Puttur Jatre 2025: ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ಅನ್ನದ ಅಗುಳು ಮುತ್ತುಗಳಾಗಿ ಬೆಳೆದ ಕೆರೆದಂಡೆಯ ಮೇಲೆ ಅನ್ನದಾಸೋಹ
ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರೋತ್ಸವ ಶುರುವಾಗಿದೆ. ಈ ಉತ್ಸವದ ವೇಳೆ, ಅನ್ನದ ಅಗುಳು ಮುತ್ತುಗಳಾಗಿ ಬೆಳೆದ ಕೆರೆ ದಂಡೆಯ ಮೇಲೆ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ.(ವರದಿ- ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರು: ಅನ್ನದ ಅಗುಳುಗಳೇ ಮುತ್ತಾಗಿ ಪರಿವರ್ತನೆಯಾಗಿ ಕೆರೆ ನಿರ್ಮಾಣಗೊಂಡ ಕ್ಷೇತ್ರವೆಂಬ ಹೆಗ್ಗಳಿಕೆ ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಇತಿಹಾಸ ಪ್ರಸಿದ್ಧ ಕೆರೆಯ ತಟದಲ್ಲೇ ಜಾತ್ರೋತ್ಸವದ ಅನ್ನದಾಸೋಹಕ್ಕೆ ವ್ಯವಸ್ಥೆಯಾಗಿದೆ. ಏಪ್ರಿಲ್ 1ರಂದು ಗೊನೆ ಮುಹೂರ್ತ ನಡೆದಿರುವ ಪುತ್ತೂರು ಕ್ಷೇತ್ರದಲ್ಲಿ ಏ.10 ರಿಂದ ವಾರ್ಷಿಕ ಜಾತ್ರೋತ್ಸವ ಆರಂಭಗೊಂಡಿದೆ. ಏ..20ರವರೆಗೆ ನಡೆಯುವ ಉತ್ಸವದಲ್ಲಿ ಪ್ರತಿದಿನ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.
ಪುತ್ತೂರು ಜಾತ್ರೆ: ಅನ್ನದ ಅಗುಳು ಮುತ್ತುಗಳಾಗಿ ಬೆಳೆದ ಕೆರೆಯ ದಂಡೆಯಲ್ಲಿ ಅನ್ನದಾಸೋಹ
ಪ್ರತೀ ವರ್ಷ ಜಾತ್ರೋತ್ಸವ ಸಂದರ್ಭದಲ್ಲಿ ದೇವಳದ ಎದುರಿನ ದೇವಮಾರು ಗದ್ದೆಯಲ್ಲಿ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಕ್ಷೇತ್ರದಲ್ಲಿ ಪ್ರತ್ಯೇಕ ಅನ್ನಪೂರ್ಣ ಅನ್ನಛತ್ರ ನಿರ್ಮಾಣಗೊಳ್ಳುತ್ತಿದ್ದು, ಲೋಕಾರ್ಪಣೆಗೆ ಸಜ್ಜುಗೊಳ್ಳುತ್ತಿದೆ. ಜಾತ್ರೋತ್ಸವ ಸಂದರ್ಭದ ಅನ್ನದಾಸೋಹಕ್ಕೆ ಅನ್ನಛತ್ರದ ಸ್ಥಳಾವಕಾಶ ಸಾಕಾಗದ ಕಾರಣ ಪ್ರತ್ಯೇಕ ಭೊಜನಶಾಲೆ ನಿರ್ಮಾಣದ ಅನಿವಾರ್ಯತೆ ಈ ಬಾರಿಯೂ ಇತ್ತು. ಪ್ರಸ್ತುತ ವ್ಯವಸ್ಥಾಪನಾ ಸಮಿತಿಯು ಹೊಸ ಯೋಜನೆ ಸಿದ್ಧಪಡಿಸಿ, ಇತ್ತೀಚೆಗಷ್ಟೇ ಮನೆಗಳ ತೆರವು ನಡೆದ ಸ್ಥಳಾವಕಾಶ ಬಳಸಿಕೊಂಡು ಭೋಜನಶಾಲೆ ನಿರ್ಮಿಸಿದೆ.
ದೇವಳದ ಪಶ್ಚಿಮ ದಿಕ್ಕಿನಲ್ಲಿರುವ ಪ್ರಾಚೀನ ಕೆರೆಯ ಪಕ್ಕದಲ್ಲೇ ಇದ್ದ 9 ಕಟ್ಟಡಗಳನ್ನು ತೆರವು ಮಾಡಲಾಗಿದ್ದು, ಅಲ್ಲಿ ವಾಸ ಮಾಡುತ್ತಿದ್ದ ಬಹುತೇಕ ಕುಟುಂಬಗಳು ಸ್ವಯಂ ಪ್ರೇರಣೆಯಿಂದ ತೆರವು ಮಾಡಿದ್ದರೆ, 2 ಕುಟುಂಬಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಂತಿಮವಾಗಿ ತೆರವು ಕಾರ್ಯಾಚರಣೆ ಮುಗಿದ ಬಳಿಕ ಇಡೀ ಪ್ರದೇಶದಲ್ಲಿ ಸುಮಾರು 3 ಎಕರೆಯಷ್ಟು ವಿಶಾಲ ಜಾಗ ದೇವಳದ ಬಳಕೆಗೆ ಪ್ರಾಪ್ತವಾಗಿತ್ತು.
ಅನ್ನಛತ್ರ ನಿರ್ಮಾಣ
ಪ್ರಸ್ತುತ ನೂತನ ಜಾಗದಲ್ಲಿ ಜಾತ್ರೋತ್ಸವದ ಅನ್ನಸಂತರ್ಪಣೆಗಾಗಿ ಛತ್ರ ನಿರ್ಮಿಸಲಾಗಿದೆ. ನಿತ್ಯವೂ ಸಾವಿರಾರು ಭಕ್ತರು ಊಟ ಮಾಡಬಹುದಾದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪಾಕಶಾಲೆ ನಿರ್ಮಾಣವಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ ಸಾರಥ್ಯದಲ್ಲಿ ಕಾಮಗಾರಿ ನಡೆದಿದೆ.
ಐತಿಹಾಸಿಕ ಮಹತ್ವದ ಪುತ್ತೂರು ಕೆರೆ
ಕಾಶಿಯಿಂದ ತಂದ ಶಿವಲಿಂಗ ಸ್ಥಾಪನೆಯಾದ ಕ್ಷೇತ್ರ ಇದಾಗಿದ್ದು, ಲಿಂಗವನ್ನು ಕೀಳಲು ಯತ್ನಿಸಿದ ರಾಜ ಸೋತ ಕಥೆ ಇಲ್ಲಿದೆ. ಆನೆಯ ಮೂಲಕ ಲಿಂಗವನ್ನು ಕೀಳಲು ಯತ್ನಿಸಿದಾಗ ಆನೆ ಸೋತು ಬಿದ್ದ ಜಾಗದಲ್ಲಿ ನಿರ್ಮಾಣಗೊಂಡ ಬೃಹತ್ ಗುಳಿಯಲ್ಲೇ ಕೆರೆ ನಿರ್ಮಿಸಲಾಗಿತ್ತು. ಕೆರೆಯಲ್ಲಿ ನೀರು ಸಿಗದೇ ಇದ್ದಾಗ ಶಿವ ಭಕ್ತರಿಗೆ ಕೆರೆಯ ಮಧ್ಯದಲ್ಲಿ ಅನ್ನಸಂತರ್ಪಣೆ ಮಾಡಲಾಗಿತ್ತು. ಭಕ್ತರು ಊಟ ಮಾಡುತ್ತಿದ್ದಂತೆ ಗಂಗೆ ಉಕ್ಕಿ ಬಂದಿದ್ದು, ಅವರೆಲ್ಲ ಅನ್ನದ ಎಲೆಯನ್ನು ಕೆರೆಯಲ್ಲೇ ಬಿಟ್ಟು ಮೇಲೆ ಬಂದಿದ್ದರು. ನೀರಿನಾಳದಲ್ಲಿ ಉಳಿದ ಅನ್ನದ ಅಗುಳುಗಳೇ ಮುತ್ತುಗಳಾಗಿ ಪರಿವರ್ತನೆಯಾಗಿ ಕ್ರಮೇಣ ಈ ಊರಿಗೆ ಪುತ್ತೂರು ಎಂಬ ಹೆಸರು ಬಂತೆಂಬ ಕಥೆಯಿದೆ. ಅನ್ನದ ಅಗುಳು ಮುತ್ತಾಗಿ ಪರಿವರ್ತನೆಗೊಂಡ ಕೆರೆಯ ದಂಡೆಯಲ್ಲೇ ಈ ಬಾರಿಯ ಜಾತ್ರೋತ್ಸವದಲ್ಲಿ ಅನ್ನದಾಸೋಹ ನಡೆಯುತ್ತಿದೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)
