ಖ್ಯಾತ ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್‌ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಖ್ಯಾತ ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್‌ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

ಖ್ಯಾತ ಕೃಷಿ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್‌ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

ಕೃಷಿ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪ್ಪನ್‌ ನಿಗೂಢ ಸಾವು ಪ್ರಕರಣಕ್ಕೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಭ್ರಷ್ಟಾಚಾರ ಕಾರಣ ಎಂದ ಮಾಜಿ ಸದಸ್ಯ ಆರೋಪಿಸಿದ್ದು, ಸಿಬಿಐ ತನಿಖೆಗೆ ಆಗ್ರಹಿಸಲಾಗಿದೆ. ವರದಿ: ಎಚ್.ಮಾರುತಿ

ಕೃಷಿ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪ್ಪನ್‌
ಕೃಷಿ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪ್ಪನ್‌

ಬೆಂಗಳೂರು: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ನಿವೃತ್ತ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್‌ ಅವರ ನಿಗೂಢ ಸಾವನ್ನು ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಐಸಿಎಆರ್‌ ಮಾಜಿ ಸದಸ್ಯ ವೇಣುಗೋಪಾಲ್‌ ಬಾದರವಾಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಯ್ಯಪ್ಪನ್‌ ಅವರ ಸಂಶಯಾಸ್ಪದ ಸಾವನ್ನು ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪ್ರತ್ಯೇಕ ಪತ್ರ ಬರೆದು ತನಿಖೆಗೆ ಆಗ್ರಹಪಡಿಸಿದ್ದಾರೆ. ಅಯ್ಯಪ್ಪನ್‌ ಅವರ ಸಾವು ಅತೀವ ನೋವನ್ನುಂಟು ಮಾಡಿದೆ. ನದಿ ದಡದಲ್ಲಿ ಅವರ ದ್ವಿಚಕ್ರ ವಾಹನ ಸಿಕ್ಕಿದೆ. ಹಾಗಾಗಿ, ಅವರ ಸಾವು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಆದ್ದರಿಂದ ಸಿಬಿಐ ತನಿಖೆಯ ಮೂಲಕ ಸತ್ಯವನ್ನು ಬಯಲಿಗೆಳೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅವರ ಸಾವನ್ನು ಕುರಿತು ಮತ್ತಷ್ಟು ಸಂಗತಿಗಳನ್ನು ಬಾದವಾಡ ಹಂಚಿಕೊಂಡಿದ್ದಾರೆ. ಅಯ್ಯಪ್ಪನ್‌ ಅವರ ಸಾವಿಗೂ ಐಸಿಎಆರ್, ಎಎಸ್‌ ಆರ್‌ ಬಿ (ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ) ಮತ್ತು ಸಂಯೋಜಿತ ಸಂಸ್ಥೆಗಳಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರಕ್ಕೂ ಸಂಬಂಧ ಇದೆ. ಅಲ್ಲದೆ ಅಕ್ರಮ ನೇಮಕಾತಿ ಮತ್ತು ಅಧಿಕಾರ ದುರುಪಯೋಗಕ್ಕೂ ಕನ್ನಡಿ ಹಿಡಿಯುತ್ತದೆ ಎಂದು ಅವರು ಆರೋಪಿಸಿದ್ದಾರೆ. ಈ ಸಂಸ್ಥೆಗಳಲ್ಲಿರುವ ದ್ವೇಷದ ವಾತಾವರಣ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಕೃಷಿ ಸಮುದಾಯಗಳು ಆರೋಪಿಸುತ್ತಿವೆ. ತನಿಖೆಯಿಂದ ಮಾತ್ರವೇ ಸತ್ಯ ಹೊರಬರಲು ಸಾಧ್ಯ ಎಂದು ಅವರು ವಿವರಿಸಿದ್ದಾರೆ.

ಐಸಿಎಆರ್‌ ನ ಕೆಲವು ನಿರ್ಧಾರಗಳು ಕಾನೂನುಬಾಹಿರವಾಗಿವೆ. ಮೇ 5ರಂದು ಅಯ್ಯಪ್ಪನ್‌ ಅವರನ್ನು ಆಡಳಿತ ಮಂಡಳಿಯಿಂದ ಯಾವುದೇ ತನಿಖೆ ನಡೆಸದೆ ಏಕಾಏಕಿ ಕೇವಲ ಆದೇಶ ಹೊರಡಿಸುವ ಮೂಲಕ ತೆಗೆದು ಹಾಕಲಾಗಿತ್ತು ಎಂದು ಅವರು ಆಪಾದಿಸಿದ್ದಾರೆ. ಐಸಿಎಆರ್‌ ಕೈಗೊಂಡಿರುವ ಈ ಕಾನೂನುಬಾಹಿರ ಕ್ರಮವು ಮಂಡಳಿಯೊಳಗಿನ ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಇದುವರೆಗೂ ಅಯ್ಯಪ್ಪನ್‌ ಅವರ ಸಾವು ಕುರಿತು ತನಿಖೆ ನಡೆಸುವ ಸಂಬಂಧ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಸಾವು ಹೇಗಾಯಿತು?

ಕೃಷಿ ವಿಜ್ಞಾನಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಸದಸ್ಯ ನಿವೃತ್ತ ನಿರ್ದೇಶಕ ಡಾ. ಸುಬ್ಬಣ್ಣ ಅಯ್ಯಪ್ಪನ್‌ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಯಲ್ಲಿ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಮೈಸೂರಿನಲ್ಲಿ ವಾಸಿಸುತ್ತಿದ್ದರು.

ಶ್ರೀರಂಗಪಟ್ಟಣದ ಸಾಯಿಬಾಬಾ ಆಶ್ರಮದ ಸಮೀಪ ನದಿಗೆ ಹಾರಿದ್ದರು. ದಡದಲ್ಲಿ ಅವರ ಸ್ಕೂಟ‌ರ್ ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಮೇ 7ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ವಿದ್ಯಾರಣ್ಯಪುರಂ ಠಾಣೆಗೆ ದೂರು ನೀಡಿದ್ದರು. ಸುಬ್ಬಣ್ಣ ಅವರು ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿ ಧ್ಯಾನ ಮಾಡಲು ಹೋಗುತ್ತಿದ್ದರು. ಅಲ್ಲಿಯೇ ಅವರ ಮೃತದೇಹ ಸಿಕ್ಕಿದೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಅಯ್ಯಪ್ಪನ್ ಕೃಷಿ ಮತ್ತು ಮೀನುಗಾರಿಕಾ ವಿಜ್ಞಾನಿಯಾಗಿ ದೆಹಲಿ, ಮುಂಬೈ, ಭೋಪಾಲ್ ಹಾಗೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದರು. ಇಂಫಾಲದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ (ಸಿಎಯು) ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಭಾರತದ 'ನೀಲಿ ಕ್ರಾಂತಿ'ಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರಿಗೆ 2022ನೇ ಸಾಲಿನಲ್ಲಿ 'ಪದ್ಮಶ್ರೀ' ಪ್ರಶಸ್ತಿ ನೀಡಿಗೌರವಿಸಲಾಗಿತ್ತು.

ಚಾಮರಾಜನಗರ ಜಿಲ್ಲೆ ಯಳಂದೂರು ಮೂಲದ ಅವರು ಮಂಗಳೂರಿನಲ್ಲಿ ಎಂ.ಎಫ್.ಎಸ್‌ಸಿ ಪದವಿ ಪಡೆದು 1998ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದರು. ಡಿಪಾರ್ಟ್‌ಮೆಂಟ್ ಆಫ್ ಅಗ್ರಿಕಲ್ಬರಲ್‌ ರಿಸರ್ಚ್ ಆ್ಯಂಡ್ ಎಜುಕೇಷನ್‌ನ (ಡಿಎಆರ್‌ ಇ) ಕಾರ್ಯದರ್ಶಿಯಾಗಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್‌ ನ (ಐಸಿಎಆ‌ರ್) ವ್ಯವಸ್ಥಾಪಕ ನಿರ್ದೇಶಕ, ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿ ಅಧ್ಯಕ್ಷರಾಗಿದ್ದರು.

ವರದಿ: ಎಚ್.ಮಾರುತಿ

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in