Karnataka Reservoirs: ಮತ್ತೆ ಮಳೆ ಚುರುಕು, ಸೂಪಾ, ಲಿಂಗನಮಕ್ಕಿಯಲ್ಲಿ ಜಲವೈಭವ; ಹಿಂದಿನ ವರ್ಷಕ್ಕಿಂತ 220 ಟಿಎಂಸಿ ಅಧಿಕ ನೀರು ಸಂಗ್ರಹ-reservoir levels today august 28 alamatti krs harangi bhadra tungabhadra supa hemavati kabini reservoirs levels kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಮತ್ತೆ ಮಳೆ ಚುರುಕು, ಸೂಪಾ, ಲಿಂಗನಮಕ್ಕಿಯಲ್ಲಿ ಜಲವೈಭವ; ಹಿಂದಿನ ವರ್ಷಕ್ಕಿಂತ 220 ಟಿಎಂಸಿ ಅಧಿಕ ನೀರು ಸಂಗ್ರಹ

Karnataka Reservoirs: ಮತ್ತೆ ಮಳೆ ಚುರುಕು, ಸೂಪಾ, ಲಿಂಗನಮಕ್ಕಿಯಲ್ಲಿ ಜಲವೈಭವ; ಹಿಂದಿನ ವರ್ಷಕ್ಕಿಂತ 220 ಟಿಎಂಸಿ ಅಧಿಕ ನೀರು ಸಂಗ್ರಹ

Karnataka Dam Levels ಕರ್ನಾಟಕದ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು ನೀರಿನ ಪ್ರಮಾಣವೂ ಅಧಿಕವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ  ಮಳೆಯಾಗಿ ಸೂಪಾ ಆಣೆಕಟ್ಟು ಭರ್ತಿಯಾಗಿ ನೀರು ಹೊರ ಬಿಡಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸೂಪಾ ಆಣೆಕಟ್ಟು ಭರ್ತಿಯಾಗಿ ನೀರು ಹೊರ ಬಿಡಲಾಗುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಆಗಸ್ಟ್‌ ಕೊನೆ ವಾರದಲ್ಲಿ ಮಳೆ( Karnataka Rains) ಚುರುಕುಗೊಂಡಿರುವುದರಿಂದ ಜಲಾಶಯಗಳ ( Reservoir Levels) ಒಳಹರಿವಿನಲ್ಲೂ ಏರುಗತಿ ಕಂಡಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಸೂಪಾ ಹಾಗೂ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಡಲಾಗುತ್ತಿದೆ. ಬಹಳ ದಿನಗಳ ನಂತರ ಈ ಭಾಗದಲ್ಲಿ ಜಲವೈಭವ ಕಂಡು ಬಂದಿದೆ. ಉಳಿದಂತೆ ಕೆಆರ್‌ಎಸ್.‌ ಕಬಿನಿ. ಆಲಮಟ್ಟಿ, ತುಂಗಭದ್ರಾ ಜಲಾಶಯಗಳ ನೀರಿನ ಮಟ್ಟದಲ್ಲೂ ಕೊಂಚ ಏರಿಕೆಯಾಗಿದೆ. ಈ ಬಾರಿ ಜುಲೈನಲ್ಲಿ ಉತ್ತಮ ಮಳೆಯಾದ ಪರಿಣಾಮವಾಗಿ ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ಸುಮಾರು 220 ಟಿಎಂಸಿ ಅಧಿಕ ನೀರು ಸಂಗ್ರಹವಾಗಿದೆ.

ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಮತ್ತೆ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಿಂದ ಬುಧವಾರ ಬೆಳಿಗ್ಗೆ 1,41,932 ಕ್ಯೂಸಕ್‌ ನೀರು ಹರಿಬಿಡಲಾಗುತ್ತಿದ್ದು, ನಾರಾಯಣಪುರ ಜಲಾಶಯದತ್ತ ನೀರು ಹರಿಯುತ್ತಿದೆ. ಆಲಮಟ್ಟಿ ಜಲಾಶಯದ ಒಳ ಹರಿವಿನ ಪ್ರಮಾಣವು 1,34,108 ಕ್ಯೂಸೆಕ್‌ ಇದೆ. ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಉತ್ತಮ ಲಳೆಯಾಗುತ್ತಿರುವುದಿಂದ ಆಲಮಟ್ಟಿಗೆ ಭಾರೀ ನೀರು ಹರಿದು ಬರುತ್ತಿದೆ. ಜಲಾಶದ ನೀರಿನ ಮಟ್ಟವು 519.41 ಮೀಟರ್‌ ಇದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್.‌ ಜಲಾಶಯದಲ್ಲಿ ಸದ್ಯ 102.121 ಟಿಎಂಸಿ ನೀರು ಲಭ್ಯವಿದೆ.

ಭದ್ರಾ ಜಲಾಶಯ

ಮಲೆನಾಡಿನಲ್ಲೂ ಉತ್ತಮ ಮಳೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಜಲಾಶಯದಲ್ಲೂ ನೀರಿನ ಪ್ರಮಾಣ ಏರಿದೆ. ಬುಧವಾರ ಜಲಾಶಯಕ್ಕೆ ಒಳ ಹರಿವು 8571 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣವನ್ನು 3942 ಕ್ಯೂಸೆಕ್‌ಗೆ ತಗ್ಗಿಸಲಾಗಿದೆ. ಜಲಾಶಯದ ನೀರಿನ ಮಟ್ಟವು 186 ಅಡಿಯಷ್ಟಿದೆ. ಜಲಾಶಯದಲ್ಲಿ ಗರಿಷ್ಠ 71.535 ಟಿಎಂಸಿ ನೀರು ಸಂಗ್ರಹವಾಗಿದೆ.

ಹಾರಂಗಿ ಜಲಾಶಯ

ಕೊಡಗಿನ ಹಾರಂಗಿ ಜಲಾಶಯದ ನೀರಿನ ಮಟ್ಟವು ಬುಧವಾರ 2858.42 ಅಡಿ ಇದೆ. ಜಲಾಶಯಕ್ಕೆ 998 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಸದ್ಯ 8.30372 ಟಿಎಂಸಿ ನೀರು ಸಂಗ್ರಹವಾಗಿದೆ. ಹೊರ ಹರಿವಿನ ಪ್ರಮಾಣವು ಒಂದು ಸಾವಿರ ಕ್ಯೂಸೆಕ್‌ ಇದೆ.

ಸೂಪಾ ಜಲಾಶಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಸೂಪಾ ಜಲಾಶಯ ಭರ್ತಿಯಾಗಿದ್ದರಿಂದ ಹತ್ತು ಸಾವಿರ ಕ್ಯೂಸೆಕ್‌ ನೀರನ್ನು ಕಾಳಿ ನದಿ ಮೂಲಕ ಹರಿ ಬಿಡಲಾಗುತ್ತಿದೆ. ಕಳೆದ ತಿಂಗಳೂ ಜಲಾಶಯದಿಂದ ನೀರು ಹರಿಬಿಡಲಾಗಿತ್ತು.ಮೂರು ವರ್ಷದ ನಂತರ ಇಷ್ಟು ಪ್ರಮಾಣದಲ್ಲಿ ಸೂಪಾ ಆಣೆಕಟ್ಟೆಯಿಂದ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ 559 ಮೀಟರ್‌ ನೀರು ಸಂಗ್ರಹವಾಗಿದೆ.

ತುಂಗಭದ್ರಾ ಜಲಾಶಯ

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಸದ್ಯ ಒಳ ಹರಿವಿನ ಪ್ರಮಾಣ 30394 ಕ್ಯೂಸೆಕ್‌ ಇದೆ. ಹೊರ ಹರಿವು 10107 ಕ್ಯೂಸೆಕ್‌ ನಷ್ಟಿದೆ. ಜಲಾಶಯದಲ್ಲಿ ಸದ್ಯ 1628.56 ಅಡಿ ನೀರಿದೆ. ಜಲಾಶಯದ ಗರಿಷ್ಠ ಪ್ರಮಾಣ 1633 ಅಡಿ. ಜಲಾಶಯದಲ್ಲಿ 88.755 ಟಿಎಂಸಿ ನೀರು ಸಂಗ್ರಹವಿದೆ. ಇಲ್ಲಿ 105.788 ಟಿಎಂಸಿ ನೀರು ಸಂಗ್ರಹಿಸಬಹುದು.

ಕಬಿನಿ ಜಲಾಶಯ

ಕೇರಳದಲ್ಲಿ ಮಳೆ ಪ್ರಮಾಣ ತಗ್ಗಿದ್ದರಿಂದ ಮೈಸೂರು ಜಿಲ್ಲೆ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಸದ್ಯ ಜಲಾಶಯಕ್ಕೆ 2,684 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ನಾಲೆಗೂ ಸೇರಿ ಒಟ್ಟು 2,350 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2282.33 ಅಡಿಯಿದ್ದು, 18.44 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿಯಿದ್ದು, 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.

ಕೆಆರ್‌ಎಸ್‌ ಜಲಾಶಯ

ಕೊಡಗಿನಲ್ಲೂ ಮಳೆ ಸಾಧಾರಣವಾಗಿರುವುದರಿಂದ ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರಕ್ಕೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ. ಬುಧವಾರದಂದು ಕೆಆರ್‌ಎಸ್‌ಗೆ 5646 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 4191ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 123.82 ಅಡಿಯೊಂದಿಗೆ 48.090 ಟಿಎಂಸಿ ನೀರು ಸಂಗ್ರಹವಿದೆ.

ಉತ್ತಮ ನೀರು ಸಂಗ್ರಹ

ಕರ್ನಾಟಕದ ಹದಿನಾಲ್ಕು ಜಲಾಶಯಗಳಲ್ಲಿ895.62 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು. ಸದ್ಯ 818.59 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 596.37 ಟಿಎಂಸಿ ನೀರು ಜಲಾಶಯಗಳಲ್ಲಿ ಸಂಗ್ರಹವಿತ್ತು. ಈಗ 220671 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೆ ಹೊರ ಹರಿವು 179588 ಕ್ಯೂಸೆಕ್‌ ನಷ್ಟಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೀಗಿದೆ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೀಗಿದೆ.