ರಾಜೀವ ಹೆಗಡೆ ಬರಹ: ಮೂರು ಲಕ್ಷ ಕೋಟಿ ಕಥೆ ಹೇಳಿ ನೀರಲ್ಲೂ ಪೈಸೆಗಳ ಟೋಪಿ ಹಾಕುವ ಸರ್ಕಾರ; ಬೆಂಗಳೂರು ಜಲಮಂಡಳಿ ದರ ಏರಿಕೆ ಸುತ್ತ ಮುತ್ತ
ಕನ್ನಡ ಸುದ್ದಿ  /  ಕರ್ನಾಟಕ  /  ರಾಜೀವ ಹೆಗಡೆ ಬರಹ: ಮೂರು ಲಕ್ಷ ಕೋಟಿ ಕಥೆ ಹೇಳಿ ನೀರಲ್ಲೂ ಪೈಸೆಗಳ ಟೋಪಿ ಹಾಕುವ ಸರ್ಕಾರ; ಬೆಂಗಳೂರು ಜಲಮಂಡಳಿ ದರ ಏರಿಕೆ ಸುತ್ತ ಮುತ್ತ

ರಾಜೀವ ಹೆಗಡೆ ಬರಹ: ಮೂರು ಲಕ್ಷ ಕೋಟಿ ಕಥೆ ಹೇಳಿ ನೀರಲ್ಲೂ ಪೈಸೆಗಳ ಟೋಪಿ ಹಾಕುವ ಸರ್ಕಾರ; ಬೆಂಗಳೂರು ಜಲಮಂಡಳಿ ದರ ಏರಿಕೆ ಸುತ್ತ ಮುತ್ತ

ಬೆಂಗಳೂರು ಜಲಮಂಡಳಿಯು ನೀರಿನ ದರ ಏರಿಕೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದರ ಆರ್ಥಿಕ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ಲೇಖಕ ರಾಜೀವ್‌ ಹೆಗಡೆ ಇಲ್ಲಿ ವಿಶ್ಲೇಷಿಸಿದ್ದಾರೆ.

ಬೆಂಗಳೂರಿನಲ್ಲಿ ನೀರು ದರ ಏರಿಕೆ ಪ್ರಸ್ತಾವ ಮಾಡಲಾಗಿದೆ.
ಬೆಂಗಳೂರಿನಲ್ಲಿ ನೀರು ದರ ಏರಿಕೆ ಪ್ರಸ್ತಾವ ಮಾಡಲಾಗಿದೆ.

ಕಾಕಾ ಪಾಟೀಲ್‌ಗೂ ಫ್ರೀ, ಮಹದೇವಪ್ಪಂಗೂ ಫ್ರೀ ಕೊಡುವ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದ್ದವರನ್ನು ಬಡವರ ವಿರೋಧಿ ಎಂದು ಟೀಕಿಸಿ ಇಂತಹದೊಂದು ಉತ್ತರ ನೀಡಲಾಗಿತ್ತು. ʼಮೂರು ಲಕ್ಸ ಕೋಟಿಯ ಬಜೆಟ್‌ ಇರುವ ಸರ್ಕಾರ. ಇಷ್ಟು ದೊಡ್ಡ ಬಜೆಟ್‌ನಲ್ಲಿ 50-60 ಸಾವಿರ ಕೋಟಿ ರೂಹೊಂದಿಸೋಕೆ ಆಗಲ್ವಾ? ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಯೊಂದನ್ನು ನಿಲ್ಲಿಸಿದರೆ ಗ್ಯಾರಂಟಿಗೆ ಬೇಕಾದ ಹಣ ಬರುತ್ತದೆʼ ಎಂದು ಉದ್ದುದ್ದ ಭಾಷಣ ಮಾಡಿದ್ದರು. ಆದರೆ ಅದೇ ರಾಜಕಾರಣಿಗಳಿಂದ ನೀರಿನ ಹೆಸರಲ್ಲಿ ಪೈಸೆ, ಪೈಸೆ ಭಿಕ್ಷೆ ಬೇಡುತ್ತಿದ್ದಾರೆ. ಲೀಟರ್‌ಗೆ ಒಂದು ಪೈಸೆ ಹೆಚ್ಚು ಮಾಡಿದರೆ ಏನಾಗ್ಬಿಡತ್ತೆ ಎಂದು ಲಕ್ಷ ಕೋಟಿಯ ಅಸಲಿ ಕಥೆ ಬಿಚ್ಚಿಡುತ್ತಿದ್ದಾರೆ.

ಬಸ್‌, ಹಾಲು, ಪೆಟ್ರೋಲ್‌, ಮುದ್ರಾಂಕ ಶುಲ್ಕ, ಸೆಸ್‌ ಸೇರಿ ಇನ್ನಷ್ಟು ವಿಷಯಗಳಲ್ಲಿ ದರ ಏರಿಕೆ ಮಾಡಿದಾಗ ಕಾಲಕ್ಕೆ ತಕ್ಕಂತೆ ನಡೆಯುವ ಹೆಚ್ಚಳವಿದು ಎಂದು ಚೆಂದದ ಕಥೆ ಕಟ್ಟಿದರು. ಮಗುಚಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಗ್ಯಾರಂಟಿ ಹೊರೆಯನ್ನು ಒಪ್ಪದೇ ಆರ್ಥಿಕತೆಯ ಪಾಂಡಿತ್ಯ ಪ್ರದರ್ಶಿಸಿದರು. ಆದರೆ ಅಸಲಿಯತ್ತೇನೆಂದರೆ ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಎನ್ನುವ ವಾಸ್ತವವನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿ, ಮತ ಪಡೆದು ಪುಕ್ಕಟೆ ಹಂಚಲು ಹೊರಟವರು ಈಗ ಮತ್ತದೇ ದರ ಏರಿಕೆಯ ಗುತ್ತಿಗೆಯನ್ನು ಪಡೆದಿದ್ದಾರೆ. ದರ ಏರಿಕೆಯನ್ನು ನಿಯಂತ್ರಿಸಲಾಗದ ಈ ಆಡಳಿತ ವ್ಯವಸ್ಥೆಯು ಜನರ ದುಡ್ಡಿನಲ್ಲಿ ಗ್ಯಾರಂಟಿ ಜಾತ್ರೆ ಮಾಡುತ್ತಿದೆಯಷ್ಟೇ. ಈಗ ಬೆಂಗಳೂರು ನಗರದಲ್ಲಿ ಜಲಮಂಡಳಿ ನೀಡುವ ನೀರಿನ ದರವನ್ನು ಏರಿಸಲು ಹೊರಟಿರುವ ಸರ್ಕಾರ ನೀಡಿರುವ ಆಯ್ದ ಕಾರಣಗಳನ್ನು ಒಮ್ಮೆ ನೋಡಿ.

* ಜಲಮಂಡಳಿಗೆ ವಾರ್ಷಿಕವಾಗಿ 1000 ಕೋಟಿ ರೂ ನಷ್ಟವಾಗುತ್ತಿದೆ.

* ಸ್ಲಂಗಳಿಗೆ ನೀಡುತ್ತಿರುವ ನೀರುಗಳನ್ನು ಹೋಟೆಲ್‌ ಹಾಗೂ ಇತರ ವಾಣಿಜ್ಯ ಸಂಸ್ಥೆಗಳು ಪೈಪ್‌ ಹಾಕಿಕೊಂಡು ತಿರುಗಿಸಿಕೊಂಡು, ನೀರಿನ ಸೋರಿಕೆಯಾಗುತ್ತಿದೆ.

* ವಿದ್ಯುತ್‌ ದರ ಹೆಚ್ಚಾಗಿರುವುದರಿಂದ ನಿರ್ವಹಣಾ ವೆಚ್ಚವ ಏರಿಕೆಯಾಗಿದೆ.

* ಹತ್ತು ವರ್ಷಗಳಿಗೆ ಒಮ್ಮೆಯಾದರೂ ಏರಿಕೆ ಮಾಡದಿದ್ದರೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಿಲ್ಲ.

* ನಾವು ತುಂಬಾ ಏರಿಸಿ ಹೊರೆ ಮಾಡುವುದಿಲ್ಲ. ಲೀಟರ್‌ಗೆ ಕೇವಲ ಒಂದು ಪೈಸೆಯಷ್ಟೇ ಏರಿಸುವ ಬಗ್ಗೆ ಚಿಂತನೆ ನಡೆದಿದೆ.

ಜಲಮಂಡಳಿ ನೀಡಿರುವ ಈ ಕಾರಣವನ್ನು ಯಾವುದೇ ಸಾಮಾನ್ಯ ಮನುಷ್ಯ ಕೇಳಿಸಿಕೊಂಡಾಗ, ಪಾಪ ಎಂದೆಣಿಸಿ ದರ ಎರಿಕೆಯ ಮೆಲೆ ನೂರು ರೂಪಾಯಿ ಹೆಚ್ಚು ಬಿಲ್‌ ಪಾವತಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಇವೆಲ್ಲ ಅಂಶಗಳು ಬಿಳ ಕಾಗದದಲ್ಲಿ ವಾಸ್ತವ ಹಾಗೂ ಅಪ್ಪಟ ಸತ್ಯ ಕೂಡ ಹೌದು. ಆದರೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಆಲೋಚನೆ ಮಾಡುವ ಶಕ್ತಿ ಇರುವವರು ಇದನ್ನು ಸಾರಾಸಗಟಾಗಿ ನೋಡಲು ಸಾಧ್ಯವಿಲ್ಲ. ಒಂದೊಂದೇ ವಿಚಾರದಲ್ಲಿನ ಲಕ್ಷ ಕೋಟಿಯ ಗ್ಯಾರಂಟಿ ಟೋಪಿಯನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

ದರ ಹೆಚ್ಚಳ & ಪೈಸೆ

ದರ ಹೆಚ್ಚಳ ಎನ್ನುವ ವಿಚಾರ ಬಂದಾಗ ಅಕ್ಕ ಪಕ್ಕದ ರಾಜ್ಯಗಳತ್ತ ಒಮ್ಮೆ ಕಣ್ಣಾಡಿಸಬೇಕು ಎನಿಸುತ್ತದೆ. ಹಾಗೆಯೇ ಪರಿಶೀಲಿಸಿದಾಗ ಒಂದಿಷ್ಟು ಆಸಕ್ತಿಕರ ಅಂಶಗಳು ಗಮನಕ್ಕೆ ಬಂದವು. ಬೆಂಗಳೂರು ನಗರದಲ್ಲಿ 40000 ಲೀಟರ್‌ ನೀರು ಬಳಸಿದರೆ 626 ರೂ. ಬಿಲ್‌ ಬರುತ್ತದೆ. ಇದರ ಮೇಲೆ ಒಳಚರಂಡಿ ವೆಚ್ಚ, ಬೋರ್‌ವೆಲ್‌ ಶುಲ್ಕ, ಪಾಪಕ ವೆಚ್ಚ, ಇತರೆ ವೆಚ್ಚವೆಂದು ನೀರಿನ ಜಲಮಂಡಳಿಯ ಬಿಲ್‌ ಕೊನೆಗೆ ದುಪ್ಪಟ್ಟಾಗುತ್ತದೆ. ಅಂದರೆ ನೈಜವಾದ ನೀರಿನ ಶುಲ್ಕ ಸಾವಿರ ರೂಪಾಯಿಯಾದರೆ ಬಹುತೇಕ ಅಷ್ಟೇ ಮೊತ್ತವನ್ನು ಅನ್ಯ ಮಾರ್ಗಗಳಿಂದ ವಸೂಲಿ ಮಾಡುತ್ತಾರೆ. ಈ ಅನ್ಯ ವೆಚ್ಚಗಳನ್ನು ಬದಿಗಿರಿಸಿ ಅದೇ 40000 ಲೀಟರ್‌ ನೀರನ್ನು ಭಾರತದ ಇತರ ಪ್ರಮುಖ ನಗರಗಳಲ್ಲಿ ಬಳಸಿದರೆ ಎಷ್ಟು ಬಿಲ್‌ ಇರುತ್ತದೆ ಎನ್ನುವ ಅಂದಾಜನ್ನು ನಿಮಗಿಲ್ಲಿ ನೀಡುತ್ತಿದ್ದೇನೆ. ಅಹ್ಮದಾಬಾದ್‌ನಲ್ಲಿ 225 ರೂ. ಆಗಿದ್ದರೆ, ಕಾಂಗ್ರೆಸ್‌ ಸರ್ಕಾರವಿರುವ ಹೈದರಾಬಾದ್‌ನಲ್ಲಿ 550 ಬಿಲ್‌ ಬರುತ್ತದೆ. ನೆರೆಯ ರಾಜ್ಯದ ರಾಜಧಾನಿಯಾಗಿರುವ ಮುಂಬೈನಲ್ಲಿ ಕೇವಲ 240 ರೂ. ಆಗಬಹುದು. ಇನ್ನು ದೆಹಲಿಯಲ್ಲಿ ಆರಂಭಿಕ 20000 ಲೀಟರ್‌ ಉಚಿತವಾಗಿದ್ದರೂ, ಹೆಚ್ಚುವರಿ ಬಳಕೆಯ ಶುಲ್ಕವನ್ನು ನೋಡಿದಾಗ ಅಲ್ಲಿ 500 ರೂ. ಆಗಬಹುದು. ಅಂದ್ಹಾಗೆ ಈ ಬಿಲ್‌ ಮೇಲೆ ಇತರ ಸೇವಾ ಶುಲ್ಕಗಳು ಸೇರಿ ಬಿಲ್‌ ಮೊತ್ತ ಇನ್ನಷ್ಟು ಏರಬಹುದು. ಆದರೆ ಜಲಮಂಡಳಿ ರೀತಿಯಲ್ಲಿ ಬ್ಲೇಡ್‌ ಹಾಕುವುದಿಲ್ಲ ಎನ್ನುವುದನ್ನು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿ ತಿಳಿಸುತ್ತಿದೆ. ಅಂದ್ಹಾಗೆ ಸದ್ಯಕ್ಕೆ ಕರ್ನಾಟಕದ ಬೆಲೆ ಏರಿಕೆಯನ್ನು ಸಮರ್ಥಿಸಲು ಕಾಂಗ್ರೆಸ್‌ನ ಮೈತ್ರಿ ಸರ್ಕಾರವಿರುವ ಚೆನ್ನೈ ಮಾತ್ರವಿದೆ. ಅಲ್ಲಿ 40000 ಲೀಟರ್‌ ನೀರು ಬಳಸಿದರೆ 1105 ರೂ. ಬಿಲ್‌ ಆಗಬಹುದು.

ಅಂದರೆ ಈ ದೇಶದ ಬಹುತೇಕ ದೊಡ್ಡ ನಗರಗಳಲ್ಲಿ ಬೆಂಗಳೂರು ಜಲಮಂಡಳಿ ಪೂರೈಕೆ ಮಾಡುವ ನೀರಿಗಿಂತ ಕಡಿಮೆ ದರದಲ್ಲಿ ದೊರೆಯುತ್ತಿದೆ. ಹತ್ತು ವರ್ಷದ ಬಳಿಕ ದರ ಏರಿಕೆ ಮಾಡುತ್ತಿದ್ದೇವೆ ಎಂದು ಕಥೆ ಹೇಳಿದರೂ, ನಮ್ಮ ಜೇಬಿಗೆ ದೇಶದ ಬೇರೆ ಎಲ್ಲೂ ಇಲ್ಲದ ದೊಡ್ಡ ಕತ್ತರಿಯೇ ಬೀಳುತ್ತಿದೆ. ಈಗ ನಮ್ಮ ಸಚಿವರ ಪೈಸೆ ಲೆಕ್ಕಾಚಾರವನ್ನು ನೋಡೋಣ.

ಬೆಂಗಳೂರಿನಲ್ಲಿ ಸದ್ಯಕ್ಕೆ 0-8000 ಲೀಟರ್‌ಗೆ 7 ರೂ., 8001-25000 ಲೀಟರ್‌ಗೆ 11ರೂ , 25001-50000 ಲೀಟರ್‌ಗೆ 26 ರೂ ಹಾಗೂ 50000ಕ್ಕೂ ಅಧಿಕ ಲೀಟರ್‌ಗೆ 45 ರೂ. ಶುಲ್ಕ ನಿಗದಿ ಮಾಡಲಾಗಿದೆ. ಅಂದರೆ ಪ್ರತಿ ಸಾವಿರ ಲೀಟರ್‌ಗೆ ಆಯಾ ಸ್ಲ್ಯಾಬ್‌ ಪ್ರಕಾರ 7 ರೂ. 11 ರೂ., 6 ರೂ, 45 ರೂ ಶುಲ್ಕವಿದೆ. ನಾನು ಈ ಹಿಂದೆ ಹೇಳಿದ 40000 ಲೀಟರ್‌ ಲೆಕ್ಕವನ್ನು ಇದಕ್ಕೆ ಅನ್ವಯ ಮಾಡಿದಾಗ ಮೊದಲ ಸ್ಲ್ಯಾಬ್‌ಗೆ 56 ರೂ, ಎರಡನೇ ಸ್ಲ್ಯಾಬ್‌ಗೆ 181 ರೂ, ಮೂರನೇ ಸ್ಲ್ಯಾಬ್‌ನ 15000 ಲೀಟರ್‌ಗೆ 290 ರೂ ಆಗುತ್ತದೆ. ನಮ್ಮ ಬೆಂಗಳೂರು ನಗಾಭಿವೃದ್ಧಿ ಸಚಿವರ ಒಂದು ಪೈಸೆ ಟೋಪಿಯ ಸಾಮಾನ್ಯ ಲೆಕ್ಕಾಚಾರವನ್ನು ಇದಕ್ಕೆ ಅನ್ವಯ ಮಾಡಿದರೆ ಮೊದಲ ಸ್ಲ್ಯಾಬ್‌ಗೆ 80, ಎರಡನೇ ಸ್ಲ್ಯಾಬ್‌ಗೆ 170 ರೂ, ಮೂರನೇ ಸ್ಲ್ಯಾಬ್‌ಗೆ 150 ರೂ ಹೆಚ್ಚಾಗಲಿದೆ. ಒಟ್ಟಾರೆಯಾಗಿ ಲೀಟರ್‌ಗೆ ಒಂದು ಪೈಸೆಯಂತೆ 40000 ಲೀಟರ್‌ಗೆ 400 ರೂ ಹೆಚ್ಚಾಗಲಿದೆ. ಒಂದು ಪೈಸೆ ಲೆಕ್ಕಾಚಾರ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದೊಮ್ಮೆ ನೋಡಿ. ಇದಕ್ಕೆ ಪೂರಕವಾಗಿ ಇತರೆ ವಸೂಲಿ ಶುಲ್ಕ ಸೇರಿಕೊಂಡಾಗ ನಮ್ಮ ಬಿಲ್‌ ಬಹುತೇಕ ಡಬಲ್‌ ಆಗುವ ಎಲ್ಲ ಅಪಾಯಗಳು ಕಾಣಿಸುತ್ತಿವೆ. ಈ ಒಂದು ಪೈಸೆಯ ಟೋಪಿಯೇ ನಿಜವಾದರೆ, ಇದು ಅಂತಿತ್ತ ಟೋಪಿಯಲ್ಲ. ಅಂದ್ಹಾಗೆ ಬಿಬಿಎಂಪಿ ಚುನಾವಣೆಗೂ ಮುನ್ನ ದರ ಏರಿಕೆಯನ್ನು ಮಾಡುವುದಿಲ್ಲ. ಒಂದೊಮ್ಮೆ ಮಾಡಿದರೆ ಟೋಪಿಯನ್ನು ರಿಟರ್ನ್‌ ಕೊಡಲು ಮತದಾರರಿಗೆ ಸುವರ್ಣಾವಕಾಶ ದೊರೆಯಲಿದೆ. ಹೊಸಬರು ಬಂದರೂ ಬಣ್ಣಬಣ್ಣದ ಟೋಪಿ ರೆಡಿ ಮಾಡಿಕೊಂಡೇ ಇರುತ್ತಾರೆ.

ಸಾವಿರ ಕೋಟಿ ನಷ್ಟ & ಬಡಪಾಯಿ ನೌಕರರು

ಜಲಮಂಡಳಿಯ ಪ್ರಕಾರ ಪ್ರತಿ ವರ್ಷ ಸರಿಸುಮಾರು 1000 ಕೋಟಿ ರೂ ಆರ್ಥಿಕ ನಷ್ಟವಾಗುತ್ತಿದೆ. ಮಾಸಿಕವಾಗಿ ಜಲಮಂಡಳಿಗೆ 120 ಕೋಟಿ ರೂಆದಾಯ ಬರುತ್ತಿದ್ದರೆ, ನಿರ್ವಹಣಾ ವೆಚ್ಚವು 210 ಕೋಟಿಯ ರೂ. ಆಸುಪಾಸಿನಲ್ಲಿದೆ. ಅದರಲ್ಲಿ ಸಂಗ್ರಹವಾಗುತ್ತಿರುವ ಹಣದಲ್ಲಿ ಶೇ.75ರಷ್ಟು ವಿದ್ಯುತ್‌ ಬಿಲ್‌ ಪಾವತಿಗೆ ಹೋಗುತ್ತದೆ. ಈ ಲೆಕ್ಕಾಚಾರವನ್ನು ನೋಡಿದಾಗ ಆರ್ಥಿಕತೆಯ ಸಣ್ಣ ಜ್ಞಾನ ಇರುವವರು ಕೂಡ ಹೌಹಾರಬೇಕಾಗುತ್ತದೆ. ಆದರೆ ತನಗೆ ಬೇಕಾದಾಗ ಇಂತಹ ಲೆಕ್ಕವನ್ನು ನೀಡುವುದರಲ್ಲಿ ಸರ್ಕಾರ ಎಂದಿಗೂ ಹಿಂದೆ ಬೀಳುವುದಿಲ್ಲ. ಆದರೆ ಇದರೊಳಗೆ ಹೊಕ್ಕಿದಾಗ ನಮಗೆ ಹಾಕಲಾಗುತ್ತಿರುವ ಲಕ್ಷ ಕೋಟಿಯ ಗ್ಯಾರಂಟಿ ಟೊಪ್ಪಿ ಕಾಣಿಸುತ್ತದೆ.

ಜಲಮಂಡಳಿಯು ಪ್ರತಿದಿನ ಬೆಂಗಳೂರಿಗೆ 1450 ಎಂಎಲ್‌ಡಿ ನೀರನ್ನು ಪೂರೈಸುತ್ತದೆ. ಇತ್ತೀಚಿನ ದಾಖಲೆಗಳ ಪ್ರಕಾರ ಈ ನೀರಿನಲ್ಲಿ ಶೇ.29ರಷ್ಟು ಎಂದರೆ ಬರೋಬ್ಬರಿ 420 ಎಂಎಲ್‌ಡಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆಯಲ್ಲಿ ಸಚಿವರು ಉಲ್ಲೇಖಿಸಿದ ನೀರಿನ ಕಳ್ಳತನವೂ ಇದೆ. ಆದರೆ ದೊಡ್ಡ ಪ್ರಮಾಣದ ಸೋರಿಕೆಯು ಪೈಪ್‌ಗಳು ಹಾಳಾಗಿರುವುದರಿಂದ ಅಗುತ್ತಿದೆ. ಸಾಮಾನ್ಯ ಗಣಿತ ಗೊತ್ತಿರುವವರು ಹೇಳಬಹುದಾದ ಲೆಕ್ಕವೇನೆಂದರೆ ಈ ಸೋರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿದರೆ ಆದಾಯದಲ್ಲಿ ಶೇ.29ರಷ್ಟು ಹೆಚ್ಚಳವಾಗಲಿದೆ. ನಮ್ಮ ಸರ್ಕಾರಿ ವ್ಯವಸ್ಥೆ ಹಾಗೂ ಜನರ ಅಸಹಕಾರದಿಂದ ಅರ್ಧದಷ್ಟು ಸೋರಿಕೆ ತಡೆದರೆ, ಜಲಮಂಡಳ ಆದಾಯವನ್ನು ಕನಿಷ್ಠ ಶೇ.15ರಷ್ಟು ಏರಿಸಬಹುದು. ಅಂದರೆ ವಾರ್ಷಿಕವಾಗಿ 220 ಕೋಟಿ ರೂ. ಆದಾಯ ಹೆಚ್ಚಿಸಲು ಅವಕಾಶವಿದೆ. ಇಂತಹ ಸೋರಿಕೆಯನ್ನು ತಡೆಯುವ ಉದ್ದೇಶದಿಂದಲೇ ನಾವು ಜನಪ್ರತಿನಿಧಿಗಳಿಗೆ ಜಲಮಂಡಳಿಯ ಸಭೆಗೆ ಹಾಜರಾಗುವ ಅವಕಾಶ ಮಾಡಿಕೊಟ್ಟಿದ್ದೇವೆ ಎನ್ನುವುದನ್ನು ಬಹುತೇಕರು ಮರೆತಿದ್ದಾರೆ. ಶೇ.100ರಷ್ಟು ಸೋರಿಕೆ ನಿಯಂತ್ರಿಸುತ್ತೇವೆ ಎಂದು ನಾನು ವರದಿಗಾರಿಕೆ ಮಾಡುತ್ತಿದ್ದಾಗಲೇ ಓರ್ವ ಮುಖ್ಯ ಎಂಜಿನಿಯರೊಬ್ಬರು ಸಂದರ್ಶನದಲ್ಲಿ ಹೇಳಿದ್ದರು. ಇಂತಹ ಯೋಜನೆಗಳಿಗಾಗಿ ಕಳೆದೊಂದು ದಶಕದಲ್ಲಿ ಸಾವಿರಾರು ಕೋಟಿ ಹಣವನ್ನು ಚೆಲ್ಲಲಾಗಿದೆ. ಈ ವಾರ್ಷಿಕ ಸಾವಿರ ಕೋಟಿ ನಷ್ಟದ ಹಿಂದೆ ಈ ಯೋಜನೆಯಲ್ಲಿ ದುಡ್ಡು ತಿಂದಿರುವುದು ಕೂಡ ಸೇರಿದೆ. ಆದರೆ ಬೆಲೆ ಏರಿಕೆ ಮಾಡುವಾಗ ತಮ್ಮ ಕಡೆಯಿಂದಾದ ಈ ಅಕ್ರಮಗಳನ್ನು ಎಲ್ಲಿಯೂ ರಾಜಕಾರಣಿಗಳು ಪ್ರಸ್ತಾಪ ಮಾಡುವುದಿಲ್ಲ. ಇದಲ್ಲದೇ ಜಲಮಂಡಳಿಗೆ ಬಾಕಿ ಇರುವ ಬಿಲ್‌ ಮೊತ್ತವು 650-700 ಕೋಟಿ ರೂ ಹತ್ತಿರವಿದೆ.

ಒಟ್ಟಾರೆಯಾಗಿ ಬಾಕಿ ಹಣ, ಸೋರಿಕೆ ನಿಯಂತ್ರಣದಿಂದ ಬರುವ ಹೆಚ್ಚುವರಿ ಆದಾಯ, ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರಗಳೆಲ್ಲವನ್ನೂ ನಿಯಂತ್ರಿಸಿದರೆ ಈಗಿರುವ ಜಲಮಂಡಳಿಯು ನಷ್ಟದಲ್ಲಿ ಹೋಗುವ ಪ್ರಮೇಯವಿರಲಾರದು. ಇದಕ್ಕೆ ಪೂರಕವಾಗಿ ಜಲಮಂಡಳಿಯಿಂದ ನಡೆಯುವ ಆಡಳತಾತ್ಮಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಇನ್ನೊಂದಿಷ್ಟು ಕೋಟಿ ಉಳಿಸಬಹುದು.

ಕೊನೆಯದಾಗಿ: ಜಲಮಂಡಳಿಯು ಆರ್ಥಿಕ ಹೊರೆಯನ್ನು ಹೊರುತ್ತಿದ್ದರೆ ಅದಕ್ಕೆ ಇದೇ ಸರ್ಕಾರಗಳ ಕಾರಣ ಹೊರತು, ಜನಸಾಮಾನ್ಯರಲ್ಲ. ಹೋಟೆಲ್‌ಗಳು ಸ್ಲಂಗಳ ನೀರಿನ ಪೈಪ್‌ನ್ನು ತಿರುಗಿಸಿಕೊಂಡಾಗ, ಹೋಟೆಲ್‌ ಡ್ರಾವರ್‌ ಕೆಳಗೆ ವ್ಯವಹಾರ ಮಾಡುವುದನ್ನು ಜಲಮಂಡಳಿ ಬಿಡಬೇಕು. ನೀರಿನ ಸೋರಿಕೆ ತಡೆಯುತ್ತೇವೆ ಎಂದು ನೂರಾರು ಕೋಟಿ ಲೂಟಿ ಮಾಡುವುದನ್ನು ನಿಲ್ಲಿಸಬೇಕು. ಆಗ ಜಲಮಂಡಳಿಯು ಆರ್ಥಿಕ ಹೊರೆಯನ್ನು ಎದುರಿಸುವುದಿಲ್ಲ. ಬಿಜೆಪಿ ಸರ್ಕಾರದ 40% ಕಮಿಷನ್‌ನ್ನು ನಾವು ನಿಯಂತ್ರಿಸಿ, ಆ ಹಣದಿಂದಲೇ ಜನಕಲ್ಯಾಣ ಮಾಡುತ್ತೇವೆ ಎಂದು ಹೊರಟವರು ಪೈಸೆ ಪೈಸೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಬೆಲೆ ಏರಿಕೆ ವಿರುದ್ಧ ಹಾರಾಡಿದವರು, ದಿನ ಬೆಳಗಾದರೆ ಜನಸಾಮಾನ್ಯರ ಜೇಬುಗಳ್ಳರಂತೆ ವರ್ತಿಸುತ್ತಿದ್ದಾರೆ. ಅಲ್ಲಿಗೆ ಬಿಜೆಪಿಯ 40% ಕಮಿಷನ್‌ನ್ನು ಮೀರಿ ವ್ಯವಹಾರ ಮಾಡುತ್ತಿದ್ದಾರೆ ಎನ್ನುವುದು ಖಾತ್ರಿಯಾಯಿತು. ನಿಮ್ಮ ಲೂಟಿಯ ಪೈಸೆ ಪೈಸೆ ಲೆಕ್ಕಾಚಾರವನ್ನು ಕೊಡಿ, ಅದನ್ನು ಬಿಟ್ಟು ಸುಮ್ಮನೇ ನಮಗೆ ಟೋಪಿ ಹಾಕಲು ಬರಬೇಡಿ.

-ರಾಜೀವ ಹೆಗಡೆ, ಲೇಖಕ.

Whats_app_banner