Karnataka Rains: ಎರಡು ದಿನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಬೆಂಗಳೂರಲ್ಲಿ ಸಾಧಾರಣ ಮಳೆ
Karnataka weather Forecast ಕರ್ನಾಟಕದಲ್ಲಿ ಮುಂದಿನ ಎರಡು ದಿನ ಉತ್ತರ ಕರ್ನಾಟಕದ ಜತೆಗೆ ದಕ್ಷಿಣ ಭಾಗದ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ. ಬೆಂಗಳೂರು( Bengaluru) ನಗರದಲ್ಲಿ ಸಾಧಾರಣಾ ಮಳೆಯಾಗುವ ಸೂಚನೆಯಿದೆ.

ಬೆಂಗಳೂರು: ಕರ್ನಾಟಕದ ನಾನಾ ಕಡೆ ಮೂರ್ನಾಲ್ಕು ದಿನದಿಂದ ಮಳೆಯಾಗುತ್ತಿದ್ದು, ಸೆ. 4 ಹಾಗೂ 5ರಂದು ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಟ್ರೆಂಡಿಂಗ್ ಸುದ್ದಿ
ಶನಿವಾರವೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು. ಭಾನುವಾರವೂ ಮುಂದುವರಿದಿದೆ. ಶನಿವಾರ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಭಾರೀ ಮಳೆಯಾಗಿತ್ತು. ಶಹಾಪುರದಲ್ಲಿ ದಾಖಲೆಯ 12 ಸೆಮಿ, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 9 ಸೆಮಿ ಮಳೆಯಾಗಿತ್ತು. ಭಾನುವಾರವೂ ಕಲಬುರಗಿ ಜಿಲ್ಲೆಯಲ್ಲಿ ಮಳೆಯಾಗಿದೆ. ಸೇಡಂನಲ್ಲಿ 106 ಮಿ. ಮಿ. ಮಳೆಯಾಗಿರುವ ವರದಿಯಾಗಿದೆ. ರಾಯಚೂರು ಜಿಲ್ಲೆಯ ಮುಂಡರಗಿ, ಕೋಲಾರ ಜಿಲ್ಲೆಯ ಹೆಬ್ಬಣಿ, ಬೀದರ್ ಜಿಲ್ಲೆಯ ಅಲಗೂಡ್‌ನಲ್ಲೂ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಮಳೆ, ಹವಾಮಾನದ ವರದಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಮಳೆಯಾಗುವ ಸೂಚನೆ ನೀಡಿದೆ.
ಅಲ್ಲಲ್ಲಿ ಉತ್ತಮ ಮಳೆ
ಶನಿವಾರ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ಬಾದಾಮಿ, ಲೋಕಾಪುರ, ಬೀಳಗಿ, ಮಹಾಲಿಂಗಪುರ, ರಬಕವಿ, ಕೊಪ್ಪಳ ಜಿಲ್ಲೆಯ ತಾವರಗೆರೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹಾಗೂ ಬಂಡೀಪುರ, ವಿಜಯಪುರ ಲ್ಲೆಯ ದೇವರಹಿಪ್ಪರಗಿ, ನಾಲತವಾಡ, ಮಂಡ್ಯ ಜಿಲ್ಲೆಯ ಮದ್ದೂರು, ಬೆಳ್ಳೂರು, ಕೆಆರ್‌ಎಸ್, ಬೆಳಗಾವಿ ಜಿಲ್ಲೆಯ ಚಿಕ್ಕೋಡು, ಸಂಕೇಶ್ವರ, ನಿಪ್ಪಾಣಿ, ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ ಜಿಲ್ಲೆಯ ಕುಂದಗೋಳ, ಯಾದಗಿರಿ ಜಿಲ್ಲೆಯ ನಾರಾಯಣಪುರ, ಹುಣಸಗಿ, ಕೆಂಭಾವಿ, ದಾವಣಗೆರೆ ನಗರ, ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ, ಹೊಸದುರ್ಗ, ಚಿಕ್ಕಬಳ್ಳಾಪುರ ನಗರ, ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚನ್ನಪಟ್ಟಣ ನಗರದಲ್ಲೂ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಯಗಟಿಯಲ್ಲೂ ಶನಿವಾರ ಮಳೆಯಾದ ವರದಿಯಾಗಿದೆ. ಮೈಸೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲೂ ಮಳೆಯಾಗಿದೆ.
ಎರಡೂ ದಿನವೂ ಮಳೆ ಸೂಚನೆ
ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿಯ ಕೆಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಗಂಟೆಗಳಲ್ಲಿ ಉತ್ತರ ಒಳನಾಡಿನ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿಯ ಕೆಲವು ಕಡೆಗಳಲ್ಲಿ ಮಳೆ/ಗುಡುಗುಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಗಂಟೆಗಳು: ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 48 ಗಂಟೆಗಳಲ್ಲಿ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಬೆಂಗಳೂರು ಸುತ್ತಮುತ್ತ
04 ನೇ ಸೆಪ್ಟಂಬರ್ 2023 ರ ಬೆಳಗಿನವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಳೆಯಾಗಲಿದೆ.
ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದೆ. ಸಂಜೆ/ರಾತ್ರಿ ವೇಳೆಗೆ ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಗರಿಷ್ಠಉಷ್ಣಾಂಶ 31 ಮತ್ತು ಕನಿಷ್ಠಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ/ರಾತ್ರಿ ವೇಳೆಗೆ ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಗರಿಷ್ಠಉಷ್ಣಾಂಶ 30 ಮತ್ತು ಕನಿಷ್ಠಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನುವ ಮಾಹಿತಿ ನೀಡಲಾಗಿದೆ.
ಉಷ್ಣಾಂಶದಲ್ಲೂ ಏರಿಕೆ ಇಲ್ಲ
ಈಗಾಗಲೇ ರಾಜ್ಯದ ಹಲವು ಕಡೆ ಚಳಿಯ ವಾತಾವರಣ ಶುರುವಾಗಿದೆ. ಮಳೆ ಮೋಡದ ವಾತಾವರಣವೂ ಇರುವುದರಿಂದ ಉಷ್ಣಾಂಶದಲ್ಲಿ ಕೊಂಚ ಕಡಿಮೆಯಾಗಿದೆ. ಸಾಮಾನ್ಯವಾಗಿ 30 ರಿಂದ 31 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ಇರಬಹುದು. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಿಂದಿನ ವಾರ ಉಷ್ಣಾಂಶದಲ್ಲಿ ಕೊಂಚ ಏರಿಕೆಯಾಗಿತ್ತು. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಮೀನುಗಾರಿಕೆಗೆ ಎಚ್ಚರಿಕೆ ಇಲ್ಲ
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯೇನೂ ಇಲ್ಲ. ಕೆಲವು ದಿನಗಳ ಬಿಡುವಿನ ಬಳಿಕ ಈಗಾಗಲೇ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಶುರುವಾಗಿದೆ. ಸಮುದ್ರಕ್ಕೆ ಪೂಜೆ ಸಲ್ಲಿಸಿ ಮೀನುಗಾರಿಕೆ ಆರಂಭಿಸಲಾಗಿದೆ. ಮಳೆಯ ಭಯವೂ ಇಲ್ಲದೇ ಇರುವುದರಿಂದ ಮೀನುಗಾರಿಕೆಗೆ ಯಾವುದೇ ಎಚ್ಚರಿಕೆ ಹಾಗೂ ಸೂಚನೆಗಳು ಇರುವುದಿಲ್ಲ ಎಂದು ಹವಾಮಾನ ಇಲಾಖೆಯೂ ಸ್ಪಷ್ಟಪಡಿಸಿದೆ.