Bangalore Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಿಯಮ ಮೀರಿದರೆ ಇಲ್ಲ ಅಪಘಾತ ವಿಮೆ; ಮೊದಲ ದಿನವೇ 137 ಪ್ರಕರಣ
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬೆಳಿಗ್ಗೆ 8 ರಿಂದ 11 ಗಂಟೆವರೆಗೆ ರಾಮನಗರ, ಮೈಸೂರು ಮತ್ತು ಮಂಡ್ಯ ಪೊಲೀಸ್ ಅಧಿಕಾರಿಗಳು ಪ್ರವೇಶ ದ್ವಾರಗಳಲ್ಲಿಹೆದ್ದಾರಿ ಪ್ರವೇಶಿಸದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು, ಆಟೋಗಳು ಮತ್ತು ಮೋಟಾರು ರಹಿತ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿ ಸರ್ವೀಸ್ ರಸ್ತೆಯಲ್ಲಿ ಕಳುಹಿಸುತ್ತಿದ್ದಾರೆ.
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ದ್ವಿಚಕ್ರ, ತ್ರಿಚಕ್ರ, ಟ್ಯಾಕ್ಟರ್ ಮತ್ತು ಮೋಟಾರು ರಹಿತ ವಾಹನಗಳ ಸಂಚಾರವನ್ನು ಆಗಸ್ಟ್ 1 ರಿಂದ ನಿಷೇಧಿಸಲಾಗಿದೆ.
ನಿಯಮ ಮೀರಿ ಹೆದ್ದಾರಿಯಲ್ಲಿ ಸಂಚಾರ ಮಾಡಿದರೆ 500 ರೂ. ದಂಡ ಬೀಳಲಿದೆ. ನಿರ್ಬಂಧಿಸಲಾದ ವಾಹನಗಳು ಹೆದ್ದಾರಿಯಲ್ಲಿ ಸಂಚರಿಸಿ ಅಪಘಾತವಾದರೆ ವಿಮೆ ಅನ್ವಯ ಆಗುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ.
ದಂಡ ಪ್ರಯೋಗ ಚುರುಕು
ಆದರೂ ನಿಯಮ ಉಲ್ಲಂಘಿಸಿ ಈ ದಶಪಥ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ಮೊದಲ ದಿನವೇ 137 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 68,500 ರೂ. ದಂಡ ವಸೂಲಿ ಮಾಡಲಾಗಿದೆ. ಪ್ರತಿ ವಾಹನಕ್ಕೂ 500 ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಈ ಬಗ್ಗೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಾರ್ತಿಕ್ ರೆಡ್ಡಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪ್ರವೇಶ ಮತ್ತು ಸಂಚಾರವನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘನೆಗಾಗಿ 137 ಪ್ರಕರಣಗಳು ದಾಖಲಾಗಿವೆ. 68,500 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. ಪ್ರವೇಶ ನಿರ್ಬಂಧವಿರುವುದರಿಂದ ಸದರಿ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸಬೇಕು ಎಂದು ಅವರು ಮತ್ತೊಮ್ಮೆ ವಿನಂತಿಸಿಕೊಂಡಿದ್ದಾರೆ.
ದಂಡದ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ರದ್ದು
ಆಗಸ್ಟ್ 1, ಮೊದಲ ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ರಾಮನಗರ, ಮೈಸೂರು ಮತ್ತು ಮಂಡ್ಯ ಪೊಲೀಸ್ ಅಧಿಕಾರಿಗಳು ಎಲ್ಲ ಪ್ರವೇಶ ದ್ವಾರಗಳಲ್ಲಿ ಎಕ್ಸ್ ಪ್ರೆಸ್ ವೇ ಪ್ರವೇಶಿಸದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್‌ಗಳು, ಆಟೋಗಳು ಮತ್ತು ಮೋಟಾರು ರಹಿತ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿದರು. ಅಂತಹ ವಾಹನಗಳನ್ನು ಸರ್ವೀಸ್ ರಸ್ತೆಯಲ್ಲಿ ಕಳುಹಿಸುತ್ತಿದ್ದರು.
ಆದರೂ ಪೊಲೀಸರ ಕಣ್ತಪ್ಪಿಸಿ ರಸ್ತೆ ಪ್ರವೇಶ ಮಾಡಿದ ಚಾಲಕರಿಗೆ ದಂಡ ಹಾಕಲಾಯಿತು. ಎರಡನೇ ದಿನವಾದ ಇಂದೂ ಸಹ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಸರ್ವಿಸ್ ರಸ್ತೆಯಿಂದ ಮುಖ್ಯರಸ್ತೆಗೆ ಬಾರದಂತೆ ಎಚ್ಚರ ವಹಿಸಲಾಗಿತ್ತು.