ಕನ್ನಡ ಸುದ್ದಿ  /  Karnataka  /  Pro Pak Slogan Case In Bengaluru: Three Engineering Students Booked For Shouting Pro Pakistan Slogan In Bengaluru

Pro Pak Slogan Case in Bengaluru: ತಮಾಷೆಗೆಂದು ಪಾಕ್‌ ಪರ ಘೋಷಣೆ ಕೂಗಿದರಂತೆ ಈ ವಿದ್ಯಾರ್ಥಿಗಳು!; ಮಾರತ್‌ಹಳ್ಳಿ ಠಾಣೇಲಿ ದೂರು ದಾಖಲು

Pro Pak Slogan Case in Bengaluru: ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ಕಾಲೇಜಿನ ಮೂವರು ವಿದ್ಯಾರ್ಥಿಗಳು ಪಾಕ್‌ ಪರ ಘೋಷಣೆ ಕೂಗಿದ್ರು. ಸಹಪಾಠಿಗಳಿಂದ ಪ್ರತಿಭಟನೆ ವ್ಯಕ್ತವಾದಾಗ, ತಮಾಷೆಗೆಂದು ಕೂಗಿದ್ದಾಗಿ ಹೇಳಿ ಕ್ಷಮೆಯಾಚಿಸಿದ್ರು. ಮಾರತ್‌ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಾಕ್‌ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾರತ್‌ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಕ್‌ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾರತ್‌ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂಕೇತಿಕ ಚಿತ್ರ )

ಬೆಂಗಳೂರು: ಇಂಜಿನಿಯರಿಂಗ್‌ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬಂದ ಮೂವರು ವಿದ್ಯಾರ್ಥಿಗಳು ಪಾಕ್‌ ಪರ ಘೋಷಣೆ ಕೂಗಿದ್ದು, ಸಹಪಾಠಿಗಳಿಂದ ಪ್ರತಿಭಟನೆ ಎದುರಿಸಿದ್ದಾರೆ. ಅಲ್ಲದೆ ಸ್ಥಳೀಯರಿಂದಲೂ ಪ್ರತಿಭಟನೆ ವ್ಯಕ್ತವಾದಾಗ ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತು ಕ್ಷಮೆಯಾಚಿಸಿದ ಘಟನೆ ವರದಿಯಾಗಿದೆ.

ಪಾಕ್‌ ಪರ ಘೋಷಣೆ ಕೂಗಿದ ಕಾರಣ, ಪೊಲೀಸರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮಾರತ್‌ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಕ್‌ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಆರ್ಯನ್‌, ರಿಯಾ ರವಿಚಂದ್ರ ಕಾಮೇಡ್ಕರ್‌, ದಿನಕರ್‌ ಎಂದು ಗುರುತಿಸಲಾಗಿದೆ.

ಸ್ಥಳೀಯ ಮಾಧ್ಯಮಗಳು ನಿನ್ನೆ ತಡರಾತ್ರಿ ಮಾಡಿರುವ ವರದಿ ಪ್ರಕಾರ, ಬೆಂಗಳೂರಿನ ಮಾರತ್‌ಹಳ್ಳಿಯ ನ್ಯೂಹಾರಿಜಾನ್‌ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ಸಾಂಸ್ಕೃತಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ, ವೇದಿಕೆ ಎದುರು ಕುಳಿತಿದ್ದ ಈ ಮೂವರು ವಿದ್ಯಾರ್ಥಿಗಳು ಪಾಕ್‌ ಪರ ಘೋಷಣೆ ಕೂಗಿದ್ದಾರೆ. ಈ ಮೂವರ ವರ್ತನೆ ಉಳಿದ ವಿದ್ಯಾರ್ಥಿಗಳಿಗೆ ಆಘಾತ ಉಂಟುಮಾಡಿತ್ತು.

ಕೂಡಲೇ ಎಲ್ಲರೂ ಈ ಮೂವರನ್ನು ಮುತ್ತಿಗೆ ಹಾಕಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದು ಅರಿವಾದ ಕೂಡಲೇ ಮೂವರು ಕೂಡ ಕ್ಷಮೆಯಾಚಿಸಿದರು. ಆದರೆ, ಈ ಮಾಹಿತಿ ಸಾರ್ವಜನಿಕರಿಗೂ ತಲುಪಿದ್ದು, ಅವರಿಂದಲೂ ಪ್ರತಿಭಟನೆ ವ್ಯಕ್ತವಾದಾಗ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.

ಪೊಲೀಸ್‌ ವಿಚಾರಣೆಯ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿಗಳು ತಪ್ಪೊಪ್ಪಿಗೆ ನೀಡಿದ್ದಾರೆ. ಅಲ್ಲದೆ, ತಮಾಷೆಗೆ ಎಂದು ಪಾಕ್‌ ಪರ ಘೋಷಣೆ ಕೂಗಿದ್ದಾಗಿ ಹೇಳಿಕೊಂಡಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವಾಗ ಈ ವಿದ್ಯಮಾನ ನಡೆದ ಕಾರಣ, ಈ ಮೂವರು ಪಾಕ್‌ ಪರ ಘೋಷಣೆ ಕೂಗಿದ್ದು ಕೂಡ ಅದರಲ್ಲಿ ದಾಖಲಾಗಿದೆ. ಆ ವಿಡಿಯೋ ತುಣುಕು ವೈರಲ್‌ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎರಡು ವರ್ಷ ಹಿಂದಿನ ಅಮೂಲ್ಯ ಲಿಯೋನಾ ಪ್ರಕರಣ ನೆನಪಿಗೆ

ಎರಡು ವರ್ಷದ ಹಿಂದೆ ಫ್ರೀಡಂ ಪಾರ್ಕ್‌ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ಆಯೋಜಿಸಿದ್ದ ವೇಳೆ ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಎದುರಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ಪ್ರಕರಣ ಈ ಘಟನೆ ಬೆನ್ನಿಗೆ ಎಲ್ಲರಿಗೂ ನೆನಪಿಗೆ ಬಂದಿದೆ.

ಅಮೂಲ್ಯ ಲಿಯೋನಾ 2020ರ ಫೆಬ್ರವರಿ 20ರಂದು ಪಾಕ್‌ ಪರ ಘೋಷಣೆ ಕೂಗಿದ್ದಳು. ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬಂಧಿಸಿದ 90 ದಿನಗಳ ಒಳಗೆ ಅಂದರೆ ಮೇ 20ರ ಒಳಗೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಬೇಕಾಗಿತ್ತು. ಪೊಲೀಸರು ಜೂನ್‌ 3ರಂದು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಹೀಗಾಗಿ ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳ ಬಳಿಕ ಆಕೆಗೆ ಡೀಫಾಲ್ಟ್‌ ಜಾಮೀನು ಸಿಕ್ಕಿತ್ತು. ನಿಶ್ಚಿತ ಅವಧಿಯಲ್ಲಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸದೇ ಇದ್ದುದು ಆಕೆಗೆ ವರದಾನವಾಗಿ ಪರಿಣಮಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಿರುವುದನ್ನು ಉಲ್ಲೇಖಿಸಬಹುದು.

IPL_Entry_Point