DK Suresh: ಪದೇ ಪದೇ ವಿರೋಧಿಸುತ್ತಿದ್ದವರಿಗೆ ಮುಸ್ಲಿಮರ ಮೇಲೆ ಈಗೇಕೆ ಪ್ರೀತಿ; ಪ್ರತಾಪ್ ಸಿಂಹ ಹೇಳಿಕೆಗೆ ಸಂಸದ ಡಿಕೆ ಸುರೇಶ್ ತಿರುಗೇಟು
ಕಾಂಗ್ರೆಸ್ನಲ್ಲಿ ಒಡೆದು ಆಳುವ ಸಂಸ್ಕೃತಿ ಇಲ್ಲ. ಪ್ರತಾಪ್ ಸಿಂಹ ಅವರು ಒಡೆದು ಆಳುವ ಸಂಸ್ಕೃತಿ ಇಟ್ಟುಕೊಂಡು ಮನೆಹಾಳು ಮಾಡುತ್ತಾರೆ ಎಂದು ಪ್ರತಾಪ್ ಸಿಂಹ (MP Pratap Simha) ವಿರುದ್ದ ಸಂಸದ ಡಿಕೆ ಸುರೇಶ್ (DK Suresh) ವಾಗ್ದಾಳಿ ನಡೆಸಿದ್ದಾರೆ..
ರಾಮನಗರ: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಮೂರು ನಾಲ್ಕು ಪತ್ನಿಯರನ್ನು ಹೊಂದಿರುವ ಮುಸಲ್ಮಾನರಲ್ಲಿ ಯಾರನ್ನು ಯಜಮಾನಿ ಎಂದು ಗುರುತಿಸುತ್ತೀರಿ ಎಂದು ಲೇವಡಿ ಮಾಡಿದ್ದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ (MP Pratap Simha) ವಿರುದ್ದ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಾಗೂ ಪ್ರತಾಪ್ ಸಿಂಹರದ್ದು ಒಡೆದು ಆಳುವ ಸಂಸ್ಕೃತಿ ಎಂದು ಟೀಕಿಸಿದ್ದಾರೆ.
ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಒಡೆದು ಆಳುವ ಸಂಸ್ಕೃತಿ ಇಲ್ಲ. ಪ್ರತಾಪ್ ಸಿಂಹ ಅವರು ಒಡೆದು ಆಳುವ ಸಂಸ್ಕೃತಿ ಇಟ್ಟುಕೊಂಡು ಮನೆಹಾಳು ಮಾಡುತ್ತಾರೆ ಎಂದು ಕಿಡಿಕಾರಿದರು.
ವಿರೋಧಿಸಿದಾತನೇ ಈಗ ಮುಸ್ಲಿಮರ ಮೇಲೆ ಪ್ರೀತಿ
ಸಂಸದ ಪ್ರತಾಪ್ ಸಿಂಹ ಸದಾ ಮುಸ್ಲಿಮರನ್ನು ವಿರೋಧ ಮಾಡುತ್ತಿದ್ದರು. ಈಗ ಏಕೆ ಅವರಿಗೆ ಮುಸ್ಲಿಮರ ಮೇಲೆ ಪ್ರೀತಿ? ಅವರು ತಮ್ಮದೇ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದಾರೆ. ಅದರಿಂದ ಆಚೆ ಬರುವುದು ಬೇಡ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತದೆ. ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು.
ಈ ವೇಳೆ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಎಂದು ಕಾದು ನೋಡೋಣ. ರೈತರಿಗೆ ಅನುಪಯುಕ್ತವಾದ ಜಾನುವಾರುಗಳನ್ನು ಹಿಂದಿನಿಂದಲೂ ಬೇರೆ ಬೇರೆ ಕೆಲಸಕ್ಕೆ ಬಳಸುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು. ರೈತರ ದೃಷ್ಟಿಯಿಂದ ಮತ್ತು ಸಂಸ್ಕೃತಿ ದೃಷ್ಟಿಯಿಂದ ಏನು ಮಾಡಬೇಕು ಎಂದು ಚರ್ಚೆ ಮಾಡಬೇಕಾಗುತ್ತದೆ ಎಂದು ಉತ್ತರಿಸಿದರು.
ಗ್ಯಾರಂಟಿ ಯೋಜನೆ ಕುರಿತು ಪ್ರತಾಪ್ ಸಿಂಹ ಹೇಳಿದ್ದೇನು?
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಜಾರಿ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಗೃಹಲಕ್ಷ್ಮೀ ಯೋಜನೆ ಜಗಳ ಹಚ್ಚುವಂತಿದೆ. ಮನೆ ಯಜಮಾನಿ ಯಾರು ಎಂದು ತೀರ್ಮಾನ ಮಾಡಬೇಕಂತೆ? ಮನೆಯೊಳಗೆ ಅತ್ತೆ–ಸೊಸೆ ಕೂತು ಈ ತೀರ್ಮಾನ ಮಾಡಲು ಸಾಧ್ಯವೇ? ಹಿಂದೂಗಳ ಮನೆಯಲ್ಲಾದರೂ ಅತ್ತೆ–ಸೊಸೆ ನಡುವೆ ಯಜಮಾನಿ ಪಟ್ಟಕ್ಕೆ ಪೈಪೋಟಿ ಇರುತ್ತದೆ. ಆದರೆ, ಸಾಬರ ಮನೆಯಲ್ಲಿ ಎರಡು ಹೆಂಡ್ತಿ ಮೂರು ಹೆಂಡ್ತಿ ಇರುತ್ತಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದೀರಿ. ಕುಟುಂಬ ಒಡೆಯುವ ಕೆಲಸ ಆಗುತ್ತಿದೆ ಎಂದು ಲೇವಡಿ ಮಾಡಿದ್ದರು.
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ಈಗ ಸರಾಸರಿ ಆಧರಿಸಿ ಉಚಿತ ವಿದ್ಯುತ್ ಎನ್ನುತ್ತಿದ್ದಾರೆ. ಯಾವುದೇ ಷರತ್ತು ಇಲ್ಲದೇ ಉಚಿತ ವಿದ್ಯುತ್ ಜಾರಿ ಮಾಡಿ. ಇದು ಮೋಸ ಅಲ್ಲವೇ? ಯಾವುದು ಷರತ್ತು ಇಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು ಎಂದು ಆಗ್ರಹಿಸಿದ್ದರು.