ಕನ್ನಡ ಸುದ್ದಿ  /  ಕರ್ನಾಟಕ  /  Reservoir Level: ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ, ಕೆಆರ್‌ಎಸ್‌, ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು

Reservoir level: ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ, ಕೆಆರ್‌ಎಸ್‌, ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು

Rain Updates ಕಾವೇರಿ ಕೊಳ್ಳ ಹಾಗೂ ಕೇರಳ ಭಾಗದಲ್ಲ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.

ಕಬಿನಿ ಜಲಾಶಯಕ್ಕೆ ಉತ್ತಮ ನೀರು ಹರಿದು ಬರುತಿದ್ದು ಒಂದು ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ.
ಕಬಿನಿ ಜಲಾಶಯಕ್ಕೆ ಉತ್ತಮ ನೀರು ಹರಿದು ಬರುತಿದ್ದು ಒಂದು ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ.

ಮೈಸೂರು: ಮುಂಗಾರು ಮಳೆ ಚುರುಕುಗೊಂಡು( Monsoon in Karnataka) ಕಾವೇರಿ ಕೊಳ್ಳದಲ್ಲಿ( Cauvery river basin) ಉತ್ತಮ ಮಳೆಯಾಗುತ್ತಿದೆ. ಕೊಡಗು ಭಾಗದಲ್ಲಂತೂ ನಿರಂತರವಾಗಿ( Kodagu Rains) ಮಳೆಯಾಗುತ್ತಿದೆ. ಮೈಸೂರು ಹಾಗೂ ಕೇರಳದ ವಯನಾಡು( Wayanad) ಭಾಗದಲ್ಲೂ ಮಳೆ ಸುರಿಯುತ್ತಿದೆ. ಹಾಸನ ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ತೀರದ ಜಲಾಶಯಗಳಿಗೆ ಹರಿದು ಬರುತ್ತಿರುವ ಒಳಹರಿವು ನೀರಿನ ಪ್ರಮಾಣ ಏರಿಕೆ ಕಂಡು ಬರುತ್ತಿದೆ. ಕೊಡಗಿನ ಮಳೆಯಿಂದ ಕೃಷ್ಣರಾಜ ಜಲಾಶಯ, ಕೇರಳದ ಮಳೆಯಿಂದ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಿದೆ. ಕಬಿನಿ ಜಲಾಶಯದಿಂದ ಹೊರಹರಿವು ಕೂಡ ನಿಧಾನವಾಗಿ ಹೆಚ್ಚಿಸಲಾಗುತ್ತಿದೆ. ಒಂದು ಸಾವಿರ ಕ್ಯುಸೆಕ್‌ ನೀರು ಕಬಿನಿ ಜಲಾಶಯದಿಂದ ನದಿ ಮೂಲಕ ಹೊರ ಬಿಡಲಾಗುತ್ತಿದೆ.

ಕಬಿನಿಗೆ ಭಾರೀ ನೀರು

ಕೇರಳದ ವಯನಾಡು ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಒಂದು ವಾರದಿಂದ ಮಳೆಯಾಗುತ್ತಿದ್ದು.ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಮೂರು ದಿನದಿಂದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಸದ್ಯ ಕಬಿನಿ ಜಲಾಶಯಕ್ಕೆ 6003 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ 299 ಕ್ಯೂಸೆಕ್‌ ನೀರು ಮಾತ್ರ ಹರಿದು ಬರುತ್ತಿತ್ತು. ಈಗ ಜಲಾಶಯದಲ್ಲಿ ನೀರಿನ ಸಂಗ್ರಹ 2266.27 ಅಡಿಯಷ್ಟಿದೆ. ಹಿಂದಿನ ವರ್ಷದಲ್ಲಿ ಇದೇ ದಿನ 2250.62 ಅಡಿ ಇತ್ತು. ಈ ವರ್ಷ ಬೇಗನೇ ಮಳೆಯಾಗಿರುವ ಕಾರಣಕ್ಕೆ ಜಲಾಶಯದಲ್ಲಿ ನೀರಿನ ಸಂಗ್ರಹ ಏರಿಕೆ ಕಂಡಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ. ಜಲಾಶಯಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದಿಂದ ಒಂದು ಸಾವಿರ ಕ್ಯುಸೆಕ್‌ ನೀರನ್ನು ನದಿ ಮೂಲಕ ಹೊರ ಬಿಡಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ನೀರು ಕಬಿನಿ ಜಲಾಶಯಕ್ಕೆ ಬರುತ್ತಿದೆ. ಕಳೆದ ಬಾರಿ ಕಡಿಮೆ ಅವಧಿಗೆ ತುಂಬಿದ್ದ ಜಲಾಶಯದಿಂದ ನೀರು ಹೊರ ಬಿಡಲಾಗಿತ್ತು. ಈ ಬಾರಿ ಕೊಂಚ ಬೇಗನೇ ನೀರು ಜಲಾಶಯಕ್ಕೆ ಬರುತ್ತಿದೆ. ಇನ್ನು ಒಂದು ವಾರ ಕಾಲ ಆ ಭಾಗದಲ್ಲಿ ಮಳೆಯಾದರೆ ಜಲಾಶಯದ ಪ್ರಮಾಣ ಗಣನೀಯ ಏರಿಕೆಯಾಗಲಿದೆ. ಸುರಕ್ಷತೆ ದೃಷ್ಟಿಯಿಂದ ಸ್ವಲ್ಪ ಪ್ರಮಾಣದ ನೀರು ಕಬಿನಿ ಜಲಾಶಯದಿಂದ ಹೊರ ಹೋಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಕೆಆರ್‌ಎಸ್‌ನಲ್ಲೂ ಏರಿಕೆ

ಕೊಡಗು ಭಾಗದಲ್ಲಿ ಯಥೇಚ್ಚ ಮಳೆಯಾಗುತ್ತಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಹಾಗೂ ಕೆಳಗಿನ ಭಾಗಮಂಡಲ ಪ್ರದೇಶದಲ್ಲೂ ಮಳೆಯಿದೆ. ಇದಲ್ಲದೇ ಕಾವೇರಿ ನದಿ ಪಾತ್ರದ ಹಲವು ಕಡೆಗಳಲ್ಲಿ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಕೆಲ ದಿನಗಳಿಂದ ನೀರು ಹರಿದು ಬರುತ್ತಲೇ ಇದೆ. ಬುಧವಾರ ಬೆಳಿಗ್ಗೆಯೂ ಕೆಆರ್‌ಎಸ್‌ ಜಲಾಶಯಕ್ಕೆ 2241 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 87.90 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಸದ್ಯ 14.724 ಟಿಎಂಸಿಯಷ್ಟು ನೀರು ಜಲಾಶಯದಲ್ಲಿದೆ. ಗರಿಷ್ಠ 49.452 ನೀರು ಸಂಗ್ರಹಿಸುವ ಸಾಮರ್ಥ್ಯ ಕೆಆರ್‌ಎಸ್‌ನಲ್ಲಿದೆ. ಜಲಾಶಯದಿಂದ 986 ಕ್ಯುಸೆಕ್‌ ನೀರನ್ನು ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಸಹಿತ ಹಲವು ಭಾಗಗಳ ಕುಡಿಯುವ ನೀರಿನ ಉದ್ದೇಶಕ್ಕೆಂದು ನದಿ ಮೂಲಕ ಹರಿ ಬಿಡಲಾಗುತ್ತಿದೆ.

ಕೆಆರ್‌ಎಸ್‌ ಜಲಾಶಯ ಹಿಂದಿನ ವರ್ಷ ತುಂಬಲೇ ಇಲ್ಲ. ಅದೂ ಹತ್ತು ಅಡಿ ನೀರಿನ ಕೊರತೆ ಎದುರಿಸಿತು. ಈ ಬಾರಿ ಮುಂಗಾರು ಚೆನ್ನಾಗಿರುವ ಮಾಹಿತಿಯಿದೆ. ಈಗಾಗಲೇ ಕೊಡಗು ಭಾಗದಲ್ಲಿ ಮಳೆಯಾಗುತ್ತಿರುವುದು ಸಮಾಧಾನಕರ ಸಂಗತಿ. ಜಲಾಶಯಕ್ಕೆ ಹೆಚ್ಚಿನ ನೀರು ನಿತ್ಯ ಹರಿದು ಬಂದರೆ ಮುಂದಿನ ತಿಂಗಳಾಂತ್ಯಕ್ಕೆ ತುಂಬುವ ನಿರೀಕ್ಷೆ ಇರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ಹಾರಂಗಿ ಹೇಮಾವತಿ

ಕೊಡಗಿನ ಹಾರಂಗಿ ಜಲಾಶಯಕ್ಕೂ ನೀರಿನ ಪ್ರಮಾನ ನಿಧಾನವಾಗಿ ಏರಿಕೆಯಾಗುತ್ತಿದೆ. ಸದ್ಯ ಜಲಾಶಯಕ್ಕೆ 810 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇಂದಿನ ಜಲಾಶಯದ ನೀರಿನ ಮಟ್ಟವು 2830.62 ಅಡಿಯಷ್ಟಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ.

ಅದೇ ರೀತಿ ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೂ ನೀರಿನ ಪ್ರಮಾಣ ಕೊಂಚ ಏರಿಕೆ ಕಂಡು ಬಂದಿದೆ. ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922. ಅಡಿ. ಸದ್ಯ 2884 ಅಡಿ. ಜಲಾಶಯಕ್ಕೆ 2742 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ 250 ಕ್ಯುಸೆಕ್‌ ನಷ್ಟಿದೆ.