ಕನ್ನಡ ಸುದ್ದಿ  /  Karnataka  /  Psi Recruitment Scam: Cid Arrest Rachana, First Rank In State, Psi Racket Karnataka

PSI Recruitment Scam: ಪಿಎಸ್‌ಐ ಅಕ್ರಮ ನೇಮಕದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಕೊನೆಗೂ ಬಂಧನ

ರಾಜ್ಯದ ಇತ್ತೀಚಿನ ಬೃಹತ್‌ ನೇಮಕಾತಿ ಹಗರಣದ ಒಂದೊಂದೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಎಂಬಾಕೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಪ್ರಕರಣದ ಹದಿನೇಳನೇ ಆರೋಪಿಯಾಗಿದ್ದ ರಚನಾ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಳು.

PSI Recruitment Scam: ಪಿಎಸ್‌ಐ ಅಕ್ರಮ ನೇಮಕದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಕೊನೆಗೂ ಬಂಧನ (Representative Image)
PSI Recruitment Scam: ಪಿಎಸ್‌ಐ ಅಕ್ರಮ ನೇಮಕದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಕೊನೆಗೂ ಬಂಧನ (Representative Image) (HT_PRINT)

ಬೆಂಗಳೂರು: ರಾಜ್ಯದ ಇತ್ತೀಚಿನ ಬೃಹತ್‌ ನೇಮಕಾತಿ ಹಗರಣದ ಒಂದೊಂದೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ರಚನಾ ಎಂಬಾಕೆಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಪ್ರಕರಣದ ಹದಿನೇಳನೇ ಆರೋಪಿಯಾಗಿದ್ದ ರಚನಾ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಳು.

ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ರಚನಾಳ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ನಡೆಸಿದ್ದರು. ಇದೀಗ ಈಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ಹೇಳಿವೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ರಚನಾ ಹನುಮಂತ್‌ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಳು. ಕಳೆದ ಮೂರು ತಿಂಗಳಿನಿಂದ ಈಕೆ ನಾಪತ್ತೆಯಾಗಿದ್ದಳು.

ಸಿಐಡಿಯು ಪಿಎಸ್‌ಐ ಅಕ್ರಮದ ಕುರಿತು ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ರಚನಾ ಅವರ ಹೆಸರೂ ಕೇಳಿ ಬಂದಿತ್ತು. ಈಕೆ 30 ಲಕ್ಷ ರೂಪಾಯಿ ನೀಡಿರುವ ಮಾಹಿತಿ ಬಹಿರಂಗವಾಗಿತ್ತು. ಈ ಸಂಬಂಧ ಸುಮಾರು 22 ಅಭ್ಯರ್ಥಿಗಳ ವಿರುದ್ಧ ಸಿಐಡಿ ಡಿವೈಎಸ್‌ಪಿ ನರಸಿಂಹಮೂರ್ತಿ ಅವರು ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪಿಎಸ್‌ಐ ಪರೀಕ್ಷೆಯನ್ನು ಮತ್ತೆ ನಡೆಸುವುದಾಗಿ ಸರಕಾರ ಆದೇಶ ಹೊರಡಿಸಿದ್ದ ಸಂದರ್ಭದಲ್ಲಿ ಈಕೆ ಪ್ರತಿಭಟನೆ ನಡೆಸಿದ್ದಳು. ಇದೀಗ ಈಕೆಯನ್ನು ಬಂಧಿಸಲಾಗಿದ್ದು, ಉಳಿದ ಅಭ್ಯರ್ಥಿಗಳ ಬಂಧನವೂ ಶೀಘ್ರದಲ್ಲಿ ನಡೆಯುವ ನಿರೀಕ್ಷೆಯಿದೆ.

ಆಗಸ್ಟ್‌ ಮೊದಲ ವಾರದಲ್ಲಿ ಎಂಟು ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಹೈಕ ವೃಂದದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ ಜೋಗುರ, ನಾಲ್ಕನೇ ರ‍್ಯಾಂಕ್ ಪಡೆದಿದ್ದ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, ರವಿರಾಜ, ಪೀರಪ್ಪ ಸಿದ್ನಾಳ, ಶ್ರೈಶೈಲ ಹಚ್ಚಡ, ಸಿದ್ದುಗೌಡ ಶರಣಪ್ಪ ಪಾಟೀಲ, ಸೋಮನಾಥ, ವಿಜಯಕುಮಾರ್‌ ಗುಡೂರ ಅವರನ್ನು ಬಂಧಿಸಲಾಗಿತ್ತು.

ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ಮರು ಪರೀಕ್ಷೆ ನಡೆಸುವ ಕುರಿತು ಪ್ರಕಟಣೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ರದ್ದಾದ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿದ್ದ ಎಲ್ಲಾ 56000 ಅಭ್ಯರ್ಥಿ ಗಳು ಮರು ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಹೊಂದಿದ್ದು, ಯಾವುದೇ ಆತಂಕ ಬೇಡ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇತ್ತೀಚೆಗೆ ಹೇಳಿದ್ದರು.

ಪಿಎಸ್‌ಐ ನೇಮಕಕ್ಕೆ ಮರು ಪರೀಕ್ಷೆ ನಡೆಸುವುದು ತಡವಾದರೆ, ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ, ಪರೀಕ್ಷೆ ತಯಾರಿ ಮುಂದುವರೆಸಿ, ಎಂದು ಸಚಿವರು, ಕಿವಿಮಾತು ಹೇಳಿದರು. ಹೀಗಾಗಿ, ಈ ಹಿಂದೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಹೆಚ್ಚುವರಿ ಮೀಸಲಾತಿ ದೊರಕುವ ಸೂಚನೆಯನ್ನು ಗೃಹ ಸಚಿವರು ನೀಡಿದ್ದಾರೆ.

ಪಿಎಸ್‌ಐ ನೇಮಕಾತಿಗೆ ಸಂಬಂಧಪಟ್ಟಂತೆ ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಬಳಿಕ, ಸಿಐಡಿ ತನಿಖೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿದ ಬಳಿಕ ಅಂದರೆ ಏಪ್ರಿಲ್‌ 29ರಂದು ಈ ಪಿಎಸ್‌ಐ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ಸರಕಾರ ಪ್ರಕಟಿಸಿತ್ತು.

IPL_Entry_Point

ವಿಭಾಗ