‘Prostitute’ comparison: ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ ಹೇಳಿಕೆಗೆ ಯಾರ ಪ್ರತಿಕ್ರಿಯೆ ಏನು?
ಕನ್ನಡ ಸುದ್ದಿ  /  ಕರ್ನಾಟಕ  /  ‘Prostitute’ Comparison: ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ ಹೇಳಿಕೆಗೆ ಯಾರ ಪ್ರತಿಕ್ರಿಯೆ ಏನು?

‘Prostitute’ comparison: ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ ಹೇಳಿಕೆಗೆ ಯಾರ ಪ್ರತಿಕ್ರಿಯೆ ಏನು?

‘Prostitute’ comparison: ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ನೀಡಿದ ವಿವಾದಾತ್ಮಕ ಹೇಳಿಕೆ ಕುರಿತು ಬಿಜೆಪಿಯ ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ ರೀತಿಯ ಕೆಳಮಟ್ಟದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾರೆ. ಇದುವೇ ನನ್ನ ಪ್ರತಿಕ್ರಿಯೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ANI)

ಸಚಿವ ಆನಂದ್‌ ಸಿಂಗ್‌ ಅವರ ಕ್ಷೇತ್ರ ಹೊಸಪೇಟೆಯಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿಹಿರಿಯ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌, ಪಕ್ಷಾಂತರ ಮಾಡಿದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿ ನೀಡಿದ ಹೇಳಿಕೆ ಈಗ ತೀವ್ರ ಟೀಕೆಗೆ ಒಳಗಾಗಿದೆ.

ಈ ವಿವಾದಾತ್ಮಕ ಹೇಳಿಕೆ ಕುರಿತು ಬಿಜೆಪಿಯ ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆ ರೀತಿಯ ಕೆಳಮಟ್ಟದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾರೆ. ಇದುವೇ ನನ್ನ ಪ್ರತಿಕ್ರಿಯೆ ಎಂದು ಹೇಳಿದರು.

ಕರ್ನಾಟಕ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಹೊಸಪೇಟೆಯಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ, ಸಚಿವ ಆನಂದ ಸಿಂಗ್‌ ಮತ್ತು ಇತರರನ್ನು ಪಕ್ಷಾಂತರ ಮಾಡಿದ್ದಕ್ಕಾಗಿ ತೀವ್ರವಾಗಿ ಟೀಕೆ ಮಾಡುತ್ತ, ʻವೇಶ್ಯೆಯರುʼ ಎಂದು ಹೋಲಿಕೆ ಮಾಡಿದ್ದರು.

"ನಾವು ಮಹಿಳೆಯನ್ನು ಆಕೆ ತನ್ನ ಆಹಾರಕ್ಕಾಗಿ ಶರೀರ ಮಾರಾಟ ಮಾಡಿದರೆ ಬೇರೆ ಬೇರೆ ಹೆಸರುಗಳಿಂದ ಆಕೆಯನ್ನು ಗುರುತಿಸುತ್ತೇವೆ. ವೇಶ್ಯೆ ಎಂದೂ ಹೇಳುತ್ತೇವೆ. ಶಾಸಕರು ತಮ್ಮನ್ನು ತಾವು ಮಾರಿಕೊಂಡವರನ್ನು ಏನೆಂದು ಕರೆಯಬೇಕು? ಅದನ್ನು ನಾವು ನಿಮಗೇ ಬಿಟ್ಟುಬಿಡುತ್ತೇವೆ. ಸ್ವಾಭಿಮಾನವನ್ನೂ ಸೇರಿ ಎಲ್ಲವನ್ನೂ ಮಾರಾಟ ಮಾಡಿದ ಲೋಕಲ್‌ ಎಂಎಲ್‌ಎಗೆ ನೀವು ಒಂದು ಸರಿಯಾದ ಪಾಠವನ್ನು ಕಲಿಸಬೇಕುʼʼ ಎಂದು ಹರಿಪ್ರಸಾದ್‌ ಹೇಳಿದ್ದರು.

ಹಿಂಬಾಗಿಲಿನಿಂದ ಬಂದ ಇವರನ್ನು ‘ಪಿಂಪ್’ ಎನ್ನಬಹುದಾ? ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ್‌

ಹರಿಪ್ರಸಾದ್‌ ಹೇಳಿಕೆಗೆ ತಿರುಗೇಟು ನೀಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದವರು? ಹಿಂಬಾಗಿಲಿನಿಂದ ಬಂದು ಎಂ.ಎಲ್.ಸಿ ಆಗಿದ್ದಾರೆ. ಹಾಗಾದರೆ, ಹಿಂಬಾಗಿಲಿನಿಂದ ಬಂದ ಇವರನ್ನು ‘ಪಿಂಪ್’ ಎನ್ನಬಹುದಾ? ಆದರೆ ನಾವು ಹಾಗೆ ಕರೆಯಲಾಗದು. ಅವರ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತದೆ. ಕಾಂಗ್ರೆಸ್‌ನವರು ದ್ರೋಹ ಮಾಡಿದರು. ನಾವು ರಾಜೀನಾಮೆ ಕೊಟ್ಟು ಬಂದೆವು. ಮತ್ತೆ ಜನಾದೇಶ ಪಡೆದೇ ಶಾಸಕರಾಗಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡರು ಎಂದು ಮಾಧ್ಯಮ ವರದಿಗಳು ಹೇಳಿವೆ.

ಕಾಂಗ್ರೆಸ್‌ನವರೇ ನಿಜವಾದ ವೇಶ್ಯೆಯರು ಎಂದ ಸಚಿವ ಮುನಿರತ್ನ

ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪುನಃ ಚುನಾವಣೆ ಎದುರಿಸಿ ಜನಾದೇಶ ಪಡೆದು ಸರ್ಕಾರ ಸೇರಿದ ನಾವು ವೇಶ್ಯೆಯರಲ್ಲ. ಬಹುಮತ ಇಲ್ಲ. ಆದರೂ ಅಧಿಕಾರ ಚುಕ್ಕಾಣಿ ಹಿಡಿಯಲು ಎಚ್‌ಡಿಕೆ ಬಳಿ ನಮ್ಮನ್ನು ಅಡ ಇಟ್ಟ ಕಾಂಗ್ರೆಸ್‌ ಮತ್ತು ಹರಿಪ್ರಸಾದ್‌ ಅವರೇ ನಿಜವಾದ ವೇಶ್ಯೆಯರು ಎಂದು ತೋಟಗಾರಿಕಾ ಸಚಿವ ಮುನಿರತ್ನ ಕೋಲಾರದಲ್ಲಿ ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಹರಿಪ್ರಸಾದ್‌ ಟಾರ್ಗೆಟ್‌ ಮಾಡಿದ್ದು ಸಿದ್ದರಾಮಯ್ಯ ಅವರನ್ನು ಎಂದ ಸಿ.ಟಿ.ರವಿ

ಪಕ್ಷಾಂತರ ಮಾಡಿದ ಶಾಸಕರ ಬಗ್ಗೆ ಹೇಳಿಕೆ ನೀಡುವ ಮೂಲಕ ಹಿರಿಯ ಕಾಂಗ್ರೆಸ್‌ ನಾಯಕ ಬಿ.ಕೆ.ಹರಿಪ್ರಸಾದ್‌ ಟಾರ್ಗೆಟ್‌ ಮಾಡಿದ್ದು ಅವರದ್ದೇ ಪಕ್ಷದ ಇನ್ನೊಬ್ಬ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮೂಲ ಕಾಂಗ್ರೆಸ್‌ನವರಲ್ಲ. ಸಿದ್ದರಾಮಯ್ಯ ಕೂಡ ಜನತಾಪರಿವಾರದಿಂದ ಬಂದವರು. ಹೀಗಾಗಿ ಹರಿಪ್ರಸಾದ್‌ ಪದೇಪದೆ ಸಿದ್ದರಾಮಯ್ಯ ಅವರನ್ನೆ ಟಾರ್ಗೆಟ್‌ ಮಾಡಿ ಹೇಳಿಕೆ ನೀಡುತ್ತಿದ್ದಾರೆ ಎಂದು ರವಿ ಹೇಳಿದರು.

Whats_app_banner