ಈ ಬಾರಿ ಅರ್ಜುನ ಮಿಸ್, ಕಾಡಿನಿಂದ ನಾಡಿನತ್ತ ಹೊರಟ ದಸರಾ ಗಜಪಡೆ; ಮೈಸೂರಿನತ್ತ ಪಯಣ ಬೆಳೆಸಿದ ಅಭಿಮನ್ಯು ತಂಡ
Mysore Dussehra 2024: ಮೈಸೂರು ದಸರಾ 2024 ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024ಕ್ಕೆ ದಿನಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ಅದರಂತೆ, ಕಾಡಿನಿಂದ ಹೊರಟ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ (ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ) ಭರ್ಜರಿ ಸ್ವಾಗತ ನೀಡಲಾಯಿತು. ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಪುಷ್ಪಾರ್ಚನೆಯೊಂದಿಗೆ ಬರ ಮಾಡಿಕೊಳ್ಳಲಾಯಿತು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ಸಿ ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ಈಶ್ವರ ಖಂಡ್ರೆ, ಸಂಸದ ಸುನಿಲ್ ಬೋಸ್, ಶಾಸಕರಾದ ಜಿಡಿ ಹರೀಶ್ ಗೌಡ, ಡಿ ರವಿಶಂಕರ್, ಅನಿಲ್ ಚಿಕ್ಕಮಾದು, ಎಂಎಲ್ಸಿ ವಿವೇಕಾನಂದ, ಮುಡಾ ಅಧ್ಯಕ್ಷ ಕೆ ಮರೀಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯರಿಂದ ದಸರಾ ಗಜಪಡೆಗೆ ಪುಷ್ಪಾರ್ಚನೆ, ಆರತಿ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಲಾಯಿತು.
ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿನತ್ತ ಪಯಣ ಬೆಳೆಸಿವೆ. ಕ್ಯಾಪ್ಟನ್ ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್ (25), ರೋಹಿತ್ (22), ಲಕ್ಷ್ಮಿ (53), ವರಲಕ್ಷ್ಮಿ (67), ಏಕಲವ್ಯ (38) ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸುತ್ತಿವೆ. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ದಸರಾದಲ್ಲಿ ಪಾಲ್ಗೊಳ್ಳಲು ಒಟ್ಟು 14 ಆನೆಗಳು ಮಾತ್ರ ಮೈಸೂರಿಗೆ ಆಗಮಿಸಲಿವೆ. ಈ ಪೈಕಿ 4 ಮೀಸಲು ಆನೆಗಳನ್ನು ಕರೆತರಲು ತೀರ್ಮಾನಿಸಲಾಗಿದೆ.
ಆದರೆ, ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾನ ಮಾಡಲಾಗಿದೆ. ಇಂದು-ನಾಳೆ (ಆಗಸ್ಟ್ 21, 22) ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಅಭಿಮನ್ಯು ಅಂಡ್ ತಂಡ ವಾಸ್ತವ್ಯ ಹೂಡಲಿದ್ದು, ಶುಕ್ರವಾರ (ಆಗಸ್ಟ್ 23) ಅರಮನೆ ಆವರಣ ಪ್ರವೇಶಿಸಲಿದೆ. ಆನೆಗಳು, ಮಾವುತರು ಹಾಗೂ ಕಾವಾಡಿಗಳ ವಾಸ್ತವ್ಯಕ್ಕೆ ಮೈಸೂರು ಅರಮನೆ ಆವರಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ.
ದಸರಾ ಗಜಪಯಣಕ್ಕೆ ವಿವಿಧ ಜಾನಪದ ಕಲಾ ಪ್ರಕಾರಗಳ ಮೆರುಗು
ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳ ಹಿಮ್ಮೇಳದೊಂದಿಗೆ ದಸರಾ ಗಜಪಡೆ ಸಾಗಿತು. ಕ್ಯಾಪ್ಟನ್ ಅಭಿಮನ್ಯು ಮುಂಚೂಣಿಯಲ್ಲಿ ಸಾಗಿತು. ಅಭಿಮನ್ಯುವನ್ನು ಹಿಂಬಾಲಿಸುತ್ತಾ ಇತರ ಆನೆಗಳು ಸಾಗಿದವು. ದಸರಾ ಗಜಪಡೆ ವೀಕ್ಷಿಸಲು ಕಿಕ್ಕಿರಿದು ಜನರು ಜಮಾಯಿಸಿದ್ದರು. ಅಭಿಮನ್ಯು ಮತ್ತು ತಂಡ ಜನರ ಹರ್ಷೋದ್ಗಾರದ ನಡುವೆ ಮೈಸೂರಿನತ್ತ ಪಯಣ ಬೆಳೆಸಿದವು.
ಈಶ್ವರ್ ಖಂಡ್ರೆ ಮಾತು
ದಸರಾ ಗಜಪಡೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಗಜಪಯಣಕ್ಕೆ ಇಂದು ಚಾಲನೆ ನೀಡಲಾಗಿದೆ. ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲ ಭರ್ತಿಯಾಗಿವೆ. ಈ ಬಾರಿ ವಿಜೃಂಭಣೆಯ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧಾರಿಸಿದೆ. ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ. ಈ ಬಾರಿಯೂ ಕೂಡ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ನಮ್ಮೆಲ್ಲರ ನೆಚ್ಚಿನ ಅರ್ಜುನ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ. ಅರ್ಜುನ ಮೃತಪಟ್ಟ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಇದರ ಜೊತೆಗೆ ಬಳ್ಳೆ ಆನೆ ಶಿಬಿರದಲ್ಲೂ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ.