Viral News: ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುವಾಗ ಎದ್ದು ಕುಳಿತ, ರಾಮನಗರ ಬಳಿ ವಿಚಿತ್ರ ಘಟನೆ !
Ra̧managar News ರಾಮನಗರ ಜಿಲ್ಲೆಯ ಹುಚ್ಚಯ್ಯನದೊಡ್ಡಿಯಲ್ಲಿ ಮೃತ ವ್ಯಕ್ತಿ ಎದ್ದುಕುಳಿತು ಕೆಲ ಹೊತ್ತಿನ ನಂತರ ಮತ್ತೆ ಜೀವ ಬಿಟ್ಟಿರುವ ಘಟನೆ ವರದಿಯಾಗಿದೆ.
ರಾಮನಗರ: ಆತನಿಗೆ ಅನಾರೋಗ್ಯ ಕಾಡುತ್ತಿತ್ತು. ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿರಲಿಲ್ಲ. ವೈದ್ಯರು ಆತ ಮೃತಪಟ್ಟಿದ್ಧಾನೆ ಎನ್ನುವುದನ್ನೂ ಘೋಷಿಸಿದ್ದರು. ಮನೆಯವರು ದೇಹವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಇರಿಸಿದ್ದರು. ಕುಟುಂಬದವರು, ಪರಿಚಯಸ್ಥರ ದರ್ಶನಕ್ಕೂ ಅವಕಾಶ ಮಾಡಿಕೊಟ್ಟಿದ್ದರು. ಆರು ಗಂಟೆ ಕಾಲ ದೇಹವನ್ನು ಮನೆ ಮುಂದೆ ಇರಿಸಿದಾಗ ಎಲ್ಲರೂ ನೋಡಿಕೊಂಡು ಹೋಗಿದ್ದಾರೆ. ಅಂತ್ಯಕ್ರಿಯೆಗೆಂದು ದೇಹವನ್ನು ಸಂಬಂಧಿಕರು ಚಟ್ಟದಲ್ಲಿ ಇರಿಸಿಕೊಂಡು ಹೋಗಲು ಅಣಿಯಾಗಿದ್ದರು. ಸ್ವಲ್ಪ ದೂರ ಹೋಗ ತಕ್ಷಣ ಚಟ್ಟದಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಕುಳಿತು ಬಿಟ್ಟ. ಇದನ್ನು ಕಂಡವರೂ ದಂಗಾದರು. ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರು. ಹೃದಯಾಘಾತವಾಗಿದೆ ಎನ್ನುವ ಮಾಹಿತಿ ನೀಡಿದರೂ ಆತ ತೀರಿಕೊಂಡಿರುವುದಾಗಿ ವೈದ್ಯರು ಘೋಷಿಸಿದರು.
ಇಂತಹ ಸಾವು ಬದುಕಿನ ಅಪೂರ್ವ ಸನ್ನಿವೇಶದಲ್ಲಿ ವ್ಯಕ್ತಿಯೊಬ್ಬ ಸಿಲುಕಿದ್ದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹುಚ್ಚಯ್ಯನ ದೊಡ್ಡಿ ಗ್ರಾಮದಲ್ಲಿ. ಆತನ ಹೆಸರು ಶಿವರಾಮು. ವಯಸ್ಸು 55 . ಕೃಷಿಕನಾಗಿದ್ದ ಶಿವರಾಮುಗೆ ಆರೋಗ್ಯ ಸರಿಯಿರಲಿಲ್ಲ. ಇದರಿಂದ ಆಗಾಗ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಲಾಗಿತ್ತು. ಈ ಬಾರಿ ಅನಾರೋಗ್ಯ ತೀವ್ರಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚನ್ನಪಟ್ಟಣದಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಶಿವರಾಮು ಮೃತಪಟ್ಟಿರುವುದಾಗಿ ಘೋಷಿಸಿ ದೇಹವನ್ನು ಕುಟುಂಬದವರಿಗೆ ಸೋಮವಾರ ಬೆಳಿಗ್ಗೆಯೆ ನೀಡಿದ್ದರು.
ಉಸಿರಾಟ ನಿಲ್ಲಿಸಿದ್ದ ಶಿವರಾಮು ದೇಹವನ್ನು ಕುಟುಂಬಸ್ಥರು ಹುಚ್ಚಯ್ಯನದೊಡ್ಡಿ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದರು. ಮನೆಯವರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನವೂ ಮುಗಿಲುಮುಟ್ಟಿತ್ತು. ಊರವರು, ಸಂಬಂಧಿಕರು ಮನೆಯ ಬಳಿ ಸೇರಿದ್ದರು. ದೇಹವನ್ನು ಮನೆಯಲ್ಲಿಯೇ ಇರಿಸಿ ದರ್ಶನಕ್ಕೆ ಅವಕಾಶವನ್ನೂ ಮಾಡಿಕೊಡಲಾಗಿತ್ತು.
ಮಧ್ಯಾಹ್ನ 12ರ ಹೊತ್ತಿಗೆ ಎಲ್ಲಾ ಶಾಸ್ತ್ರಗಳನ್ನು ಮುಗಿಸಿ ಶಿವರಾಮು ಪಾರ್ಥಿವ ಶರೀರವನ್ನು ಜಮೀನಿನ ಬಳಿ ಅಂತ್ಯಕ್ರಿಯೆಗೆಂದು ಚಟ್ಟದ ಮೂಲಕ ತೆಗೆದುಕೊಂಡು ಹೋಗಲಾಗಿತ್ತು. ಮಾರ್ಗ ಮಧ್ಯೆದಲ್ಲಿಯೇ ಶಿವರಾಮು ಎದ್ದು ಕುಳಿತೇ ಬಿಟ್ಟರು. ಇದನ್ನು ಕಂಡವರಿಗೂ ಆಶ್ಚರ್ಯ. ಮನೆಯವರಿಗಂತೂ ದಿಗ್ಭ್ರಮೆ. ಮೃತಪಟ್ಟಿದ್ದಾರೆ ಎಂದು ಘೋಷಿಸಿ ಆರೇಳು ಗಂಟೆ ನಂತರ ಎದ್ದು ಕುಳಿತಿದ್ದನ್ನು ನೋಡಿ ಖುಷಿಯೂ ಮನೆ ಮಾಡಿತ್ತು. ಕೊನೆಗೆ ಊರಿನಲ್ಲಿಯೇ ಇದ್ದ ವೈದ್ಯರೊಬ್ಬರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಲು ಮುಂದಾದರು. ಆಗ ತೀವ್ರ ಹೃದಯಾಘಾತವಾಗಿರುವ ಶಿವರಾಮು ಪ್ರಜ್ಞೆ ತಪ್ಪಿದ್ದಾರೆ. ಈಗ ಎಚ್ಚರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕೆಲವೇ ಕ್ಷಣದಲ್ಲಿ ಶಿವರಾಮು ಮತ್ತೆ ಕುಸಿದು ಬಿದ್ದಿದ್ದಾರೆ. ಆಗ ವೈದ್ಯರು ತಪಾಸಣೆ ಮಾಡಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆಂದು ಕರೆದೊಯ್ದಿದ್ದು ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ. ದೇಹವನ್ನು ಆನಂತರ ಊರಿಗೆ ತರಲಾಗಿದೆ.
ಒಮ್ಮೆ ಸತ್ತವರು ಬದುಕಿ ಬಂದಿರುವ ಕಾರಣಕ್ಕೆ ಮನೆಯವರಿಗೂ ನಂಬಲು ಆಗುತ್ತಿಲ್ಲ. ವೈದ್ಯರ ಮಾತಿನಂತೆ ಅಲ್ಲಿಂದ ದೇಹವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಯೇ ದೇಹವನ್ನು ಕೆಲ ಹೊತ್ತು ಇಟ್ಟುಕೊಂಡು ಮತ್ತೇನಾದರೂ ಬದುಕಬಹುದಾ ಎಂದು ಮನೆಯವರು ನೋಡಿದ್ದಾರೆ. ಸಂಜೆಯ ಹೊತ್ತಿಗೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಇಂತಹ ಹಲವಾರು ಘಟನೆಗಳು ನಡೆದಿವೆ. ಮೃತಪಟ್ಟಿದ್ಧಾರೆ ಎಂದು ಘೋಷಿಸಿದವರು ಅಂತ್ಯಕ್ರಿಯೆಗೂ ಮುನ್ನ ಎದ್ದುಕುಳಿತಿರುವ ಸನ್ನಿವೇಶವಿದೆ. ಮೃತಪಟ್ಟ ನಂತರ ದೇಹ ತೆಗೆದುಕೊಂಡು ಊರಿಗೆ ಹೋಗುವಾಗಲೂ ಮಾರ್ಗ ಮಧ್ಯೆ ಬದುಕಿರುವ ಘಟನೆಗಳೂ ಇವೆ. ಇದು ಹೀಗೆಯೇ ಆಗಿದೆ. ಆದರೆ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿ ಮೃತಪಟ್ಟಿರುವುದು ನಂತರ ಖಚಿತವಾಗಿದೆ ಎಂದು ವೈದ್ಯರು ಹೇಳುತ್ತಾರೆ.
ವಿಭಾಗ