Bangalore Stampede: ಆರ್‌ಸಿಬಿ ವಿಜಯೋತ್ಸವ ಸಡಗರದ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಹನ್ನೊಂದು ಮಂದಿ ದುರ್ಮರಣ , ಹಲವರಿಗೆ ಗಾಯ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Stampede: ಆರ್‌ಸಿಬಿ ವಿಜಯೋತ್ಸವ ಸಡಗರದ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಹನ್ನೊಂದು ಮಂದಿ ದುರ್ಮರಣ , ಹಲವರಿಗೆ ಗಾಯ

Bangalore Stampede: ಆರ್‌ಸಿಬಿ ವಿಜಯೋತ್ಸವ ಸಡಗರದ ವೇಳೆ ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಹನ್ನೊಂದು ಮಂದಿ ದುರ್ಮರಣ , ಹಲವರಿಗೆ ಗಾಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹೊರಾವರಣದಲ್ಲಿ ಆರ್‌ಸಿಬಿ ವಿಜಯೋತ್ಸವ ಸಂಭ್ರಮ ಕಣ್ತುಂಬಿಕೊಳ್ಳಲು ಬಂದ ಹನ್ನೊಂದು ಮಂದಿ ಅಭಿಮಾನಿಗಳು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಕ್ಷಣ
ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಕ್ಷಣ

ಬೆಂಗಳೂರು: ಮೊದಲ ಬಾರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಸ್‌ ಕ್ರಿಕೆಟ್‌ನಲ್ಲಿ ಗೆದ್ದ ಸಂಭ್ರಮ ಆಚರಣೆ ಬೆಂಗಳೂರಿನಲ್ಲಿ ಸಾವಿನ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತದಿಂದ( Bangalore Stampede) ಹನ್ನೊಂದು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು. ಅಭಿಮಾನಿಗಳನ್ನು ತಡೆಯಲು ಪೊಲೀಸರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.ಚಿನ್ನಸ್ವಾಮಿ ಕ್ರೀಡಾಂಗಣದ ಒಳ ಹೋಗುವ ವೇಳೆ ಈ ಘಟನೆ ನಡೆದಿದ್ದು ನೂಕು ನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತದ ವೇಳೆ ಹನ್ನೊಂದು ಮಮದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಂಜೆ ಕಾರ್ಯಕ್ರಮ ಆರಂಭವಾಗಿದ್ದು, ಪಾಸ್‌ ಇದ್ದವರಿಗೆ ಮಾತ್ರ ಒಳಕ್ಕೆ ಬಿಡಲಾಗುತ್ತಿದೆ. ಪಾಸ್‌ ಇಲ್ಲದೇ ಸಹಸ್ರಾರು ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಕ್ರೀಡಾಂಗಣ ಬಳಿ ಜಮಾಯಿಸಿದ್ದರಿಂದ ಈ ಅನಾಹುತ ಆಗಿದೆ.

ಮಂಗಳವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ ಪಂಜಾಬ್‌ ಕಿಂಗ್‌ ತಂಡ ಮಣಿಸಿ ಟ್ರೋಫಿ ಗೆದ್ದಿತ್ತು. ಈ ಕಾರಣದಿಂದ ಬೆಂಗಳೂರಿನಲ್ಲಿ ಕ್ರಿಕೆಟ್‌ ತಂಡಕ್ಕೆ ಅಭಿನಂದನೆ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಮಧ್ಯಾಹ್ನವೇ ವಿಶೇಷ ವಿಮಾನದಲ್ಲಿ ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಿತ್ತು. ತಂಡದ ಸದಸ್ಯರು ಹಾಗೂ ವಿರಾಟ್‌ ಕೊಹ್ಲಿ ಅವರನ್ನು ಕಾಣಲು ನಾನಾ ಭಾಗಗಿಂದ ಯುವಕರು ಹಾಗೂ ಕ್ರಿಕೆಟ್‌ ಅಭಿಮಾನಿಗಳು ಆಗಮಿಸಿದ್ದರು. ವಿಧಾನಸೌಧದ ಎದುರು ನಡೆದ ಅಭಿನಂದನಾ ಕಾರ್ಯಕ್ರಮಕ್ಕೂ ಭಾರೀ ಜನಸ್ತೋಮ ಇತ್ತು. ಇದಲ್ಲದೇ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟ್ರೋಫಿಯೊಂದಿಗೆ ತಂಡಕ್ಕೆ ಸನ್ಮಾನಿಸುವ ಕಾರ್ಯಕ್ರಮ ಇದ್ದುದರಿಂದ ಅಲ್ಲಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಭಾರೀ ದುರಂತವೇ ಆಗಿದೆ. ಅಲ್ಲಿ ಸೇರಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಇನ್ನಿಲ್ಲದ ಸಾಹಸ ಪಡುತ್ತಿದ್ದಾರೆ. ಇದರ ನಡುವೆ ಕಾಲ್ತುಳಿತಕ್ಕೆ ಸಿಲುಕಿದ ಕೆಲವರಲ್ಲಿ ಹನ್ನೊಂದು ಮಂದಿ ಮೃತಪಟ್ಟಿದ್ದು, ಇನ್ನು ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಚಿಕಿತ್ಸೆ ನೀಡಲಾಗುತ್ತಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಿರುವ ಕೆಲವು ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿನ ದೃಶ್ಯಗಳು ರೈಲುಗಳಿಂದ ಹೊರಬಂದು ಮೆಟ್ಟಿಲುಗಳನ್ನು ಹತ್ತುತ್ತಿದ್ದ ಬೃಹತ್ ಜನಸಮೂಹ ಕಂಡು ಬಂದಿತು.ಆಚರಣೆಯ ನೋಟವನ್ನು ನೋಡಲು ಜನರು ಮರಗಳನ್ನು ಹತ್ತುವುದು ಮತ್ತು ಕೊಂಬೆಗಳ ಮೇಲೆ ಕುಳಿತುಕೊಳ್ಳುವುದು ಕಂಡುಬಂದಿತು.

ಹತ್ತಿರದ ಬೌರಿಂಗ್ ಆಸ್ಪತ್ರೆಯಲ್ಲಿ, ಗಾಯಾಳುಗಳನ್ನು ಹೊತ್ತ ಆಂಬ್ಯುಲೆನ್ಸ್‌ಗಳು ಬರುತ್ತಲೇ ಇದ್ದವು, ಅವರನ್ನು ಇಳಿಸಿ ಮತ್ತೆ ಕ್ರೀಡಾಂಗಣಕ್ಕೆ ಹಿಂತಿರುಗುತ್ತಿದ್ದವು.

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕರ್ನಾಟಕ ಸರ್ಕಾರವು ವಿಧಾನಸೌಧದಿಂದ ಕ್ರೀಡಾಂಗಣಕ್ಕೆ ನಡೆಯಬೇಕಿದ್ದ ವಿಜಯೋತ್ಸವ ಮೆರವಣಿಗೆಯನ್ನು ರದ್ದುಗೊಳಿಸಲಾಯಿತಿ ಎನ್ನಲಾಗಿದೆ.

ಡಿಕೆಶಿ ಸಂತಾಪ

ಆರ್‌ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆ ಸಾಕ್ಷಿಯಾಗಬೇಕಿದ್ದ ಜನರು ದುರಂತಕ್ಕೆ ಒಳಗಾಗಿ, ಮೃತಪಟ್ಟಿರುವುದು ತೀವ್ರ ನೋವು ಮತ್ತು ಆಘಾತ ತಂದಿದೆ. ಮೃತರಿಗೆ ನನ್ನ ಸಂತಾಪಗಳು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು.ಅಭಿಮಾನ ಇರಲಿ, ಆದರೆ ಜೀವಕ್ಕಿಂತ ದೊಡ್ಡದಲ್ಲ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಅಶೋಕ್‌ ಟೀಕೆ

ಐಪಿಎಲ್ ಪಟ್ಟ ಗೆದ್ದಿರುವ ಆರ್ ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಬೇಕಾದ ಘಳಿಗೆಯನ್ನ ಸೂತಕದ ಘಳಿಗೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿವೇಚನಾರಹಿತ ದುರಾಡಳಿತ ಇವತ್ತು ಅಮಾಯಕ ಜೀವಗಳನ್ನ ಬಲಿ ತೆಗೆದುಕೊಂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಟೀಕಿಸಿದ್ದಾರೆ.

ಕನ್ನಡಿಗರ ಜನಪ್ರಿಯ ಆರ್ ಸಿಬಿ ತಂಡ ಚಾಂಪಿಯನ್ ಪಟ್ಟ ಗೆದ್ದ ಸಾಧನೆಯಲ್ಲಿ ತಾನೂ ಒಂದಷ್ಟು ಕ್ರೆಡಿಟ್ ಪಡೆಯಬೇಕು ಎನ್ನುವ ಆತುರದಲ್ಲಿ ಸರಿಯಾದ ಪೂರ್ವಸಿದ್ಧತೆ ಇಲ್ಲದೆ, ಯೋಜನೆ ಇಲ್ಲದೆ, ಪೊಲೀಸರಿಗೆ ಕಾಲಾವಕಾಶ ಕೊಡದೆ ಅಭಿನಂದನಾ ಸಮಾರಂಭ ನಡೆಸಲು ರಾಜ್ಯ ಸರ್ಕಾರ ದುಂಬಾಲು ಬಿದ್ದಿದ್ದೆ ಈ ಅನಾಹುತಕ್ಕೆ ಕಾರಣ.

ಐಪಿಎಲ್ ಪಂದ್ಯಾವಳಿಯ ಫೈನಲ್ ಮ್ಯಾಚ್ ನಿನ್ನೆ ರಾತ್ರಿಯಷ್ಟೇ ಮುಗಿದಿದೆ. ನಿನ್ನೆ ರಾತ್ರಿಯೆಲ್ಲಾ ನಗರದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಇವತ್ತು ಬೆಳಿಗ್ಗೆ ಏಕಾಏಕಿ ಮತ್ತೊಮ್ಮೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಎಂದರೆ ಅದು ಕಷ್ಟಸಾಧ್ಯ ಎನ್ನುವ ಕನಿಷ್ಠ ಪರಿಜ್ಞಾನವೂ ಇಲ್ಲದಿದ್ದಿದ್ದು ಸರ್ಕಾರದ ಸ್ಪಷ್ಟ ವೈಫಲ್ಯ ಮತ್ತು ಅದಕ್ಕಿಂತ ಹೆಚ್ಚಾಗಿ ಬೇಜವಾಬ್ದಾರಿತನ.

ಚಾಂಪಿಯನ್ ಆರ್ ಸಿಬಿ ತಂಡವನ್ನ ಸ್ವಾಗತಿಸಲು, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು, ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎನ್ನುವುದನ್ನ ಅಂದಾಜಿಸುವಲ್ಲಿ ಸರ್ಕಾರ ಎಡವಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಜನ ಸಂದಣಿ ನಿರೀಕ್ಷಿಸಿ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡು ವಾರಾಂತ್ಯದಲ್ಲಿ ಈ ಕಾರ್ಯಕ್ರಮ ಮಾಡಬಹುದಿತ್ತು ಎನ್ನಿಸುತ್ತಿದೆ.

ಈ ಸಾವುಗಳಿಗೆ ರಾಜ್ಯ ಸರ್ಕಾರವೇ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು.ಮೃತ ದುರ್ದೈವಿಗಳ ಕುಟುಂಬಗಳ ದುಃಖದಲ್ಲಿ ಇಡೀ ರಾಜ್ಯವೇ ಭಾಗಿಯಾಗಿದೆ ಎಂದು ಆಪಾದಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.