Karnataka Dams: ಆಲಮಟ್ಟಿ ಒಳಹರಿವು ಲಕ್ಷ ಕ್ಯೂಸೆಕ್‌ ಒಳಗೆ: ಮಲೆನಾಡು, ಕಾವೇರಿ ಕಣಿವೆ ಜಲಾಶಯಗಳಲ್ಲೂ ತಗ್ಗಿದ ಒಳಹರಿವು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Dams: ಆಲಮಟ್ಟಿ ಒಳಹರಿವು ಲಕ್ಷ ಕ್ಯೂಸೆಕ್‌ ಒಳಗೆ: ಮಲೆನಾಡು, ಕಾವೇರಿ ಕಣಿವೆ ಜಲಾಶಯಗಳಲ್ಲೂ ತಗ್ಗಿದ ಒಳಹರಿವು

Karnataka Dams: ಆಲಮಟ್ಟಿ ಒಳಹರಿವು ಲಕ್ಷ ಕ್ಯೂಸೆಕ್‌ ಒಳಗೆ: ಮಲೆನಾಡು, ಕಾವೇರಿ ಕಣಿವೆ ಜಲಾಶಯಗಳಲ್ಲೂ ತಗ್ಗಿದ ಒಳಹರಿವು

Reservoirs levels ಕರ್ನಾಟಕದ ಬಹುತೇಕ ಎಲ್ಲ ಭಾಗಗಳಲ್ಲೂ ಮಳೆ ಕಡಿಮೆಯಾಗಿ ಹತ್ತಕ್ಕೂ ಹೆಚ್ಚು ಜಲಾಶಯಗಳ ನೀರಿನ ಒಳಹರಿವು ಕಡಿಮೆಯಾಗಿದೆ. ಆಲಮಟ್ಟಿಗೆ ಒಂದು ಲಕ್ಷಕ್ಕೂ ಕಡಿಮೆ ಕ್ಯೂಸೆಕ್‌ ನೀರು ಬರುತ್ತಿದೆ. ಕರ್ನಾಟಕದ ಯಾವ ಜಲಾಶಯದಲ್ಲಿ ಎಷ್ಟು ನೀರಿದೆ. ಒಳಹರಿವು, ಹೊರಹರಿವಿನ ಪ್ರಮಾಣದ ವಿವರ ಇಲ್ಲಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ ಜುಲೈ ಮೂರನೇ ವಾರದ ಮಳೆಯಿಂದ ಸಾಕಷ್ಟು ನೀರು ಬಂದಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ ಜುಲೈ ಮೂರನೇ ವಾರದ ಮಳೆಯಿಂದ ಸಾಕಷ್ಟು ನೀರು ಬಂದಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಎಲ್ಲಾ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಕಾವೇರಿ ಕಣಿವೆ, ಮಲೆನಾಡು, ಉತ್ತರ ಕರ್ನಾಟಕದ ಬಹುತೇಕ ಜಲಾಶಯಗಳಿಗೆ ಜುಲೈ ಮೂರನೇ ವಾರದಲ್ಲಿ ಸುರಿದ ಮಳೆಯೇ ಆಸರೆಯಾಗಿವೆ. ಕೆಲ ಜಲಾಶಯ ತುಂಬಿದ್ದರೆ ಇನ್ನೂ ಕೆಲ ಜಲಾಶಯಗಳು ತುಂಬಬೇಕಿದೆ. ಮೊದಲ ಬಾರಿಗೆ ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್‌ ಒಳಗೆ ಬಂದಿದೆ. ಅದೇ ರೀತಿ ತುಂಗಭದ್ರಾ ಜಲಾಶಯದ ನೀರಿನ ಒಳಹರಿವೂ ಕಡಿಮೆಯಾಗಿದೆ. ಕಾವೇರಿ ಕಣಿವೆಯಲ್ಲಿ ಕಬಿನಿ, ಹಾರಂಗಿ ತುಂಬಿದರೆ, ಕೆಆರ್‌ಎಸ್‌, ಹೇಮಾವತಿ ಇನ್ನೂ ಇಪ್ಪತ್ತು ತುಂಬಬೇಕಿದೆ.

ಆಲಮಟ್ಟಿ ತುಂಬಲು 9 ಟಿಎಂಸಿ ಬೇಕು

ಉತ್ತರ ಕರ್ನಾಟಕದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿಗೆ ಒಳಹರಿವು ಹತ್ತು ದಿನದ ನಂತರ ಒಂದು ಲಕ್ಷದ ಒಳಗೆ ಬಂದಿದೆ. ಗುರುವಾರ ಬೆಳಿಗ್ಗೆ ಜಲಾಶಯಕ್ಕೆ 96,054 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 519.02 ಮೀಟರ್‌ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್‌. ಜಲಾಶಯದ ಹೊರ ಹರಿವು 62,606 ಕ್ಯೂಸೆಕ್‌ ನಷ್ಟಿದೆ. ಜಲಾಶಯದಲ್ಲಿ 123.081 ಟಿಎಂಸಿ ಸಂಗ್ರಹದ ಸಾಮರ್ಥ್ಯವಿದ್ದು, ಸದ್ಯ 113.270 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

ಆಲಮಟ್ಟಿ ಜಲಾಶಯ ಸಾಮಾನ್ಯವಾಗಿ ಇಷ್ಟು ಹೊತ್ತಿಗೆ ತುಂಬಿ ಬಿಡುತ್ತದೆ. ಮಹಾರಾಷ್ಟ್ರದಿಂದ ನಾಲ್ಕರಿಂದ ಐದು ಲಕ್ಷ ಕ್ಯೂಸೆಕ್‌ ನೀರು ಹರಿಯುವುದು ಇದಕ್ಕೆ ಕಾರಣ. ಈ ಬಾರಿ ಮಳೆ ಬಂದರೂಈ ಒಳಹರಿವು ಭಾರೀ ಎನ್ನುವಷ್ಟೇನೂ ಇರಲಿಲ್ಲ. ಆದರೂ ಜಲಾಶಯ ಬಹುತೇಕ ತುಂಬಿದೆ. ಇನ್ನು 9 ಟಿಎಂಸಿ ಬಂದರೆ ಜಲಾಶಯ ತುಂಬಲಿದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವನ್ನೂ ಮುಂದುರೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ತುಂಗಭದ್ರಾಕ್ಕೂ ಕಡಿಮೆ

ತುಂಗಭದ್ರಾ ಜಲಾಶಯಕ್ಕೂ ಒಳಹರಿವು ಕಡಿಮೆಯಹಾಗಿದೆ. ಸದ್ಯ ಜಲಾಶಯಕ್ಕೆ 20550 ಕ್ಯೂಸೆಕ್‌ ನೀರು ಮಾತ್ರ ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 1626.99 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಪ್ರಮಾಣ 1633 ಅಡಿ. ಜಲಾಶಯದಿಂದ ಹರಿವು 2253 ಕ್ಯೂಸೆಕ್‌ ನಷ್ಟಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಾದರೆ, ಸಂಗ್ರಹವಾಗಿರುವ ನೀರಿನ ಪ್ರಮಾಣ 83.180 ಟಿಎಂಸಿ.

ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ತುಂಗಾ ಜಲಾಶಯದಿಂದಲೂ ಬರುತ್ತಿದ್ದ ಹೊರಹರಿವು ಕಡಿಮೆಯಾಗಿದ್ದರಿಂಧ ತುಂಗಭದ್ರಾ ಜಲಾಶಯಕ್ಕ ಎರಡು ದಿನದಿಂದ ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯ ತುಂಬಲು ಇನ್ನೂ ಸಾಕಷ್ಟು ನೀರು ಬೇಕು. ಮಳೆಯತ್ತಲೇ ನಮ್ಮ ಗಮನ ಹರಿದಿದೆ ಎನ್ನುವುದು ಅಧಿಕಾರಿಯೊಬ್ಬರ ವಿವರಣೆ.

ಮಲೆನಾಡಲ್ಲೂ ಮಳೆಯಿಲ್ಲ

ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಭದ್ರಾ ಜಲಾಶಯದಲ್ಲೂ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯಕ್ಕೆ 5756 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ಜಲಾಶಯದ ಮಟ್ಟ 162.80 ಅಡಿಯಿದೆ. ಗರಿಷ್ಠ ಮಟ್ಟ 186 ಅಡಿ. ಹೊರ ಹರಿವು 189 ಕ್ಯೂಸೆಕ್‌ ಮಾತ್ರ ಇದೆ. ಜಲಾಶಯದ ಸಾಮರ್ಥ್ಯ 71.535 ಟಿಎಂಸಿ ಇದ್ದರೆ ಸಂಗ್ರಹವಾಗಿರುವ ಪ್ರಮಾಣ 41.826 ಟಿಎಂಸಿ. ಇನ್ನೂ ಮೂವತ್ತು ಟಿಎಂಸಿ ನೀರು ಭದ್ರಾ ಜಲಾಶಯ ತುಂಬಲು ಬೇಕು/

ಲಿಂಗನಮಕ್ಕಿ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ 12180 ಕ್ಯೂಸೆಕ್‌ ಇದ್ದರೆ, ಹೊರಹರಿವು 3132 ಕ್ಯೂಸೆಕ್‌ ಇದೆ. ಜಲಾಶಯದ ಸದ್ಯದ ನೀರಿನ ಮಟ್ಟ 1778.25 ಅಡಿ ಇದ್ದರೆ, ಗರಿಷ್ಠ ಮಟ್ಟ 1819 ಅಡಿ. ಸಾಗರ ಭಾಗದಲ್ಲೂ ಮಳೆ ಕಡಿಮೆಯಾಗಿ ಲಿಂಗನಮಕ್ಕಿ ಒಳಹರಿವು ಬಹುತೇಕ ತಗ್ಗಿದೆ.

ಕಾವೇರಿ ಕಣಿವೆಯಲ್ಲಿ

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 8ರ ಹೊತ್ತಿಗೆ ಒಳಹರಿವು 4117 ಕ್ಯೂಸೆಕ್‌ ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಒಳಹರಿವಿನ ಪ್ರಮಾಣ 35888 ಕ್ಯೂಸೆಕ್‌ ಇತ್ತು. ಜಲಾಶಯದ ನೀರಿನ ಮಟ್ಟ 113.48 ಅಡಿಯಷ್ಟಿದೆ. ಒಳಹರಿವು ಕಡಿಮೆಯಾಗಿರುವುದರಿಂದ ಮೂರು ದಿನದಿಂದ ಜಲಾಶಯದ ಮಟ್ಟದಲ್ಲೂ ಭಾರೀ ಏರಿಕೆಯೇನೂ ಕಂಡು ಬಂದಿಲ್ಲ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯ ತುಂಬಿ ಭಾರೀ ನೀರು ಹೊಡಬಿಡಲಾಗುತ್ತಿತ್ತು. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದ್ದು. ಈವರೆಗೂ 35.369 ಟಿಎಂಸಿ ನೀರು ಸಂಗ್ರಹವಾಗಿದೆ. ಹೊರ ಹರಿವಿನ ಪ್ರಮಾಣ 3193 ಕ್ಯೂಸೆಕ್‌ ಮಾತ್ರ ಇದೆ.

ಕಬಿನಿ ಜಲಾಶಯವೂ ಬಹುತೇಕ ತುಂಬಿದ್ದು, ಕೇರಳದ ಮಳೆ ಕೊರತೆಯಿಂದ ಒಳಹರಿವು ಇನ್ನಷ್ಟು ಕಡಿಮೆಯಾಗಿದೆ. ಸದ್ಯ ಜಲಾಶಯದ ನೀರಿನ ಮಟ್ಟ 2283.35 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ಮಟ್ಟ2284 ಅಡಿ. ಗುರುವಾರದಂದು ಜಲಾಶಯಕ್ಕೆ 2043 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣ 2750 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿದ್ದು ಸದ್ಯ 19.09 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ2283.55 ಅಡಿಯಿತ್ತು. ಒಳ ಹರಿವು 7920 ಕ್ಯೂಸೆಕ್‌ ಇದ್ದರೆ ಹೊರ ಹರಿವು 6896ಕ್ಯೂಸೆಕ್‌ ಇತ್ತು. \

ಕೊಡಗಿನ ಹಾರಂಗಿ ಜಲಾಶಯಕ್ಕೂ ಗುರುವಾರ 4028 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವನ್ನು 2000 ಕ್ಯೂಸೆಕ್‌ಗೆ ಇಳಿಸಲಾಗಿದೆ. ಜಲಾಶಯದ ಸದ್ಯದ ಮಟ್ಟ 2858.02 ಅಡಿ ಇದ್ದರೆ. ಗರಿಷ್ಠ ಮಟ್ಟ 2859 ಅಡಿ. \

ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಒಳಹರಿವುದು ಹಾರಂಗಿಗೆ ಕಡಿಮೆಯಾಗಿದೆ. ಆದರೂ ಕಳೆದ ವಾರ ಸುರಿದ ಉತ್ತಮ ಮಳೆಗೆ ಬಹುತೇಕಲ ಜಲಾಶಯ ತುಂಬಿದೆ. ತಾಂತ್ರಿಕ ಕಾರಣದಿಂದ ಹೆಚ್ಚಿನ ನೀರು ಹೊರ ಬಿಡುತ್ತಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ.

ಹಾಸನ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಇನ್ನೂ ಹೇಮಾವತಿ ಜಲಾಶಯ ತುಂಬಲು ಕಾಯುತ್ತಿದೆ. ಹಾಸನ ಜಿಲ್ಲೆಯ ಹೇಮಾವತಿ ಜಲಾಶದ ಒಳ ಹರಿವಿನ ಪ್ರಮಾಣ 5546 ಕ್ಯೂಸೆಕ್‌ ಮಾತ್ರ. ಹೊರ ಹರಿವನ್ನು 200 ಕ್ಯೂಸೆಕ್‌ಗೆ ಸೀಮಿತಗೊಳಿಸಲಾಗಿದೆ. ಜಲಾಶಯದ ಸದ್ಯದ ಮಟ್ಟ 2914.30 ಅಡಿ ಇದ್ದರೆ , ಗರಿಷ್ಠ ಮಟ್ಟ 2922 ಅಡಿ. ಜಲಾಶಯ ತುಂಬಲು ಇನ್ನೂ ಎಂಟು ಅಡಿ ನೀರು ಬೇಕು.

Whats_app_banner