Gruha Lakshmi: ಕನಕಪುರದ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಡಿಕೆಶಿ ದಿಢೀರ್ ಭೇಟಿ: ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆ ಪರಿಶೀಲನೆ
DK shivakumar: ಡಿಕೆಶಿ ಅವರು ಕನಕಪುರದ ಎಸ್ಎಲ್ಎನ್ ರಸ್ತೆಯ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಅವಕ್ಕಾದರು. ತಮ್ಮ ಹೆಸರು ನೋಂದಣಿ ಮಾಡಲು ಬಂದಿದ್ದ ಮಹಿಳೆಯರು ಕೂಡ ಸೇವಾ ಕೇಂದ್ರದಲ್ಲಿ ಡಿಸಿಎಂ ಅವರನ್ನು ಕಂಡು ಆಶ್ಚರ್ಯಚಕಿತರಾದರು.
ರಾಮನಗರ: ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಕನಕಪುರದ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ದಿಢೀರ್ ಭೇಟಿ ಕೊಟ್ಟು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು.
ಡಿಕೆಶಿ ಅವರು ಕನಕಪುರದ ಎಸ್ಎಲ್ಎನ್ ರಸ್ತೆಯ ಕರ್ನಾಟಕ ಒನ್ ಕೇಂದ್ರಕ್ಕೆ ಶುಕ್ರವಾರ (ಜುಲೈ 21) ಸಂಜೆ ಭೇಟಿ ಕೊಟ್ಟಾಗ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಅವಕ್ಕಾದರು. ತಮ್ಮ ಹೆಸರು ನೋಂದಣಿ ಮಾಡಲು ಬಂದಿದ್ದ ಮಹಿಳೆಯರು ಕೂಡ ಸೇವಾ ಕೇಂದ್ರದಲ್ಲಿ ಡಿಸಿಎಂ ಅವರನ್ನು ಕಂಡು ಆಶ್ಚರ್ಯಚಕಿತರಾದರು.
ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತಿದೆ? ಅಲ್ಲಿನ ಸಿಬ್ಬಂದಿ ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಾ? ವಿಳಂಬ ಮಾಡುತ್ತಿದ್ದಾರಾ? ಕುಂಟು ನೆಪ ಹೇಳುತ್ತಿದ್ದಾರಾ? ಮನೆ ಯಜಮಾನಿಯರಿಗೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ? ನೋಂದಣಿ ಪ್ರಕ್ರಿಯೆ ಸರಳವಾಗಿದೆಯಾ ಎಂಬುದರ ಬಗ್ಗೆ ನೋಂದಣಿದಾರರಿಂದಲೇ ಖುದ್ದು ಮಾಹಿತಿ ಪಡೆದರು.
ಅಗತ್ಯ ದಾಖಲೆ ಸಲ್ಲಿಸಲು ತನಗಿರುವ ವೈಯಕ್ತಿಕ ತಾಂತ್ರಿಕ ತೊಡಕು ಬಗ್ಗೆ ಮಹಿಳೆಯೊಬ್ಬರು ನೀವೇದಿಸಿಕೊಂಡಾಗ ಅದಕ್ಕೆ ಪರಿಹಾರವನ್ನು ಡಿಸಿಎಂ ಅವರು ಸೂಚಿಸಿದರು. ಸಿಬ್ಬಂದಿ ಜತೆ ಕಂಪ್ಯೂಟರ್ ಮುಂದೆ ಕುಳಿತು ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು. ಕೆಲವು ಮಹಿಳೆಯರಿಗೆ ನೋಂದಣಿ ಪತ್ರವನ್ನೂ ವಿತರಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, "ಕಾಂಗ್ರೆಸ್ ಪಕ್ಷದ ಮಹತ್ವದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಗ್ಯಾರಂಟಿ ನೋಂದಣಿ ಪ್ರಕ್ರಿಯೆಯು ನಿರಾತಂಕವಾಗಿ ಮುಂದುವರಿಯುತ್ತಿದ್ದು, ಮಾಸಿಕ 2ಸಾವಿರ ರೂ. ಸಹಾಯಧನ ನೀಡುವ ಈ ಯೋಜನೆಗೆ ನನ್ನ ತಾಯಂದಿರು, ಸಹೋದರಿಯರು ಖುಷಿಯಿಂದ ರಿಜಿಸ್ಟರ್ ಮಾಡಿಸುತ್ತಿದ್ದಾರೆ. ಇಂದು ಕನಕಪುರದ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿದೆ. ಪಾರದರ್ಶಕ ಹಾಗೂ ಲಂಚಮುಕ್ತವಾಗಿ ನೋಂದಣಿ ಪ್ರಕ್ರಿಯೆ ನಡೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ" ಎಂದಿದ್ದಾರೆ.