ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿದೆ ರನ್ಯಾ ರಾವ್ ಗೋಲ್ಡ್ ಕಂಪನಿ, ಚಿನ್ನ ಕಳ್ಳಸಾಗಣೆಯಲ್ಲಿ 1 ಕಿಲೋಗೆ ಕನಿಷ್ಠ 12 ಲಕ್ಷ ರೂ ಲಾಭ; ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿದೆ ರನ್ಯಾ ರಾವ್ ಗೋಲ್ಡ್ ಕಂಪನಿ, ಚಿನ್ನ ಕಳ್ಳಸಾಗಣೆಯಲ್ಲಿ 1 ಕಿಲೋಗೆ ಕನಿಷ್ಠ 12 ಲಕ್ಷ ರೂ ಲಾಭ; ವರದಿ

ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿದೆ ರನ್ಯಾ ರಾವ್ ಗೋಲ್ಡ್ ಕಂಪನಿ, ಚಿನ್ನ ಕಳ್ಳಸಾಗಣೆಯಲ್ಲಿ 1 ಕಿಲೋಗೆ ಕನಿಷ್ಠ 12 ಲಕ್ಷ ರೂ ಲಾಭ; ವರದಿ

Ranya Rao Gold Smuggling: ಚಿನ್ನ ಖರೀದಿ ಮತ್ತು ಮಾರಾಟಕ್ಕಾಗಿ ರನ್ಯಾ ರಾವ್ ಮತ್ತು ತರುಣ್ ರಾಜು ಗೋಲ್ಡ್ ಕಂಪನಿ ಆರಂಭಿಸಿದ್ದರು. ಭಾರತಕ್ಕೆ 1 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದರೆ ಕನಿಷ್ಠ 12 ಲಕ್ಷ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದರು ಎಂಬ ಅಂಶ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಕಳ್ಳಸಾಗಣೆ ಕೇಸ್‌: ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿ ರನ್ಯಾ ರಾವ್ ಗೋಲ್ಡ್ ಕಂಪನಿ ಸ್ಥಾಪನೆಯಾಗಿದೆ ಎಂದು ಡಿಆರ್‌ಐ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನ ಕಳ್ಳಸಾಗಣೆ ಕೇಸ್‌: ಚಿನ್ನ ಖರೀದಿ, ಮಾರಾಟಕ್ಕೆ ದುಬೈನಲ್ಲಿ ರನ್ಯಾ ರಾವ್ ಗೋಲ್ಡ್ ಕಂಪನಿ ಸ್ಥಾಪನೆಯಾಗಿದೆ ಎಂದು ಡಿಆರ್‌ಐ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

Ranya Rao Gold Smuggling: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ (ಹರ್ಷವರ್ಧಿನಿ) ಮತ್ತು ಆಕೆಯ ಸ್ನೇಹಿತ ತರುಣ್ ರಾಜು ಚಿನ್ನ ಖರೀದಿ ಮತ್ತು ಮಾರಾಟ (ಆಮದು/ರಫ್ತು) ಮಾಡುವುದಕ್ಕಾಗಿ ದುಬೈನಲ್ಲಿ ಗೋಲ್ಡ್ ಕಂಪನಿ ತೆರೆದಿದ್ದಾರೆ. ಚಿನ್ನ ಪೂರೈಕೆದಾರರು ಕೂಡ ಇವರನ್ನು ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂಬುದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರೂ ಕಾಲೇಜು ದಿನಗಳಿಂದಲೇ ಸ್ನೇಹಿತರು. ಇಬ್ಬರೂ ಸೇರಿ ದುಬೈನಲ್ಲಿ ಚಿನ್ನ ಖರೀದಿ ಮತ್ತು ಮಾರಾಟ (ಆಮದು/ರಫ್ತು) ಕ್ಕಾಗಿ ಗೋಲ್ಡ್ ಕಂಪನಿ ಶುರುಮಾಡಿದ್ದರು. ಇದರಲ್ಲಿ ರನ್ಯಾ ರಾವ್ ಅವರದ್ದೇ ಹೆಚ್ಚು ಹೂಡಿಕೆ. ಒಮ್ಮೆ ಚಿನ್ನ ಪೂರೈಕೆದಾರರು ಇವರ ಕಂಪನಿಗೆ 1.7 ಕೋಟಿ ರೂಪಾಯಿ ವಂಚಿಸಿದ ವೇಳೆ, ರನ್ಯಾ ರಾವ್ ಅವರು ಈ ನಷ್ಟ ಸರಿದೂಗಿಸುವುದಕ್ಕೆ ಭಾರತದಿಂದ ದುಬೈಗೆ ಹವಾಲಾ ಮೂಲಕ ಹಣ ತಲುಪಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನ ಕಳ್ಳಸಾಗಣೆಯಲ್ಲಿ 1 ಕಿಲೋ ಚಿನ್ನಕ್ಕೆ ಕನಿಷ್ಠ 12 ಲಕ್ಷ ರೂ ಲಾಭ

ದುಬೈನಿಂದ ಒಂದು ಕಿಲೋ ಚಿನ್ನ ಭಾರತಕ್ಕೆ ತಂದರೆ, ಆ ರೀತಿ ಚಿನ್ನ ತರಿಸಿಕೊಳ್ಳುವವರಿಗೆ ಒಂದು ಕಿಲೋ ಚಿನ್ನದ ಮೇಲೆ 12 ಲಕ್ಷ ರೂಪಾಯಿ ಲಾಭವಾಗುತ್ತದೆ. ಹೀಗಾಗಿಯೇ ಚಿನ್ನ ಕಳ್ಳಸಾಗಣೆ ಒಂದು ದಂಧೆಯಾಗಿ ರೂಪುಗೊಂಡಿದೆ ಎಂಬ ಅಂಶ ರನ್ಯಾ ರಾವ್ ಪ್ರಕರಣದ ಮೂಲಕ ಬಹಿರಂಗವಾಗಿದೆ ಎಂದು ಡಿಆರ್‌ಐ ಮೂಲಗಳು ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.

ಒಂದು ಕಿಲೋ ಚಿನ್ನ ಆಮದು ಮಾಡುವಾಗ ಆ ದಿನದ ಬೆಲೆಯನ್ನು ಆಧರಿಸಿ 5 ಲಕ್ಷ ರೂಪಾಯಿಯಿಂದ 5.15 ಲಕ್ಷ ರೂಪಾಯಿ ತನಕ ಆಮದು ಸುಂಕ ಪಾವತಿಸಬೇಕು. ಕಳ್ಳ ಸಾಗಣೆ ಮಾಡುವ ಚಿನ್ನ 24 ಕ್ಯಾರೆಟ್ ಚಿನ್ನ (ಶೇ 99.98 ಪರಿಶುದ್ಧ)ವಾಗಿದ್ದು, ಅದನ್ನು 22 ಕ್ಯಾರೆಟ್ ಚಿನ್ನವಾಗಿ ಬದಲಾಯಸಿದಾಗ ಪ್ರತಿ ಕಿಲೋದಲ್ಲಿ 83 ಗ್ರಾಂ ಚಿನ್ನ ಉಳಿಯುತ್ತದೆ. ಇದರ ಮೌಲ್ಯ 7 ಲಕ್ಷ ರೂಪಾಯಿ. ಹೀಗೆ 12 ಲಕ್ಷ ರೂಪಾಯಿ ಉಳಿತಾಯವನ್ನು ತನಿಖಾಧಿಕಾರಿಗಳು ಲೆಕ್ಕ ಹಾಕಿರುವುದಾಗಿ ವರದಿ ಹೇಳಿದೆ.

ರನ್ಯಾ ರಾವ್ ಅವರು 14.2 ಕಿಲೋ ಚಿನ್ನದ ಗಟ್ಟಿ ತಂದು ರೆಡ್‌ ಹ್ಯಾಂಡ್ ಆಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ), ಸಿಬಿಐ, ಇಡಿ ತಂಡಗಳು ತನಿಖೆ ನಡೆಸುತ್ತಿವೆ.

ಚಿನ್ನ ಕಳ್ಳಸಾಗಣೆ ಹಿಂದೆ ದೊಡ್ಡ ‘ಸಿಂಡಿಕೇಟ್‌’ ಕೈವಾಡದ ಶಂಕೆ

ರನ್ಯಾ ರಾವ್ ಅವರು ಜನವರಿಯಿಂದ ಮಾರ್ಚ್ 3ರ ನಡುವಿನ 2 ತಿಂಗಳ ಅವಧಿಯಲ್ಲಿ 27 ಬಾರಿ ದುಬೈ ಹೋಗಿ ಬಂದಿದ್ದಾರೆ. ನಟಿಯ ದುಬೈ ಪ್ರಯಾಣಕ್ಕೆ ವಿಮಾನದ ಟಿಕೆಟ್ ಕಾಯ್ದಿರಿಸುತ್ತಿದ್ದವರು ಯಾರು? ಖಾತೆಗೆ ಹಣ ವರ್ಗಾವಣೆ ಮಾಡಿರುವುದು ಯಾರು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. 2023ರಿಂದ ಈವರೆಗೆ ಒಟ್ಟು 52 ಬಾರಿ ರನ್ಯಾ ಅವರು ಬೆಂಗಳೂರು, ಗೋವಾ, ಮುಂಬೈ ಮೂಲಕ ದುಬೈಗೆ ಪ್ರಯಾಣ ಮಾಡಿದ್ದರು. ಈ ಪೈಕಿ 45 ಬಾರಿ ಆ ದಿನವೇ ದುಬೈಗೆ ತೆರಳಿ ವಾಪಸ್‌ ಭಾರತಕ್ಕೆ ಬಂದಿದ್ದಾರೆ. ಈ ಪ್ರಯಾಣ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸಿದ್ದಾರೆ.

ಎರಡು ವರ್ಷಗಳ ಬ್ಯಾಂಕ್ ವಹಿವಾಟಿನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ಅವರ ಖಾತೆಗೆ ಸಂದಾಯವಾದ ಹಣ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುವುದು ಕೂಡ ಕಂಡುಬಂದಿದೆ. ಚಿನ್ನ ಕಳ್ಳಸಾಗಣೆ ಹಿಂದೆ ದೊಡ್ಡ ‘ಸಿಂಡಿಕೇಟ್‌’ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗೆ ಅಂತರರಾಷ್ಟ್ರೀಯ ಕಳ್ಳಸಾಗಣೆ ದಂಧೆ ನಂಟು ಕೂಡ ಇರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner