Karnataka Reservoirs: ಕೆಆರ್‌ಎಸ್‌ನಿಂದ ದಾಖಲೆಯ ನೀರು, ಕಬಿನಿಯಿಂದ ತಗ್ಗಿದ ಹೊರ ಹರಿವು, ಆಲಮಟ್ಟಿ, ತುಂಗಭದ್ರಾದಿಂದಲೂ ಭಾರೀ ನೀರು ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕೆಆರ್‌ಎಸ್‌ನಿಂದ ದಾಖಲೆಯ ನೀರು, ಕಬಿನಿಯಿಂದ ತಗ್ಗಿದ ಹೊರ ಹರಿವು, ಆಲಮಟ್ಟಿ, ತುಂಗಭದ್ರಾದಿಂದಲೂ ಭಾರೀ ನೀರು ಬಿಡುಗಡೆ

Karnataka Reservoirs: ಕೆಆರ್‌ಎಸ್‌ನಿಂದ ದಾಖಲೆಯ ನೀರು, ಕಬಿನಿಯಿಂದ ತಗ್ಗಿದ ಹೊರ ಹರಿವು, ಆಲಮಟ್ಟಿ, ತುಂಗಭದ್ರಾದಿಂದಲೂ ಭಾರೀ ನೀರು ಬಿಡುಗಡೆ

Karnataka Dams ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಎಲ್ಲಾ ಜಲಾಶಯಗಳಿಂದ ಹೆಚ್ಚಿನ ನೀರನ್ನು ಹರಿಸಲಾಗುತ್ತಿದೆ.

ಕೆಆರ್‌ಎಸ್‌ ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ.
ಕೆಆರ್‌ಎಸ್‌ ನಿಂದ ಭಾರೀ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ.

ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡು, ಕೊಡಗು ಸೇರಿದಂತೆ ನಾನಾ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಜಲಾಶಯಗಳು ತುಂಬಿವೆ. ಆಲಮಟ್ಟಿ, ಕೆಆರ್‌ಎಸ್‌, ತುಂಗಭದ್ರಾ, ಲಿಂಗನಮಕ್ಕಿ, ನಾರಾಯಣಪುರ, ಕಬಿನಿ, ಭದ್ರಾ, ಹೇಮಾವತಿ ಸಹಿತ ಬಹುತೇಕ ಜಲಾಶಯಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ ಮೂರು ಲಕ್ಷ ಕ್ಯೂಸೆಕ್‌ ನೀರು ಹೊರ ಹೋಗುತ್ತಿದ್ದರೆ, ಕೃಷ್ಣರಾಜಸಾಗರ ಜಲಾಶಯದಿಂದ 33 ವರ್ಷಗಳ ನಂತರ ದಾಖಲೆಯ ಪ್ರಮಾಣದಲ್ಲಿ ಕಾವೇರಿ ನದಿಗೆ ಬಿಡುಗಡೆ ಮಾಡಲಾಗಿದೆ. ಕಬಿನಿ ಜಲಾಶಯದಿಂದ ಹೊರ ಹರಿವನ್ನು ಕೊಂಚ ತಗ್ಗಿಸಲಾಗಿದೆ. ಆದರೆ ಎರಡೂ ಜಲಾಶಯದ ಹೊರ ಹರಿವನ ಪ್ರಮಾಣ ಎರಡು ಲಕ್ಷ ಕ್ಯೂಸೆಕ್‌ ನಷ್ಟಿದ್ದು.ತಮಿಳುನಾಡಿನತ್ತ ಭಾರೀ ನೀರು ಈಗಲೂ ಹರಿಯುತ್ತಿದೆ. ಭದ್ರಾ ಜಲಾಶಯದಿಂದಲೂ ನೀರು ಹೊರ ಬಿಡಲಾಗುತ್ತಿದ್ದು, ಮಲೆನಾಡಿನ ಲಿಂಗನಮಕ್ಕಿ ಜಲಾಶಯದಿಂದಲೂ ಗುರುವಾರ ನೀರು ಹೊರ ಬಿಡಲಾಗುತ್ತಿದೆ.

ಕೆ ಆರ್ ಎಸ್ ಜಲಾಶಯದ ಹೊರಹರಿವಿನ ಪ್ರಮಾಣ ದಾಖಲೆ

ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯಕ್ಕೆ ಈಗಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೊಡಗಿನಲ್ಲಿ ಮಳೆ, ಹೇಮಾವತಿ, ಹಾರಂಗಿ ಜಲಾಶಯದಿಂದಲೂ ನೀರು ಹರಿದು ಬರುತ್ತಿರುವುದರಿಂದ ಕೆಆರ್‌ಎಸ್‌ ನೀರಿನ ಪ್ರಮಾಣ ತಗ್ಗಿಲ್ಲ. ಗುರುವಾರ ಬೆಳಿಗ್ಗೆ ಜಲಾಶಯದ ನೀರಿನ ಮಟ್ಟವು 122.32 ಅಡಿಯಷ್ಟಿದೆ. ಒಳ ಹರಿವಿನ ಪ್ರಮಾಣವು 135723 ಕ್ಯೂಸೆಕ್‌ ಇದೆ. ಹೊರ ಹರಿವಿನ ಪ್ರಮಾಣವನ್ನು 150015 ತಗ್ಗಿಸಲಾಗಿದ್ದು, ಸಂಜೆ ನಂತರ ಮತ್ತೆ ಏರಿಕೆ ಮಾಡುವ ಸಾಧ್ಯತೆಗಳಿವೆ.

ಕನ್ನಂಬಾಡಿ ಕಟ್ಟೆಗೆ ಬುಧವಾರ ರಾತ್ರಿ 154460 ಕ್ಯುಸೆಕ್ ನೀರು ಹರಿದು ಬಂದಿದ್ದು, 172161 ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ. ಹೊರಹರಿವಿನ ಪ್ರಮಾಣವು ಕಳೆದ 33 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣವಾಗಿದೆ. 1991ರಲ್ಲಿ ಜಲಾಶಯದಿಂದ 211736 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗಿತ್ತು. ಅದಾದ ಬಳಿಕ ಈಗಲೇ ಹೆಚ್ಚಿನ ಪ್ರಮಾಣದ ನೀರನ್ನು ಕನ್ನಂಬಾಡಿ ಕಟ್ಟೆಯಿಂದ ನದಿಗೆ ಹರಿಸಲಾಗುತ್ತಿದೆ. 2018ರಲ್ಲಿ 140910 ಕ್ಯುಸೆಕ್ ಹಾಗೂ 2019ರಲ್ಲಿ 153719 ಕ್ಯುಸೆಕ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.

ಕಬಿನಿ ಜಲಾಶಯ

ಕೇರಳದಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಭಾರೀ ನೀರು ಹರಿದು ಬರುತ್ತಿದೆ. ವಯನಾಡು ಭಾಗದಲ್ಲಿ ಮಳೆ ಹಾಗೂ ಪ್ರವಾಹದ ಸನ್ನಿವೇಶವಿದೆ. ಇದರಿಂದ ಕಬಿನಿ ಜಲಾಶಯಕ್ಕೂ ನೀರು ಬಂದಿದೆ. ಗುರುವಾರ ಬೆಳಿಗ್ಗೆ ಜಲಾಶಯಕ್ಕೆ49206 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 50000 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2281.59 ಅಡಿಯಷ್ಟಿದ್ದು. 17.99 ಟಿಎಂಸಿ ನೀರು ಸಂಗ್ರಹವಿದೆ.

ಹೇಮಾವತಿ ಜಲಾಶಯ

ಚಿಕ್ಕಮಗಳೂರು ಹಾಗೂ ಹಾನಸ ಜಿಲ್ಲೆಯ ಭಾರೀ ಮಳೆಯಿಂದಾಗಿ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಆಣೆಕಟ್ಟೆಗೂ ಭಾರೀ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ 43,106 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವನ್ನು 45,210 ಕ್ಯೂಸೆಕ್‌ಗೆ ಇಳಿಸಲಾಗಿದೆ. ಜಲಾಶಯದ ನೀರಿನ ಮಟ್ಟವು2919.55 ಅಡಿಯಷ್ಟಿದ್ದು ಬಹುತೇಕ ತುಂಬಿದೆ.ಜಲಾಶಯದಲ್ಲಿ 34.753 ಟಿಎಂಸಿಯಷ್ಟು ನೀರು ಸಂಗ್ರಹವಿದೆ.

ಹಾರಂಗಿ ಜಲಾಶಯ

ಕೊಡಗಿನ ಹಾರಂಗಿ ಜಲಾಶಯವೂ ಬಹುತೇಕ ಭರ್ತಿಯಾಗಿದೆ. ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 8446 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವನ್ನು 8500 ಕ್ಯೂಸೆಕ್‌ಗೆ ಇರಿಸಲಾಗಿದೆ. ಜಲಾಶಯದ ನೀರಿನ ಮಟ್ಟವು2854.41 ಅಡಿಯಷ್ಟಿದೆ. ಜಲಾಶಯದಲ್ಲಿ ಸದ್ಯ 6.94 ಟಿಎಂಸಿ ನೀರು ಸಂಗ್ರಹವಾಗಿದೆ.

ತುಂಗ ಭದ್ರಾ ಜಲಾಶಯ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ ಭಾರೀ ನೀರು ಹರಿದು ಬರುತ್ತಿದೆ. ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ178052 ಕ್ಯೂಸೆಕ್‌ ನೀರು ಒಳ ಬರುತ್ತಿದೆ. ಹೊರ ಹರಿವಿನ ಪ್ರಮಾಣವು 154706 ಕ್ಯೂಸೆಕ್‌ ಇದೆ. ಜಲಾಶಯದ ನೀರಿನ ಮಟ್ಟವು1630.81 ಅಡಿ ತಲುಪಿದೆ. ತುಂಬಲು ಇನ್ನು ಮೂರು ಅಡಿ ಬೇಕು. ಆದರೆ ಜಲಾಶಯದ ಹಿತದೃಷ್ಟಿಯಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ.ಜಲಾಶಯದಲ್ಲಿ ಸದ್ಯ 97.143 ಟಿಎಂಸಿ ನೀರು ಸಂಗ್ರಹಿಸಲಾಗಿದೆ.

Whats_app_banner