ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ
ಕನ್ನಡ ಸುದ್ದಿ  /  ಕರ್ನಾಟಕ  /  ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ

ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ

Republic Day 2025: ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರವು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ದೆಹಲಿಯ ಕರ್ತವ್ಯಪಥದಲ್ಲಿ ಜ. 26 ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ. ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ.

ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ
ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕರ್ನಾಟಕದಿಂದ ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋ ಸಿದ್ಧ (GoK)

Republic Day 2025: ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದಿಂದ “ಲಕ್ಕುಂಡಿ: ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ” ಟ್ಯಾಬ್ಲೋ ಸಿದ್ಧವಾಗಿದೆ. ಪ್ರತಿ ವರ್ಷವೂ ಕರ್ನಾಟಕದಿಂದ ಟ್ಯಾಬ್ಲೋ ಭಾಗವಹಿಸುತ್ತಿದ್ದು, ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಲು ಹೊರಟಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.

ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು

ಕರ್ನಾಟಕಕ್ಕೆ ಈ ಬಾರಿಯ ಗಣರಾಜ್ಯೋತ್ಸವದ ಸ್ತಬ್ಧಚಿತ್ರವು ಅತ್ಯಂತ ಸ್ಮರಣೀಯವಾದುದು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ನಮ್ಮ ರಾಜ್ಯದಲ್ಲಿ ಎಲ್ಲಾ ಧರ್ಮಗಳ ದೇವಾಲಯಗಳಿವೆ. ಈ ಪೈಕಿ ಐತಿಹಾಸಿಕ ಪಟ್ಟಣವಾದ ಗದಗದ ಲಕ್ಕುಂಡಿಯು ಒಂದಾಗಿದೆ. ಅಹಿಂಸೆ ಪ್ರತಿಪಾದಿಸುವ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಅವುಗಳ ಪಡಿಯಚ್ಚಿನಂತೆ ಮೂಡಿಬಂದಿವೆ. ಜೊತೆಗೆ, ದೇವಾಲಯವೇ ಮರುಜೀವ ತಳೆದಂತಿದೆ. ರಾಜ್ಯವು ಪ್ರಸ್ತುತ ಪಡಿಸುತ್ತಿರುವ ಈ ಸ್ತಬ್ಧಚಿತ್ರವು ಇದೇ ಜನವರಿ 26 ರಂದು ಎಲ್ಲರ ಮನಸೂರೆಗೊಳ್ಳಲಿದೆ ಎನ್ನುವ ವಿಶ್ವಾಸ ಹೊಂದಿರುವುದಾಗಿ ವಾರ್ತಾ ಇಲಾಖೆಯ ಆಯುಕ್ತರು ತಿಳಿಸಿದರು.

2025ರ ಜನವರಿ 26ರಂದು ನಡೆಯುವ ದಹೆಲಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸುವ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಲಕ್ಕುಂಡಿ : ಶಿಲ್ಪಕಲೆಯ ತೊಟ್ಟಿಲು (Lakkundi - The Cradle of Stone Craft), ಮೆಕ್ಕೆಕಟ್ಟು : ಮರಕೆತ್ತನೆಯ ದೈವ ನಿಧಿ (Mekkekattu – “Wood Carved Treasures of Divinity), ಕರ್ನಾಟಕದ ಸಮೃದ್ದಿಯ ಆಚರಣೆಗಳು (Rituals of Prosperity) ಮತ್ತು ಕರ್ನಾಟಕ ಒಂದು ರಾಜ್ಯ ಹಲವು ಜಗತ್ತು (Karnataka “One State. Many Worlds) ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು. ಮೊದಲ ಸಭೆಯಲ್ಲಿಯೇ ʼಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು. ಅದಕ್ಕನುಗಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಲಕ್ಕುಂಡಿಯ ದೇವಾಲಯಗಳು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ ಎಂದು ನಿಂಬಾಳ್ಕರ್‌ ಅವರು ತಿಳಿಸಿದರು.

ಲಕ್ಕುಂಡಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆ ಟ್ಯಾಬ್ಲೋದಲ್ಲಿ ಏನಿದೆ

ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ 'ಶಿಲ್ಪಕಲೆಯ ತೊಟ್ಟಿಲು' ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, 10 ರಿಂದ 12 ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ.

ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ.

ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ ಎಂದು ಅವರು ವಿವರಿಸಿದರು.

Whats_app_banner