ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೈತಸಂತೆ; ಬೆಳೆಗಳ ಬೆಲೆ ಕುಸಿತ ತಡೆಯಲು ಹೊಸ ಪ್ರಯತ್ನ
ಬೆಂಗಳೂರಿನ ಆರ್ ಆರ್ ನಗರದಲ್ಲಿ ಇಂದಿನಿಂದ ಮೂರು ದಿನ ರೈತಸಂತೆ ಆರಂಭವಾಗಿದೆ. ವಿವಿಧ ಜಿಲ್ಲೆಗಳರೈತರು ನೇರವಾಗಿ ಹೂ, ಹಣ್ಣು, ತರಕಾರಿ ದವಸ, ಧಾನ್ಯಗಳನ್ನು ನೇರವಾಗಿ ಮಾರಾಟ ಮಾಡುವ ವಿನೂತನ ಪ್ರಯೋಗ ನಡೆದಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದಿನಿಂದ ಮೂರು ದಿನ ರೈತಸಂತೆ ನಡೆಯುತ್ತಿದೆ. ನೇರ ಮಾರಾಟದ ಮೂಲಕ ನಮ್ಮ ಹೋರಾಟ’ ‘ನಮ್ಮ ಬೆಳೆಗೆ ನಮ್ಮದೇ ಬೆಲೆ’ ಶೀರ್ಷಿಕೆಯಡಿಯಲ್ಲಿ ಈ ರೈತಸಂತೆಯನ್ನು ಆಯೋಜಿಸಲಾಗಿದೆ. ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಏಪ್ರಿಲ್ 12 ರಿಂದ 14ರವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ನಡೆಯಲಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿಯುತ್ತಿರುವ ಬೆನ್ನಲ್ಲೇ ರೈತರೇ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ಮಾರಾಟ ಮಾಡಲು ಮುಂದಾಗಿರುವುದು ಈ ರೈತ ಸಂತೆಯ ಉದ್ದೇಶ.
ಎಲ್ಲೆಂದರಲ್ಲಿ ತರಕಾರಿ ಹೂ ಹಣ್ಣುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಸುವುದಕ್ಕಿಂತ ಇದು ಉತ್ತಮ ಕ್ರಮ ಎಂದು ಶ್ಲಾಘನೆ ವ್ಯಕ್ತವಾಗುತ್ತಿದೆ. ರಾಜ್ಯ ರೈತಸಂಘದ ನಾಯಕಿ ಹಾಗೂ ಪರಿಸರವಾದಿಯೂ ಆಗಿರುವ ಚುಕ್ಕಿ ನಂಜುಂಡಸ್ವಾಮಿ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಶೀತಲ ಗೃಹಗಳ ಕೊರತೆ ಇರುವುದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷದಲ್ಲಿ ಕಾಳುಗಳ ಬೆಲೆಯೂ ಇಳಿಮುಖವಾಗಿದೆ. ಕೆಜಿಗೆ 200ರೂ ಇದ್ದ ತೊಗರಿ ಬೇಳೆ ಇಂದು 70-80 ಗೆ ಇಳಿದಿದೆ. ಶುಂಠಿ ಬೆಲೆ 8000 ರೂ ಗಳಿಂದ 1000 ರೂಗೆ ಕುಸಿದಿದೆ.
ರೈತರಿಗಿದು ಎಚ್ಚರಿಕೆಯ ಗಂಟೆ
ಇದು ಎಚ್ಚಿಕೆಯ ಗಂಟೆಯಾಗಿದೆ. ರೈತಸಂತೆಗೆ ಮೈಸೂರು, ಹಾಸನ, ತುಮಕೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ ಜಿಲ್ಲೆಗಳಿಂದ ರೈತರು ಆಗಮಿಸುತ್ತಿದ್ದಾರೆ. ನಗರದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೈತರನ್ನು ಪ್ರೋತ್ಸಾಹಿಸಬೇಕು ಎಂದರು. ಬೀಜ ಕಂಪನಿಗಳು ಅಧಿಕ ಇಳುವರಿ ನೀಡುವ ಬೀಜಗಳನ್ನು ಖರೀದಿಸುವಂತೆ ರೈತರನ್ನು ಪ್ರಚೋದಿಸುತ್ತಿವೆ. ಇದರಿಂದ ಅಧಿಕ ಇಳುವರಿ ಬರುತ್ತದೆಯಾದರೂ ಬೆಲೆ ಕುಸಿತವಾದರೆ ರೈತರೇ ನಷ್ಟ ಅನುಭವಿಸಬೇಕಾಗುತ್ತದೆ ಎಂದೂ ಚುಕ್ಕಿ ಆತಂಕ ವ್ಯಕ್ತಪಡಿಸುತ್ತಾರೆ.
ರೈತಸಂತೆಗೆ ಆಗಮಿಸಿರುವ ರೈತರೊಬ್ಬರು ಪ್ರತಿಕ್ರಿಯಿಸಿ ಬೆಲೆ ಕುಸಿತದಿಂದ ನಷ್ಟ ಅನುಭವಿಸುತ್ತಿದ್ದೇವೆ. ಜತೆಗೆ ಸಾರಿಗೆ ವೆಚ್ಚದಿಂದಲೂ ನಷ್ಟವಾಗುತ್ತಿದೆ. ಈ ರೈತಸಂತೆಯಿಂದ ಮನಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು. ರೈತರು ಕಾಳುಗಳು, ತರಕಾರಿ,ಹಣ್ಣು, ಜೇನು ತುಪ್ಪ, ಅಡುಗೆ ಎಣ್ಣೆ, ಮೌಲ್ಯವರ್ಧಿತ ಉತ್ಪನ್ನಗಳೂ ಸೇರಿದಂತೆ ತಾವು ಬೆಳೆದ ಎಲ್ಲ ರೀತಿಯ ಉತ್ಪನ್ನಗಳನ್ನು ರೈತ ಸಂತೆಯಲ್ಲಿ ಮಾರಾಟ ಮಾಡಲಿದ್ದಾರೆ. ಮಧ್ಯವರ್ತಿಗಳಿಲ್ಲದೆ ರೈತರೇ ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಿದ್ದಾರೆ ಎಂದು ಸಂಘಟಕರಲ್ಲೊಬ್ಬರಾದ ರಾಜಕುಮಾರ್ ತಿಳಿಸಿದ್ದಾರೆ.
ಬೆಳೆಗಳ ಬೆಲೆ ಕುಸಿತ ತಡೆಯಲು ಹೊಸ ಪ್ರಯತ್ನ
ಇದೊಂದು ಪ್ರಾಯೋಗಿಕ ಪ್ರಯತ್ನ. ದಿನದಿಂದ ದಿನಕ್ಕೆ ಬೆಳೆಗಳ ಬೆಲೆ ಕುಸಿಯುತ್ತಿದೆ. ಜತೆಗೆ ರೈತರಿಂದ ಖರೀದಿಸುವ ಉತ್ಪನ್ನಗಳ ಬೆಲೆಗೂ, ಗ್ರಾಹಕರಿಗೆ ಮಾರಾಟವಾಗುವ ಬೆಲೆಯ ನಡುವೆ ಅಪಾರ ವ್ಯತ್ಯಾಸವಿರುತ್ತದೆ. ಅತ್ತ ರೈತರಿಗೂ ಲಾಭ ಇರುವುದಿಲ್ಲ, ಇತ್ತ ಗ್ರಾಹಕರಿಗೂ ಲಾಭ ಇರುವುದಿಲ್ಲ. ಲಾಭವೆಲ್ಲವೂ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಮತ್ತೊಬ್ಬ ರೈತರು ಆತಂಕ ವ್ಯಕ್ತಪಡಿಸುತ್ತಾರೆ. ಒಂದುವೇಳೆ ಈ ಪ್ರಯತ್ನ ಯಶಸ್ವಿಯಾದರೆ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ರೈತಸಂತೆ ಹಮ್ಮಿಕೊಳ್ಳಲು ಚಿಂತನೆ ನಡೆದಿದೆ.
ಬಡಾವಣೆಗಳು ಮತ್ತು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳು ಗ್ರಾಹಕ ವೇದಿಕೆ ರಚಿಸಿಕೊಂಡು ರೈತ ಸಂಘಟಕರೊಡನೆ ಚರ್ಚಿಸಿ ರೈತಸಂತೆಗಳನ್ನು ಆಯೋಜಿಸಬಹುದಾಗಿದೆ. ರೈತರಿಂದ ನೇರವಾಗಿ ಖರೀದಿಸಲು ಉತ್ತೇಜನ ನೀಡಿದಂತಾಗುತ್ತದೆ. ರೈತಸಂತೆಗೆ ಸಾಹಿತಿ ಎಸ್. ಜಿ.ಸಿದ್ದರಾಮಯ್ಯ, ಕಿರುತೆರೆ ನಟ ನಿರ್ದೇಶಕ ಟಿ.ಎನ್. ಸೀತಾರಾಂ,ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ, ನಟ ರಂಗಾಯಣ ರಘು ಸೇರಿದಂತೆ ಹಲವು ಸಾಹಿತಿ ಲೇಖಕರು ರೈತ ಪರ ಹೋರಾಟಗಾರರು ರಂಗಭೂಮಿ ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳು ಭಾನುವಾರ ಮತ್ತು ಸೋಮವಾರ ರಜೆ ಇದ್ದು ಈ ರೈತಸಂತೆಯಲ್ಲಿ ಭಾಗವಹಿಸಿ ರೈತರನ್ನು ಪ್ರೋತ್ಸಾಹಿಸಬಹುದಾಗಿದೆ.
ವರದಿ: ಎಚ್. ಮಾರುತಿ
