ಅಕ್ಟೋಬರ್ 4ರಂದು ಪಂಚಾಯತ್ ಸೇವೆ ಬಂದ್; ಪಿಡಿಒ, ಸಿಬ್ಬಂದಿಯಿಂದ ಅನಿರ್ದಿಷ್ಟ ಹೋರಾಟ, ಸರ್ಕಾರಕ್ಕೆ ಎಚ್ಚರಿಕೆ
RDPR Protest: ವಿವಿಧ ಬೇಡಿಕೆಗೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 4ರಂದು ರಾಜ್ಯಾದ್ಯಂತ ಪಂಚಾಯತ್ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಮತ್ತು ವಿವಿಧ ಬೇಡಿಕೆಗೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 4ರಂದು ರಾಜ್ಯಾದ್ಯಂತ ಪಂಚಾಯತ್ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಅವಧಿ ಹೋರಾಟ ಕೈಗೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ದ ಸಂಘ ಜಿಲ್ಲಾ ಅಧ್ಯಕ್ಷೆ ಪುಷ್ಪಾವತಿ ಮೇದಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶೇ 65 ರಿಂದ 70 ರಷ್ಟು ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತಿಗಳಿಂದ ಶೇ 70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಆದರೆ, ಈ ವ್ಯವಸ್ಥೆಯಲ್ಲಿ ಸೇವೆ ಮಾಡುತ್ತಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಡಾಟಾ ಎಂಟ್ರಿ ಅಪರೇಟರ್ಸ್, ಕರ ವಸೂಲಿಗಾರ, ನೀರಘಂಟಿ, ಜವಾನರು, ಸ್ವಚ್ಚತಾಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಕುರಿತು ಸರ್ಕಾರಕ್ಕೆ ಕಳೆದ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ, ನಮ್ಮ ಬೇಡಿಕೆಗಳ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದೆ. ಇನ್ನೊಂದೆಡೆ ಎಲ್ಲ ಸಮಸ್ಯೆಗಳಿಗೆ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಬೇಸತ್ತು ಅಕ್ಟೋಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಕುಡಿಯುವ ನೀರು ಪೂರೈಕೆ ಹೊರತುಪಡಿಸಿ ಇತರ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮೇದಾರ್ ತಿಳಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ, ತಾಲೂಕ್ ಅಧ್ಯಕ್ಷ ಮಹಾವೀರ ಅಷ್ಟಗಿ, ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಉಮೇಶಗೌಡ ತುಪ್ಪದಗೌಡರ, ಬಸವರಾಜ ಬಾಗಲ, ಸೋಮಶೇಖರ ಗಣಿಕೊಪ್ಪ, ಬಿ.ಆರ್.ಮಡಿವಾಳರ ಇತರರು ಸಂದರ್ಭದಲ್ಲಿದ್ದರು.
ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಯುವಕ ಸಾವು
ಧಾರವಾಡ: ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ವರವನಾಗಾಲಾವಿಯಲ್ಲಿ ನಡೆದಿದೆ. ತಾಲೂಕಿನ ಮಂಡಿಹಾಳ ಗ್ರಾಮದ ಭೀಮಪ್ಪ ಪರಶುರಾಮ ಡೋಕಳೆ (22) ಎಂಬುವನೇ ಮೃತಪಟ್ಟ ಯುವಕ. ಕಳೆದ ಸೆಪ್ಟೆಂಬರ್ 26 ರಂದು ಕಾಣೆಯಾಗಿದ್ದ ಈತನ ಮೃತದೇಹ ಇಂದು ನಾಗಲಾವಿ ಗ್ರಾಮದ ಹದ್ದಿನಲ್ಲಿರುವ ಮುಜಾವರ ಎಂಬುವರಿಗೆ ಸೇರಿದ ಕಲ್ಲಿನ ಕ್ವಾರಿಯಲ್ಲಿ ಪತ್ತೆಯಾಗಿದೆ. ಈಜು ಬಾರದ ಭೀಮಪ್ಪ ಕೈಕಾಲು ತೊಳೆಯಲು ಹೋದಾಗ ಜಾರಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಗ್ರಾಮೀಣ ಸಿಪಿಐ ಶಿವಾನಂದ ಕಮತಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್ಐ ಜೀವ ಬಲಿ ಪ್ರಕರಣ; ಜಂಡು ಪ್ರಾಜೆಕ್ಟ್ ಕೋ ಆರ್ಡಿನೇಟರ್ ಅರೆಸ್ಟ್
ಹುಬ್ಬಳ್ಳಿ: ಹಳೇ ಕೋರ್ಟ ಸರ್ಕಲ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕಾಮಗಾರಿ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ನೌಕರರ ನಿರ್ಲಕ್ಷತನದಿಂದ ಕಬ್ಬಿಣ ಪೈಪ್ ಎಎಸ್‌ಐರೊಬ್ಬರ ತಲೆಯ ಮೇಲೆ ಬಿದ್ದು, ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಂಡು ಕಂಪನಿಯ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿದ್ದ ಹರಿಯಾಣ ರಾಜ್ಯದ ವಿಕಾಸ್ ಶರ್ಮಾನನ್ನು ಸೆಪ್ಟೆಂಬರ್ 27ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗಾಗಲೇ ಜಂಡು ಕನ್ಸ್ಟ್ರಕ್ಷನ್ ಕಂಪನಿಯ 3 ಜನ ಇಂಜಿನಿಯರ್ ಸೇರಿದಂತೆ ಒಟ್ಟು 11 ನೌಕರರನ್ನು ಬಂಧಿಸಿದ್ದರು.
ವಿಕಾಸ್ ಶರ್ಮಾ ಹುಬ್ಬಳ್ಳಿ ಓವರ್ ಪ್ರಾಜೆಕ್ಟ್ನ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಜಂಡು ಕಂಪನಿಯ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿದ್ದಾರೆ. ಹರ್ಷಾ ಶಿವಾನಂದ ಹೊಸಗಾಣಿಗೇರ (ಸುಪ್ರವೈಜರ್), ಜಿತೇಂದ್ರಪಾಲ ಶರ್ಮಾ, ಶ್ರೀ ದೇವಕೃಷ್ಣ (ಲೈಜನಿಂಗ್ ಇಂಜನೀಯರ್), ಭೂಪೇಂದರ್ ಪಾಲ್ ಮಹಾರಾಜಸಿಂಗ್ (ಇಂಜನೀಯರ್), ಅಸ್ಲಂ ಅಲಿ ಜಲೀಲಮಿಯಾ (ಕ್ರೇನ್ ಚಾಲಕ), ಸಿಬ್ಬಂದಿಗಳಾದ ಮೊಹಮ್ಮದ ಇಮಾದರೂ ಸಹರುಲ್ ಮಿಯಾ, ಮೊಹಮ್ಮದ್ ಮಸೂದರ ರೆಹಮಾನ ಮೆಹಮುದ್ದೀನ್ ಹಾಜಿ, ಸಬೀಬ ಶೇಖ್ ಮನ್ಸೂರಆಲಿ, ರಿಜಾವುಲ್ ಹಕ್ ಮಂಜೂರ ಅಲಿ, ಶಮೀಮ್ ಶೇಖ್ ತಂದೆ ಪಿಂಟು ಶೇಖ್, ಮೊಹಮ್ಮದ ಆರೀಫ್ ತಂದೆ ಖಯೂಮ ಮತ್ತು ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ್ ರಬಿವುಲ್ ಹಕ್ ಮಜಬೂರ ರಹಿಮಾನ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.