ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಡಿ ಗ್ಯಾಂಗ್ ವಿರುದ್ದ 3991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ, 231 ಸಾಕ್ಷಿಗಳು
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧಿಸಿ ನ್ಯಾಯಾಲಯಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು 3,991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಂಡಿದೆ. ಇದೀಗ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಮುಖ್ಯ ಆರೋಪಿ ಚಿತ್ರ ನಟ ದರ್ಶನ್, ಅವರ ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಮಂದಿಯ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ 3991 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ವಿಜಯನಗರ ಎಸಿಪಿ ಚಂದನ್ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆದಿತ್ತು.
ತನಿಖಾ ತಂಡ ರಟ್ಟಿನ ಬಾಕ್ಸ್‌ನಲ್ಲಿ ಮುದ್ರಿತ ಪ್ರತಿಗಳನ್ನು ತಂದು ನ್ಯಾಯಾಲಯಕ್ಕೆ ಸಲ್ಲಿಸಿದೆ. 3,991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಈ ಚಾರ್ಜ್ಶೀಟ್ನಲ್ಲಿ ಒಟ್ಟು 231 ಮಂದಿ ಸಾಕ್ಷಿದಾರರನ್ನು ಒಳಗೊಂಡಂತೆ, 3,991 ಪುಟಗಳುಳ್ಳ 7 ಸಂಪುಟಗಳ 10 ಕಡತಗಳನ್ನು ಒಳಗೊಂಡಿದೆ. ಇದರ ಒಟ್ಟು 20 ಪ್ರತಿಗಳನ್ನು ಸಲ್ಲಿಸಲಾಗಿದೆ.
ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಎಂಟು ವರದಿಗಳು, 231ಕ್ಕೂ ಹೆಚ್ಚು ಸಾಕ್ಷಾದಾರರ ಹೇಳಿಕೆಗಳ ದೋಷಾರೋಪ ಪಟ್ಟಿ ಇದಾಗಿದೆ. ನಿರೀಕ್ಷೆಯಂತೆ ಮತ್ತು ಎಫ್ಐಆರ್ನಲ್ಲಿ ದಾಖಲು ಮಾಡಿರುವಂತೆ ಪವಿತ್ರಾಗೌಡ ಮೊದಲ ಆರೋಪಿಯಾಗಿದ್ದಾರೆ. ನಟ ದರ್ಶನ್ ಅವರನ್ನು ಎರಡನೇ ಆರೋಪಿ ಮಾಡಲಾಗಿದೆ. ಉಳಿದ ಹದಿನೈದು ಆರೋಪಿಗಳ ಪಾತ್ರ ಏನೆಂದು ಈ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಎಫ್ಎಸ್ಎಲ್ ವರದಿ, ಡಿಎನ್ಎ ವರದಿ, ಮರಣೋತ್ತರ ಪರೀಕ್ಷಾ ವರದಿ, ಸ್ಥಳ ಮಹಜರು, ಮೊಬೈಲ್ ದತ್ತಾಂಶದ ರಿಟ್ರೀವ್ ಪ್ರಕ್ರಿಯೆಯಲ್ಲಿ ದೊರೆತ ಮಾಹಿತಿಗಳನ್ನೂ ಉಲ್ಲೇಖಿಸಲಾಗಿದೆ. ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿಗೆ ತನಿಖೆ ಪೂರ್ಣಗೊಂಡಿಲ್ಲ. ಇನ್ನೂ ಬಾಕಿಯಿದೆ. ಇದು ಕೇವಲ ಪ್ರಾಥಮಿಕ ದೋಷಾರೋಪ ಪಟ್ಟಿ ಮಾತ್ರ. ತನಿಖೆ ಪೂರ್ಣವಾದ ಬಳಿಕ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿದಾರರ ವಿವರ ಹೀಗಿದೆ
- ಪ್ರತ್ಯಕ್ಷ ಸಾಕ್ಷಿದಾರರು - 3
- 164 ಹೇಳಿಕೆ - 27 ಮಂದಿ
- ಪಂಚನಾಮೆ ವಿವರ- 59
- ಇತರೆ ಸರ್ಕಾರಿ ಅಧಿಕಾರಿಗಳು ಹೇಳಿಕೆ - 8
- ಪೊಲೀಸರು – 56
- ಒಟ್ಟು ಸಾಕ್ಷ್ಯಗಳ ವಿವರ - 231
ಮುಖ್ಯಾಂಶಗಳು
- 17 ಆರೋಪಿಗಳ ಬಂಧನ
- 3991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆ
- 7 ಸಂಪುಟ
- 10 ಕಡತಗಳು
ಪವಿತ್ರಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದು ಸತ್ಯ
ರೇಣುಕಾಸ್ವಾಮಿ ಅವರು ದರ್ಶನ್ ಅವರ ಆಪ್ತೆ ಪವಿತ್ರಾಗೌಡ ಅವರಿಗೆ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಆರೋಪಿಗಳು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿರುವುದು ಇದೇ ಕಾರಣಕ್ಕೆ ಎಂದು ತನಿಖೆಯಿಂದ ಗೊತ್ತಾಗಿದೆ. ಕೊಲೆಯ ನಂತರ ರೇಣುಕಾಸ್ವಾಮಿ ಮೊಬೈಲ್ ಮತ್ತು ರಾಜಕಾಲುವೆಗೆ ಎಸೆದಿದ್ದ ಆರೋಪಿಗಳು ಸಾಕ್ಷ್ಯ ನಾಶ ಮಾಡಿದ್ದರು.
ಆದರೆ ತನಿಖಾಧಿಕಾರಿಗಳು ರೇಣುಕಾಸ್ವಾಮಿ ಹೆಸರಿನಲ್ಲಿದ್ದ ಸಿಮ್ ಮತ್ತೊಮ್ಮೆ ಪಡೆದು ಇನ್ಸ್ಟಾಗ್ರಾಂ ಖಾತೆಯಲ್ಲಿ ಮರುಚಾಲನೆಗೊಳಿಸಿದ್ದರು. ಆ ಬಳಿಕ ಮೆಟಾ ಕಂಪನಿಗೆ ಪತ್ರ ಬರೆದು ರೇಣುಕಾಸ್ವಾಮಿ, ಪವಿತ್ರಾಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್ಗಳನ್ನು ತರಿಸಿಕೊಂಡಿದ್ದರು. ಆದರೆ ಇಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿದ 90 ದಿನದೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕು. ಹೀಗಾಗಿ, ತ್ವರಿತವಾಗಿ ತನಿಖೆ ಪೂರ್ಣಗೊಳಿಸಿದ್ದಾರೆ. ಒಂದು ವೇಳೆ ಇಷ್ಟು ದಿನದೊಳಗೆ ಚಾರ್ಜ್ ಶೀಟ್ ಪೂರ್ಣಗೊಳಿಸದಿದ್ದರೆ ಆರೋಪಿಗಳು ಜಾಮೀನು ಪಡೆಯಲು ಅರ್ಹರಾಗುತ್ತಾರೆ.