ರಾಜೀವ ಹೆಗಡೆ ಬರಹ: ವಿಶ್ವ ಹವ್ಯಕ ಸಮ್ಮೇಳನದ ಪ್ರತಿಧ್ವನಿ, ಜನಸಂಖ್ಯೆ ಒಬ್ಬರಿಗೆ ಶಾಪ, ಇನ್ನೊಬ್ಬರಿಗೆ ಸಂಪನ್ಮೂಲ ಆಗಲು ಸಾಧ್ಯವೇ?
ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸ್ವಾಮೀಜಿಗಳು ನೀಡಿರುವ ಮದುವೆ, ಮಕ್ಕಳು, ಕುಟುಂಬ ವಿಸ್ತರಣೆ ಕುರಿತಾದ ಅಭಿಪ್ರಾಯಗಳ ಗಟ್ಟಿ ಚರ್ಚೆಯೇ ನಡೆದಿದೆ. ಇದಕ್ಕೆ ಬರಹಗಾರ, ಪತ್ರಕರ್ತ ರಾಜೀವ್ ಹೆಗಡೆ ಲೇಖನದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ವಿಶ್ವ ಹವ್ಯಕ ಸಮ್ಮೇಳನದಲ್ಲಿ ಯತಿವರ್ಯರು ಹೇಳಿದ ಒಂದು ಮಾತು ಹಲವೆಡೆ ಚರ್ಚೆಯಾಗುತ್ತಿದೆ. ಹವ್ಯಕ ಹಾಗೂ ಬ್ರಾಹ್ಮಣರನ್ನು ತೆಗಳುವುದರಲ್ಲೇ ಖುಷಿ ಪಡುವ ಕೆಲವರಂತೂ ಈ ವಿಷಯವನ್ನು ಜನಸಂಖ್ಯೆ ಸ್ಫೋಟ, ಆರ್ಥಿಕ ದುಃಸ್ಥಿತಿ, ಮಠಗಳ ಅಸ್ತಿತ್ವ ಸೇರಿ ಬೇಡದ ಕಡೆ ಹೊರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟಕ್ಕೂ ಹವ್ಯಕ ಸಮುದಾಯದ ಈ ಸಮ್ಮೇಳನದಲ್ಲಿ ಯತಿವರ್ಯರು ಹೇಳಿದ ಮಾತುಗಳಲ್ಲಿ ಹೊಸದೇನಿದೆ ಹಾಗೂ ಅದರಲ್ಲಿ ವಿವಾದ ಮಾಡುವ ಅಸಹನೆ ಏಕೆ ಎನ್ನುವುದೇ ಅರ್ಥವಾಗಿತ್ತಿಲ್ಲ.
ಸಮ್ಮೇಳನದಲ್ಲಿ ಯತಿವರ್ಯರ ಮಾತಿನ ಸಾರಾಂಶ ಇಂತಿದೆ. ʼಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿರುವ ಹವ್ಯಕ ಸಮುದಾಯದ ಜನಸಂಖ್ಯೆ ಕುಸಿಯುತ್ತಿದೆ. ನಮ್ಮತನವನ್ನು ಮುಂದುವರಿಸಿಕೊಂಡು ಹೋಗಲು ಹವ್ಯಕರ ಸಂಖ್ಯೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಬೇಗನೇ ಮದುವೆಯಾಗಿ, ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕುʼ ಎನ್ನುವ ಸಂದೇಶವನ್ನು ತಾವು ಪ್ರತಿನಿಧಿಸುವ ಸಮುದಾಯಕ್ಕೆ ಶ್ರೀಗಳು ನೀಡಿದ್ದಾರೆ.
ಶ್ರೀಗಳ ಸಂದೇಶ ಏನು
ಶ್ರೀಗಳು ಹೇಳಿದಂತೆ ಎಷ್ಟು ಮಕ್ಕಳನ್ನು ಮಾಡಿಕೊಳ್ಳಬೇಕು ಎನ್ನುವ ತೀರ್ಮಾನವನ್ನು ಸಮುದಾಯದ ಕುಟುಂಬ ಸದಸ್ಯರು ಮಾಡುತ್ತಾರೆ. ಆ ಹವ್ಯಕರ ಶ್ರೀಗಳಾಗಿ ತಮ್ಮ ಸಮುದಾಯ ಹಾಗೂ ಅದರ ಭವ್ಯ ಪರಂಪರೆ ಎಂದೆಂದಿಗೂ ಇರಬೇಕು ಎನ್ನುವುದು ಆಶಯ ಹೊಂದಲೇಬೇಕು. ಈ ವಿಚಾರದಲ್ಲಿ ಕೆಲವೇ ದಿನ ಉಳಿಯುವ ಇರುವೆಯಿಂದ ಹಿಡಿದು ಅತಿ ಬುದ್ಧಿವಂತರೆನಿಸಿಕೊಂಡಿರುವ ಪ್ರತಿಯೊಬ್ಬ ಮಾನವನ ಸ್ವಾರ್ಥ ಗುಣವದು. ಆದರೆ ಈ ಹೇಳಿಕೆಯನ್ನು ಬ್ರಾಹ್ಮಣ ಹಾಗೂ ಅದರಲ್ಲೂ ಹವ್ಯಕ ಸಮುದಾಯದ ಯತಿಗಳು ನೀಡಿದ್ದಾರೆ ಎನ್ನುವುದು ಕೆಲವರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. ನಾನು ಸಾಮಾನ್ಯವಾಗಿ ಜಾತಿ, ಧರ್ಮದ ಬಗ್ಗೆ ಬರೆಯುವುದು ಅಪರೂಪ. ಆದರೆ ಶ್ರೀಗಳ ಕಾಳಜಿಯನ್ನು ಬುದ್ಧಿವಂತರೆನಿಸಿಕೊಂಡವರು ಇಷ್ಟೊಂದು ಅಪ್ರಬುದ್ಧವಾಗಿ ಟೀಕಿಸುತ್ತಿರುವುದು ಆಕ್ಷೇಪಾರ್ಹ.
ಬ್ರಾಹ್ಮಣರ ಬಗ್ಗೆ ಟೀಕಿಸುವುದು ಬಹುತೇಕರಿಗೆ ಶೋಕಿ ಹಾಗೂ ಒಂದು ರೀತಿಯಲ್ಲಿ ಚಟವೂ ಹೌದು. ಏಕೆಂದರೆ ಯಾವುದೇ ರೀತಿಯ ಟೀಕೆಗೆ ಈ ಸಮುದಾಯವು ಎಂದಿಗೂ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ. ಟೀಕಿಸಿದವರ ಜೀವಕ್ಕೆ ಅಪಾಯವಾಗುವ ಅಥವಾ ಹೆದರಿಕೊಳ್ಳುವ ಮಟ್ಟಿಗೆ ಹೆಜ್ಜೆ ಇಡುವುದಿಲ್ಲ. ಏಕೆಂದರೆ ಈ ನೆಲದ ಕಾನೂನುಗಳ ಮೇಲಿರುವ ಗೌರವ ಹಾಗೂ ನಂಬಿಕೆಯು ಅದಕ್ಕೆ ಕಾರಣವಾಗಿದೆ. ಶ್ರೀಗಳು ಕೂಡ ಇದೇ ಗೌರವದಿಂದಲೇ ಆ ಹೇಳಿಕೆಯನ್ನು ನೀಡಿದ್ದಾರೆ.
ʼಈ ದೇಶದ ಇನ್ನೊಂದು ಜಾತಿ ಅಥವಾ ಧರ್ಮವನ್ನು ಆಹುತಿ ಮಾಡುವ ಉದ್ದೇವನ್ನು ಇರಿಸಿಕೊಂಡು ನಿಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ. ಬೇರೆಯವರ ಜಾತಿ, ಧರ್ಮ ಬದಲಾಯಿಸಿ ನಮ್ಮೊಳಗೆ ಸೇರಿಸಿಕೊಂಡು ಸಾಮ್ರಾಜ್ಯ ವಿಸ್ತರಿಸಿಕೊಳ್ಳಿ. ನಮ್ಮ ಸಂಖ್ಯೆ ಹೆಚ್ಚಾದ ಕೂಡಲೇ ನಮ್ಮದೇ ಜಾತಿಯ ಪ್ರತ್ಯೇಕ ಕಾನೂನನ್ನು ಈ ನೆಲದಲ್ಲಿ ಜಾರಿ ಮಾಡುವ ಪ್ರಯತ್ನದಲ್ಲಿ ಮುಂದಡಿ ಇಡಿʼ ಎನ್ನುವ ಪ್ರಚೋದನಕಾರಿ ಉಪದೇಶವನ್ನು ಹವ್ಯಕ ಶ್ರೀಗಳು ನೀಡಿಲ್ಲ. ಕನಸಿನಲ್ಲಿಯೂ ಈ ಯತಿವರ್ಯರು ಇಂತಹ ಹೇಳಿಕೆಯನ್ನು ನೀಡುವುದಿಲ್ಲ.
ಮೋಹನ್ ಭಾಗವತ್ ಹೇಳಿಕೆ ವಿವಾದ
ಬದಲಾಗಿ ನಮ್ಮ ಪರಂಪರೆ ರಕ್ಷಣೆ, ಸಮುದಾಯದ ಸಂಸ್ಕೃತಿ ಉಳಿಸಲು ನಿಮ್ಮೊಳಗೆ ಜನಸಂಖ್ಯೆ ಹೆಚ್ಚಿಸಿಕೊಳ್ಳಿ ಎನ್ನುವ ಸದಾಶಯವನ್ನು ವ್ಯಕ್ತಪಡಿಸಿದ್ದಾರೆ. ಒಂದು ಸಮುದಾಯ ಅಥವಾ ಧರ್ಮದ ಗುರುಗಳಾಗಿ ಇದನ್ನು ಹೇಳುವುದು ಅವರ ಜವಾಬ್ದಾರಿಯೂ ಆಗಿರುತ್ತದೆ. ಇದೇ ರೀತಿಯಲ್ಲಿ ಸ್ವಲ್ಪ ವಿಭಿನ್ನವಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಹೇಳಿಕೆ ಕೂಡ ಟೀಕೆಗೆ ಗುರಿಯಾಗಿತ್ತು. ʼಹಿಂದೂಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕುʼ ಎನ್ನುವುದು ಅವರ ಸಂದೇಶವಾಗಿತ್ತು. ಅಷ್ಟಕ್ಕೂ ಕೆಲ ವರ್ಗ, ಸಂಘಟನೆಗಳು ಈ ರೀತಿಯ ಹೇಳಿಕೆ ನೀಡಿದಾಗ ಮಾತ್ರ ಬುದ್ಧಿಜೀವಿಗಳ ನಾಲಿಗೆ ತುರಿಸುವುದು ಏಕೆ?
ಕೆಲವರು ವಯಸ್ಸಿನ ಪ್ರಸ್ತಾಪದ ಬಗ್ಗೆ ಚರ್ಚೆ ಮಾಡಿದ್ದಾರೆ. ಯತಿಗಳಾಗಿ ಅವರ ಸಲಹೆಯನ್ನು ನೀಡಿದ್ದಾರೆ. ಇಂದಿನ ಸಮಾಜದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ದೇಶದ ಕಾನೂನಿನಲ್ಲಿ ಮಾನ್ಯವಾಗಿರುವ ವಯಸ್ಸನ್ನೇ ಅವರು ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಹೀಗೆ ಮಾಡದಿದ್ದರೆ ಧರ್ಮ ವಿರೋಧಿಗಳೆಂದು ಸಮಾಜದಿಂದ ಹೊರಗೆ ಹಾಕುತ್ತೇವೆ ಎಂದು ಘೋಷಣೆಯನ್ನು ಮಾಡಿಲ್ಲ. ಒಂದೊಮ್ಮೆ ಈ ನೆಲದ ಕಾನೂನು ಬದಲಾದರೆ, ಖಂಡಿತವಾಗಿಯೂ ಅದನ್ನು ನಮ್ಮ ಯತಿಗಳು ಗೌರವಿಸುತ್ತಾರೆಯೇ ಹೊರತು, ಅಂತಹ ಸುಧಾರಣೆಗಳನ್ನು ನಾವು ಒಪ್ಪುವುದಿಲ್ಲವೆಂದು ಸುಪ್ರೀಂ ಕೋರ್ಟ್‌ಗೆ ಹೋಗುವುದಿಲ್ಲ. ಅದರ ಜತೆಗೆ ಸಂವಿಧಾನಕ್ಕಿಂತ ನಮ್ಮ ಧರ್ಮಗ್ರಂಥವೇ ಅಮೂಲ್ಯವೆಂದು ಫತ್ವಾ ಕೂಡ ಹೊರಡಿಸುವುದಿಲ್ಲ.
ಉತ್ತರ-ದಕ್ಷಿಣದ ಚರ್ಚೆ ಮಾಡುವಾಗ ಸ್ಟಾಲಿನ್, ಚಂದ್ರಬಾಬು ನಾಯ್ಡು ಅವರ ಹತ್ತು ಮಕ್ಕಳ ಪ್ಲ್ಯಾನ್ ಸುಂದರವಾಗಿ ಕಾಣಿಸುತ್ತದೆ. ಇದೇ ಮಾತನ್ನು ಪ್ರತಿ ವಾರ ಕೆಲವರು ಧರ್ಮಗ್ರಂಥ, ಬೋಧನೆಗಳ ಮೂಲಕ ಹೇಳಿದಾಗ ಅದರ ಬಗ್ಗೆ ಉಸಿರೆತ್ತುವ ಧೈರ್ಯವೇ ಇರುವುದಿಲ್ಲ. ಜನಸಂಖ್ಯಾ ಸ್ಫೋಟ, ದೇಶದ ಆರ್ಥಿಕತೆ, ಸಾಮಾಜಿಕ ಹೊಣೆಗಾರಿಕೆ ವಿಚಾರಗಳನ್ನು ಎಲ್ಲ ಸಂದರ್ಭಕ್ಕೂ ಅನ್ವಯ ಮಾಡುವ ತಾಕತ್ತನ್ನು ತೋರಿ. ಅದನ್ನು ಬಿಟ್ಟು ನಿಜವಾಗಿಯೂ ಶಾಂತಿ, ಸಹಬಾಳ್ವೆ, ಸಹನೆ, ಸಹಿಷ್ಣುತೆ ಹೊಂದಿರುವರ ವಿಚಾರಕ್ಕೆ ಮಾತ್ರ ಮೂಗು ತೋರಿಸಬೇಡಿ.
ಏಕಮುಖ ನಿಯಮ ಬೇಡ
ಅಷ್ಟಕ್ಕೂ ವೈಯಕ್ತಿಕವಾಗಿ ನಾನು ಕೂಡ ಜನಸಂಖ್ಯೆ ನಿಯಂತ್ರಣ ಕುರಿತು ನಿಯಮ ಜಾರಿ ಬರಬೇಕೆಂದು ಹೇಳುತ್ತೇನೆ. ಆದರೆ ಅದು ಏಕಮುಖವಾಗಿರಬಾರದು. ಇಂದಿನ ಎಲ್ಲರ ಆತಂಕಕ್ಕೆ ಕಾರಣವಾಗಿರುವುದು ಏಕಮುಖ ನಿಯಂತ್ರಣ ವ್ಯವಸ್ಥೆ. ಸಂವಿಧಾನ ಮುಳ ಉದ್ದೇಶವಾಗಿರುವ ಸಮಾನತೆಯನ್ನು ಜಾರಿ ಮಾಡದಿದ್ದರೆ ಸಮುದಾಯ, ಧರ್ಮ, ಪರಂಪರೆಯ ರಕ್ಷಣೆ ಹಾಗೂ ಜವಾಬ್ದಾರಿಯನ್ನು ಹೊಂದಿರುವ ಯತಿಗಳು ಇದೇ ದಾಟಿಯಲ್ಲಿ ಮಾತನಾಡಲೇಬೇಕು. ಇಲ್ಲವಾದಲ್ಲಿ ಯಹೂದಿಗಳಿಗಾದ ಸ್ಥಿತಿಯು ಈ ದೇಶದ ಹಲವು ಸಮುದಾಯಗಳಿಗೆ ಆಗಬಹುದು. ಹಾಗೆಯೇ ಆಡಳಿತದಲ್ಲಿರುವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಅದು ಅನುಷ್ಠಾನಕ್ಕೆ ತರುವಲ್ಲಿ ಶಕ್ತ ಸಮಾಜವು ಗಮನವನ್ನೂ ಹಾಕಬಹುದು.
ಹಾಗೆಯೇ ಯತಿವರ್ಯರ ಸಂದೇಶದ ಅನುಷ್ಠಾನ ಹಾಗೂ ವಾಸ್ತವದ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಅನುಷ್ಠಾನಕ್ಕಿಂತ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನ ಪ್ರಯತ್ನವೆಂದು ನಾನು ಅರ್ಥೈಸಿಕೊಂಡಿದ್ದೇನೆ. ಇಲ್ಲವಾದಲ್ಲಿ ನಾವು ಮಾತ್ರ ಜಾಗೃತಿ, ನಿಯಂತ್ರಣ ಮಾಡಿಕೊಂಡು ಕೂರುತ್ತೇವೆ. ಉಳಿದವರು ಅವರ ಗುರುವಿನ ವಾರದ ಬೋಧನೆಯಂತೆ ಊರು, ಕೇರಿ, ದೇಶವನ್ನು ತುಂಬುತ್ತಾ ಹೋಗುತ್ತಾರೆ.
ಅಷ್ಟಕ್ಕೂ ಶಿಕ್ಷಣ, ಜನಸಂಖ್ಯೆ ನಿಯಂತ್ರಣ, ದೇಶದ ಕಾನೂನು ಪಾಲನೆ ಬಗ್ಗೆ ಹವ್ಯಕರ ಸ್ಥಿತಿಗತಿ ಹೇಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ನಮಗೆ ನಮ್ಮ ಗುರುಗಳು ನಮ್ಮ ಸಮ್ಮೇಳನದಲ್ಲಿ ಬುದ್ಧಿವಾದ ಹೇಳುತ್ತಾರೆ. ಅದನ್ನು ಹೇಗೆ ಪಾಲಿಸಬೇಕು ಎನ್ನುವ ಪ್ರೌಢಿಮೆಯನ್ನೂ ದಶಕಗಳಿಂದ ನಾವು ಬೆಳೆಸಿಕೊಂಡು ಬಂದಿದ್ದೇವೆ. ಈ ಹಂತದಲ್ಲಿ ನಮ್ಮ ಯತಿಗಳು ಅಥವಾ ಸಮುದಾಯಕ್ಕೆ ಹೊರಗಿನ ಕೋಲು ಮೇಸ್ತ್ರಿಗಳಿಂದ ಪಾಠ ಹೇಳಿಸಿಕೊಳ್ಳುವ ಅನಿವಾರ್ಯತೆ ಬಂದಿಲ್ಲ. ಒಂದೊಮ್ಮೆ ಅಂತಹ ದುಃಸ್ಥಿತಿ ನಿರ್ಮಾಣವಾದಾಗ ಅವರನ್ನೇ ನಮ್ಮ ವಿಶ್ವ ಹವ್ಯಕ ಸಮ್ಮೇಳನಕ್ಕೆ ಕರೆದು ಭಾಷಣ ಮಾಡಲು ಜಾಗ ಮಾಡಿಸಿಕೊಡುತ್ತೇವೆ.
ಕೊನೆಯದಾಗಿ: ಯಾವುದೇ ಟೀಕೆ ಮಾಡಿದರೂ ಅಪಾಯವಿಲ್ಲ ಎನ್ನುವ ಮಟ್ಟಿಗೆ ಸಮಾಜದಲ್ಲಿ ಒಳ್ಳೆಯ ನಂಬಿಕೆ ಹುಟ್ಟಿಸಿದವರ ಬಗ್ಗೆ ಮಾಧ್ಯಮವು ಸತ್ಯದರ್ಶನ ಮಾಡಿಸುವ ಪ್ರಯತ್ನ ಮಾಡುತ್ತದೆ. ಅದನ್ನು ಇರಿಸಿಕೊಂಡು ಸಮುದಾಯದ ಹೊರಗಿನವರು ಕೂಡ ಟೀಕಿಸುವ ಅತ್ಯುತ್ಸಾಹ ತೋರುತ್ತಾರೆ. ಇಂತಹ ವಿಮರ್ಶಕರು ಧೈರ್ಯವಿದ್ದರೆ ಈ ದೇಶದಲ್ಲಿ ನಡೆಯುವ ಪ್ರತಿಯೊಂದು ಧರ್ಮ, ಜಾತಿಯ ಸಭೆಗೆ ಹೋಗಿ ಅಲ್ಲಿ ನಡೆಯುವ ಎಲ್ಲ ಸೂಕ್ಷ್ಮ ವಿಚಾರಗಳನ್ನು ವರದಿ ಮಾಡುವ ಧೈರ್ಯ ತೋರಿಸಲಿ, ನೋಡೋಣ. ಇಂದಿನ ಕಾಲದಲ್ಲಿ ಜಾತಿಗೊಂದು ಸಮಾವೇಶ ಮಾಡಬೇಕೆ ಎಂದು ಹೇಳುವ ಉದಾರಿಗಳು ಕೂಡ ಸಿಗಬಹುದು. ಈ ಔದಾರ್ಯವನ್ನು ಅರಮನೆ ಮೈದಾನದಲ್ಲಿ ನಡೆಯುವ ಪ್ರತಿ ಸಮಾವೇಶದ ಸಂದರ್ಭದಲ್ಲಿಯೂ ತೋರಿದರೆ ನಿಮ್ಮ ಧೈರ್ಯ ಮೆಚ್ಚಿಕೊಂಡು ಅಲ್ಲಿಯೇ ಅಭಿನಂದನಾ ಸಮಾವೇಶ ಮಾಡಿಬಿಡೋಣ.
-ರಾಜೀವ್ ಹೆಗಡೆ, ಬರಹಗಾರ, ಪತ್ರಕರ್ತ

ವಿಭಾಗ