Ramadan 2024: ಆತ್ಮಾವಲೋಕನ, ಆತ್ಮಶುದ್ಧಿಯ ಪವಿತ್ರ ರಮಜಾನ್
ರಮಜಾನ್ ಹಬ್ಬ ಬರೀ ಆಚರಣೆಯಲ್ಲ. ಅದೊಂದು ಬದುಕಿನ ಕ್ರಮ. ದೇಹ ಹಾಗೂ ಮನಸ್ಸಿನ ಶುದ್ದೀಕರಣದಕ್ಕೆ ಇದು ದಾರಿಯಾಗಲಿದೆ ಎನ್ನುವುದನ್ನು ವಿಜಯಪುರದ ಸಮೀವುಲ್ಲಾ ಉಸ್ತಾದ್ ಇಲ್ಲಿ ವಿವರಿಸಿದ್ದಾರೆ.
ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾಗಿರುವ ರಮಜಾನ್ ತಿಂಗಳು ವೈಶಿಷ್ಟ್ಯತೆ ಹಾಗೂ ಭಗವಂತನ ಕರುಣಾನುಗ್ರಹದ ಮಾಸವಾಗಿದೆ.
ರೋಜಾ, ಜಕಾತ್ ಮೊದಲಾದ ಧಾರ್ಮಿಕ ಕರ್ತವ್ಯಗಳು ಈ ಪವಿತ್ರ ಮಾಸದಲ್ಲಿಯೇ ಆಚರಣೆಯಾಗುತ್ತವೆ. ಅದೇ ತೆರನಾಗಿ ರಮಜಾನ್ ತಿಂಗಳು ಮುಸ್ಲಿಂ ಬಾಂಧವರಿಗೆ ಆತ್ಮಾವಲೋಕನ ಹಾಗೂ ಆತ್ಮಶುದ್ಧಿಯ ಪವಿತ್ರ ಮಾಸವಾಗಿಯೂ ರಮಜಾನ್ ಗುರುತಿಸಲ್ಪಡುತ್ತದೆ.
ದೈನಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಅನೇಕ ಬಾರಿ ದುಶ್ಚಟಗಳ ದಾಸನಾಗುತ್ತಾನೆ, ಎದುರಾಗುವ ಸಮಸ್ಯೆಗಳ ನಿವಾರಣೆಗಾಗಿ ಅನೇಕ ಚಟಗಳಿಗೆ ಶರಣಾಗುತ್ತಾನೆ, ಒತ್ತಡ ತುಂಬಿದ ಯಾಂತ್ರಿಕ ಬದುಕಿನಲ್ಲಿ ದೇವರ ಸಾಮಿಪ್ಯ ಗಳಿಸಲು ನಮಾಜ್ ಸಹ ನಿರ್ವಹಿಸಲು ವಿಫಲನಾಗುತ್ತಾನೆ. ಆಸ್ತಿ-ಅಂತಸ್ತಿಗಾಗಿ ಜಗಳ, ವ್ಯವಹಾರದಲ್ಲಿ ಲಾಭ ನಷ್ಟದ ಜಂಜಾಟ ಹೀಗೆ ಒಬ್ಬ ಮನುಷ್ಯ ಇವುಗಳೆಲ್ಲವನ್ನೂ ಮರೆತು ಆತ್ಮಶುದ್ಧಿಗೆ ಒಳಪಡುವ ಮಾಸವಾಗಿಯೂ ರಮಜಾನ್ ಗುರುತಿಸಲ್ಪಡುತ್ತದೆ.
30 ದಿನಗಳ ಕಾಲ ಉಪವಾಸ ಭಗವಂತನ ಸಾಮೀಪ್ಯ ದೊರಕಿಸುವ ಜೊತೆಗೆ ದುಶ್ಚಟಗಳನ್ನು ತ್ಯಜಿಸುವಂತೆ ಮಾಡುತ್ತದೆ. ರೋಜಾ ಇರುವ ಮನುಷ್ಯ ಯಾರಿಗೂ ಬೈಯುವುದಿಲ್ಲ, ಜಗಳ ಕಾರುವುದಿಲ್ಲ, ದ್ವೇಷ ಸಾಧಿಸುವುದಿಲ್ಲ, ಕಡ್ಡಾಯವಾಗಿ ನಮಾಜ್ ನಿರ್ವಹಿಸಬೇಕಾಗುತ್ತದೆ, ಹೀಗಾಗಿ ರೋಜಾ ವೃತ ಆಚರಣೆಯಿಂದ ಈ ಎಲ್ಲ ಆತ್ಮಶುದ್ಧಿ ಸಾಧ್ಯವಾಗುತ್ತದೆ.
ಅನೇಕ ಮಸೀದಿಗಳಲ್ಲಿ ಸ್ವಚ್ಛತೆ, ಬಣ್ಣ ಬಳಿಯುವುದು ಇದೇ ಮಾಸದಲ್ಲಿ. ಈ ಕಾರ್ಯಕ್ಕೆ ಅನೇಕ ಯುವಕರು ಸ್ವಯಂಪ್ರೇರಿತವಾಗಿ ತೊಡಗಿಸಿಕೊಂಡು ಸೇವೆಯ ಪಾಠ ಕಲಿಯುವುದು ಇದೇ ಮಾಸದಲ್ಲಿ. ಅದೆ ತೆರನಾಗಿ ಕೆಲವರು `ಐತೆಕಾಫ್' ಎಂಬ ವಿಶಿಷ್ಟ ಧಾರ್ಮಿಕ ವೃತ ಪಾಲನೆಯೂ ಮಾಡುತ್ತಾರೆ, ಈದ್‌ಗಿಂತ 10 ದಿನ ಅಥವಾ 3ದಿನ ಐತೆಕಾಫ್ ಮಾಡಲು ತಾವು ನಿಯ್ಯತ್ ಮಾಡಿರುವಷ್ಟು ದಿನ ಮಸೀದಿಯಲ್ಲಿಯೇ ಉಳಿದು, ಕುಟುಂಬ ಸದಸ್ಯರೂ ಹಾಗೂ ಬಾಹ್ಯ ಜೀವನದ ಸಂಪೂರ್ಣ ನಂಟು ಕಡಿತ ಮಾಡಿಕೊಂಡು ನಮಾಜ್, ಪವಿತ್ರ ಕುರ್‌ಆನ್ ತಿಲಾವತ್ (ಪಠಣ), ತಸಬೀ (ಭಗವಂತನ ನಾಮ ಸ್ಮರಣೆ) ಮಾಡುತ್ತಾರೆ, ಇದು ಸಹ ಬಾಹ್ಯ ಜೀವನ ನಶ್ವರ, ಭಗವಂತನ ಸಾಮಿಪ್ಯವೇ ಅಂತಿಮ ಎಂಬ ಸಂದೇಶ ಸಾರುತ್ತದೆ.
ಉಪವಾಸವೂ ಉಂಟು
ರಮಜಾನ್ ಸಮಯದಲ್ಲಿ ಉಪವಾಸವು ಇಸ್ಲಾಂನ ಐದು ಆಧಾರಸ್ತಂಭಗಳಲ್ಲಿ ಒಂದು ಎಂದೇ ಪರಿಗಣಿತವಾಗಿದೆ. ಇದು ಎಲ್ಲಾ ಮುಸ್ಲಿಮರಿಗೆ ಕಡ್ಡಾಯ ಪೂಜಾ ಮೂಲ ಕರ್ತವ್ಯವೂ ಹೌದು. ಉಪವಾಸ ಕೇವಲ ಶಾರೀರಿಕ ಕ್ರಿಯೆಯಲ್ಲ. ಇದು ಜನರನ್ನು ಅಲ್ಲಾಹನಿಗೆ ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಆಧ್ಯಾತ್ಮಿಕ ಕ್ರಿಯೆಯಾಗಿದೆ ಎನ್ನುವುದು ಹಿರಿಯರ ನುಡಿ.
ರಮಜಾನ್ ಸಮಯದಲ್ಲಿ ಅಲ್ಲಾಹನಿಗೆ ಭಕ್ತಿಯನ್ನು ತೋರಿಸಲಾಗುತ್ತದೆ. ಇದು ಅಲ್ಲಾಹನು ಅವರಿಗೆ ನೀಡಿದ ಆಶೀರ್ವಾದಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಹಾಗಾಗಿ ಈ ತಿಂಗಳಲ್ಲಿ ಮುಸಲ್ಮಾನರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಉಪವಾಸ ಮೊದಲಾದ ಕ್ರಿಯೆ ಮಾಡುತ್ತಾರೆ. ಇದು ಪ್ರತಿ ಕುಟುಂಬದಲ್ಲೂ ನಡೆದುಕೊಂಡು ಬರುತ್ತದೆ.
ರಮಜಾನ್ ಸಮಯದಲ್ಲಿ, ಜನರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಅವರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸುಹೂರ್ ಎಂಬ ಊಟವನ್ನು ಸೇವಿಸುತ್ತಾರೆ, ಇದು ದಿನಕ್ಕೆ ಶಕ್ತಿ ಒದಗಿಸುವ ಉದ್ದೇಶ ಹೊಂದಿದೆ. ನಂತರ ಅವರು ದಿನವಿಡೀ ಉಪವಾಸ ಮಾಡುತ್ತಾರೆ, ಸೂರ್ಯಾಸ್ತದವರೆಗೆ ಆಹಾರ, ಪಾನೀಯ ಮತ್ತು ಇತರ ದೈಹಿಕ ಅಗತ್ಯಗಳಿಂದ ದೂರವಿರುವುದು ಈ ಅವಧಿಯ ವಿಶೇಷ.
ಸಾವಿನ ಸ್ವಾದ ಪ್ರತಿಯೊಬ್ಬರು ಸವಿಯಲೇಬೇಕು
ಈ ಒಂದು ಹಾದಿಯಲ್ಲಿ ನಡೆದರೆ ಮಾನವ ತನ್ನ ಯಾಂತ್ರಿಕ ಜೀವನದಲ್ಲಿಯೂ ಪರಿವರ್ತನೆಗೆ ನಾಂದಿಯಾಗುತ್ತದೆ. ಬದುಕಿನ ಜೊತೆ ಮಾನವನ ಒಡನಾಟ ಯಾವ ರೀತಿ ಇದೆ ಎಂದರೆ ಈ ಬದುಕೇ ಶಾಶ್ವತ ಎನ್ನುವಂತಿದೆ, ಅದಕ್ಕಾಗಿಯೇ ದಿನನಿತ್ಯ ಅಪರಾಧಗಳು, ಮಾನವರ ಶೋಷಣೆ ನಡೆಯುತ್ತಲೇ ಇದೆ. ಆದರೆ ರಮಜಾನ್ ಮಾಸದಲ್ಲಿ ಕೈಗೊಳ್ಳುವ ಆಚರಣೆಗಳು `ಈ ಬದುಕು ನಶ್ವರ, ಎಲ್ಲರಿಗೂ ಅನ್ವಯ ಎಂದು ಸಾರುತ್ತವೆ.
ಲೇಖನ: ಸಮೀವುಲ್ಲಾ ಉಸ್ತಾದ್, ವಿಜಯಪುರ