Mangaluru: ಅನೈತಿಕ ಚಟುವಟಿಕೆ ಆರೋಪ; ಮಂಗಳೂರಿನ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರ ದಾಳಿ
Mangaluru: ರಾಮ ಸೇನೆ ಕಾರ್ಯಕರ್ತರು ಮಂಗಳೂರಿನ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಮಸಾಜ್ ಸೆಂಟರ್‍ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಶಂಕೆಯ ಮೇಲೆ ದಾಳಿ ನಡೆಸಲಾಗಿದೆ.

ಮಂಗಳೂರು: ರಾಮ ಸೇನೆ ಕಾರ್ಯಕರ್ತರು ಮಂಗಳೂರಿನ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ್ದಾರೆ. ಮಸಾಜ್ ಸೆಂಟರ್‍ಗೆ ಬೀಗ ಹಾಕಲಾಗಿದೆ. ಬಸ್ ನಿಲ್ದಾಣದ ಬಳಿಯ ಬಿಲ್ಡಿಂಗ್ ನಲ್ಲಿ ಮಸಾಜ್ ಸೆಂಟರ್ ಇತ್ತು. ಕಲರ್ಸ್ ಎಂಬ ಯುನಿಸೆಕ್ಸ್ ಸೆಲೂನ್‌ನಲ್ಲಿ ಮಸಾಜ್ ಸೆಂಟರ್ ನಡೆಸಲಾಗುತ್ತಿತ್ತು. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಕಾರ್ಯಕರ್ತರ ದಾಳಿಯಿಂದ ಹಲವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಕಲರ್ಸ್ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ದಾಳಿ
ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿ ಬಳಿ ಇರುವ ಕಲರ್ಸ್ ಎಂಬ ಹೆಸರಿನ ಸಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಅನುಮಾನದಿಂದ ರಾಮ ಸೇನೆ ದಾಳಿ ನಡೆಸಿದೆ. ದಾಳಿ ನಡೆಸಿದ್ದಷ್ಟೇ ಅಲ್ಲದೇ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳನ್ನೂ ಹಾಳು ಮಾಡಲಾಗಿದೆ. ಅಲ್ಲಿನ ಮಹಿಳಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಸಾದ್ ಅತ್ತಾವರ ನೇತೃತ್ವದ ರಾಮ ಸೇನೆ ಸಂಘಟನೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಆ ಮಸಾಜ್ ಸೆಂಟರ್‍ಅನ್ನು ಮುಚ್ಚಲಾಗಿದೆ. ಮಸಾಜ್ ಪಾರ್ಲರ್ ಗೆ ಡಿಸಿಪಿ ಸಿದ್ದಾರ್ಥ್ ಗೋಯಲ್ ಭೇಟಿ ನೀಡಿದ್ದಾರೆ.
ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದೇನು?
ಮಂಗಳೂರಿನ ಮಸಾಜ್ ಪಾರ್ಲರಿಗೆ ಯಾವ ಉದ್ದೇಶಕ್ಕೆ ದಾಳಿಯಾಗಿದೆಯೋ ಗೊತ್ತಿಲ್ಲ, ದಾಳಿ ಮಾಡಿದವರನ್ನು ತಕ್ಷಣ ಬಂಧಿಸಲು ಸೂಚಿಸಿದ್ದೇನೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ಅವರು ಉಡುಪಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದು, ಇಂತಹ ಕೃತ್ಯಗಳು ನಡೆಯಬಾರದು ಎಂದರು.
ಪ್ರತಿಯೊಬ್ಬರಿಗೂ ದುಡಿದು ತಿನ್ನುವ ಹಕ್ಕಿದೆ
ಯಾರ ವ್ಯಾಪಾರ, ವ್ಯವಹಾರಕ್ಕೂ ಅಡ್ಡಿ ಸಲ್ಲದು. ಪ್ರತಿಯೊಬ್ಬರಿಗೂ ದುಡಿದು ತಿನ್ನುವ ಹಕ್ಕಿದೆ. ಯಾರೂ ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು. ದಾಳಿಕೋರರನ್ನು ಗುರುತಿಸುತ್ತೇವೆ. ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಅನೈತಿಕವಾಗಿ ಕಾರ್ಯಾಚರಿಸುವ ಪಾರ್ಲರ್ ಗೆಳಿದ್ದರೆ ದೂರು ಕೊಡಿ. ಕಾನೂನು ಕೈಗೆತ್ತಿಕೊಂಡರೆ ಸಹಿಸಲಾಗದು ಎಂದು ಹೇಳಿದರು. ಬಿಜೆಪಿ ಆಡಳಿತದಲ್ಲಿ ಎಷ್ಟು ದರೋಡೆಯಾಗಿತ್ತು? ಬ್ಯಾಂಕ್ ರಾಬರಿ, ಎಟಿಎಂ ಎಷ್ಟು ಕಳ್ಳತನ ಆಗಿತ್ತು? ನಮ್ಮ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕಾಪಡಿದ್ದೇವೆ. ಯಾವುದೇ ದೊಡ್ಡ ಗಲಾಟೆ, ಕೋಮು ಗಲಭೆಗಳಾಗಿಲ್ಲ.
ಬ್ಯಾಂಕುಗಳು ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು
ಬ್ಯಾಂಕುಗಳು ಸೂಕ್ತ ಭದ್ರತಾ ವ್ಯವಸ್ಥೆ ಮಾಡಬೇಕು.ಆದರೆ ಕೋಟೆಕಾರು ಬ್ಯಾಂಕು ಭದ್ರತಾ ಲೋಪವಾಗಿದೆ. ಪೊಲೀಸರು ಎರಡೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿ 12ಕೋಟಿ ರುಪಾಯಿ ಮೌಲ್ಯದ ನಗ, ನಗದು ವಶ ಪಡಿಸಿದ್ದಾರೆ. ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಾನೂನು ಸುವ್ಯವಸ್ತೆ ಹದಗೆಟ್ಟಿರುವುದು ಸತ್ಯಕ್ಕೆ ದೂರವಾದ ವಿಚಾರ. ಸಾಲ ಕೊಟ್ಟ ಸಂಸ್ಥೆಗಳು ಕಾನೂನು ಬಾಹಿರವಾಗಿ ಸಾಲಗಾರರಿಗೆ ಕಿರುಕುಳ ಕೊಡುವಂತಿಲ್ಲ.
ಪೊಲೀಸರಿಗೆ ದೂರು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ಯಾವುದೇ ರಾಜಕೀಯ ಹೇಳಿಕೆ ನೀಡಲಾಗದು. ಈ ನಿಟ್ಟಿನಲ್ಲಿ ಹೇಳಿಕೆ ನೀಡದಂತೆ ಸೂಚನೆಯಿದೆ.ಬಿಜೆಪಿ ಒಳಜಗಳಕ್ಕೂ ನಮಗೂ ಸಂಬಂಧವಿಲ್ಲ. ನಮ್ಮನ್ನು ಟೀಕೆ ಮಾಡಿದ ಬಿಜೆಪಿ ಯನ್ನು ಏನಪ್ಪಾ ನಿಮ್ಮ ಪಕ್ಷ ಹೇಗಿದೆ ಎಷ್ಟು ಚೂರಾಗಿದೆ ಎಂದು ಕೇಳಬಹುದಲ್ವಾ?ಬಿಜೆಪಿಯಲ್ಲಿ ಎಷ್ಟು ಬಾಗಿಲುಗಳಿವೆ? ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.
ವರದಿ: ಹರೀಶ್ ಮಾಂಬಾಡಿ
