Puttur News; ಪ್ರೀತಿಗೊಪ್ಪದ ಪಿಯು ವಿದ್ಯಾರ್ಥಿನಿಗೆ ಇರಿದ ವಿದ್ಯಾರ್ಥಿ, ಪುತ್ತೂರು ಸರ್ಕಾರಿ ಪಿಯು ಕಾಲೇಜಿನಲ್ಲಿ ಕಳವಳಕಾರಿ ಘಟನೆ
Puttur Crime News; ಪುತ್ತೂರಿನಲ್ಲಿ ಪ್ರೀತಿಗೊಪ್ಪದ ಪಿಯು ವಿದ್ಯಾರ್ಥಿನಿಗೆ ವಿದ್ಯಾರ್ಥಿಯೊಬ್ಬ ಇರಿದ ಕಳವಳಕಾರಿ ಘಟನೆಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನಲ್ಲಿ ಇಂದು (ಆಗಸ್ಟ್ 20) ಬೆಳಗ್ಗೆ ನಡೆದಿದೆ. ಈ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗೆ ವಿದ್ಯಾರ್ಥಿಯೋರ್ವ ಹರಿತ ಆಯುಧದಲ್ಲಿ ಇರಿದ ಪ್ರಕರಣ ಮಂಗಳವಾರ ಬೆಳಗ್ಗೆ ನಡೆದಿದೆ.
ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಭಿನ್ನ ಕೋಮಿಗೆ ಸೇರಿದವರಾದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ತಲೆದೋರಿದ್ದು, ಬಳಿಕ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೃತ್ಯ ನಡೆಸಿದ ಬಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ಆರೋಪಿ ಬಾಲಕ ನನ್ನನ್ನ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದ, ವಿದ್ಯಾರ್ಥಿನಿ ಬಳಿ ಬಂದು ನೀನು *** ಗೆಳತಿ ಅಲ್ವಾ ಅಂತ ಕೇಳಿದ, ಅಲ್ಲದೇ ನಾನು **** ಅವಳನ್ನು ಲವ್ ಮಾಡಲ್ಲ, ನಿನ್ನ ಲವ್ ಮಾಡ್ತೇನೆ ಅಂದ, ಆಗ ಆಕೆ ಅವನಿಗೆ ಸರಿಯಾಗಿ ಬೈದಾಗಲೂ ಮತ್ತೆ ಮತ್ತೆ ಲವ್ ಮಾಡ್ತೇನೆ ಅಂದ, ಆಗ ವಿರೋಧಿಸಿದ್ದಕ್ಕೆ ವಿದ್ಯಾರ್ಥಿನಿಯ ಕೈಗೆ ಇರಿದು ಓಡಿದ ಯಾವುದರಲ್ಲಿ ಇರಿದ ಎಂದು ಆಕೆಗೆ ಗೊತ್ತಾಗಿಲ್ಲ, ಬಹುಶಃ ಬ್ಲೇಡ್ ನಲ್ಲಿ ಇರಬಹುದು ಎಂದು ಸಂಶಯಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಥಮ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿರುವ ಬಾಲಕ, ಕಾಮರ್ಸ್ ವಿದ್ಯಾರ್ಥಿಯಾಗಿರುವ ಬಾಲಕಿಗೆ ಇರಿದಿದ್ದಾಗಿ ಹೇಳಲಾಗಿದೆ.
ಎಸ್.ಡಿ.ಪಿ.ಐ, ಕಾಂಗ್ರೆಸ್, ಮುಸ್ಲಿಂ ಮುಖಂಡರ ಆಗಮನ, ಸೂಕ್ತ ತನಿಖೆಗೆ ಒತ್ತಾಯ: ಮಧ್ಯಾಹ್ನ ಎಸ್‌ಡಿಪಿಐ ಕಾರ್ಯಕರ್ತರು, ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಆಸ್ಪತ್ರೆ ವಠಾರದಲ್ಲಿ ಜಮಾಯಿಸಿ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಬಾಲಕಿಗೆ ನ್ಯಾಯ ಒದಗಿಸಬೇಕೆಂದು ಪೊಲೀಸರನ್ನು ಆಗ್ರಹಿಸಿದರು.
ಆಸ್ಪತ್ರೆಯೆದುರು ಜಮಾವಣೆ: ಬಾಲಕಿಯನ್ನು ಚಿಕಿತ್ಸೆಗೆಂದು ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ ಕರೆತಂದಾಗ ನೂರಾರು ಜನ ಸೇರಿದ್ದರು. ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದ್ದು ಸಮಗ್ರ ತನಿಖೆ ಆಗಬೇಕು ಎಂದು ಮುಸ್ಲಿಂ ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು. ಪೊಲೀಸರು ಸಮಗ್ರ ತನಿಖೆ ಮಾಡಿ, ಆರೋಪಿಯ ಮೇಲೆ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ವಾತಾವರಣದಲ್ಲಿ ಇಂಥ ಘಟನೆ ಮರುಕಳಿಸದಂತೆ ಖಾತ್ರಿಪಡಿಸಬೇಕೆಂದು ಅವರು ಒತ್ತಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಬಳಿಕ ಜನ ಚದುರಿದರು.
ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಹಂದಿ ದಾಳಿ
ದ್ವಿಚಕ್ರ ವಾಹನ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳವಾರ ಮುಂಜಾನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಧನುಷ್(30) ಗಾಯಗೊಂಡವರು.ಕುಂಬ್ರ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್ ನಲ್ಲಿ ಪೆಟ್ರೋಲ್ ಬಂಕ್ ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ.
ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಧನುಷ್ ಮೇಲೆ ಎರಗಿದ ಕಾಡುಹಂದಿ, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಅಲ್ಲದೆ, ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)