ಕನ್ನಡ ಸುದ್ದಿ  /  ಕರ್ನಾಟಕ  /  Ramadan 2024: ಅಲ್ಲಾಹುವಿನ ಕೃಪಾಶೀರ್ವಾದದ ಪವಿತ್ರ‌ ರಾತ್ರಿ ಲೈಲತ್ -ಉಲ್- ಕದರ್, ಏನಿದರ ವಿಶೇಷ

Ramadan 2024: ಅಲ್ಲಾಹುವಿನ ಕೃಪಾಶೀರ್ವಾದದ ಪವಿತ್ರ‌ ರಾತ್ರಿ ಲೈಲತ್ -ಉಲ್- ಕದರ್, ಏನಿದರ ವಿಶೇಷ

Laylat ul Qadr ರಮಜಾನ್ ತಿಂಗಳಲ್ಲಿ ಹತ್ತು ದಿನಗಳ ಬೆಸ ರಾತ್ರಿಗಳನ್ನು ಮುಸ್ಲಿಂರು `ತಾಕ್ ರಾತ್' ಎಂದು ಭಗವಂತನ ಸ್ಮರಣೆಯಲ್ಲಿಯೇ ರಾತ್ರಿ ಕಳೆಯುವುದು ರೂಢಿ.ಲೇಖನ: ಸಮೀವುಲ್ಲಾ ಉಸ್ತಾದ, ವಿಜಯಪುರ

ಲೈಲತ್ -ಉಲ್- ಕದರ್
ಲೈಲತ್ -ಉಲ್- ಕದರ್

ಜಗತ್ತಿಗೆ ಮಾನವೀಯತೆ, ಕರುಣೆ, ಭಗವಂತನ ಸಾಮಿಪ್ಯಕ್ಕೆ ಸರಿ ದಾರಿ ತೋರುವ ಮುಸ್ಲಿಂರ ಪವಿತ್ರ ಗ್ರಂಥ ಕುರ್‌ಆನ್ ತಿಂಗಳು ಅಲ್ಲಾಹುವಿನಿಂದ ಅವತರಣಿಕೆಯಾದ ಪವಿತ್ರ ಮಾಸವೇ ರಮಜಾನ್.

ಆದರೆ ಯಾವ ದಿನದಂದು ಈ ಪವಿತ್ರ ಕುರ್‌ಆನ್ ಪ್ರಥಮ ಬಾರಿಗೆ ಭೂಮಿಗೆ ಅವತರಣಿಕೆಯಾಯಿತು ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಆದರೆ ಪವಿತ್ರ ರಮಜಾನ್ ತಿಂಗಳ ಕೊನೆಯ 10 ದಿನಗಳ ಬೆಸ ರಾತ್ರಿಯಲ್ಲಿ ಕುರ್‌ ಆನ್ ವಾಣಿಗಳು ಭೂಮಿಗೆ ಬಂದವು.

ಹೀಗಾಗಿ ರಮಜಾನ್ ತಿಂಗಳಲ್ಲಿ ಈ ಹತ್ತು ದಿನಗಳ ಬೆಸ ರಾತ್ರಿಗಳನ್ನು ಮುಸ್ಲಿಂರು `ತಾಕ್ ರಾತ್' ಎಂದು ಭಗವಂತನ ಸ್ಮರಣೆಯಲ್ಲಿಯೇ ರಾತ್ರಿ ಕಳೆಯುವುದು ರೂಢಿ.

ಟ್ರೆಂಡಿಂಗ್​ ಸುದ್ದಿ

ರಮಜಾನ್ ಕೊನೆಯ 10 ದಿನಗಳ ಬೆಸರಾತ್ರಿ ಅಂದರೆ 21, 23,25,27 ಅಥವಾ 29 ರಾತ್ರಿಗಳಲ್ಲಿಯೇ ಒಂದು ರಾತ್ರಿ ಲೈಲತ್-ಉಲ್-ಕದ್ರ್ ರಾತ್ರಿಯಾಗಿದೆ. ಹೀಗಾಗಿ ಈ ಎಲ್ಲ ರಾತ್ರಿಗಳಲ್ಲಿಯೂ ಮುಸ್ಲಿಂ ಬಾಂಧವರು ಅಲ್ಲಾಹುವಿನ ಅನುಗ್ರಹಕ್ಕೆ ಪಾತ್ರರಾಗಲು ಜಾಗರಣೆ ಮಾಡುತ್ತಾರೆ.

ರೋಜಾ, ತರಾವೀಹ್ ನಮಾಜ್‌ನಂತೆ ಕೊನೆಯ ಹತ್ತು ದಿನಗಳ ಈ ಆಚರಣೆ ಸಹ ಅತ್ಯಂತ ಧಾರ್ಮಿಕ ಶ್ರೇಷ್ಠತೆ ಪಡೆದುಕೊಂಡಿದೆ. ಇಷ್ಟಾರ್ಥಗಳು, ಪ್ರಾರ್ಥನೆಗಳು ಫಲಿಸುವ ಪವಿತ್ರ ಶಕ್ತಿಯ ರಾತ್ರಿ ಎಂದು ಈ ಲೈಲತ್-ಉಲ್-ಕದ್ರ್ ರಾತ್ರಿಯನ್ನು ಕರೆಯುತ್ತಾರೆ.

ತರಾವೀಹ್ ನಮಾಜ್ ನಂತರ ಆಚರಣೆ ಆರಂಭವಾಗುತ್ತದೆ, ಕೆಲವರು ನಫೀಲ್ ನಮಾಜ್ ಸಲ್ಲಿಸಿದರೆ, ಇನ್ನೂ ಕೆಲವರು ಪವಿತ್ರ ಕುರ್‌ಆನ್ ತಿಲಾವತ್ (ಪಠಣ) ಮಾಡುತ್ತಾರೆ, ಇನ್ನೂ ಕೆಲವರು ತಸಬೀ (ಭಗವಂತನ ನಾಮ ಸ್ಮರಣೆ) ಪಠಿಸುತ್ತಾ ಕುಳಿತುಕೊಳ್ಳುತ್ತಾರೆ, ಅನೇಕ ಮಸೀದಿಗಳಲ್ಲಿ ಈ ಸಂದರ್ಭದಲ್ಲಿ ಮೌಲಾನಾಗಳಿಂದ ಬಯಾನ್ ನಡೆಯುತ್ತದೆ.

ಈ ದಿನದಿಂದಲೇ ಐತೇಕಾಫ್ ಆರಂಭವಾಗುತ್ತದೆ, 10 ದಿನಗಳ ಕಾಲ ಕೆಲವರು ದೈನಂದಿನ ಜೀವನದ ಸಂಪರ್ಕ ಕಡಿತಗೊಳಿಸಿಕೊಂಡು ಮಸೀದಿಯಲ್ಲಿಯೇ ಒಂದು ನಿರ್ದೀಷ್ಟ ಸ್ಥಳವನ್ನು ಗುರುತಿಸಿ ಅಲ್ಲಿಯೇ ನಮಾಜ್, ಆರಾಧನೆ ನಡೆಸುತ್ತಾರೆ.

ಪವಿತ್ರ ಕುರ್‌ಆನ್‌ ನನ್ನು ಮೊದಲು ಸ್ವರ್ಗದಿಂದ ಜಗತ್ತಿಗೆ ಕಳುಹಿಸಲಾಯಿತು ಎಂದು ಮುಸ್ಲಿಮರು ನಂಬುವ ರಾತ್ರಿಯೇ ಲೈಲತ್-ಉಲ್-ಕದ್ರ್. ಇದು ಸಾವಿರ ತಿಂಗಳ ಪೂಜೆಗಿಂತ ಉತ್ತಮವಾಗಿದೆ ಎಂದು ಧಾರ್ಮಿಕ ಜ್ಞಾನವುಳ್ಳವರು ವಿವರಿಸುತ್ತಾರೆ. ದೇವರ ಆಶೀರ್ವಾದ ಮತ್ತು ಕರುಣೆ ಹೇರಳವಾಗಿ ಈ ರಾತ್ರಿ ಮನುಕುಲಕ್ಕೆ ಪ್ರವೇಶಿಸುತ್ತದೆ. ಪಾಪಗಳ ಕ್ಷಮಾಪಣೆಯೂ ಈ ರಾತ್ರಿಯಂದೇ ನಡೆಯುತ್ತದೆ, ಒಂದು ರೀತಿ ವಾರ್ಷಿಕ ತೀರ್ಪಿನ ರಾತ್ರಿ ಎಂದೇ ಮುಸ್ಲಿಂ ಬಾಂಧವರು ನಂಬುತ್ತಾರೆ.

ಅರೇಬಿಕ್ ಭಾಷೆಯಲ್ಲಿ ಖಾದರ್ ಅಂದರೆ ಯಾವುದೋ ಅಥವಾ ಹಣೆಬರಹದ ಅಳತೆ ಮತ್ತು ಮಿತಿ ಅಥವಾ ಮೌಲ್ಯ ಎಂದು ಉಲ್ಲೇಖಿಸಲಾಗಿದೆ.

ಪ್ರತಿಯೊಬ್ಬ ವ್ಯಕ್ತಿಯ ವಾರ್ಷಿಕ ಭವಿಷ್ಯವನ್ನು ದೇವರು ನಿರ್ಧರಿಸುತ್ತಾನೆ ಎಂಬ ಕಾರಣಕ್ಕೆ ಇದನ್ನು ಅಲ್-ಕದ್ರ್ ಎಂದು ಕರೆಯಲಾಯಿತು ಎಂದು ಧಾರ್ಮಿಕ ತಜ್ಞರು ಹೇಳುತ್ತಾರೆ.

ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಅವರು ಹೇಳುವ ಪ್ರಕಾರ `ಯಾರು ನಂಬಿಕೆಯಿಂದ ಮತ್ತು ಪ್ರತಿಫಲವನ್ನು ಬಯಸಿ ಶಕ್ತಿಯ ರಾತ್ರಿಯಲ್ಲಿ ನಿಂತರೆ, ಅವರ ಹಿಂದಿನ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು ನುಡಿದಿದ್ದಾರೆ.

ಖುರಾನ್‌ನಲ್ಲಿ ಲೈಲತ್ ಅಲ್-ಕದ್ರ್ ನ ನಿರ್ದಿಷ್ಟ ದಿನವನ್ನು ಉಲ್ಲೇಖಿಸಿಲ್ಲ, ಪ್ರವಾದಿ ಮುಹಮ್ಮದ್ ಅವರು ಕನಸಿನಲ್ಲಿ ದೇವರಿಂದ ಲೈಲತ್ ಅಲ್-ಖದರ್ ನಿಖರವಾದ ದಿನಾಂಕದ ಮಾಹಿತಿಯನ್ನು ಪಡೆದರು. ಆದನ್ನು ಹೇಳುವ ಸಂದರ್ಭದಲ್ಲಿ ಅಲ್ಲಿ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿರುವುದನ್ನು ಗಮನಿಸಿ ಅವರ ಗಮನ ಆ ಕಡೆ ತಿರುಗಿತು. ಹೀಗಾಗಿ ದಿನಾಂಕದ ಮಾಹಿತಿಯನ್ನು ಅಲ್ಲಾಹ ಅವರಿಂದ ವಾಪಾಸ್ಸು ಪಡೆದುಕೊಂಡ ಎನ್ನಲಾಗಿದೆ.

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಇಸ್ಲಾಮಿಕ್ ದಿನವು ಮಗ್ರಿಬ್ ಪ್ರಾರ್ಥನೆಯಲ್ಲಿ (ಸೂರ್ಯಾಸ್ತ) ಪ್ರಾರಂಭವಾಗುತ್ತದೆ. ಶಕ್ತಿಯ ರಾತ್ರಿ ಮಗ್ರಿಬ್‌ನಿಂದ ಫಜ್ರ್ ಪ್ರಾರ್ಥನೆಯವರೆಗೆ (ಬೆಳಗ್ಗೆ) ವಿಸ್ತರಿಸುತ್ತದೆ.

-ಸಮೀವುಲ್ಲಾ ಉಸ್ತಾದ, ವಿಜಯಪುರ