Rahul Gandhi: ನಮ್ಮ ಸರ್ಕಾರ ಎಲ್ಲರಿಗೂ ಆಸರೆ ಎಂದ ರಾಹುಲ್ ಗಾಂಧಿ; ಕರ್ನಾಟಕ ಸಿಎಂ ಪದಗ್ರಹಣ ಸಮಾರಂಭದ ಮೂಲಕ ದೇಶಕ್ಕೆ ಸಂದೇಶ
Rahul Gandhi: ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಕಾನೂನಾಗಿ ಜಾರಿ ಮಾಡುತ್ತೇವೆ. ನಾನು ನುಡಿದಂತೆ ನಡೆಯುತ್ತೇವೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಗ್ಯಾರೆಂಟಿ ಈಡೇರಿಕೆಯ ಭರವಸೆ ನೀಡಿದರು.
ಬೆಂಗಳೂರು: ಉಚಿತ ವಿದ್ಯುತ್, ಅನ್ನಭಾಗ್ಯ, ಗೃಹಲಕ್ಷ್ಮೀ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವಿದ್ಯಾವಂತ ಯುವಜನರಿಗಾಗಿ ಯುವನಿಧಿ ಗ್ಯಾರೆಂಟಿಗಳನ್ನು ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಕಾನೂನಾಗಿ ಜಾರಿ ಮಾಡುತ್ತೇವೆ. ನಾನು ನುಡಿದಂತೆ ನಡೆಯುತ್ತೇವೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಅವರು ಇಂದು (ಮೇ 20) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅದೇ ವೇದಿಕೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ 5 ವರ್ಷಗಳಲ್ಲಿ ಆದ ತೊಂದರೆ ನಿಮಗೆ ಗೊತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್‌ಗೆ ಗೆಲುವು ಬಂದಿದೆ. ಕರ್ನಾಟಕದ ಬಡವರು, ದಲಿತರು, ಹಿಂದುಳಿದವರ ಜೊತೆಗೆ ಕಾಂಗ್ರೆಸ್ ನಿಂತಿದೆ. ಆದರೆ ಬಿಜೆಪಿ ಜೊತೆಗೆ ಹಣಬಲ, ಪೊಲೀಸ್, ಅಧಿಕಾರ ಇತ್ತು ಎಂದು ರಾಹುಲ್ ಹೇಳಿದರು.
ಬಿಜೆಪಿಯ ಎಲ್ಲ ಶಕ್ತಿಯನ್ನೂ ಕರ್ನಾಟಕದ ಜನಬಲ ಸೋಲಿಸಿದೆ. ಅವರ ದ್ವೇಷದ ರಾಜಕಾರಣವನ್ನು ನೀವು ತಿರಸ್ಕರಿಸಿದ್ದೀರಿ. ದ್ವೇಷವನ್ನು ತಿರಸ್ಕರಿಸಿ, ಪ್ರೀತಿ ಬೆಳೆಸಿ ಎಂಬ ನಮ್ಮ ಭಾರತ್ ಜೋಡೋ ಸಂದೇಶಕ್ಕೆ ನೀವು ಓಗೊಟ್ಟಿದ್ದೀರಿ. ನಿಮಗೆ ಧನ್ಯವಾದ ಎಂದು ರಾಹುಲ್ ಗಾಂಧಿ ಹೇಳಿದರು
ರಾಜ್ಯದ ಎಲ್ಲ ಜನಸಾಮಾನ್ಯರ ಜೊತೆಗೆ ನಮ್ಮ ಸರ್ಕಾರ ನಿಲ್ಲುತ್ತದೆ. ಕರ್ನಾಟಕದ ಎಲ್ಲ ಯುವಜನರು, ಮಾತೆಯರು ಮತ್ತು ಭಗಿನಿಯರಿಗೆ ಧನ್ಯವಾದ ಅರ್ಪಿಸುತ್ತೇನೆ. ನಿಮ್ಮ ಪ್ರೀತಿಯ ಶಕ್ತಿಯನ್ನು ನಮಗೆ ಕೊಟ್ಟಿದ್ದೀರಿ. ಇದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮರೆಯುವುದಿಲ್ಲ. ಈ ಸರ್ಕಾರವು ಕರ್ನಾಟಕದ ಜನರ ಸರ್ಕಾರ, ಇದು ನಿಮ್ಮ ಸರ್ಕಾರ. ಇದು ಮನಃಪೂರ್ವಕವಾಗಿ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣ ಮುಗಿಸಿದರು.
ಗ್ಯಾರೆಂಟಿಗಳನ್ನು ಈಡೇರಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ
ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಹಿಂದೆಯೂ ನಾವು ಕೆಲಸ ಮಾಡಿ ತೋರಿಸಿದ್ದೇವೆ. ಬಿಜೆಪಿಯಂತೆ ನಮ್ಮದು ಹೇಳೋದೊಂದು-ಮಾಡೋದು ಮತ್ತೊಂದು ಅಲ್ಲ. ನಾವು ಏನು ಹೇಳ್ತೀವೋ ಅದನ್ನೇ ಮಾಡ್ತೀವಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು
ಜಪಾನ್‌ಗೆ ಮೋದಿ ಹೋದರೆ ನೋಟ್ ಬಂದಿ ಆದೇಶ ಎಂದು ಖರ್ಗೆ ವ್ಯಂಗ್ಯವಾಡಿದರು. ಹಿಂದೆ ಮೋದಿ ಜಪಾನ್‌ಗೆ ಹೋದಾಗ 1,000 ರೂಪಾಯಿ ನೋಟ್ ಬಂದಿ ಮಾಡಿದ್ದರು. ಈಗ ಹೋಗಿದ್ದಾರೆ 2,000 ನೋಟ್ ಬಂದಿ ಮಾಡಿದ್ದಾರೆ. ದೇಶಕ್ಕೆ ಆಗುವ ನಷ್ಟದ ಬಗ್ಗೆ ಅವರಿಗೆ ಲಕ್ಷ್ಯವಿಲ್ಲ. ಇದು ಈ ದೇಶದ ಜನರಿಗೆ ತೊಂದರೆ ಕೊಡುವ ಕೆಲಸ. ಆದರೆ ನಮ್ಮ ಸರ್ಕಾರ ಹಾಗಲ್ಲ ಎಂದು ಖರ್ಗೆ ಒತ್ತಿ ಹೇಳಿದರು.
ನಾವು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ನಮ್ಮದು ಪ್ರೀತಿಯ ಸರ್ಕಾರ ಎಂದು ಖರ್ಗೆ ಹೇಳಿದರು.