Rahul Gandhi: ನಾಳೆ ಮತ್ತದೇ ಕೋಲಾರಕ್ಕೆ ಬರಲಿರುವ ರಾಹುಲ್ ಗಾಂಧಿ: ಮರುಕಳಿಸುವುದೇ 2019ರ ಘರ್ಜನೆ?
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ನಾಳೆ(ಏ.16-ಭಾನುವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಎರಡು ದಿನಗಳ ಕಾಲ ರಾಜ್ಯದಲ್ಲಿರಲಿದ್ದು, ಕೋಲಾರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ನಾಳೆ(ಏ.16-ಭಾನುವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಹುಲ್ ಗಾಂಧಿ ಎರಡು ದಿನಗಳ ಕಾಲ ರಾಜ್ಯದಲ್ಲಿರಲಿದ್ದು, ಕೋಲಾರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೊದಲ ದಿನ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿರುವ ರಾಹುಲ್ ಗಾಂಧಿ, ಎರಡನೇ ದಿನ ಬೀದರ್‌ನಲ್ಲಿ ಪಕ್ಷದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಇಷ್ಟೇ ಅಲ್ಲದೇ ರಾಹುಲ್ ಗಾಂಧಿ ವಿವಿಧ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಭಾನುವಾರ ಮಧ್ಯಾಹ್ಮ 12. 05 ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ, ಅಲ್ಲಿಂದ ನೇರವಾಗಿ ಕೋಲಾರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಆಗಮಿಸಿ, ಪೌರ ಕಾರ್ಮಿಕರು ಹಾಗೂ ಬೀದಿಬದಿ ವ್ಯಾಪಾರಸ್ಥರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ.
ಆ ಬಳಿಕ ಬೆಂಗಳೂರಿನಲ್ಲಿ ನೂರನವಾಗಿ ನಿರ್ಮಾಣಗೊಂಡಿರುವ ಕಾಂಗ್ರೆಸ್ ಕಚೇರಿ ಇಂದಿರಾ ಭವನವನ್ನು ರಾಹುಲ್ ಗಾಂಧಿ ಅವರು ಉದ್ಘಾಟನೆ ಮಾಡಲಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರಿನಲ್ಲೇ ಉಳಿದುಕೊಳ್ಳಲಿರುವ ಅವರು, ಸೋಮವಾರ ಬೀದರ್‌ಗೆ ಪ್ರಯಾಣ ಬೆಳಸಲಿದ್ದಾರೆ.
ಬೀದರ್‌ನ ಭಾಲ್ಕಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ರಾಹುಲ್ ಗಾಂಧಿ, ನಂತರದಲ್ಲಿ ಹುಮ್ನಾಬಾದ್ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ಪರವಾಗಿಯೂ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ಹೈದರಾಬಾದ್ ಮೂಲಕ ರಾಹುಲ್ ಗಾಂಧಿ ಅವರು ನವದೆಹಲಿಗೆ ವಾಪಸ್ಸಾಗಲಿದ್ದಾರೆ.
ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಈ ಕ್ಷೇತ್ರದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ಣಿದ್ದು, ವರುಣಾ ಜೊತೆಗೆ ಕೋಲಾರದಲ್ಲೂ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದಾರೆ. ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಬಳಿಕವೇ ರಾಹುಲ್ ಗಾಂಧಿ ಅವರು ಕ್ಷೇತ್ರಕ್ಕೆ ಬರಲಿದ್ದಾರೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿರುವುದರಿಂದ, ಇದೀಗ ರಾಹುಲ್ ಪ್ರವಾಸದ ಬಳಿಕ ಅಭ್ಯರ್ಥಿಯನ್ನು ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ.
2019ರ ಲೋಕಸಭೆ ಚುನಾವಣಾ ಪ್ರಚಾರ ಭಾಷಣದಲ್ಲಿ, ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರಾಗಿತ್ತಾರೆ ಏಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ರಾಹುಲ್ ಅವರ ಈ ಹೇಳಿಕೆ ವಿರೋಧಿಸಿ ಗುಜರಾತ್‌ನ ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯ, ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿತ್ತು. ಅಲ್ಲದೇ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವನ್ನು ಅನರ್ಹಗೊಳಿಸಲಾಗಿತ್ತು.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ, ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯ ಕುರಿತು ಏಪ್ರಿಲ್ 20ರಂದು ತನ್ನ ಆದೇಶವನ್ನು ಪ್ರಕಟಿಸುವುದಾಗಿ ಸೂರತ್‌ನ ಸೆಷನ್ಸ್ ನ್ಯಾಯಾಲಯ ಹೇಳಿದೆ.
ರಾಹುಲ್ ಗಾಂಧಿ ಇದೀಗ ಅದೇ ಕೋಲಾರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆ ಚುನಾವಣೆ ರಣಕಹಳೆ ಮೊಳಗಿಸಲಿದ್ದು, ಈ ಮೂಲಕ ತಮ್ಮ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿರುವುದಕ್ಕೆ ತಿರುಗೇಟು ನೀಡಲಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿ ಕರ್ನಾಟಕ ಪ್ರವಾಸಕ್ಕಾಗಿ ಈಗಾಗಲೇ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದೆ. ಕರ್ನಾಟಕದಲ್ಲಿ ರಾಹುಲ್ ಏನು ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.