Ramanagara: ರಾಮನಗರದಲ್ಲಿ ಶಕ್ತಿ ಯೋಜನೆ ಚಾಲನೆಗೆ ಕಿರಿಕ್​; ಶಾಸಕರು, ಸಂಸದರ ಭಾವಚಿತ್ರ ಇಲ್ಲದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಿಡಿ
ಕನ್ನಡ ಸುದ್ದಿ  /  ಕರ್ನಾಟಕ  /  Ramanagara: ರಾಮನಗರದಲ್ಲಿ ಶಕ್ತಿ ಯೋಜನೆ ಚಾಲನೆಗೆ ಕಿರಿಕ್​; ಶಾಸಕರು, ಸಂಸದರ ಭಾವಚಿತ್ರ ಇಲ್ಲದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಿಡಿ

Ramanagara: ರಾಮನಗರದಲ್ಲಿ ಶಕ್ತಿ ಯೋಜನೆ ಚಾಲನೆಗೆ ಕಿರಿಕ್​; ಶಾಸಕರು, ಸಂಸದರ ಭಾವಚಿತ್ರ ಇಲ್ಲದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕಿಡಿ

Shakti Scheme: ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಪೆಂಡಾಲ್ ನಲ್ಲಿ ಹಾಕಿರುವ ಬ್ಯಾನರ್​​ನಲ್ಲಿ ಸ್ಥಳೀಯ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರ ಭಾವಚಿತ್ರ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತವಾಯಿತು.

ರಾಮನಗರದಲ್ಲಿ ಶಕ್ತಿ ಯೋಜನೆ ಚಾಲನೆ
ರಾಮನಗರದಲ್ಲಿ ಶಕ್ತಿ ಯೋಜನೆ ಚಾಲನೆ

ರಾಮನಗರ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಈ ಐದು ಯೋಜನೆಗಳಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ (Shakti Scheme) ಇಂದು ರಾಜ್ಯಾದ್ಯಂತ ಚಾಲನೆ ದೊರೆತಿದೆ ಹಾಗೂ ಅಭೂತಪೂರ್ವ ಸ್ಪಂದನೆಯೂ ಸಿಕ್ಕಿದೆ.

ಆದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರು ಜಿಲ್ಲೆ ರಾಮನಗರದಲ್ಲಿ (Ramanagara) ಈ ಯೋಜನೆ ಜಾರಿಗೆ ಕಿರಿಕ್ಕು ಉಂಟಾಗಿದೆ. ಸಮಾರಂಭ ನಡೆಯುವ ಕಾರ್ಯಕ್ರಮದಲ್ಲಿ ಬ್ಯಾನರ್​​ನಲ್ಲಿ ರಾಮನಗರ ಕ್ಷೇತ್ರದ ಶಾಸಕರು ಮತ್ತು ಬೆಂಗಳೂರು ಗ್ರಾಮಾಂತರ ಸಂಸದರ ಭಾವಚಿತ್ರ ಹಾಕಿಲ್ಲ. ಇದು ಶಿಷ್ಠಾಚಾರ ಉಲ್ಲಂಘನೆ ಎಂದು ಆರೋಪಿಸಿ, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಪೆಂಡಾಲ್ ನಲ್ಲಿ ಹಾಕಿರುವ ಬ್ಯಾನರ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಅವರ ಭಾವಚಿತ್ರವನ್ನು ಮಾತ್ರ ಹಾಕಲಾಗಿದೆ‌. ಆದರೆ ಸ್ಥಳೀಯ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರ ಭಾವಚಿತ್ರ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತವಾಯಿತು.

ಅಧಿಕಾರಿಗಳ ಈ ನಡೆಗೆ ಮಾಜಿ ಶಾಸಕ ಕೆ. ರಾಜು, ಕಾಂಗ್ರೆಸ್ ಮುಖಂಡರಾದ ಪುಟ್ಟರಾಜು, ಶಿವಲಿಂಗಯ್ಯ, ಶಿವಶಂಕರ್, ಪಾರ್ವತಮ್ಮ ಕೆ. ರಮೇಶ್, ವಿ.ಎಚ್. ರಾಜು, ಅನಿಲ್ ಜೋಗಿಂದರ್, ಜಯಮ್ಮ, ಉಮಾಶಂಕರ್, ಬಸವನಪುರ ನರಸಿಂಹ ಮೂರ್ತಿ, ರೈತ ಸಂಘದ ತುಂಬೇನಹಳ್ಳಿ ಶಿವಕುಮಾರ್ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು ಶಾಸಕರು ಮತ್ತು ಸಂಸದರ ಭಾವಚಿತ್ರ ಹಾಕಿದರೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಾಗಿ ಪಟ್ಟು ಹಿಡಿದರು. ಹೊಸ ಬ್ಯಾನರ್ ಮಾಡಿಸಿಕೊಂಡು ಬಂದು ಹಾಕುವವರೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಅಂತಿಮವಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಬ್ಯಾನರ್ ಬದಲಾಯಿಸಲು ಒಪ್ಪಿಕೊಂಡರು. ಸ್ಥಳೀಯ ಜನಪ್ರತಿನಿಧಿಗಳು ಇರುವ ಹೊಸ ಬ್ಯಾನರ್ ಮಾಡಿಸಿಕೊಂಡು ಬಂದ ಬಳಿಕವೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ಸಿಬ್ಬಂದಿಯನ್ನು ಕಳಿಸಿ ಶಾಸಕರು ಮತ್ತು ಸಂಸದರ ಭಾವಚಿತ್ರ ಇರುವ ಹೊಸ ಬ್ಯಾನರ್ ಮಾಡಿಸಿಕೊಂಡು ಬರಲು ಸೂಚಿಸಿದರು.

ಈ ಗೊಂದಲದಿಂದ ಬೆಳಿಗ್ಗೆ 11.30ಕ್ಕೆ ಚಾಲನೆ ಸಿಗಬೇಕಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನ 12.30 ಗಂಟೆಯಾದರೂ ಆರಂಭವಾಗಲಿಲ್ಲ. ಹೊಸ ಬ್ಯಾನರ್ ಅಳವಡಿಸಿದ ನಂತರ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು.

ಬಳಿಕ ರಾಮನಗರದಲ್ಲೂ ಮಹಿಳೆಯರು ಬಸ್​​ಗಳಲ್ಲಿ ಸಡಗರ ಸಂಭ್ರಮದಿಂದ ಪ್ರಯಾಣ ಬೆಳೆಸಿದರು. ಸರ್ಕಾರದ ಯೋಜನೆಯನ್ನು ಶ್ಲಾಘಿಸಿದರು. ಇದರಿಂದ ಕಾರ್ಮಿಕರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ಆಸ್ಪತ್ರೆಗಳಿಗೆ ಹೋಗುವವರಿಗೆ ಅನುಕೂಲವಾಗುತ್ತದೆ ಎಂದರು.

ವರದಿ: ಎಚ್​ ಮಾರುತಿ

Whats_app_banner