Kannada News  /  Karnataka  /  Protein Powder: Illegal Sales Of Protein Powder Highlighted In Karnataka Assembly Proceedings And Mla Satish Reddy Demands To Curb The Racket

Protein Powder: ದಪ್ಪ ಇರೋರು ಪ್ರೊಟೀನ್‌ ಪೌಡರ್‌ನಿಂದ 30 ದಿನದಲ್ಲಿ ಸಣ್ಣ ಆಗೋದು ಸಾಧ್ಯವಾ?

ಸಚಿವ ಡಾ.ಸುಧಾಕರ್‌ ಮತ್ತು ಶಾಸಕ ಸತೀಶ್‌ ರೆಡ್ಡಿ
ಸಚಿವ ಡಾ.ಸುಧಾಕರ್‌ ಮತ್ತು ಶಾಸಕ ಸತೀಶ್‌ ರೆಡ್ಡಿ (GoK)

Karnataka Assembly Session 2022: ವಿಧಾನಸಭೆಯ ಇಂದಿನ ಕಲಾಪದ ನಡುವೆ, ಜಿಮ್‌ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರೊಟೀನ್‌ ಪೌಡರ್‌ (Protein Powder) ವಿಚಾರ ಗಮನಸೆಳೆದಿದೆ. ಶಾಸಕ ಸತೀಶ್‌ ರೆಡ್ಡಿ ಈ ವಿಷಯ ಪ್ರಸ್ತಾಪಿಸಿದ್ದು, ಆರು ನಿಮಿಷ ಚರ್ಚೆಗೆ ಕಾರಣವಾಯಿತು. ಅದರ ವಿವರ ಇಲ್ಲಿದೆ.

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಬೆಳಗ್ಗಿನ ಕಲಾಪ (Karnataka Assembly Session 2022) ದ ನಡುವೆ, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪ್ರೊಟೀನ್‌ ಪೌಡರ್‌ (Protein Powder) ವಿಚಾರ ಪ್ರಸ್ತಾಪವಾಗಿದೆ. ಈ ಕುರಿತು ಆರು ನಿಮಿಷ ಚರ್ಚೆ ಆಗಿದ್ದು, ರಾಜ್ಯದ ಗಮನಸೆಳೆದಿದೆ.

ಟ್ರೆಂಡಿಂಗ್​ ಸುದ್ದಿ

ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಈ ವಿಚಾರ ಪ್ರಸ್ತಾಪಿಸಿದ್ದು ಹೀಗೆ - ಬಹುತೇಕ ಜಿಮ್‌ಗಳಲ್ಲಿ ಪ್ರೋಟೀನ್‌ ಪೌಡರ್‌ ಅನ್ನು ಸಣ್ಣ ಆಗಲೆಂದು ಕೊಡುತ್ತಾರೆ. ತುಂಬಾ ಜನ ಇದನ್ನು ದುಡ್ಡು ಮಾಡುವ ದಂಧೆಯಾಗಿ ಮಾಡಿಕೊಂಡಿದ್ದಾರೆ. ಜನರ ಜೀವ ಹೋಗುವಂತಹ ಸನ್ನಿವೇಶ ಇದೆ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಒಬ್ಬ ಸಂತೋಷ್‌ ಕುಮಾರ್‌ ತೊಂದರೆಗೆ ಒಳಗಾಗಿದ್ದ.

ಇದೇ ವೇಳೆ ಆಡಳಿತ ಪಕ್ಷದವರು ಈ ವಿಚಾರದ ಕಡೆಗೆ ಗಮನಕೊಡದ ಕಾರಣ ಸ್ಪೀಕರ್‌ ವಿ‍ಶ್ವೇಶ್ವರ ಹೆಗಡೆ ಕಾಗೇರಿ, ಇದು ತುಂಬಾ ಇಂಪಾರ್ಟಂಟ್‌. ಯಾರಾದರೂ ಸಂಬಂಧಪಟ್ಟವರು ಇದನ್ನು ಸರ್ಕಾರದವರು ಗಮನಿಸ್ರಪ್ಪ. ಹೆಲ್ತ್‌ ಮಿನಿಸ್ಟರ್‌… ಹೆಲ್ತ್‌ ಮಿನಿಸ್ಟ್ರು ಯಾರಾದ್ರೂ ಒಬ್ರು ಕೇಳಿಸ್ಕೊಳ್ರಿ ಇದು ನಿಮಗೆ ರಿಲೇಟೆಡ್.‌ ಆ ಮೇಲೆ ಉತ್ತರ ನೀಡುವುದಕ್ಕಾಗುತ್ತೆ. ಕೇಳಿಸಿಕೊಳ್ಳಿ ಎಂದು ಹೇಳಿದರು.

ಶಾಸಕ ಸತೀಶ್‌ ರೆಡ್ಡಿ ಅವರು ಮಾತು ಮುಂದುವರಿಸಿ, ಪ್ರೋಟಿನ್‌ ಪೌಡರ್‌ ಅದು ಸಣ್ಣ ಆಗ್ಲಿಕೆ, ದಪ್ಪ ಆಗ್ಲಿಕೆ, ಚಿಕ್ಕ ಮಕ್ಕಳ ಪೋಷಕಾಂಶಕ್ಕೆ, ಬಾಡಿಯನ್ನು ಬೇಕಾದ ಗಾತ್ರಕ್ಕೆ ತಕ್ಕಂತೆ ಹೊಂದಿಸಲು ಪ್ರಯತ್ನಿಸುತ್ತಾರೆ. ಇಲ್ಲೀಗಲ್‌ ಆಗಿ ಮಾರಾಟ ಮಾಡುವಂಥದ್ದು.

ನನ್ನ ಕ್ಷೇತ್ರದಲ್ಲೊಬ್ಬ ಸಂತೋಷ್‌ ಕುಮಾರ್‌ ಅಂತ. ಕಳೆದ ವಾರ ತೀರ್ಕೊಂಡ. ಕಳೆದ ಎರಡು ವರ್ಷಗಳಿಂದ ಆತನ ಹೃದಯ, ಲಿವರ್‌ ಎಲ್ಲ ಪೂರ್ತಿಯಾಗಿ ಡ್ಯಾಮೇಜ್‌ ಆಗಿತ್ತು. ಆತ ತಂದೆ ತಾಯಿಗೆ ಒಬ್ಬನೇ ಮಗ. 50ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಕೊಯಮತ್ತೂರು ಕರೆದುಕೊಂಡು ಹೋಗಿದ್ದರು. ಅದಾಗಿ ಮಣಿಪಾಲಲ್ಲಿ ಅಡ್ಮಿಟ್‌ ಮಾಡಿದ್ರು.

ಇದರ ಎಲ್ಲ ಡಾಕ್ಯುಮೆಂಟ್ಸ್‌ ತಮಗೂ ಸಲ್ಲಿಸ್ತಾ ಇದ್ದೇನೆ. ಇದಕ್ಕೆ ಕಡಿವಾಣ ಹಾಕಿಲ್ಲ ಅಂತ ಅಂದ್ರೆ ಕಷ್ಟ ಆಗುತ್ತೆ. ಜಾಹೀರಾತುಗಳನ್ನು ಕೊಡುವುದು, ಟಿವಿಗಳಲ್ಲಿ, ಯೂಟ್ಯೂಬ್‌ನಲ್ಲಿ ಇದಲ್ಲದೆ ಜಿಮ್‌ಗಳಲ್ಲಿ ಇದನ್ನು ಹೆಚ್ಚಿನ ರೀತಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ.

ಇದಕ್ಕೆ ಯಾವುದೇ ಕಡಿವಾಣ ಇಲ್ಲ. ಯಾರು ಬೇಕಾದರೂ ಖರೀದಿಮಾಡಬಹುದು. ಆದರೆ ಏನಾದರೂ ಸಮಸ್ಯೆ ಆದರೆ ಮಾರಾಟ ಮಾಡಿದವರದ್ದು ಅಡ್ರೆಸ್ಸೇ ಇರುವುದಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಶಾಸಕ ಸತೀಶ್‌ ರೆಡ್ಡಿ ಪ್ರಸ್ತಾಪಿಸಿದ ವಿಷಯ ಏನಿದೆ, ಅದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮವನ್ನು ಸರ್ಕಾರ ಜರುಗಿಸಲಿದೆ. ಅರಗ ಜ್ಞಾನೇಂದ್ರ ಇಲ್ಲದ ಕಾರಣ ಅವರ ಪರವಾಗಿ ಉತ್ತರ ಕೊಡ್ತಾ ಇದ್ದೇನೆ ಎಂದರು.

ಇದಕ್ಕೆ ಸ್ಪೀಕರ್‌ ಕಾಗೇರಿ ಅವರು, ಆದರೆ ಅದೊಂದು ಚೇನ್‌. ಇದು ಬಹುದೊಡ್ಡ ದೇಶಾದ್ಯಂತ ಇರುವ ಜಾಲ. ಇದರ ಬಗ್ಗೆ ಕಠಿಣ ಕ್ರಮ ಅಗತ್ಯ ಇದೆ ಗಮನಿಸಿ ಎಂದರು.

ಇದೇ ವೇಳೆ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಈ ವಿಚಾರವಾಗಿ ಪ್ರತಿಕ್ರಿಯಿಸಿ, ಫುಡ್‌ ಮತ್ತು ಸೇಫ್ಟಿ ಡಿಪಾರ್ಟ್‌ಮೆಂಟ್‌ನಿಂದಲೂ ಇದಕ್ಕೊಂದು ಸ್ಪೆಷಲ್‌ ಡ್ರೈವ್‌ ಮಾಡಿಸಿ, ಯಾರು ಅನಧಿಕೃತವಾಗಿ ಅಕ್ರಮವಾಗಿ ನ್ಯುಟ್ರಿಷನ್‌ ಪ್ರೊಟೀನ್‌ ಪೌಡರ್‌ ಸೇಲ್‌ ಮಾಡ್ತಿದ್ದಾರೋ ಅವರನ್ನು ಗುರುತಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕೂಡಲೇ ಸ್ಪೀಕರ್‌ ಕಾಗೇರಿ ಅವರು, ಅಧಿಕೃತ ಮತ್ತು ಅನಧಿಕೃತ ಅಂತ ನೀವು ಎಲ್ಲ ನೋಡ್ಲಿಕ್ಕೆ ಹೋದರೆ ಇದು ದೊಡ್ಡ ಇಶ್ಯೂ ಇದೆ. ಇದು ದೇಶದಲ್ಲಿ ಇದೆ. ಇದರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವ ಬಗ್ಗೆ ಅನುಮಾನವಿದೆ. ಅವನ್ನು ಕಾನೂನು ಚೌಕಟ್ಟಿನೊಳಗೆ ತರುವುದು ಕಷ್ಟ ಇದೆ.

ಆದರೆ ಪ್ರೊಟೀನ್‌ ಪೌಡರಿಂದ ತೊಂದರೆ ಆಗ್ತಾ ಇದೆ ಎಂಬುದು ಬಳಕೆ ಮಾಡಿದವರ ಅನುಭವದಿಂದ ಬಂದಿರುವ ಸಾಮಾನ್ಯ ಅಭಿಪ್ರಾಯ. ಉದಾಹರಣೆಯನ್ನೂ ಸತೀಶ್‌ ರೆಡ್ಡಿಯವರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ನೀವು ಸರ್ಕಾರದಲ್ಲಿ ಗೃಹ ಮಂತ್ರಿಗಳು, ಆರೋಗ್ಯ ಸಚಿವರು ಇನ್ಯಾರಾರು ಕುಳಿತು ಸಮಾಲೋಚನೆ ಮಾಡ್ತೀರೋ ನೋಡಿ. ಒಟ್ಟಾರೆ ಕಲೆಕ್ಟಿವ್‌ ಆಗಿ ಯೋಜನೆ ಮಾಡಿ, ಆ ಪೌಡರ್‌ ಏನು? ಅದರ ಪರಿಣಾಮ ಏನು? ಒಂದು ಸೈಂಟಿಫಿಕ್‌ ಅನಾಲಿಸಿಸ್‌ ಮಾಡಿಸಿ ಅದನ್ನು ನಿಗ್ರಹ ಮಾಡೋದಕ್ಕೆ ಪ್ರಯತ್ನ ಮಾಡಬೇಕು.

ಇಲ್ಲದೇ ಹೋದರೆ ಯಾರಿಗೇ ಆದರೂ ದಪ್ಪ ಇರುವವರಿಗೆ ಆಸೆ ಬರುತ್ತೋ ಇಲ್ವೋ? ಎಂದು ಸ್ಪೀಕರ್‌ ಕಾಗೇರಿ ಅವರು ಆರೋಗ್ಯ ಸಚಿವರ ಕಡೆಗೆ ನೋಡಿ ಕೇಳಿದರು.

ಇದೇ ವೇಳೆ, ಸದಸ್ಯರ ನಡುವಿಂದ, ಬರೇ ಮೂವತ್ತು ದಿನಗಳಲ್ಲಿ ಸಣ್ಣಗಾಗಬಹುದು. ಯಾರಾದರೂ ಆಗೋದಕ್ಕೆ ಸಾಧ್ಯ ಇದೆಯೇ? ಈ ದಂಧೆಗೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಕೇಳಿಬಂತು.

ಇದಕ್ಕೆ ಸ್ಪೀಕರ್‌ ಕಾಗೇರಿಯವರು, ಅದೇ… ಎನ್ನುತ್ತ, ಆರೋಗ್ಯ ಸಚಿವರೇ ನೀವು ಬೇಕಾದರೆ ಇಲ್ಲೇ ದಪ್ಪ ಇರೋರಿಗೆ ಯಾರಿಗಾದರೂ ಕೊಡಿಸಿ ನೋಡಿ ಬೇಕಾದರೆ. ಅದರ ಪರಿಣಾಮಗಳು ಏನೇನಾಗುತ್ತೇ ಏನೇನಿಲ್ಲ ಅಂತ ಎಂದು ಲಘುದಾಟಿಯಲ್ಲಿ ಹೇಳಿದರು.

ಇವೆಲ್ಲದರ ನಡುವೆ ಶಾಸಕ ಯು.ಟಿ. ಖಾದರ್‌, ಮಾನ್ಯ ಅಧ್ಯಕ್ಷರೇ ಅವರು ಪೇಪರ್‌ ಜಾಹೀರಾತು ಕೊಡ್ತಾರೆ. ಅಂತಹ ಉತ್ಪನ್ನಗಳ ಖಚಿತ ಮಾಹಿತಿ ಇಲ್ಲದೆ ಜಾಹೀರಾತು ಯಾಕೆ ತಗೊಳ್ತಾರೆ? ಜನರನ್ನು ಮಿಸ್‌ಗೈಡ್‌ ಮಾಡುವುದಲ್ಲ? ಎಂದರು.

ಸಚಿವ ಡಾ. ಸುಧಾಕರ್‌ ಮತ್ತೆ ವಿಷಯ ಸ್ಪಷ್ಟಪಡಿಸಲು ಪ್ರಯತ್ನಿಸುತ್ತ, ಎಫ್‌ಎಸ್‌ಎಸ್‌ಎಐನಿಂದ ಅಧಿಕೃತ ಪರವಾನಗಿ ಹೊಂದಿದವರು ಮಾತ್ರವೇ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿರುವ ಎಲ್ಲ ಪ್ರೊಟೀನ್‌ ಪೌಡರ್‌ಗಳು ಅಕ್ರಮ ಎಂದು ಹೇಳಲಾಗದೆಂದು ವಿವರಿಸಿದರು.

ಇದಕ್ಕೆ ಸ್ಪೀಕರ್‌ ಕಾಗೇರಿಯವರು, ಬಹಳ ಕಾಂಪ್ಲಿಕೇಟೆಡ್‌ ವಿಚಾರ ಅದು. ಅದನ್ನು ತಾವೇ ಸೂಕ್ಷ್ಮವಾಗಿ ಗಮನಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚೆ ಕೊನೆಗೊಳಿಸಿದರು.