ಕೋವಿಡ್ ಆತಂಕ: ಮಕ್ಕಳ ಆರೋಗ್ಯ ಮುನ್ನೆಚ್ಚರಿಕೆ ಕುರಿತು ಬೆಂಗಳೂರಿನ ಖಾಸಗಿ ಶಾಲೆಗಳ ಒಕ್ಕೂಟದಿಂದ ಸಲಹೆ-ಸೂಚನೆ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  ಕೋವಿಡ್ ಆತಂಕ: ಮಕ್ಕಳ ಆರೋಗ್ಯ ಮುನ್ನೆಚ್ಚರಿಕೆ ಕುರಿತು ಬೆಂಗಳೂರಿನ ಖಾಸಗಿ ಶಾಲೆಗಳ ಒಕ್ಕೂಟದಿಂದ ಸಲಹೆ-ಸೂಚನೆ ಬಿಡುಗಡೆ

ಕೋವಿಡ್ ಆತಂಕ: ಮಕ್ಕಳ ಆರೋಗ್ಯ ಮುನ್ನೆಚ್ಚರಿಕೆ ಕುರಿತು ಬೆಂಗಳೂರಿನ ಖಾಸಗಿ ಶಾಲೆಗಳ ಒಕ್ಕೂಟದಿಂದ ಸಲಹೆ-ಸೂಚನೆ ಬಿಡುಗಡೆ

ಕೋವಿಡ್‌ 19 ವಿಷಯದಲ್ಲಿ ಭಯಪಡುವ ಅಗತ್ಯವಿಲ್ಲ. ಆದರೂ ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನೈರ್ಮಲ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಬಲಪಡಿಸಬೇಕು. ಶಾಲೆ ಮರುಆರಂಭದ ಸಮಯದಲ್ಲಿ ಜಾರಿಗೆ ತರಬೇಕಾದ ನವೀಕರಿಸಿದ ಕ್ರಮಗಳ ವಿಸ್ತೃತ ಹಾಗೂ ಹಂತಹಂತದ ಮಾಹಿತಿಯನ್ನು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೋವಿಡ್ ಆತಂಕ: ಬೆಂಗಳೂರಿನ ಖಾಸಗಿ ಶಾಲೆಗಳ ಒಕ್ಕೂಟದಿಂದ ಸಲಹೆ-ಸೂಚನೆ ಬಿಡುಗಡೆ
ಕೋವಿಡ್ ಆತಂಕ: ಬೆಂಗಳೂರಿನ ಖಾಸಗಿ ಶಾಲೆಗಳ ಒಕ್ಕೂಟದಿಂದ ಸಲಹೆ-ಸೂಚನೆ ಬಿಡುಗಡೆ (Pixabay)

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಮರುಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಒಂದೆಡೆ ಮಳೆಯ ಆತಂಕವಿದ್ದರೆ, ಮತ್ತೊಂದೆಡೆ ಕೋವಿಡ್‌ 19 ಮಹಾಮಾರಿ ಹರಡುತ್ತಿರುವ ಆತಂಕ ಕೂಡಾ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಲ್ಲಿ ಹೆಚ್ಚಾಗಿದೆ. ಈ ನಡುವೆ ಕರ್ನಾಟಕ ಅಸೋಸಿಯೇಟೆಡ್ ಸ್ಕೂಲ್ಸ್ ಮ್ಯಾನೇಜ್ಮೆಂಟ್ಸ್ (KAMS) ಸಲಹೆ ಸೂಚನೆಗಳ ಹೊಸ ಸುತ್ತೋಲೆ ಹೊರಡಿಸಿದೆ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಕೋವಿಡ್ -19 ರೂಪಾಂತರ ಮತ್ತು ಇತರ ವೈರಲ್ ಸೋಂಕುಗಳ ಬಗ್ಗೆ ಜಾಗರೂಕರಾಗಿರಲು ತಿಳಿಸಿದೆ.

ರಾಜ್ಯದಲ್ಲಿ ಭಾನುವಾರ (ಮೇ 25) 9 ಕೋವಿಡ್‌ ಕೇಸ್‌ಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 100ರ ಸಮೀಪ ಬಂದಿದೆ. ಇದರ ನಡುವೆ ಶನಿವಾರ ನಗರದಲ್ಲಿ ಕೋವಿಡ್ -19 ಕಾರಣದಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಖಾಸಗಿ ಶಾಲೆಗಳ ಸಂಘವು ಹೊಸ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ಬಿಡುಗಡೆ ಮಾಡಿದೆ.

ಕೋವಿಡ್‌ ವಿಷಯದಲ್ಲಿ ಭಯಪಡುವ ಅಗತ್ಯವಿಲ್ಲ. ಆದರೂ ಶಿಕ್ಷಣ ಸಂಸ್ಥೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನೈರ್ಮಲ್ಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಬಲಪಡಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಾಲೆ ಪುನರಾರಂಭದ ಮೊದಲು ಮತ್ತು ಮರುಆರಂಭದ ಸಮಯದಲ್ಲಿ ಜಾರಿಗೆ ತರಬೇಕಾದ ನವೀಕರಿಸಿದ ಕ್ರಮಗಳ ವಿಸ್ತೃತ ಮಾಹಿತಿಯನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಆರೋಗ್ಯವಿದ್ದರೆ ಮಾತ್ರ ಹಾಜರಾತಿ ಕಡ್ಡಾಯ

ಹಾಜರಾತಿ ಕಡ್ಡಾಯವಲ್ಲ. ಹೀಗಾಗಿ ಆರೋಗ್ಯ ಆಧಾರಿತ ಹಾಜರಾತಿ ನೀತಿಯನ್ನು ಜಾರಿಗೊಳಿಸವುದು ಪ್ರಮುಖ ನಿರ್ದೇಶನವಾಗಿದೆ. ಜ್ವರ, ಕೆಮ್ಮು, ಶೀತ, ದದ್ದುಗಳು ಅಥವಾ ಅಲರ್ಜಿಯ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಬಾರದು. ಅಂತಹ ಮಕ್ಕಳಿಗೆ ಪೋಷಕರು ತಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ಸೂಚಿಸಲಾಗಿದೆ. ಶಾಲೆಗಳು ಸಂಪೂರ್ಣ ನೈರ್ಮಲ್ಯ ಅನುಸರಿಸಬೇಕು. ಹೀಗಾಗಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

ಕೈ ತೊಳೆಯುವುದು, ಸ್ವಚ್ಛ, ಗಾಳಿ ಇರುವ ತರಗತಿ ಕೊಠಡಿಗಳ ಮಹತ್ವದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಶಿಕ್ಷಕರು ಮತ್ತು ಸಿಬ್ಬಂದಿಗೆ ತಿಳಿಸಲಾಗಿದೆ. ಶಾಲಾ ಸಮಯದಲ್ಲಿ ಮಗು ಅನಾರೋಗ್ಯಕ್ಕೆ ಒಳಗಾದರೆ, ಆ ವಿದ್ಯಾರ್ಥಿಯನ್ನು ಪ್ರತ್ಯೇಕಿಸಬೇಕು. ಅಲ್ಲಿ ಮೇಲ್ವಿಚಾರಣೆ ಮಾಡಬೇಕು. ಜೊತೆಗೆ ತಕ್ಷಣ ಪೋಷಕರಿಗೆ ತಿಳಿಸಬೇಕು.

ಸುಳ್ಳು ಸುದ್ದಿ ನಂಬಬೇಡಿ

ಕೋವಿಡ್ -19 ಬಗ್ಗೆ ಭಯಪಡುವುದು ಅಥವಾ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಪ್ಪಿಸಲು ಸಲಹೆಯಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಆರೋಗ್ಯ ಅಧಿಕಾರಿಗಳಿಂದ ಅಧಿಕೃತ ಮಾಹಿತಿಯನ್ನು ಅವಲಂಬಿಸುವಂತೆ ಹೇಳಿದೆ. “ನಮಗೆ ಇದುವರೆಗೆ ಸರ್ಕಾರದಿಂದ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ, ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ನಮ್ಮ ಎಲ್ಲಾ ಶಾಲೆಗಳೊಂದಿಗೆ ನಾವು ಸಂಘದಿಂದ ಹಂಚಿಕೊಂಡಿರುವ ಮಾರ್ಗಸೂಚಿಗಳು ಇವು” ಎಂದು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಡಿ ಅವರ ಹೇಳಿಕೆಯನ್ನು ಟೈಮ್ಸ್‌ ಆಫ್‌ ಇಂಡಿಯಾ ಉಲ್ಲೇಖಿಸಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.