Puttur News: ಪುತ್ತೂರು ಬ್ಯಾನರ್‌ ಪ್ರಕರಣ; ಆರೋಪಿಗಳಿಗೆ ಪೊಲೀಸರ ಥರ್ಡ್‌ ಡಿಗ್ರಿ ಶಿಕ್ಷೆ ಆರೋಪ ತನಿಖೆ ಎಂದ ಎಸ್ಪಿ; ನಳಿನ್‌ ಕಟೀಲ್‌ ಟ್ವೀಟ್
ಕನ್ನಡ ಸುದ್ದಿ  /  ಕರ್ನಾಟಕ  /  Puttur News: ಪುತ್ತೂರು ಬ್ಯಾನರ್‌ ಪ್ರಕರಣ; ಆರೋಪಿಗಳಿಗೆ ಪೊಲೀಸರ ಥರ್ಡ್‌ ಡಿಗ್ರಿ ಶಿಕ್ಷೆ ಆರೋಪ ತನಿಖೆ ಎಂದ ಎಸ್ಪಿ; ನಳಿನ್‌ ಕಟೀಲ್‌ ಟ್ವೀಟ್

Puttur News: ಪುತ್ತೂರು ಬ್ಯಾನರ್‌ ಪ್ರಕರಣ; ಆರೋಪಿಗಳಿಗೆ ಪೊಲೀಸರ ಥರ್ಡ್‌ ಡಿಗ್ರಿ ಶಿಕ್ಷೆ ಆರೋಪ ತನಿಖೆ ಎಂದ ಎಸ್ಪಿ; ನಳಿನ್‌ ಕಟೀಲ್‌ ಟ್ವೀಟ್

Puttur News: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ವಿರುದ್ಧ ಅವಹೇಳನಕಾರಿ ಬ್ಯಾನರ್ ಕಟ್ಟಿ, ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 9 ಮಂದಿಗೆ ಬಾಸುಂಡೆ ಬರುವ ರೀತಿ ಪೊಲೀಸರು ಥಳಿಸಿದ ಚಿತ್ರಗಳು ವೈರಲ್ ಆಗಿವೆ. ಈ ಕುರಿತು ತನಿಖೆ ನಡೆಸುವುದಾಗಿ ಎಸ್ಪಿ ತಿಳಿಸಿದ್ದಾರೆ. ನಳಿನ್‌ ಟ್ವೀಟ್‌ ಗಮನಸೆಳೆದಿದೆ.

Puttur News: ಪುತ್ತೂರಿನಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಆರೋಪಿಗಳು ಹಾಕಿದ್ದು ಎನ್ನಲಾದ ಬ್ಯಾನರ್‌. (ಕಡತ ಚಿತ್ರ)
Puttur News: ಪುತ್ತೂರಿನಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಆರೋಪಿಗಳು ಹಾಕಿದ್ದು ಎನ್ನಲಾದ ಬ್ಯಾನರ್‌. (ಕಡತ ಚಿತ್ರ) (HT Kannada)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೋಟಿ ಚೆನ್ನಯ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬ್ಯಾನರ್ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದ ಪುತ್ತೂರು ಪೊಲೀಸರು ಅವರಿಗೆ ಥರ್ಡ್ ಡಿಗ್ರಿ ಪ್ರಯೋಗ ಮಾಡಿದ್ದಾರೆ ಎನ್ನಲಾದ ಬಗ್ಗೆ ಚಿತ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುತ್ತೂರು ನಗರಸಭೆ ವ್ಯಾಪ್ತಿಯ ಪುತ್ತೂರು ಅರಣ್ಯ ಇಲಾಖೆಯ ಆವರಣ ಗೋಡೆಯ ಬಳಿ ಬಿಜೆಪಿ ಮುಖಂಡರಾದ ಡಿ. ವಿ. ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನು ಹಾಕಿ ಬಿಜಿಪಿ ಸೋಲಿಗೆ ಕಾರಣವಾದ ನಾಯಕರಿಗೆ ಶ್ರದ್ಧಾಂಜಲಿಯ ಬ್ಯಾನರ್ ಅನ್ನು ಅಳವಡಿಸಿ ಅದಕ್ಕೆ ಚಪ್ಪಲಿ ಹಾರವನ್ನು ಮೇ.14ರಂದು ರಾತ್ರಿ ಹಾಕಲಾಗಿತ್ತು. ಈ ಬಗ್ಗೆ ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಪುತ್ತೂರು ನಗರ ಠಾಣೆಗೆ ಸರ್ಕಾರಿ ಆಸ್ತಿಪಾಸ್ತಿಯನ್ನು ಮತ್ತು ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ ದೂರ ನೀಡಿದ್ದರು.

ಪುತ್ತೂರಿನಲ್ಲಿ ಮೇ. 15ರಂದು ಈ ವಿಚಾರವಾಗಿ ಬಿಜೆಪಿ ಪ್ರತಿಭಟನೆಯನ್ನು ನಡೆಸಿತ್ತು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು ಹಿಂದು ಕಾರ್ಯಕರ್ತರು ಎಂಬ ಹೆಸರಲ್ಲಿ ಬ್ಯಾನರ್ ಹಾಕಲಾಗಿದ್ದು, ಅವರ ವಿರುದ್ಧ ಕಠಿಣಾತಿಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಅದಾದ ಬೆನ್ನಲ್ಲೇ ಪೊಲೀಸ್ ಇಲಾಖೆ ನರಿಮೊಗರು ಮೂಲದ ವಿಶ್ವನಾಥ್, ಮಾಧವ ಎಂಬವರನ್ನು ಪ್ರಾರಂಭದಲ್ಲಿ ವಶಕ್ಕೆ ಪಡೆದುಕೊಂಡಿತು. ಮೇ.15 ರಾತ್ರಿ ನರಿಮೊಗರು ನಿವಾಸಿಗಳಾದ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಅವರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಂದ ವಶದಲ್ಲಿವರಿಗೆ ಹಿಗ್ಗಾಮುಗ್ಗಾ ತಳಿಸಿ ಗಾಯಗೊಳಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಫೊಟೋಗಳು ಹರಿದಾಡುತ್ತಿವೆ.

ಗಾಯಗೊಂಡ ಯುವಕರ ರಕ್ತಸಿಕ್ತ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಚೇರಿಯಿಂದ ನಡೆದಾಡಲೂ ಕಷ್ಟ ಪಡುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ಹಲ್ಲೆಗೊಳಗಾದ ಯುವಕರು ಕಟ್ಟಾ ಬಿಜೆಪಿ ಕಾರ್ಯಕರ್ತರಾಗಿದ್ದು, ಅದರಲ್ಲಿ ಕೆಲವರು ಈ ಬಾರಿ ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗಿದ್ದರು. ಉಳಿದವರು ಬಿಜೆಪಿಯ ಪರವೇ ಪ್ರಚಾರ ನಡೆಸಿದ್ದರು ಎಂದು ತಿಳಿದುಬಂದಿದೆ. ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಮನಿಸಿದ ನೆಟ್ಟಿಗರು, ಪೊಲೀಸ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಳಿನ್‌ ಕುಮಾರ್‌ ಕಟೀಲು ಟ್ವೀಟ್‌

ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ. ಉನ್ನತ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಳಿನ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಸತ್ಯಾಂಶ ಅರಿಯಲು ವಿಚಾರಣೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮ್ಟೆ, ಬಿಜೆಪಿ ರಾಜ್ಯಾಧ್ಯಕ್ಷರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆ ಯಲ್ಲಿ ದಸ್ತಗಿರಿ ಮಾಡಿದ ಆರೋಪಿತರಿಗೆ ಪೊಲೀಸ್ ಹಲ್ಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣ ಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ತಿಳಿದುಬಂದಿದ್ದು. ಈ ಬಗ್ಗೆ ಸತ್ಯಾoಶ ತಿಳಿದುಕೊಳ್ಳಲು ವಿಚಾರಣೆ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪುತ್ತೂರಲ್ಲಿ ಬಿಜೆಪಿ ಕಾರ್ಯಕರ್ತರ ಬಂಡಾಯದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ತೀವ್ರ ಸ್ಪರ್ಧೆಯನ್ನು ಎದುರಿಸಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗೆದ್ದಿದ್ದರು. ಇಲ್ಲಿ ಬಿಜೆಪಿ ಮೂರನೇ ಸ್ಥಾನ ಪಡೆಯಿತು.

ಚುನಾವಣೆ ನಾಮಪತ್ರ ಸಲ್ಲಿಕೆ ದಿನದಿಂದ ಮುಗಿಯುವವರೆಗೆ ಬಿಜೆಪಿ ಮತ್ತು ಪಕ್ಷೇತರರ ಬೆಂಬಲಿಗರ ನಡುವೆ ಜಿದ್ದಾಜಿದ್ದಿ ಕದನ ಹೊರಗಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿಯೂ ನಡೆದಿತ್ತು. ಫಲಿತಾಂಶ ಬಂದ ಬಳಿಕ ಪುತ್ತೂರಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡರೆ, ರಾಜ್ಯದಲ್ಲೂ ಸೋತಿತು.

ಪುತ್ತೂರಿನಲ್ಲಿ ಸೋಲು ಕಾಣಲು ಡಿ.ವಿ.ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂಬ ಆರೋಪ ವೈಯಕ್ತಿಕ ಟೀಕೆಗೆ ತಿರುಗಿತ್ತು. ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡ ಕಿಡಿಗೇಡಿಗಳು ಪುತ್ತೂರಿನಲ್ಲಿ ಬ್ಯಾನರ್ ಕಟ್ಟಿದ್ದರು. ನೊಂದ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಬ್ಯಾನರ್ ಅಳವಡಿಕೆ ಮಾಡಿದ್ದರು. ಬಳಿಕ ಪ್ರತಿಭಟನೆಗಳು ನಡೆದ ನಂತರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಒಂಭತ್ತು ಮಂದಿಯನ್ನು ದಸ್ತಗಿರಿ ಮಾಡಲಾಗಿತ್ತು.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner