ರಾಜೀವ ಹೆಗಡೆ ಬರಹ: ಗ್ಯಾರಂಟಿ ಎನ್ನುವ ಸರ್ಕಾರಿ “ಹನಿ” ಗೆ ಬಲಿಯಾದ ಜನರಿಗೆ ದುಬಾರಿ ́"ಟ್ರ್ಯಾಪ್‌"
ಕನ್ನಡ ಸುದ್ದಿ  /  ಕರ್ನಾಟಕ  /  ರಾಜೀವ ಹೆಗಡೆ ಬರಹ: ಗ್ಯಾರಂಟಿ ಎನ್ನುವ ಸರ್ಕಾರಿ “ಹನಿ” ಗೆ ಬಲಿಯಾದ ಜನರಿಗೆ ದುಬಾರಿ ́"ಟ್ರ್ಯಾಪ್‌"

ರಾಜೀವ ಹೆಗಡೆ ಬರಹ: ಗ್ಯಾರಂಟಿ ಎನ್ನುವ ಸರ್ಕಾರಿ “ಹನಿ” ಗೆ ಬಲಿಯಾದ ಜನರಿಗೆ ದುಬಾರಿ ́"ಟ್ರ್ಯಾಪ್‌"

ಕರ್ನಾಟಕದಲ್ಲಿ ಜಾರಿಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿ, ಉಪಯೋಗದ ಕುರಿತು ಪತ್ರಕರ್ತ, ಲೇಖಕ ರಾಜೀವ್‌ ಹೆಗಡೆ ಅವರು ಇಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಹೇಗಿದೆ ಗ್ಯಾರಂಟಿ ಯೋಜನೆಗಳ ಫಲಾಫಲ..
ಕರ್ನಾಟಕದಲ್ಲಿ ಹೇಗಿದೆ ಗ್ಯಾರಂಟಿ ಯೋಜನೆಗಳ ಫಲಾಫಲ.. (Meta AI)

ರಾಜ್ಯದೆಲ್ಲೆಡೆ ಬಿಸಿಬಿಸಿಯಾಗಿ ಹನಿಟ್ರ್ಯಾಪ್‌ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಆದರೆ ರಾಜ್ಯ ಸರ್ಕಾರವೇ ಎಲ್ಲ ಕನ್ನಡಿಗರನ್ನು ಹನಿಟ್ರ್ಯಾಪ್‌ ಮಾಡುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯ ಪ್ರಭಾವಿ ನಾಯಕರು ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರೆ, ರಾಜ್ಯ ಸರ್ಕಾರ ಮಾತ್ರ ಯಾವುದೇ ಭೇದಭಾವವಿಲ್ಲದೇ ಸಮಗ್ರ ಕನ್ನಡಿಗರಿಗೆ ಹನಿಟ್ರ್ಯಾಪ್‌ ಮಾಡುತ್ತಿದೆ. ಈ ಹನಿಟ್ರ್ಯಾಪ್‌ನ ಹೊಸ ಸೇರ್ಪಡೆ ನಂದಿನಿ ಹಾಲಿ ದರ.

ಹೌದು. ರಾಜ್ಯದ ಮತದಾರರಿಗೆ ಗ್ಯಾರಂಟಿ ಎನ್ನುವ ʼಹನಿʼಯನ್ನು ತೋರಿಸಿ ದುಬಾರಿ ʼಟ್ರ್ಯಾಪ್‌ʼ ಮಾಡಲಾಗುತ್ತಿದೆ. ಬೆಲೆ ಏರಿಕೆಗೆ ಪರಿಹಾರ ಕ್ರಮವಾಗಿ ಗ್ಯಾರಂಟಿ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಕಾಂಗ್ರೆಸ್‌ ಸರ್ಕಾರವೀಗ, ಜನರನ್ನು ಅದೇ ಬೆಲೆ ಏರಿಕೆ ಕೂಪಕ್ಕೆ ತಳ್ಳುತ್ತಿದೆ. ಹಾಡುಹಗಲೇ, ನಡು ಬೀದಿಯಲ್ಲಿ ʼಹನಿಟ್ರ್ಯಾಪ್‌ʼ ಮಾಡುವುದು ಹೇಗೆ ಎನ್ನುವುದನ್ನು ದೇಶದ ಜನತೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಗ್ಯಾಂಗ್‌ ತೋರಿಸಿಕೊಟ್ಟಿದೆ. ಅಂದ್ಹಾಗೆ ಈ ಹನಿಟ್ರ್ಯಾಪ್‌ನಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ಎಲ್ಲರೂ ಏಕತೆ ಮಂತ್ರ ಹಾಡುತ್ತಿದ್ದಾರೆ.

ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಏರಿಕೆ ಮಾಡಿದಾಗ, ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಿಲ್ಲ ಬಿಡಿ ಎಂದು ಸರ್ಕಾರ ಮೂಗು ಮುರಿದಿತ್ತು. ಆದರೆ ವಾಸ್ತವದಲ್ಲಿ ಕೋರ್ಟ್‌, ಬ್ಯಾಂಕ್‌ ಕೆಲಸಕ್ಕೆ ಓಡಾಡುವ ಜನಸಾಮಾನ್ಯರಿಗೂ ಇದರ ಬಿಸಿ ತಟ್ಟಿತ್ತು. ಇದಾದ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚವನ್ನು ಏರಿಸಿದರು. ಅದಕ್ಕೂ ಮುನ್ನ ಸರ್ಕಾರ ಬರುತ್ತಿದ್ದಂತೆ ವಿದ್ಯುತ್‌ ದರ ಏರಿಸಿದರು. ಇದರಿಂದಲೂ ಹಣ ಸಾಕಾಗುತ್ತಿಲ್ಲ ಎಂದು ಗೊತ್ತಾದಾಗ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿದರು. ಆಗಲೂ ಗ್ರಾಹಕರ ಜೇಬಿನಲ್ಲಿ ದುಡ್ಡು ಉಳಿಯುತ್ತಿದೆ ಎಂದು ಗೊತ್ತಾದಾಗ ಹಾಲಿನ ದರವನ್ನು ಕೆಲ ತಿಂಗಳ ಹಿಂದೆಯೇ ಏರಿಸಿದರು. ಅಷ್ಟಾದರೂ ರೈತರಿಗೆ ಕೊಡಬೇಕಾದ ಪ್ರೋತ್ಸಾಹ ಧನ ನೀಡಲಾಗದೇ ಈ ಸರ್ಕಾರ ಮತ್ತೆ ಭಿಕ್ಷೆ ಬೇಡಲು ಶುರು ಮಾಡಿತು.

ಇದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಲಾಭದತ್ತ ಹೊರಟಿದೆ ಎಂದು ಹೆಗಲು ತಟ್ಟಿಕೊಳ್ಳುತ್ತಲೇ, ಪ್ರಯಾಣ ದರವನ್ನು ಏರಿಸಲಾಯಿತು. ಅದು ಮರೆಯುವಷ್ಟರಲ್ಲೇ ಮೆಟ್ರೋ ಪ್ರಯಾಣ ದರ ವೃದ್ಧಿಸಲಾಯಿತು. ಔದ್ಯೋಗಿಕ ವಲಯದಲ್ಲೂ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಇದು ದೊಡ್ಡ ಆಘಾತವಾಗಿತ್ತು. ಇದರಿಂದ ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ವಿದ್ಯುತ್‌ ದರ ಏರಿಸಲಾಗಿದೆ. ಇದರ ಬೆನ್ನಲ್ಲೇ ಈಗ ಹಾಲಿನ ದರವನ್ನೂ ಹೆಚ್ಚಿಸಲಾಗಿದೆ. ಕೆಲವೇ ದಿನಗಳಲ್ಲಿ ನೀರಿನ ದರ ಕೂಡ ಹೆಚ್ಚಾಗಲಿದೆ.

ಈ ಘನಂಧಾರಿ ಕೆಲಸಕ್ಕಾಗಿ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಕಥೆ ಕಟ್ಟುವ ಅಗತ್ಯವೇ ಇರಲಿಲ್ಲ. ಇದೇ ಮುಂದುವರಿದರೆ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ನಮ್ಮ ಲಂಗೋಟಿಯನ್ನು ಕೂಡ ಈ ಸರ್ಕಾರವು ಶೀಘ್ರವೇ ಕಿತ್ತುಕೊಳ್ಳಲು ಕೂಡ ಸ್ವಲ್ಪವೂ ಹಿಂಜರಿಯುವುದಿಲ್ಲ. ಏಕೆಂದರೆ ಸರ್ಕಾರದಲ್ಲಿರುವವರು ಅಷ್ಟೊಂದು ಮಾನ, ಮರ್ಯಾದೆ ಬಿಟ್ಟು ನಿಂತಿದ್ದಾರೆ. ಅಷ್ಟಕ್ಕೂ ಇವೆಲ್ಲ ಬೆಲೆ ಏರಿಕೆಯಿಂದ ಯಾವುದೇ ಬಡವರಿಗೆ ವಿನಾಯಿತಿ ದೊರೆಯುವುದಿಲ್ಲ. ಹಾಗಿದ್ದರೆ ಬಡವರ ವಿರೋಧಿಗಳು ಯಾರು?

ರೈತ ವಿರೋಧಿ ಎನ್ನಬೇಡಿ!

ಹಾಲಿನ ದರ ಏರಿಕೆಯನ್ನು ವಿರೋಧಿಸುವವರನ್ನು ರೈತ ವಿರೋಧಿಗಳೆಂದು ಸರ್ಕಾರದ ಬೆಂಬಲಿಗರು ಇಂದಿನಿಂದ ಬೊಬ್ಬೆಯಿಡಲು ಆರಂಭಿಸುತ್ತಾರೆ. ಈ ಹಿಂದೆಯೂ ಹಾಲಿನ ದರ ಏರಿಕೆ ಮಾಡಿದಾಗ ಇಂತಹದ್ದೇ ಕಥೆ ಕಟ್ಟಿದ್ದರು. ವಾಸ್ತದಲ್ಲಿ ಇಂದಿಗೂ ಸುಮಾರು ಸಾವಿರ ಕೋಟಿ ರೂಪಾಯಿ ಹತ್ತಿರ ಪ್ರೋತ್ಸಾಹ ಧನವನ್ನು ರೈತರಿಗೆ ಸರ್ಕಾರವು ನೀಡಿಲ್ಲ. ಅಷ್ಟಕ್ಕೂ ರೈತರಿಗೆ ಪ್ರೋತ್ಸಾಹ ಧನವನ್ನು ಗ್ರಾಹಕರ ಜೇಬಿನಿಂದ ಕೊಡುತ್ತೇವೆ ಎಂದು ಹೇಳಿರಲಿಲ್ಲ.

ಈ ಸರ್ಕಾರದಲ್ಲೂ ಕಮಿಷನ್‌ ಖಾತ್ರಿ

ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೀರಿ ಎಂದು ಪ್ರಶ್ನಿಸಿದ್ದಾಗ, ಬಿಜೆಪಿ ಸರ್ಕಾರದ ಶೇ.40ರ ಕಮಿಷನ್‌ನ್ನು ರದ್ದುಪಡಿಸಿದರೆ ಎಲ್ಲದಕ್ಕ ಸಾಕಾಗುತ್ತದೆ ಎನ್ನುವ ಉಡಾಫೆ ಉತ್ತರ ದೊರೆತಿತ್ತು. ಈಗ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಆಗುತ್ತಿಲ್ಲ ಎನ್ನುವುದು ಖಾತ್ರಿಯಾಗಿದೆ. ಹೀಗಾಗಿ ಬಿಜೆಪಿ ಸರ್ಕಾರದ ಶೇ.40 ಕಮಿಷನ್‌ಗೆ ಇನ್ನಷ್ಟು ಸೇರ್ಪಡೆಯಾಗಿದೆ ಎನ್ನುವುದು ಕೂಡ ಖಾತ್ರಿಯಾಗಿದೆ.

ಗ್ಯಾರಂಟಿ ಹನಿಟ್ರ್ಯಾಪ್‌ ನಿಲ್ಲಿಸಲು ಸಕಾಲ

ʼಚುನಾವಣೆ ಸಂದರ್ಭದಲ್ಲಿ ದೊಡ್ಡ ದೊಡ್ಡ ಘೋಷಣೆ ಮಾಡಿದ್ದು ನಿಜ. ಆದರೀಗ ಅದರ ಅನುಷ್ಠಾನಕ್ಕೆ ಹಣ ಸಾಕಾಗುತ್ತಿಲ್ಲ. ಸರ್ಕಾರಿ ನೌಕರರ ಸಂಬಳ ನೀಡುವುದು ಕೂಡ ಕಷ್ಟವಾಗುತ್ತಿದೆʼ ಎಂದು ತೆಲಂಗಾಣ ಸಿಎಂ ಹೇಳಿಕೆ ನೀಡಿದ್ದರು. ಹಿಮಾಚಲ ಪ್ರದೇಶ ಸ್ಥಿತಿ ಕೂಡ ಇದೇ ರೀತಿಯಾಗಿದೆ. ಇದೇ ದಾರಿ ಹಿಡಿದಿರುವ ಮಹಾರಾಷ್ಟ್ರ ಹಾಗೂ ಇತರ ಸರ್ಕಾರಗಳ ಬಂಡವಾಳವೂ ಶೀಘ್ರವೇ ಬಯಲಾಗಲಿದೆ. ಕರ್ನಾಟಕದಲ್ಲಿಯೂ ನಿರ್ದಿಷ್ಟ ಬಡ ಫಲಾನುಭವಿಗಳನ್ನು ಹುಡುಕಿ ವೈಜ್ಞಾನಿಕವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವಾಗದಿದ್ದರೆ, ಬಹಿರಂಗವಾಗಿ ಹೇಳಿಕೆ ನೀಡುವ ದಿನ ದೂರವಿಲ್ಲ. ಬೆಲೆ ಏರಿಕೆ ಮೂಲಕ ಈಗಾಗಲೇ ಆ ಸ್ಥಿತಿಗೆ ಹೋಗುತ್ತಿರುವುದನ್ನು ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಿದೆ.

ಕೊನೆಯದಾಗಿ: ಜನರಿಗೆ ಬೆಲೆ ಏರಿಕೆ ಬಿಸಿ ತಪ್ಪಿಸಲು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಹೇಳುತ್ತಿದ್ದರು. ಆದರೀಗ ಬೆಲೆ ಏರಿಕೆಯೇ ಈ ಸರ್ಕಾರದ ಗ್ಯಾರಂಟಿಯಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಜನರ ಮೂಲಸೌಕರ್ಯಗಳು ಗ್ಯಾರಂಟಿ ಆಗದಿದ್ದರೆ, ರಾಜ್ಯ ಸರ್ಕಾರವು ಈ ರೀತಿ ಭಿಕ್ಷೆ ಬೇಡುವ ಕೆಲಸ ಮುಂದುವರಿಯಲಿದೆ. ಅಂದ್ಹಾಗೆ ಇಷ್ಟೆಲ್ಲ ವಿಷಯ ಸಿಕ್ಕರೂ ರಾಜ್ಯ ಬಿಜೆಪಿ ಮಾತ್ರ ಯಾರಿಗೂ ಅರಿಯಲಾಗದ ಟ್ರ್ಯಾಪ್ ಒಳಗೆ ಸಿಕ್ಕಿಕೊಂಡಿದೆ...

ವಿಶೇಷ ಸೂಚನೆ: ಈ ಚಿತ್ರವನ್ನು ಮೆಟಾ ಎಐ ನೀಡಿದೆ. Indian politician money trap ಎಂದು ಕೊಟ್ಟಾಗ ಈ ಚಿತ್ರ ಸಿಕ್ಕಿತು.

 

-ರಾಜೀವ ಹೆಗಡೆ, ಲೇಖಕ, ಪತ್ರಕರ್ತ

 

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner