ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ; ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಏಪ್ರಿಲ್ 2ಕ್ಕೆ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಏಪ್ರಿಲ್ 2ಕ್ಕೆ ನಿಗದಿಯಾಗಿದೆ. ಇದರೊಂದಿಗೆ ನಟ ದರ್ಶನ್, ಅವರ ಸ್ನೇಹಿತೆ ಪವಿತ್ರಾ ಅವರಲ್ಲಿ ಆತಂಕ ಶುರುವಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಮತ್ತು ಇತರರಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಏಪ್ರಿಲ್ 2 ರಂದು ನಡೆಯಲಿದೆ. ಇಂದು ರಾಜ್ಯ ಸರ್ಕಾರದ ಪರ ವಕೀಲ ಅನಿಲ್ ಸಿ. ನಿಶಾನಿ ಮಾಡಿದ ತುರ್ತು ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್ ಅವರ ಪೀಠ ಈ ದಿನಾಂಕವನ್ನು ನಿಗದಿಪಡಿಸಿದೆ.
ಒಂದು ವೇಳೆ ದರ್ಶನ್, ಪವಿತ್ರಾಗೌಡ ಮೊದಲಾದ ಆರೋಪಿಗಳ ಜಾಮೀನು ರದ್ದುಗೊಂಡರೆ ಮತ್ತೆ ಎಲ್ಲ 17 ಆರೋಪಿಗಳು ಜೈಲು ಸೇರಬೇಕಾಗುತ್ತದೆ. ಜನವರಿ 24 ರಂದು, ಸುಪ್ರೀಂಕೋರ್ಟ್, ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಆದರೆ ಅದರ ಸಿಂಧುತ್ವವನ್ನು ಪ್ರಶ್ನಿಸಿದ ಕರ್ನಾಟಕ ಸರ್ಕಾರದ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಕೊಂಡಿತ್ತು. ನಂತರ ಹೈಕೋರ್ಟ್‌ನ ಜಾಮೀನು ಆದೇಶದ ವಿರುದ್ಧ ರಾಜ್ಯದ ಅರ್ಜಿ ಸಂಬಂಧ ನಟ ದರ್ಶನ್ ಮತ್ತು ಇತರರಿಗೆ ನ್ಯಾಯಾಲಯ ನೋಟಿಸ್ ನೀಡಿತ್ತು. ಅಂದು ರಾಜ್ಯ ಸರ್ಕಾರದ ಪರವಾಗಿ ಸಿದ್ದಾರ್ಥ ಲೂತ್ರಾ ವಾದ ಮಂಡಿಸಿದ್ದರು.
ಜನವರಿ 6 ರಂದು, ರಾಜ್ಯ ಸರ್ಕಾರ 33 ವರ್ಷದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರ 16 ಜನರಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಡಿಸೆಂಬರ್ 13, 2024 ರಂದು, ಹೈಕೋರ್ಟ್ 47 ವರ್ಷದ ದರ್ಶನ್ ಮತ್ತಿತರ ಆರೋಪಿಗಳಿಗೆ ಜಾಮೀನು ನೀಡಿತ್ತು. ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಗಿತ್ತು. ಜೂನ್ 9 ರಂದು ಬೆಂಗಳೂರಿನ ಮಾಗಡಿ ರಸ್ತೆಯ ರಾಜಕಾಲುವೆಯಲ್ಲಿ ರೇಣುಕಾ ಸ್ವಾಮಿ ಶವ ಪತ್ತೆಯಾಗಿತ್ತು.
ನಟ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಇದು ದರ್ಶನ್ ಅವರನ್ನು ಕೆರಳಿಸಿತ್ತು. ಜೂನ್ 8 ರಂದು 33 ವರ್ಷದ ರೇಣುಕಾಸ್ವಾಮಿಯನ್ನು ದರ್ಶನ್ ಸಹಚರರು ಚಿತ್ರದುರ್ಗದಿಂದ ಪುಸಲಾಯಿಸಿ ಬೆಂಗಳೂರಿಗೆ ಕರೆ ತಂದಿದ್ದರು. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದ. ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿತ್ತು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಮಂದಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಇದರಿಂದ ಆತ ಮೃತಪಟ್ಟಿದ್ದ. ನಂತರ ಶವವನ್ನು ಸುಮನಹಳ್ಳಿಯ ಮೋರಿಗೆ ಎಸೆದಿದ್ದರು. ಮಾಗಡಿ ರಸ್ತೆಯ ಚರಂಡಿಯಲ್ಲಿ ರೇಣುಕಸ್ವಾಮಿ ಶವ ಪತ್ತೆಯಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಇದು ಕೊಲೆ ಎನ್ನುವುದು ಖಚಿತವಾದ ನಂತರ ಪೊಲೀಸರು ಮೈಸೂರಿನಲ್ಲಿ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಿದ್ದರು. ನಂತರ ಇತರ 15 ಸಹಚರರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಇತರ ಆರೋಪಿಗಳೆಂದರೆ ಪವನ್ ಕೆ (29), ರಾಘವೇಂದ್ರ (43), ನಂದೀಶ್ (28), ಜಗದೀಶ್ (36); ಅನುಕುಮಾರ್ (25); ರವಿಶಂಕರ್ (32); ಧನರಾಜ್ ಡಿ (27); ವಿನಯ್ ವಿ (38); ನಾಗರಾಜು (41); ಲಕ್ಷ್ಮಣ್ (54); ದೀಪಕ್ (39); ಪ್ರದೋಶ್ (40), ಕಾರ್ತಿಕ್ (27), ಕೇಶವಮೂರ್ತಿ (27), ಮತ್ತು ನಿಖಿಲ್ ನಾಯಕ್ (21). ಪ್ರಸ್ತುತ ಎಲ್ಲ ಆರೋಪಗಳಿಗೂ ಜಾಮೀನು ಮಂಜೂರಾಗಿದೆ.
ನಟ ದರ್ಶನ್ ಈಗಾಗಲೇ ಮೈಸೂರಿನಲ್ಲಿ ದಿ ಡೆವಿಲ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
