ರಾಯಚೂರು ದೇವಸುಗೂರು ಗ್ರಾಮದ ಕೃಷ್ಣಾ ನದಿ ತಳದಲ್ಲಿ ಪುರಾತನ ವಿಷ್ಣು ವಿಗ್ರಹ ಪತ್ತೆ, ಅಯೋಧ್ಯೆ ಬಾಲರಾಮನ ನೆನಪು
ರಾಯಚೂರು ದೇವಸುಗೂರು ಗ್ರಾಮದ ಕೃಷ್ಣಾ ನದಿಯ ತಳದಲ್ಲಿ ಪುರಾತನ ವಿಷ್ಣು ವಿಗ್ರಹ, ಶಿವಲಿಂಗ ಪತ್ತೆಯಾಗಿವೆ. ವಿಷ್ಣು ವಿಗ್ರಹದ ಕೆತ್ತನೆಗಳು ಅಯೋಧ್ಯೆ ಬಾಲರಾಮನ ನೆನಪು ಉಂಟುಮಾಡುತ್ತಿದ್ದು ಜನರ ಕುತೂಹಲವನ್ನು ಕೆರಳಿಸಿದೆ.
ರಾಯಚೂರು ತಾಲೂಕು ದೇವಸಗೂರು ಗ್ರಾಮದ ಬಳಿ ಇರುವ ಕೃಷ್ಣಾ ನದಿಯಲ್ಲಿ ಪುರಾತನ ದಶಾವತಾರ ವಿಷ್ಣು ಹಾಗೂ ಶಿವಲಿಂಗ ವಿಗ್ರಹಗಳು ದೊರೆತಿವೆ. ಈ ಪೈಕಿ ವಿಷ್ಣುವಿನ ವಿಗ್ರಹವು ಅಯೋಧ್ಯೆಯ ಬಾಲರಾಮನನ್ನು ನೆನಪಿಸುವಂತೆ ಇದೆ.
ದೇವಸಗೂರು ಗ್ರಾಮದ ಸಮೀಪ ಕೃಷ್ಣಾ ನದಿಯ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಈ ಮೂರ್ತಿಗಳು ದೊರೆತಿವೆ. ಇವು 12-16ನೇ ಶತಮಾನದ ಇತಿಹಾಸವುಳ್ಳ ವಿಗ್ರಹಗಳಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ನೀರಿಲ್ಲದೆ ಬತ್ತಿರುವ ಕಾರಣ ನದಿ ತಳದಲ್ಲಿ ವಿಗ್ರಹಗಳು ಕಾಣಸಿಕ್ಕಿವೆ
ಹಸಿರು ಮಿಶ್ರಿತ ಗ್ರಾನೈಟ್ ಶಿಲೆಯಲ್ಲಿರುವ ವಿಷ್ಣುವಿನ ಮೂರ್ತಿಯ ಪ್ರಭಾವಳಿಯಲ್ಲಿ ವೆಂಕಟೇಶನ ಶಿಲ್ಪ ಹೊಂದಿರೋ ದಶಾವತಾರದ ಚಿತ್ರಣವಿದೆ. ಶಂಖ ಮತ್ತು ಚಕ್ರ, ಕಟಿ ಹಸ್ತ ಕೈಯಲ್ಲಿ ಹಿಡಿದಿರೋ ವಿಷ್ಣುವಿನ ವಿಗ್ರಹ ಇದಾಗಿದೆ. ಈ ವಿಗ್ರಹವು ವೈಷ್ಣವ ದೇವಾಲಯಕ್ಕೆ ಸಂಬಂಧಿಸಿದ ವಿಷ್ಣುವಿನ ಮೂಲ ಮೂರ್ತಿಯೇ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದನ್ನು ನೋಡಿದ ಕೂಡಲೇ ಅಯೋಧ್ಯೆ ರಾಮ ಮಂದಿರದಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆಗೊಂಡ ಬಾಲರಾಮನ ವಿಗ್ರಹದ ನೆನಪು ಮನಸ್ಸಿನಲ್ಲಿ ಮೂಡಿಬಿಡುತ್ತದೆ.
ಅದಿಲ್ ಶಾಹಿ ದಾಳಿಗೆ ಒಳಪಟ್ಟಿದ್ದ ಪ್ರದೇಶ
ಕೃಷ್ಣದೇವರಾಯ ಆಳ್ವಿಕೆಗೆ ಒಳಪಟ್ಟಿದ್ದ ರಾಯಚೂರು ಭೂಪ್ರದೇಶ. ಬಳಿಕ ನಿಜಾಮರು ಮತ್ತು ಆದಿಲ್ ಶಾಹಿಗಳ ದಾಳಿಗೆ ಒಳಪಟ್ಟ ಪ್ರದೇಶ ಇದಾಗಿದ್ದು, ಆ ಕಾಲದ ಆಕ್ರಮಣದ ವೇಳೆ ದೇವಸ್ಥಾನ ಕೆಡವಿದ ವೇಳೆ ಮೂರ್ತಿಯನ್ನು ನದಿಗೆ ಎಸೆದಿರಬಹುದು ಎಂದೂ ಹೇಳಲಾಗುತ್ತಿದೆ. ಮೌರ್ಯ, ಶಾತವಾಹನ, ಕದಂಬರ ಆಳ್ವಿಕೆಗೆ ಒಳಪಟ್ಟ ಪ್ರದೇಶವೂ ಇದಾಗಿದ್ದು, 11ನೇ ಶತಮಾನಕ್ಕೆ ಸೇರಿದ ವಿಗ್ರಹವಾಗಿಬಹುದು ಎಂಬ ಮಾತೂ ಕೇಳಿದೆ. ಅದೇ ರೀತಿ, ದಾಳಿಯ ಸಂದರ್ಭದಲ್ಲಿ ಮೂಲ ಮೂರ್ತಿ ಭಗ್ನವಾಗಿದ್ದರೆ, ಅಂತಹ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿಬಿಡುವ ಪರಿಪಾಠವೂ ಇರುವ ಕಾರಣ ಈ ಕುರಿತು ಅಧ್ಯಯನ ನಡೆಯಬೇಕಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಿದ್ದಾರೆ.
ಅದಿಲ್ ಶಾಹಿಗಳಿಂದ ರಾಯಚೂರು ಭಾಗದಲ್ಲಿ ಸುಮಾರು 163ಕ್ಕೂ ಹೆಚ್ಚು ದಾಳಿಗಳು ಆಗಿವೆ. ಕೃಷ್ಣದೇವರಾಯ ಕಾಲದಲ್ಲಿ ಮುಸಲ್ಮಾನ ಅರಸರು ಸ್ಥಳೀಯ ಅರಸರ ಮೇಲೆ ದಾಳಿ ಮಾಡಿದ್ದರು. ಶೈವ, ವೈಷ್ಣವ ದೇವಾಲಯಗಳು ಕೂಡ ಧ್ವಂಸವಾಗಿವೆ. ಕೆಲವು ಮಸೀದಿಗಳಾಗಿ ಬದಲಾಗಿವೆ. ಧಾರ್ಮಿಕ ಸಂಘರ್ಷದಿಂದಲೇ ಮೂರ್ತಿಗಳನ್ನ ನೀರಿಗೆ ಹಾಕಿರಬಹುದು ಎಂದು ಇತಿಹಾಸ ಮತ್ತು ಪುರತಾತ್ವ ಅಧ್ಯಯನ ಉಪಾನ್ಯಾಸಕಿ ಡಾ.ಪದ್ಮಾಜ್ ದೇಸಾಯಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ವಿಗ್ರಹಗಳು ಪುರಾತತ್ವ ಇಲಾಖೆ ಸುಪರ್ದಿಗೆ
ಕೃಷ್ಣಾ ನದಿಯ ಸೇತುವೆಗೆ ಪಿಲ್ಲರ್ ಹಾಕುವುದಕ್ಕೆ ಜೆಸಿಬಿ ಬಳಸಿಕೊಂಡು ಗುಂಡಿ ತಗೆಯುವ ಸಂದರ್ಭದಲ್ಲಿ ಈ ಪುರಾತನ ವಿಗ್ರಹಗಳು ಪತ್ತೆಯಾಗಿವೆ. ಸ್ಥಳೀಯರು ಇದನ್ನು ಗಮನಿಸಿ ಅವುಗಳನ್ನ ನದಿಯ ಪಕ್ಕದಲ್ಲಿರುವ, ರಾಮಲಿಂಗೇಶ್ವರ ದೇವಸ್ಥಾನದ ಬಳಿ ತಂದಿಟ್ಟು ಪೂಜೆ ಮಾಡುತ್ತಿದ್ದರು.
ಈ ಸುದ್ದಿ ಹಬ್ಬುತ್ತಿದ್ದಂತೆ ಸುತ್ತಲಿನ ಹಳ್ಳಿ ಜನ ಮತ್ತು ಪಕ್ಕದ ತೆಲಂಗಾಣ ರಾಜ್ಯದಿಂದ ಕೂಡ ಸಾಕಷ್ಟು ಜನ ಬಂದು ಈ ವಿಗ್ರಹವನ್ನು ನೋಡಿ ಪೂಜೆ ಸಲ್ಲಿಸಿ ಹೋಗಿದ್ದಾರೆ. ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿ ಸಿಕ್ಕ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಾತತ್ತ್ವ ಇಲಾಖೆ ಸಿಬ್ಬಂದಿ ಆ ವಿಗ್ರಹಗಳನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.