ಕನ್ನಡ ಸುದ್ದಿ  /  ಕರ್ನಾಟಕ  /  Inflation: ಬೆಲೆ ಏರಿಕೆಯಿಂದ ಬೆಂಗಳೂರಿಗರ ಖರೀದಿ ಸಾಮರ್ಥ್ಯ ಕುಸಿತ; ದುಡ್ಡಿದ್ದರೆ ಮಾತ್ರ ಟೊಮೆಟೊ ಸಾಂಬಾರ್!

Inflation: ಬೆಲೆ ಏರಿಕೆಯಿಂದ ಬೆಂಗಳೂರಿಗರ ಖರೀದಿ ಸಾಮರ್ಥ್ಯ ಕುಸಿತ; ದುಡ್ಡಿದ್ದರೆ ಮಾತ್ರ ಟೊಮೆಟೊ ಸಾಂಬಾರ್!

ಟೊಮೆಟೊ ಸೇರಿದಂತೆ ತರಕಾರಿಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಜನರ ಖರೀದಿ ಸಾಮರ್ಥ್ಯ ಕುಸಿದಿದ್ದು, ನಿತ್ಯ ಅಡುಗೆಗೆ ಬೇಕಾಗುವ ಟೊಮೆಟೊ ಬಳಸದೆ ಅಡುಗೆ ಮಾಡಬೇಕಾಗಿ ಬಂದಿದೆ.

ಬೆಲೆ ಏರಿಕೆಯಿಂದ ಬೆಂಗಳೂರಿಗರ ಖರೀದಿ ಸಾಮರ್ಥ್ಯ ಕುಸಿತ; ದುಡ್ಡಿದ್ದರೆ ಮಾತ್ರ ಟೊಮೆಟೊ ಸಾಂಬಾರ್!
ಬೆಲೆ ಏರಿಕೆಯಿಂದ ಬೆಂಗಳೂರಿಗರ ಖರೀದಿ ಸಾಮರ್ಥ್ಯ ಕುಸಿತ; ದುಡ್ಡಿದ್ದರೆ ಮಾತ್ರ ಟೊಮೆಟೊ ಸಾಂಬಾರ್! (Camilo Freedman/Bloomberg)

ಟೊಮೆಟೊ, ಬೀನ್ಸ್‌ ಸೇರಿದಂತೆ ತರಕಾರಿಗಳ ಬೆಲೆ ಗಗನಕ್ಕೇರಿದೆ. ಹಣದುಬ್ಬರದಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಎಲ್ಲಿಯವರೆಗೆ ಎಂದರೆ, ಈ ವರ್ಷ ಮನೆಯಲ್ಲಿಯೇ ಬೇಯಿಸಿದ ಊಟದ ಬೆಲೆ ಕನಿಷ್ಠ 10 ಶೇಕಡದಷ್ಟು ಹೆಚ್ಚಾಗಿದೆ ಎಂದು ಕ್ರಿಸಿಲ್‌ನ ಫುಡ್ ಪ್ಲೇಟ್ ಕಾಸ್ಟ್ ಟ್ರ್ಯಾಕರ್ ತಿಳಿಸಿದೆ. ಪ್ರತಿದಿನ ಹೆಚ್ಚಾಗಿ ಬಳಕೆಯಾಗುವ ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ತರಕಾರಿಗಳ ಬೆಲೆ ಹೆಚ್ಚಳದಿಂದ ವೆಚ್ಚದ ಹೆಚ್ಚಳ ಸರಳವಾಗಿ ತಿಳಿಯುತ್ತದೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬೇರೆ ದಾರಿಯಲ್ಲದೆ ಬದಲಿ ಆಯ್ಕೆಗಳತ್ತ ನೋಡುತ್ತಿವೆ. ಕಡಿಮೆ ಪ್ರಮಾಣದಲ್ಲಿ ತರಕಾರಿ ಖರೀದಿ ಮಾಡುವುದು, ತರಕಾರಿ ಬದಲಿಗೆ ಮಾಂಸಾಹಾರ ಸೇವನೆ, ತರಕಾರಿ ಬಳಸದೆ ಅಡುಗೆ ಮಾಡುವುದು ಸೇರಿದಂತೆ ವಿವಿಧ ದಾರಿ ಹಿಡಿದಿದ್ದಾರೆ.

ಜುಲೈ 8ರಂದು ಬೀನ್ಸ್‌ ಬೆಲೆ ಕೆಜಿಗೆ 98 ರೂಪಾಯಿ ಇತ್ತು. ಟೊಮೆಟೊ 70, ಆಲೂಗಡ್ಡೆ 59, ಈರುಳ್ಳಿ 56ರೂಪಾಯಿಗೆ ಹಾಪ್‌ಕಾಮ್ಸ್‌ನಲ್ಲಿ ಮಾರಾಟವಾಗುತ್ತಿದೆ. ಟೊಮೆಟೋ ಬೆಲೆ ಇಂದಿಗೆ ನೂರರ ಸಮೀಪ ಬಂದಿದೆ. ಹೆಚ್ಚಿನ ತರಕಾರಿಗಳು ಕೆಳ ಮಧ್ಯಮ ವರ್ಗದ ಖರೀದಿ ಸಾಮರ್ಥ್ಯವನ್ನು ಮೀರಿ ಏರಿಕೆಯಾಗುತ್ತಿದೆ.‌ ಇದು ದೇಶದ ಎಲ್ಲಾ ಕಡೆಗಳಲ್ಲಿ ಸಮಸ್ಯೆಯಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರು ದೊಡ್ಡ ಸಮುದ್ರವಿದ್ದಂತೆ. ಉದ್ಯಾನ ನಗರಿಯ ನಗರವಾಸಿಗಳಿಗೆ ಬೆಲೆಯೇರಿಕೆ ಬಿಸಿ ತಟ್ಟಿದೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಈ ಸಮಸ್ಯೆ ಹೆಚ್ಚು.

ಕಳೆದ ವರ್ಷದಿಂದ ಕೆಲವೊಂದು ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿವೆ. ಹೀಗಾಗಿ ಹಲವಾರು ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹಬ್ಬದ ಸಮಯದಲ್ಲೂ ಸೀಮಿತ ಹಣ್ಣುಗಳು ಖರೀದಿ ಮಾಡಿದ್ದವು. ಬಾಳೆಹಣ್ಣು ಹೊರತುಪಡಿಸಿ ಇತರ ಹಣ್ಣುಗಳನ್ನು ಮುಟ್ಟುವಂತಿರಲಿಲ್ಲ. ಹಣ್ಣುಗಳನ್ನು ಪ್ರತಿನಿತ್ಯ ಖರೀದಿಸಿ ತಿನ್ನಬೇಕೆಂದಿಲ್ಲ. ಆದರೆ, ತರಕಾರಿಗಳನ್ನು ಬಳಸದೆ ಅಡುಗೆ ಮಾಡುವುದು ನಿಜವಾದ ಸಮಸ್ಯೆಯಾಗಿದೆ ಎಂದು ನಗರವಾಸಿಗಳು ಹೇಳುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪರ್ಯಾಯ ಆಯ್ಕೆಗಳತ್ತ ಗೃಹಿಣಿಯರು

ಬೆಂಗಳೂರಿನಲ್ಲಿ ವಿವಿಧ ವರ್ಗಗಳ ಜನರಿದ್ದಾರೆ. ಅನಾರೋಗ್ಯಪೀಡಿತ ತಾಯಿಯನ್ನು ನೋಡಿಕೊಳ್ಳುತ್ತಿರುವ ಪೌರಕಾರ್ಮಿಕರಾದ ಶಶಿರೇಖಾ (ಹೆಸರು ಬದಲಿಸಲಾಗಿದೆ) ಅವರು ತಮ್ಮ ಮಾಸಿಕ ಸಂಬಳದಲ್ಲಿ ಅಗತ್ಯಗಳಿಗೆ ಹಣ ಹಂಚಿಕೆ ಮಾಡಲು ಒದ್ದಾಡುತ್ತಿದ್ದಾರೆ. ತಿಂಗಳ ಹಣ ಹಂಚಿಕೆಯಲ್ಲಿ ತರಕಾರಿ ಪಾಲು ಹೆಚ್ಚಾಗುತ್ತಿದ್ದು, ಇರುವ ಬಜೆಟ್‌ನಲ್ಲಿ ಅಲ್ಪಸ್ವಲ್ಪವೇ ತರಕಾರಿ ಖರೀದಿ ಮಾಡಬೇಕಾದ ಅನಿವಾರ್ಯತೆ ಬಂದಿದೆ. ದಿನಕ್ಕೆ ಎರಡೇ ತುಂಡು ತರಕಾರಿ ಬಳಸುವಂತಾಗಿದೆ.

ಕಳೆದ ಆರೇಳು ತಿಂಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ತರಕಾರಿಗೆ ಬಜೆಟ್‌ ಹಂಚುವಾಗ ಖರೀದಿ ಪ್ರಮಾಣವನ್ನು 1 ಕೆಜಿಯಿಂದ ಅರ್ಧ ಕೆಜಿಗೆ ಇಳಿಸಬೇಕಾಯ್ತು. ಈಗೀಗ ಅದು ಕೂಡಾ ಸಾಧ್ಯವಾಗುತ್ತಿಲ್ಲ. ನಾಲ್ಕು ತುಂಡು ತರಾಕಾರಿಗಳಿಂದ ಇಡೀ ವಾರ ನಿರ್ವಹಿಸಬೇಕಾಗಿದೆ. ಸೊಪ್ಪು ತರಕಾರಿ ಕೂಡಾ ದುಬಾರಿಯಾಗಿದೆ. ಹೀಗಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವವರಿಂದ ಖರೀದಿಸುತ್ತಿದ್ದೇನೆ ಎಂದು ಶಶಿರೇಖಾ ಹೇಳಿದ್ದಾರೆ.

ಸಾಂಬಾರ್‌ ಬದಲಿಗೆ ಚಟ್ನಿಯೇ ಗತಿ

ಈಗೀಗ ಸಾಂಬಾರ್ ಮಾಡುವುದು ಐಷಾರಾಮ ಜೀವನಕ್ಕೆ ಉದಾಹರಣೆಯಾಗಿದೆ. ಕಡಿಮೆ ಬೆಲಗೆ ಟೊಮೆಟೊ ಸಿಕ್ಕರೆ ಸಾಂಬಾರ್‌ಗೆ ಬಳಸುತ್ತೇನೆ. ಇನ್ನೂ ಕೆಲವು ವಾರಗಳಲ್ಲಿ ತರಕಾರಿಗಳೆಲ್ಲ ದುಬಾರಿಯಾದಾಗ, ತೆಂಗಿನಕಾಯಿ ಬಳಸಿ ಚಟ್ನಿ ಮಾಡಬೇಕಾಗುತ್ತದೆ ಎಂದು ಶಶಿರೇಖಾ ಹೇಳುತ್ತಾರೆ.

ಸಸ್ಯಾಹಾರಿಗಳ ಗೋಳು ಕೇಳುವವರಿಲ್ಲ

ಮಧ್ಯಮ ವರ್ಗದ ಕುಟುಂಬಗಳು ಅನಿವಾರ್ಯವಾಗಿ ತರಕಾರಿ ಪ್ರಮಾಣವನ್ನು ಕಡಿಮೆ ಮಾಡಬೇಕಾಗಿ ಬಂದಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ಸುದ್ದಿಸಂಸ್ಥೆ ದಿ ಹಿಂದೂ ಜೊತೆಗೆ ಮಾತನಾಡಿ, "ನಮ್ಮದು ಎರಡು ಜನರ ಕುಟುಂಬ ನಮ್ಮ ತರಕಾರಿ ಬಜೆಟ್ ಕಳೆದ ವರ್ಷಕ್ಕೆ ಹೋಲಿಸಿದರೆ ತಿಂಗಳಿಗೆ 300 ರೂಪಾಯಿ ಹೆಚ್ಚಾಗಿದೆ. ಕೆಲವು ತಿಂಗಳುಗಳಲ್ಲಿ 500ಕ್ಕೂ ಹೆಚ್ಚಾಗಿದೆ. ಸಸ್ಯಾಹಾರಿಗಳಾದ ನಾವು ತರಕಾರಿಗಳ ವಿಷಯದಲ್ಲಿ ರಾಜಿಯಾಗುವುದಿಲ್ಲ. ಪ್ರಮಾಣ ಕಡಿಮೆ ಮಾಡಿದರೆ ಪೌಷ್ಟಿಕಾಂಶ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹಣದುಬ್ಬರ ಅಥವಾ Inflation ಎಂದರೇನು?

ಹಣದುಬ್ಬರ ಎಂದರೆ ನಿಮ್ಮಲ್ಲಿರುವ ಹಣದಲ್ಲಿ ನಿಮ್ಮ ಖರೀದಿ ಸಾಮರ್ಥ್ಯದ ಕುಸಿತವಾಗುವುದು. ಸಾಮಾನ್ಯವಾಗಿ ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಹೆಚ್ಚಳವಾದಾಗ ಹಣದುಬ್ಬರ ಸಂಭವಿಸುತ್ತದೆ. ಸಾಮಾನ್ಯ ಬೆಲೆಯ ಮಟ್ಟವು ಏರಿದಾಗ, ನಿಮ್ಮಲ್ಲಿರುವ ಕರೆನ್ಸಿಯಲ್ಲಿ ಕಡಿಮೆ ಸರಕು ಮತ್ತು ಸೇವೆಗಳನ್ನು ಮಾತ್ರ ಖರೀದಿಸಲು ಸಾಧ್ಯವಾಗುತ್ತದೆ. ಅಂದರೆ ನಿಮ್ಮ ಖರೀದಿ ಸಾಮರ್ಥ್ಯ ಕಡಿಮೆಯಾಯಿತು ಎಂದರ್ಥ. ಹೀಗಾಗಿ ಹಣದುಬ್ಬರವನ್ನು ಒಂದು ಆರ್ಥಿಕತೆಯೊಳಗಡೆ ಸರಕು ಮತ್ತು ಸೇವೆಗಳಲ್ಲಿನ ಬೆಲೆ ಏರಿಕೆಯ ಪ್ರಮಾಣದಿಂದ ಅಳೆಯಲಾಗುತ್ತದೆ. 

ಉದಾಹರಣೆಗೆ, ಕಳೆದ ವರ್ಷ ಈ ಸಮಯದಲ್ಲಿ ನೂರು ರೂಪಾಯಿಗೆ ಮೂರು ಕೆಜಿ ಟೊಮೆಟೊ ಖರೀದಿ ಸಾಧ್ಯವಾಗಿತ್ತು ಎಂದಿಟ್ಟುಕೊಳ್ಳಿ. ಆದರೆ, ಈ ಬಾರಿ ಅದೇ ಅದೇ ನೂರು ರೂಪಾಯಿಗೆ ಒಂದು ಕೆಜಿ ಟೊಮೆಟೊ ಮಾತ್ರ ಖರೀದಿಸಲು ಸಾಧ್ಯವಾಗುತ್ತಿದೆ. ಅಂದರೆ, ನಿಮ್ಮ ಖರೀದಿ ಸಾಮರ್ಥ್ಯದಲ್ಲಿ ಕುಸಿತ ಆಯ್ತು ಎಂದರ್ಥ. ಇದುವೇ ಹಣದುಬ್ಬರ.  

ಕರ್ನಾಟಕ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಗಗನಕ್ಕೇರಿದ ಟೊಮೆಟೊ ದರ: ದಕ್ಷಿಣದತ್ತ ಕೇಂದ್ರ ಚಿತ್ತ