ಕನ್ನಡ ಸುದ್ದಿ  /  ಕರ್ನಾಟಕ  /  ಕಾವೇರಿ ಕೊಳ್ಳದ ಜಲಾಶಯಗಳಿಗೆ ಹೆಚ್ಚಿನ ಒಳ ಹರಿವು, ಕಬಿನಿ, ಕೆಆರ್‌ಎಸ್‌, ಹೇಮಾವತಿಯಲ್ಲಿ ಎಷ್ಟಿದೆ ನೀರಿನ ಮಟ್ಟ?

ಕಾವೇರಿ ಕೊಳ್ಳದ ಜಲಾಶಯಗಳಿಗೆ ಹೆಚ್ಚಿನ ಒಳ ಹರಿವು, ಕಬಿನಿ, ಕೆಆರ್‌ಎಸ್‌, ಹೇಮಾವತಿಯಲ್ಲಿ ಎಷ್ಟಿದೆ ನೀರಿನ ಮಟ್ಟ?

Rain Updates ಕಾವೇರಿ ಕಣಿವೆ ಭಾಗದಲ್ಲಿ ಉತ್ತಮ ಮಳೆಯಿಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿ ಜಲಾಶಯಕ್ಕೂ ಒಳ ಹರಿವು ಹೆಚ್ಚಾಗಿದೆ.

ಕೊಡಗಿನಲ್ಲಿ ಭಾರೀ ಮಳೆಯಿಂದ ಕೂಡಿಗೆ ಬಳಿ ಕಾವೇರಿ ಹಾಗೂ ಹಾರಂಗಿ ನದಿ ಸಂಗಮ ಸ್ಥಳದಲ್ಲಿ ಕಂಡು ಬಂದ ಸನ್ನಿವೇಶ.
ಕೊಡಗಿನಲ್ಲಿ ಭಾರೀ ಮಳೆಯಿಂದ ಕೂಡಿಗೆ ಬಳಿ ಕಾವೇರಿ ಹಾಗೂ ಹಾರಂಗಿ ನದಿ ಸಂಗಮ ಸ್ಥಳದಲ್ಲಿ ಕಂಡು ಬಂದ ಸನ್ನಿವೇಶ. (Srinivasa S)

ಮೈಸೂರು: ಕಾವೇರಿ ಕೊಳ್ಳದಲ್ಲಿ ಮಳೆ ಬಿರುಸುಗೊಂಡಿದೆ. ಕಾವೇರಿ ಕಣಿವೆಯ ಕೊಡಗು, ಮೈಸೂರು, ಹಾಸನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಕೊಂಚ ಬಿಡುವಿನ ಬಳಿಕ ಮಳೆ ಪ್ರಮಾಣ ಮತ್ತೆ ಏರಿಕೆ ಕಂಡು ಬಂದಿದೆ. ಇದಲ್ಲದೇ ಮೈಸೂರು ಜಿಲ್ಲೆಯಲ್ಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಹಾಸನದ ಮಲೆನಾಡು ಭಾಗದಲ್ಲೂ ವರುಣ ಚುರುಕಾಗಿರುವುದು ಕಂಡು ಬಂದಿದೆ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೇರಳದ ವಯನಾಡು ಭಾಗದಲ್ಲೂ ಮಳೆ ತೀವ್ರಗೊಂಡಿದೆ. ಈ ಕಾರಣದಿಂದ ಕಾವೇರಿ ಜಲಾಶಯ ವ್ಯಾಪ್ತಿಯ ನಾಲ್ಕು ಪ್ರಮುಖ ಜಲಾಶಯಗಳಿಗೂ ಒಳ ಹರಿವಿನ ಪ್ರಮಾಣದಲ್ಲೊಗಣನೀಯ ಏರಿಕೆ ಕಂಡು ಬಂದಿದೆ. ಮೈಸೂರು ಜಿಲ್ಲೆಯ ಕಬಿನಿ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ, ಕೊಡಗಿನ ಹಾರಂಗಿ ಹಾಗೂ ಹಾಸನದ ಹೇಮಾವತಿ ಜಲಾಶಯ ನೀರಿನ ಮಟ್ಟವೂ ಏರಿಕೆಯಾಗಿದೆ.

ಕಬಿನಿ ನೀರು ಏರಿಕೆ

ಎರಡು ದಿನ ಕಡಿಮೆಯಾಗಿದ್ದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಒಳಹರಿವಿನ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡಿದೆ. ಕೇರಳದಲ್ಲಿ ಉತ್ತಮ ಮಳೆಯಾಗಿ ಎರಡು ದಿನ ಕಡಿಮೆಯಾಗಿತ್ತು. ಮತ್ತೆ ಕೇರಳದ ವಯನಾಡು ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಒಳ ಹರಿವುದು ಸಹಜವಾಗಿಯೇ ಹೆಚ್ಚಿದೆ. ಕಬಿನಿ ಜಲಾಶಯಕ್ಕೆ ಮಂಗಳವಾರದಂದು 11269 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 2278.50 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಜಲಾಶಯದಿಂದ 1542 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 16.19 ಟಿಸಿಎಂ ನೀರು ಸಂಗ್ರಹವಾಗಿದೆ. ಒಟ್ಟು 19.52 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.

ಕಬಿನಿ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 2280 ಅಡಿವರೆಗೆ ನೀರಿನ ಮಟ್ಟ ಕಾಯ್ದಿರಿಸಲಾಗುತ್ತದೆ. ಇನ್ನೊಂದು ಅಥವಾ ಎರಡು ದಿನದಲ್ಲಿ ಜಲಾಶಯ ಬಹುತೇಕ ತುಂಬಲಿದ್ದು, ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಕಬಿನಿ ಜಲಾಶಯದ ನೀರಾವರಿ ಇಲಾಖೆ ಅಧಿಕಾರಿಗಳು ಯೋಜಿಸುತ್ತಿದ್ದಾರೆ. ಒಳ ಹರಿವಿನ ಪ್ರಮಾಣ ಆಧರಿಸಿ ಹೊರ ಹರಿವು ನಿರ್ಧರಿಸಲಾಗುತ್ತದೆ. ಈ ಬಾರಿ ಕಬಿನಿ ಬೇಗನೇ ತುಂಬುವ ಹಂತಕ್ಕೆ ಬಂದಿರುವುದು ಈ ಭಾಗದವರಿಗೂ ಖುಷಿ ತಂದಿದೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವರ್ಷ ಇದೇ ದಿನ ಕಬಿನಿ ಜಲಾಶಯದ ನೀರಿನ ಮಟ್ಟವು 2251.54 ಅಡಿಯಷ್ಟಿತ್ತು. ಒಳ ಹರಿವು 1115 ಕ್ಯೂಸೆಕ್‌ ಇದ್ದರೆ ಹೊರ ಹರಿವಿನ ಪ್ರಮಾಣ 300 ಕ್ಯೂಸೆಕ್‌ ಇತ್ತು. ಇದೇ ಅವಧಿಯಲ್ಲಿ ಹೋದ ವರ್ಷ ಜಲಾಶಯದಲ್ಲಿ 4.51 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗಿತ್ತು. ಈ ಬಾರಿ ಚಿತ್ರಣವೇ ಬದಲಾಗಿದೆ.

ಕೆಆರ್‌ಎಸ್‌ ಮಟ್ಟವೂ ಏರಿಕೆ

ಕಳೆದ ಬಾರಿ ತುಂಬದೇ ಮಂಡ್ಯ, ಮೈಸೂರು, ಬೆಂಗಳೂರು ಭಾಗದ ಜನರಲ್ಲಿ ಆತಂಕ ಮೂಡಿಸಿದ್ದ ಕೃಷ್ಣರಾಜಸಾಗರ ಜಲಾಶಯಕ್ಕೆ ಈ ಬಾರಿ ಹೆಚ್ಚಿನ ನೀರು ಬರುತ್ತಿದೆ. ಕೊಡಗಿನಲ್ಲಿ ಎಡ ಬಿಡದೇ ಮಳೆ ಸುರಿಯುತ್ತಿದೆ. ಈ ಕಾರಣದಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿ ಕೆಆರ್‌ಎಸ್‌ಗೆ ನೀರು ನಿರಂತರವಾಗಿ ಬರುತ್ತಿದೆ. ಮಂಗಳವಾರದಂದು ಕೆಆರ್‌ಎಸ್‌ಗೆ 8787 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ 526 ಕ್ಯೂಸೆಕ್‌ ಮಾತ್ರವಿದೆ. ಜಲಾಶಯದ ನೀರಿನ ಮಟ್ಟವು 96.50 ಮಟ್ಟಕ್ಕೆ ತಲುಪಿದೆ. ನೂರು ಅಡಿ ತಲುಪಲು ಇನ್ನು ಮೂರೂವರೆ ಅಡಿ ಮಾತ್ರ ಬೇಕು. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಜಲಾಶಯದಲ್ಲಿ 20.191 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಬಹುದು.

ಕೊಡಗಿನ ಮಳೆಯ ಕಾರಣಕ್ಕೆ ಕೆಆರ್‌ಎಸ್‌ಗೆ ಈ ಬಾರಿ ಜೂನ್‌ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿಯೇ ಕಳೆ ಬಂದಿದೆ. ಇನ್ನೇನು ನೂರು ಅಡಿಯನ್ನು ಒಂದೆರಡು ದಿನದಲ್ಲಿ ತಲುಪಬಹುದು. ಆನಂತರವೂ ಮಳೆಯಾದರೆ ಮಾಸಾಂತ್ಯದೊಳಗೆ ಕೆಆರ್‌ಎಸ್‌ ತುಂಬಬಹುದು ಎನ್ನುವುದು ಅಧಿಕಾರಿಗಳ ವಿವರಣೆ.

ಹೇಮಾವತಿಯಲ್ಲೂ ಹೆಚ್ಚಳ

ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ. ಜಲಾಶಯಕ್ಕೆ 6938 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 2889.54 ಅಡಿಯಷ್ಟಿದೆ. ಜಲಾಶಯದಲ್ಲಿ 13.792 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ಪ್ರಮಾಣ 2922 ಅಡಿ. ಒಟ್ಟು 37.103 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಹೊರ ಹರಿವಿನ ಪ್ರಮಾಣವು 250 ಕ್ಯೂಸೆಕ್‌ ಇದೆ. ಕಳೆದ ವರ್ಷ ಜಲಾಶಯದಲ್ಲಿ 2890.25 ಅಡಿ ನೀರಿತ್ತು. ಆದರೆ ಒಳ ಹರಿವು 65 ಮಾತ್ರ ಇತ್ತು.