ಟ್ರಕ್ಕೆ ಸೇರ್ಪಡೆಯೇ ಮಾಡಿಯೇ ಸಿದ್ಧ ಎಂಬ ಫಟ್ನವೀಸ್‌ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ.

ಇನ್ನು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಅವರಿಗೆ ತಿರುಗೇಟು ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡದ ನೆಲ ಕಬಳಿಸುವ ಮಹಾರಾಷ್ಟ್ರ ನಾಯಕರ ಕನಸು ನನಸಾಗದು ಎಂದು ಗುಡುಗಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿಎಂ ಬೊಮ್ಮಾಯಿ, ''ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದೂ ನನಸಾಗುವುದಿಲ್ಲ. ನಾಡಿನ ನೆಲ, ಜಲ, ಗಡಿ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಕಟಿ ಬದ್ಧವಾಗಿದೆ..'' ಎಂದು ಸ್ಪಷ್ಟಪಡಿಸಿದ್ದಾರೆ.

''ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕ ಪ್ರದೇಶಗಳಾದ‌ ಸೊಲ್ಲಾಪುರ, ಅಕ್ಕಲಕೋಟೆ ಕರ್ನಾಟಕಕ್ಕೆ ಸೇರಬೇಕೆನ್ನುವುದು ನಮ್ಮ ಆಗ್ರಹವಿದೆ. ಮಹಾರಾಷ್ಟ್ರ ಸರ್ಕಾರ 2004ರಿಂದಲೂ ಎರಡೂ ರಾಜ್ಯಗಳ ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದೆ. ಇದುವರೆಗೂ ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ. ನಾವು ನಮ್ಮ ಕಾನೂನು ಹೋರಾಟವನ್ನು ಪ್ರಬಲವಾಗಿ ಮಾಡಲು ಸನ್ನದ್ದರಾಗಿದ್ದೇವೆ..'' ಎಂದು ಸಿಎಂ ಭರವಸೆ ನೀಡಿದ್ದಾರೆ.