ಸಾರ್ವಜನಿಕರ ಹಣದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸುವ ಕೆಲಸ ಮಾಡುತ್ತಿವೆ; ರಾಜೀವ ಹೆಗಡೆ ಬರಹ
ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ 25 ಅಡಿ ಎತ್ತರದ ಗಾಂಧೀಜಿ ಪುತ್ಥಳಿಯನ್ನು ಚರಕ ನೇಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮಕ್ಕೆ ಜನರ ಹಣ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಆಕ್ಷೇಪ ಕೇಳಿಬರುತ್ತಲೇ ಇದೆ. ಈ ವಿಚಾರವಾಗಿ ಲೇಖಕ ರಾಜೀವ್ ಹೆಗಡೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಮಂಗಳವಾರ ಗಾಂಧೀಜಿ ಪ್ರತಿಮೆ ಅನಾವರಣ ಮಾಡಲಾಗಿದೆ. ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಣದೀಪ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ, ಸತೀಶ್ ಜಾರಕಿಹೊಳಿ, ಯುಟಿ ಖಾದರ್ ಹಾಗೂ ಇನ್ನಿತರು ಉಪಸ್ಥಿತರಿದ್ದರು. ಆದರೆ ಸರ್ಕಾರಿ ಕಾರ್ಯಕ್ರಮಕ್ಕೆ ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಲೇಖಕ ರಾಜೀವ ಹೆಗಡೆ ಸೋಷಿಯಲ್‌ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇಲ್ಲಿಂದ ಆಚೆಗೆ ಇರುವುದು ರಾಜೀವ್ ಹೆಗಡೆ ಅವರ ಫೇಸ್‌ಬುಕ್ ಪೋಸ್ಟ್
ಸರ್ಕಾರಿ ಖಜಾನೆ ಕೀಲಿಯನ್ನು ಪಕ್ಷಕ್ಕೆ ಕೊಡುವ ಅಧಿಕಾರ ನೀಡಿದ್ದು ಯಾರು?
ಇದೊಂದು ಪಕ್ಕಾ ಸರ್ಕಾರಿ ಹಾಗೂ ರಾಜ್ಯದ ತೆರಿಗೆದಾರರ ದುಡ್ಡಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಆದರೆ ಇಲ್ಲಿ ಪ್ರಿಯಾಂಕಾ ವಾದ್ರಾ, ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೆವಾಲಾಗೆ ಯಾವ ಮಾನದಂಡ, ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿ ಕುರ್ಚಿಯಲ್ಲಿ ಕೂರಿಸಲಾಗಿದೆ? ಈ ಮೂವರೂ, ಸಂಸದರು ಎಂದು ಸಮಜಾಯಿಷಿ ನೀಡಬಹುದು. ಆದರೆ ವಾಸ್ತವದಲ್ಲಿ ಈ ಮೂವರಿಗೆ ಸರ್ಕಾರದ ವೇದಿಕೆಯಲ್ಲಿ ಜಾಗ ಸಿಗಲು ಪಕ್ಷದಲ್ಲಿನ ಹುದ್ದೆ ಹಾಗೂ ಪ್ರಭಾವವೇ ಕಾರಣ. ಈ ಹಿಂದೆ ಕರ್ನಾಟಕದಲ್ಲಿ ಕೇಂದ್ರ ಸಚಿವರೊಬ್ಬರ ಹೆಂಡತಿಗೂ ಸರ್ಕಾರಿ ವೇದಿಕೆಯಲ್ಲಿ ಮೊದಲ ಸಾಲಿನ ಕುರ್ಚಿ ನೀಡಿ ಮತದಾರರನ್ನು ಆಡಿಕೊಳ್ಳುತ್ತಿದ್ದರು.
ನಾನು ಆರಂಭದಲ್ಲಿ ಇದು ಕೇವಲ ಒಂದು ಕಾರ್ಯಕ್ರಮವಲ್ಲವೇ ಎಂದು ಆಲೋಚಿಸುತ್ತಿದ್ದೆ. ಆದರೆ ಇದು ಒಂದು ಕಾರ್ಯಕ್ರಮ, ಕುರ್ಚಿ ಹಾಗೂ ಫೋಟೋಕ್ಕೆ ಸೀಮಿತವಾಗುವುದಿಲ್ಲ. ಕರ್ನಾಟಕ ಹಾಗೂ ಗಾಂಧಿ ಪ್ರತಿಮೆಗೆ ಯಾವುದೇ ಸಂಬಂಧವಿಲ್ಲದ ಮೂವರು ಸಂಸದರನ್ನು ಆಹ್ವಾನಿಸಿದ್ದನ್ನು ಹಲವು ವಿಧಾನಗಳಿಂದ ವಿತಂಡ ವಾದದ ಮೂಲಕ ಸಮರ್ಥಿಸಬಹುದು. ಆದರೆ ಪಕ್ಕಾ ಕಾಂಗ್ರೆಸ್ ರಾಜಕೀಯ ಮುಖಂಡರಾದ ಪ್ರಿಯಾಂಕಾ, ಸುರ್ಜೆವಾಲಾ, ವೇಣುಗೋಪಾಲ್ ಅವರನ್ನು ಮೆಚ್ಚಿಸಲು ಕುರ್ಚಿಯ ಜತೆಗೆ ಸಂಚಾರ, ಉಪಚಾರ, ಆತಿಥ್ಯದ ವ್ಯವಸ್ಥೆ ಮಾಡಬೇಕಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಅವರ ಭದ್ರತಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸುತ್ತದೆ. ಅಲ್ಲಿಗೆ ನಮ್ಮ ತೆರಿಗೆ ಹಣದಲ್ಲಿ ಇವರ ರಾಜಕೀಯ ಸವಾರಿ ಹಾಗೂ ಉತ್ಸವ ನಡೆಯುತ್ತದೆ.
ಸಾರ್ವಜನಿಕ ಹಣದಲ್ಲಿ ಪಕ್ಷದ ಬೇಳೆ ಬೇಯಿಸುವ ಕೆಲಸ
ಅಷ್ಟಕ್ಕೂ ಬೆಳಗಾವಿಯಲ್ಲಿ ನಡೆಯುತ್ತಿರುವ ಇನ್ನೊಂದು ಕಾಂಗ್ರೆಸ್ ಸಮಾವೇಶಕ್ಕೆ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮವೆನ್ನುವುದು ನೆಪ ಮಾತ್ರವೂ ಆಗಿರಬಹುದು. ಅಂದ ಹಾಗೆ ಇದೇ ಮೊದಲ ಬಾರಿಗೆ ಇಂತಹದೊಂದು ಕಾರ್ಯಕ್ರಮವಾಗುತ್ತಿಲ್ಲ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಆದಿಯಾಗಿ, ಪ್ರಧಾನಿಯ ಕೆಲವು ಕಾರ್ಯಕ್ರಮ ಕೂಡ ಇದೇ ರೀತಿ ನಡೆಯುತ್ತದೆ. ರಾಜಕೀಯ ಸಮಾವೇಶಕ್ಕೆ ಪೂರ್ವಭಾವಿಯಾಗಿ ಇಂತಹದೊಂದು ಕಾರ್ಯಕ್ರಮ ಹಾಕಿಕೊಂಡಿರುತ್ತಾರೆ. ಒಟ್ಟಾರೆಯಾಗಿ ಸಾರ್ವಜನಿಕ ಹಣದಲ್ಲಿ ಪಕ್ಷದ ಬೇಳೆ ಬೇಯಿಸುವ ಕೆಲಸವನ್ನು ಎಲ್ಲರೂ ಚೆಂದವಾಗಿಯೇ ಮಾಡುತ್ತಾರೆ.
ಕೆಲ ದಿನಗಳ ಹಿಂದೆ ನಡೆದ ಬೆಳಗಾವಿ ಕಾಂಗ್ರೆಸ್ ಸಮಾವೇಶ ಕೂಡ ಇಂತಹ ಹಣದ ದುರ್ಬಳಕೆ ವ್ಯಾಪ್ತಿಗೆ ಬರುತ್ತದೆ. ಗಾಂಧೀಜಿ ಹಾಗೂ ಸ್ವಾತಂತ್ರ್ಯದ ಲೇಪ ಹಾಕಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ರೂಪ ನೀಡಿದ ಸಿದ್ದರಾಮಯ್ಯ ಹಾಗೂ ಡಿಕೆಶಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಮುಂದೊಂದು ದಿನ ಪಕ್ಷದ ಕಾರ್ಯಕಾರಿಣಿ ಕೂಡ ಅಧಿಕೃತವಾಗಿ ಸರ್ಕಾರಿ ಹಣದಲ್ಲಿ ನಡೆಯುವ ದಿನ ಬರಬಹುದು. ಒಂದೆಡೆ ಸರ್ಕಾರಿ ವೇದಿಕೆಯಲ್ಲಿ ರಾಜಕೀಯ ನಾಟಕ, ಇನ್ನೊಂದೆಡೆ ನಮ್ಮ ಹಣದಲ್ಲಿ ಇನ್ಯಾರದ್ದೋ ಜಾತ್ರೆ ಮಾಡಲಾಗುತ್ತದೆ. ಆದರೆ ನಾನು ಗಮನಿಸಿದಂತೆ ಪ್ರಧಾನಿ ಕಾರ್ಯಕ್ರಮದಲ್ಲಿ ಕನಿಷ್ಠ ಶಿಷ್ಟಾಚಾರವನ್ನಾದರೂ ಹಾಕಿಕೊಳ್ಳಲಾಗುತ್ತದೆ. ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಯಾರಿರಬೇಕು ಎನ್ನುವ ಸ್ಪಷ್ಟತೆಯನ್ನು ಹೊಂದಿರಲಾಗುತ್ತದೆ. ಆದರೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಕೆಲವು ಕಾರ್ಯಕ್ರಮದಲ್ಲಿ ವೇದಿಕೆಯಿಂದ ಮುಖಂಡರು ತುಪತುಪ ಬೀಳುವಷ್ಟು ಇರುತ್ತಾರೆ. ವೇದಿಕೆಯಲ್ಲಿ ಯಾರಿರಬೇಕು ಎನ್ನುವ ಕನಿಷ್ಠ ಶಿಷ್ಟಾಚಾರವನ್ನು ಸಿಎಂ ಕಚೇರಿಯೂ ಹೊಂದಿಲ್ಲ. ಇದನ್ನು ಯಾವುದೇ ಪ್ರತಿಪಕ್ಷ ಕೂಡ ವಿರೋಧಿಸುವುದಿಲ್ಲ. ಏಕೆಂದರೆ ಮುಂದೆ ಅಧಿಕಾರಕ್ಕೆ ಬಂದಾಗ ಸಾರ್ವಜನಿಕರ ದುಡ್ಡಲ್ಲಿ ಜಾತ್ರೆ ಮಾಡೋಣ ಎನ್ನುವ ಕನಸನ್ನು ಕಾಣುತ್ತಿರುತ್ತಾರೆ ಅಥವಾ ಈಗಾಗಲೇ ಅಂತಹ ಉತ್ಸವದಲ್ಲಿ ಮೆರೆದವರೇ ಆಗಿರುತ್ತಾರೆ.
ಇವರಿಗೆ ಶಿಷ್ಟಾಚಾರ ಯಾವಾಗ?
ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು, ಅಧಿಕಾರಿಗಳ ವರ್ತನೆ ಹೇಗಿರಬೇಕು ಎಂದು ಸಭಾಧ್ಯಕ್ಷರ ಕಚೇರಿಯಿಂದ ಪುಟಗಟ್ಟಲೇ ನಿರ್ದೇಶನ ಹೋಗಿರುತ್ತದೆ. ಆದರೆ ಸಾರ್ವಜನಿಕರ ಹಣದ ದುರುಪಯೋಗ ತಡೆಯಲು ಸರ್ಕಾರಿ ಕಾರ್ಯಕ್ರಮದ ಆಹ್ವಾನಿತರು ಯಾರಿರಬೇಕು ಹಾಗೂ ವೇದಿಕೆಯಲ್ಲಿ ಯಾರಿಗೆ ಜಾಗ ಕೊಡಬೇಕು ಎನ್ನುವುದಕ್ಕೆ ಶಿಷ್ಟಾಚಾರ ಮಾಡಲು ಸಾಧ್ಯವಿಲ್ಲವೇ? ಇದೇ ರೀತಿ ಮುಂದುವರಿದರೆ ಭವಿಷ್ಯದಲ್ಲಿ ಸರ್ಕಾರಿ ಕಾರ್ಯಕ್ರದ ಮೂಲಕ ಇದೇ ರೀತಿ ಹಣ ದುರುಪಯೋಗ ಮಾಡುವುದು ನಿಲ್ಲುವುದೇ ಇಲ್ಲ. ಈಗಾಗಲೇ ಸರ್ಕಾರಿ ಯೋಜನೆಯ ಉದ್ಘಾಟನೆ ಸೇರಿ ಇತರ ಕಾರ್ಯಕ್ರಮದ ಹೆಸರಲ್ಲಿ ರಾಜಕೀಯ ಸಮಾವೇಶಗಳನ್ನು ಮಾಡಲಾಗುತ್ತಿದೆ.
ಅಂದ್ಹಾಗೆ ಇದನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲೂ ಹೋರಾಟ ನಡೆಸಬಹುದಾಗಿದೆ. ಏಕೆಂದರೆ ಇದು ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತ ಮಾಡಿದ ಕಾರ್ಯವಾಗುತ್ತದೆ. ಈ ಕುರಿತು ಯಾರಾದರು ಕಾನೂನು ಹೋರಾಟ ನಡೆಸಬೇಕು ಅಥವಾ ಕಾನೂನು ಜಾರಿಗೆ ಹೋರಾಡಲೇಬೇಕು. ಈ ರೀತಿ ಸಾರ್ವಜನಿಕ ಹಣದ ಹಗಲು ದರೋಡೆಯು ಬೇರೆ ಯಾವ ದೇಶದಲ್ಲಿಯೂ ನಡೆಯುತ್ತಿಲ್ಲ ಎನಿಸುತ್ತದೆ. ನಮ್ಮ ಮೌನವನ್ನು ಈ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ದುರುಪಯೋಗಪಡಿಸಿಕೊಳ್ಳುತ್ತಿವೆ ಎನ್ನುವುದನ್ನು ನೀವೇ ನೋಡಿ. ಮೊದಲಿಗೆ ವೇದಿಕೆಯಲ್ಲಿ ರಾಜಕೀಯ ವ್ಯಕ್ತಿಗಳಿಗೆ ಜಾಗ ನೀಡಲಾಯಿತು. ದಿನ ಕಳೆದಂತೆ ಫಲಾನುಭವಿಗಳ ಹೆಸರಲ್ಲಿ ಕಾರ್ಯಕರ್ತರನ್ನು ಸಭೆಗೆ ಕರೆತರಲು ತೆರಿಗೆ ಹಣ ಬಳಕೆಯಾಗಲು ಆರಂಭಿಸಿತು. ಈಗ ಈ ಅಧಿಕಾರ ದುರುಪಯೋಗದ ಪರಾಕಾಷ್ಠೆಯನ್ನು ತಲುಪಿದ್ದೇವೆ. ರಾಜಕೀಯ ಕಾರ್ಯಕ್ರಮಕ್ಕೆ ಸರ್ಕಾರದ ಹೆಸರನ್ನು ನೀಡಿ ಪ್ರಚಾರ ಪಡೆಯಲಾಗುತ್ತಿದೆ. ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ಹಣ ಮಶಿನರಿಗಳನ್ನು ಬಳಸಿ ಆ ವೇದಿಕೆ ಮೂಲಕ ಪ್ರಜೆಗಳನ್ನು ಪ್ರಭು ಎಂದು ಸಂವಿಧಾನ ರಕ್ಷಣೆಯ ಬೂಟಾಟಿಕೆ ಮಾತುಗಳನ್ನು ಆಡಲಾಗುತ್ತಿದೆ.
ಕೊನೆಯದಾಗಿ: ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಓರ್ವ ಬಡ ರೋಗಿಗೆ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಯೋಜನೆ ಮೂಲಕ ಚಿಕಿತ್ಸೆ ಪಡೆಯಲು ಆರೋಗ್ಯಾಧಿಕಾರಿಗಳ ಸಹಿ ಬೇಕಾಗುತ್ತದೆ. ಸರ್ಕಾರ ನಿಗದಿಪಡಿಸಿರುವ ಮೊತ್ತಕ್ಕಿಂತ ಚಿಕಿತ್ಸಾ ವೆಚ್ಚ ಹೆಚ್ಚಿದ್ದರೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡದೇ ಅಸಹಾಯಕತೆ ಪ್ರದರ್ಶಿಸುತ್ತವೆ. ಇಲ್ಲವಾದಲ್ಲಿ ಹೆಚ್ಚುವರಿ ಹಣವನ್ನು ಆ ಬೇಡ ರೋಗಿಯೇ ಭರಿಸಬೇಕಾಗುತ್ತದೆ. ಸರ್ಕಾರದ ಪ್ರತಿ ಯೋಜನೆಯ ಲಾಭ ಪಡೆಯುವಾಗಲೂ ಬಡ ಫಲಾನುಭವಿಗಳಿಗೆ ಎಲ್ಲಿಲ್ಲದ ನಿಯಮಗಳನ್ನು ತೋರಿಸಿ ಕಾಡಲಾಗುತ್ತದೆ. ಅದಕ್ಕೆ ಹಣಕಾಸು ಸಚಿವಾಲಯ ನೀಡುವ ಕಾರಣವೆಂದರೆ ಆರ್ಥಿಕ ಶಿಸ್ತು ಹಾಗೂ ಹಣ ಸೋರಿಕೆ ನಿಯಂತ್ರಣ. ಮಾನ್ಯ ಸಿದ್ದರಾಮಯ್ಯನವರೇ ಈ ಹಣಕಾಸು ಶಿಸ್ತು ಹಾಗೂ ಸೋರಿಕೆ ನಿಯಂತ್ರಣವು ಜನ ಕಲ್ಯಾಣಕ್ಕೆ ಸೀಮಿತವೇ? ನಿಮ್ಮನ್ನು ಒಂದು ಕಾಲದಲ್ಲಿ ಆರ್ಥಿಕ ಶಿಸ್ತಿಗೆ ಹೆಸರಾದ ಆಡಳಿತಗಾರರಾಗಿದ್ದಿರಿ. ಆದರಿಂದು ಪಕ್ಷದ ಅಧ್ಯಕ್ಷರಿಗೆ ಸರ್ಕಾರಿ ಖಜಾನೆ ಕೀಲಿ ಕೈ ನೀಡಿ ಹಣ ಸೋರಿಕೆಯ ಗೇಟ್ ತೆರೆದು ವಿಲನ್ ಆಗುತ್ತಿರುವುದು ಕಾಣಿಸದಷ್ಟು ಜಾಣ ಕುರುಡು ನಿಮ್ಮದಾಯಿತೆ? ಒಂದೊಮ್ಮೆ ಅದುವೇ ಸಾಧ್ಯವಾಗಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣೆ ಎನ್ನುವುದು ಬೂಟಾಟಿಕೆ ಎನ್ನುವುದಕ್ಕೆ ನಿಮ್ಮದೇ ಅಂತಿಮ ಷರಾ ಆಗಿರುತ್ತದೆ.
