Ramanagara News: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಟ್ರಕ್; ತಪ್ಪಿದ ಅನಾಹುತ
ಕನ್ನಡ ಸುದ್ದಿ  /  ಕರ್ನಾಟಕ  /  Ramanagara News: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಟ್ರಕ್; ತಪ್ಪಿದ ಅನಾಹುತ

Ramanagara News: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಟ್ರಕ್; ತಪ್ಪಿದ ಅನಾಹುತ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ಟ್ರಕ್ ನುಗ್ಗಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ

ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಭವಿಸುತ್ತಿದ್ದ ಭೀಕರ ಅಪಘಾತವೊಂದು ಅದೃಷ್ಟವಶಾತ್ ತಪ್ಪಿದೆ. ಬೃಹತ್ ಕಂಟೈನರ್‌ ಲಾರಿ ಎಕ್ಸ್‌ಪ್ರೆಸ್‌ ವೇನ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದೆಯಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಸಮೀಪದ ಬೆಂ-ಮೈ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನದ ಸಮಯದಲ್ಲಿ ಈ ಭೀಕರ ಘಟನೆ ನಡೆದಿದ್ದು, ಈ ಸಮಯದಲ್ಲಿ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚರಿಸದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ.

ಮೈಸೂರು ಕಡೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಬೃಹತ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು ಕಡೆಯ ಎಕ್ಸ್‌ಪ್ರೆಸ್‌ ವೇ ದಾಟಿ ಮೈಸೂರು ಕಡೆಗೆ ಹೋಗುವ ರಸ್ತೆಯನ್ನು ಹಾಯ್ದು ಎಕ್ಸ್‌ಪ್ರೆಸ್‌ ವೇನ ತಂತಿ ಬೇಲಿ ಮುರಿದುಕೊಂಡು ಸರ್ವೀಸ್ ರಸ್ತೆಗೆ ನುಗ್ಗಿದೆ. ಲಾರಿ ರಸ್ತೆ ದಾಟಿ ಬರುತ್ತಿರುವ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅವ್ಯವಸ್ಥೆಯ ಆಗರ

ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು-ಮೈಸೂರು ನಡುವಿನ ಸಂಪರ್ಕ ಸೇತುವಾಗಿ, ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಬೇಕಾದ ಎಕ್ಸ್‌ಪ್ರೆಸ್‌ ಹೈವೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟಿನಿಂದಾಗಿ ಅವ್ಯವಸ್ಥೆಯ ಆಗರವಾಗಿದೆ. ಹೆದ್ದಾರಿಯ ಸೇಪ್ಟಿ ಆಡಿಟ್‌ ನಡೆಸುವ ಮೂಲಕ ಹೆದ್ದಾರಿ ಅವ್ಯವಸ್ಥೆ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಲೋಪದೋಷ ಸರಿಪಡಿಸುವ ಕೆಲಸ ತ್ವರಿತವಾಗಿ ನಡೆಯಬೇಕಿದೆ ಎಂದು ಸಂಚರಿಸುವ ವಾಹನಗಳ ಚಾಲಕರು ಒತ್ತಾಯಿಸಿದ್ದಾರೆ.

ಪೊಲೀಸ್‌ ಇಲಾಖೆ ಮಾಹಿತಿಯ ಪ್ರಕಾರ ರಾಮನಗರ-ಚನ್ನಪಟ್ಟಣ ನಡುವಿನ ಬೈಪಾಸ್‌ ರಸ್ತೆಯಲ್ಲಿ ಜನವರಿಯಿಂದ 17 ಅಪಘಾತಗಳು ಸಂಭವಿಸಿದ್ದು, 27 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 22.50 ಕಿ.ಮೀ. ದೂರ ಇರುವ ಬೈಪಾಸ್‌ ರಸ್ತೆಯಲ್ಲಿ ಅಪಘಾತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಬೈಪಾಸ್‌ ರಸ್ತೆಯಲ್ಲಿ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಹೆದ್ದಾರಿಯಲ್ಲಿ ಟ್ರಾಮಾ ಕೇರ್ ಸ್ಥಾಪನೆ ಕಡ್ಡಾಯವಾಗಿ ಬೇಕೇ ಬೇಕು ದಿನೇಶ್‌ ಗೂಳಿಗೌಡ

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಜೀವಹಾನಿಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯ ಮಾರ್ಗಮಧ್ಯೆ ಅತ್ಯಾಧುನಿಕ ಟ್ರಾಮಾ ಕೇರ್‌ ಸೆಂಟರ್‌ ಜತೆಗೆ ಪ್ರತಿ 30 ಕಿ.ಮೀಗೊಂದು ಆ್ಯಂಬುಲೆನ್ಸ್‌ ಕಲ್ಪಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದಿರುವ ದಿನೇಶ್‌ ಗೂಳಿಗೌಡ, ಉದ್ದೇಶಿತ ಮಾರ್ಗದಲ್ಲಿ ರಾಮನಗರ, ಮಂಡ್ಯ ಮತ್ತು ಮೈಸೂರು ಸೇರಿ ಮೂರು ಜಿಲ್ಲೆಗಳು ಬರುತ್ತವೆ. ಕಳೆದ 9 ತಿಂಗಳಲ್ಲಿ (2022ರ ಸೆಪ್ಟೆಂಬರ್‌ನಿಂದ 2023ರ ಜೂನ್‌ವರೆಗೆ) 595 ಅಪಘಾತಗಳು ಸಂಭವಿಸಿವೆ. 158 ಜನ ಜೀವ ಕಳೆದುಕೊಂಡಿದ್ದಾರೆ. ಬೇಗ ಹೋಗುವ ಧಾವಂತದಲ್ಲಿ ಜನ ಅಪಘಾತಗಳಿಗೀಡಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಬೆಂಗಳೂರು-ಮೈಸೂರು ನಡುವೆ ಸುಸಜ್ಜಿತ ಟ್ರಾಮಾ ಕೇರ್‌ ಸೆಂಟರ್‌, ಆಧುನಿಕ ಸೌಲಭ್ಯಗಳಿರುವ ಆಸ್ಪತ್ರೆಯ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇದರಿಂದ ಸಾಕಷ್ಟು ಜೀವಗಳನ್ನು ಉಳಿಸಲು ಸಾಧ್ಯವಾಗಲಿದೆ. ಅಲ್ಲದೆ, ಹೆದ್ದಾರಿಯಲ್ಲಿ ಪ್ರತಿ 30 ಕಿ.ಮೀ.ಗೆ ಒಂದು ಆ್ಯಂಬುಲೆನ್ಸ್ ನೀಡಬೇಕು. ಇದರಿಂದ ಅಪಘಾತ ಸಂಭವಿಸಿದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ನೆರವಾಗಲಿದೆ. ಕೆಲವೊಮ್ಮೆ ಆ್ಯಂಬುಲೆನ್ಸ್ ಬರುವುದು ವಿಳಂಬವಾಗಿಯೂ ಜೀವ ಹೋಗಿದ್ದಿದೆ. ಹೀಗಾಗಿ ಕೂಡಲೇ ಈ ಭಾಗದಲ್ಲಿ ಟ್ರಾಮಾ ಸೆಂಟರ್‌ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.

Whats_app_banner