ಕನ್ನಡ ಸುದ್ದಿ  /  Karnataka  /  Rajya Sabha Elections 2024 Karnataka Politics Kupendra Reddy Eyes For Win Political Analysis Bjp Jds Congress Dmg

Rajya Sabha Election: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ; ಗೆಲ್ಲುವ 4ನೇ ಅಭ್ಯರ್ಥಿ ಯಾರು -ರಾಜಕೀಯ ವಿಶ್ಲೇಷಣೆ

ಎಲ್ಲ ಪಕ್ಷೇತರರು ಬಿಜೆಪಿ- ಜೆಡಿಎಸ್ ಬೆಂಬಲಿಸುವ ಸಾಧ್ಯತೆಗಳು ಕಡಿಮೆ. ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಇಬ್ಬರು ಶಾಸಕರು ತಮ್ಮತಮ್ಮ ಪಕ್ಷದಿಂದ ದೂರವೇ ಉಳಿದಿದ್ದಾರೆ. ಒಂದು ವೇಳೆ ಎಲ್ಲರೂ ಬೆಂಬಲ ನೀಡಿದರೂ ಕುಪೇಂದ್ರ ರೆಡ್ಡಿ ಬೆಂಬಲಕ್ಕೆ ನಿಲ್ಲುವ ಕಾಂಗ್ರೆಸ್‌ನ ಶಾಸಕ ಯಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. (ವರದಿ: ಮಾರುತಿ ಎಚ್.)

ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ ಫೆ 27ರ ಮಂಗಳವಾರ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಮೂರೂ ಪಕ್ಷಗಳು (ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್) ಅಡ್ಡ ಮತದಾನದ ಭೀತಿಯನ್ನು ಎದುರಿಸುತ್ತಿವೆ. ಇದೇ ಕಾರಣಕ್ಕೆ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲು ಮುಂದಾಗಿದೆ. ಈ ಭೀತಿ ಬಿಜೆಪಿ ಮತ್ತು ಜೆಡಿಎಸ್‌ಗೆ ಕಾಡುತ್ತಿದೆಯಾದರೂ ಅವರು ರೆಸಾರ್ಟ್‌ಗೆ ಹೋಗುತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ, ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಅಜಯ್ ಮಾಕನ್‌, ಜಿ.ಸಿ. ಚಂದ್ರಶೇಖರ್ ಮತ್ತು ಸಯ್ಯದ್‌ ನಾಸೀರ್ ಹುಸೇನ್ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಡಿ.ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

ನಾಲ್ಕು ಸ್ಥಾನಗಳ ಪೈಕಿ ಶಾಸಕರ ಸಂಖ್ಯಾಬಲ ಲೆಕ್ಕ ಹಾಕಿದರೆ ಕಾಂಗ್ರೆಸ್‌ ಮೂರು, ಬಿಜೆಪಿ ಒಂದು ಸ್ಥಾನವನ್ನು ಸರಾಗವಾಗಿ ಗೆಲ್ಲಲಿದೆ. ಐದನೇ ಅಭ್ಯರ್ಥಿಯಾಗಿ ಡಿ. ಕುಪೇಂದ್ರ ರೆಡ್ಡಿ ಅಖಾಡದಲ್ಲಿ ಇರುವುದರಿಂದ ಈ ಚುನಾವಣೆ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತವೆ. ಬಿಜೆಪಿಯ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಪಕ್ಷದಿಂದ ದೂರವೇ ಉಳಿದಿದ್ದು ಕಾಂಗ್ರೆಸ್ ಸರ್ಕಾರದ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಜತೆ ಮೈತ್ರಿ ವಿರೋಧಿಸಿ ಜೆಡಿಎಸ್‌ನ ಶರಣಗೌಡ ಕಂದಕೂರ ಮತ್ತು ಕರೆಮ್ಮ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಯಾರೊಬ್ಬರೂ ಅಡ್ಡ ಮತದಾನ ಮಾಡಲಿದ್ದಾರೆ ಎಂಬ ಮಾಹಿತಿ ಇಲ್ಲ.

ಸಾಮಾನ್ಯವಾಗಿ ರಾಜ್ಯಸಭಾ ಚುನಾವಣೆಯಲ್ಲಿ 45 ಮತಗಳ ಜೊತೆಗೆ ಹೆಚ್ಚುವರಿಯಾಗಿ 1 ಅಥವಾ 2 ಮತಗಳನ್ನು ನಿಗದಿ ಮಾಡಲಾಗುತ್ತದೆ. ಅಡ್ಡ ಮತದಾನ ಅಥವಾ ಮತ ತಿರಸ್ಕೃತಗೊಂಡರೆ ಎಂಬ ಭಯದಿಂದ ಹೀಗೆ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್‌ಗೆ ಪಕ್ಷದೊಳಗೆ ಹೆಚ್ಚುವರಿ ಮತಗಳಿಲ್ಲ. ಒಂದು ವೇಳೆ ಪಕ್ಷೇತರರು ಬೆಂಬಲ ಸೂಚಿಸಿದರೆ ಒಂದೊಂದು ಹೆಚ್ಚುವರಿ ಮತ ನಿಗದಿ ಮಾಡಬಹುದು. ಬಿಜೆಪಿಯ ಹೆಚ್ಚುವರಿ 21 ಮತ್ತು ಜೆಡಿಎಸ್‌ನ 19 ಸೇರಿ 40 ಮತಗಳ ಜೊತೆಗೆ ಇನ್ನೂ 5 ಮತಗಳ ಅವಶ್ಯಕತೆಯಿದೆ. ಈ ಕೊರತೆಯನ್ನು ಹೇಗೆ ತುಂಬಿಕೊಳ್ಳಲಿದೆ ಎನ್ನುವುದು ರಹಸ್ಯವಾಗಿದೆ.

ಎಲ್ಲ ಪಕ್ಷೇತರರ ಬೆಂಬಲ ಪಡೆದರೂ ಒಂದು ಮತದ ಕೊರತೆ ಉಂಟಾಗುತ್ತದೆ. ಆದರೆ ಎಲ್ಲ ಪಕ್ಷೇತರರು ಬಿಜೆಪಿ- ಜೆಡಿಎಸ್ ಬೆಂಬಲಿಸುವ ಸಾಧ್ಯತೆಗಳು ಕಡಿಮೆ. ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಇಬ್ಬರು ಶಾಸಕರು ತಮ್ಮತಮ್ಮ ಪಕ್ಷದಿಂದ ದೂರವೇ ಉಳಿದಿದ್ದಾರೆ. ಒಂದು ವೇಳೆ ಎಲ್ಲರೂ ಬೆಂಬಲ ನೀಡಿದರೂ ಕುಪೇಂದ್ರ ರೆಡ್ಡಿ ಬೆಂಬಲಕ್ಕೆ ನಿಲ್ಲುವ ಕಾಂಗ್ರೆಸ್‌ನ ಶಾಸಕ ಯಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಕಾಂಗ್ರೆಸ್‌ನ ಒಂದೇ ಒಂದು ಮತ ರೆಡ್ಡಿ ಅವರಿಗೆ ಬಂದರೂ ಆ ಪಕ್ಷದ ಮೂರನೇ ಅಭ್ಯರ್ಥಿ ಸೋಲುತ್ತಾರೆ. ಮೇಲ್ನೋಟಕ್ಕೆ ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಗೆಲುವು ಸುಲಭ ಅಲ್ಲ. ಹೆಚ್ಚೆಂದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಟೆನ್ಶನ್ ನೀಡಿದ್ದಷ್ಟೇ ಲಾಭ.

ಸಂಖ್ಯಾಬಲ ಹೇಗಿದೆ?

ಸಂಖ್ಯಾಬಲವನ್ನು ನೋಡುವುದಾದರೆ 224 ಶಾಸಕರಲ್ಲಿ ಕಾಂಗ್ರೆಸ್ 135, ಬಿಜೆಪಿ 66, ಜೆಡಿಎಸ್ 19, ಸರ್ವೋದಯ ಕರ್ನಾಟಕ 1, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) 1, ಪಕ್ಷೇತರರಲ್ಲಿ ಇಬ್ಬರು ಶಾಸಕರಿದ್ದಾರೆ. ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್‌ ಹಾಗೂ ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಗೌಡ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಆದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಈ ಮೂವರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ.

ಕೆಆರ್‌ಪಿಪಿ ಶಾಸಕ ಜನಾರ್ದನ ರೆಡ್ಡಿ ಆರಂಭದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವುದಾಗಿ ಹೇಳುತ್ತಿದ್ದರು. ಆದರೆ ಇತ್ತೀಚೆಗೆ ಬಿಜೆಪಿಯತ್ತ ವಾಲಿದ್ದಾರೆ. ರೆಡ್ಡಿ ಅವರನ್ನು ಕಣಕ್ಕಿಳಿಸುವ ಉದ್ದೇಶ ಯಾವುದೇ ಪಕ್ಷಕ್ಕೂ ಇರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಈ ತಂತ್ರವನ್ನು ಹೊತ್ತು ತಂದ ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯ ವಿಧಾನಸೌಧಕ್ಕೆ ಆಗಮಿಸಿ ಎರಡೂ ಪಕ್ಷಗಳ ಪ್ರಮುಖರ ಜತೆ ಚರ್ಚಿಸಿದ್ದರು. ಕೂಡಲೇ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರು.

ಜನಾರ್ದನ ರೆಡ್ಡಿ ಸಹ ಆರಂಭದಲ್ಲಿ ಕಾಂಗ್ರೆಸ್ ಜತೆಗಿರುವುದಾಗಿ ಹೇಳಿದ್ದರು. ಇತ್ತೀಚೆಗೆ, ಬಿಜೆಪಿ ಕಡೆ ಒಲವು ತೋರಿದ್ದಾರೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 45 ಮತಗಳು ಬೇಕಾಗುತ್ತವೆ. ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಬಿಜೆಪಿಯ 21 ಹೆಚ್ಚುವರಿ ಮತಗಳು ದೊರಕಲಿವೆ. ಹೆಚ್ಚುವರಿಯಾಗಿ ಅಗತ್ಯವಿರುವ ಐದು ಮತಗಳನ್ನು ಸೆಳೆಯಲು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಅಡ್ಡ ಮತದಾನದ ಭೀತಿಗೆ ಸಿಲುಕಿದೆ.

ನಮಗೂ ಆತ್ಮಸಾಕ್ಷಿ ಮತಗಳು ಬರುತ್ತವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕುಪೇಂದ್ರ ರೆಡ್ಡಿ ಅವರಿಗೆ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದು, ಅವರಿಗೆ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದು ಬಿಜೆಪಿ ಜೆಡಿಎಸ್‌ ನಾಯಕರು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಟ್ಟಾಗಿ ತಂತ್ರಗಾರಿಕೆ ರೂಪಿಸುತ್ತೇವೆ ಎಂದು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ.

(This copy first appeared in Hindustan Times Kannada website. To read more on Karnataka politics please visit kannada.hindustantimes.com )

IPL_Entry_Point