Karnataka Reservoirs: ತುಂಬಿದ ಕಬಿನಿ ಜಲಾಶಯ, ಹೊರ ಹರಿವು ಹೆಚ್ಚಳ, ಆಲಮಟ್ಟಿಗೂ ಭಾರೀ ನೀರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ತುಂಬಿದ ಕಬಿನಿ ಜಲಾಶಯ, ಹೊರ ಹರಿವು ಹೆಚ್ಚಳ, ಆಲಮಟ್ಟಿಗೂ ಭಾರೀ ನೀರು

Karnataka Reservoirs: ತುಂಬಿದ ಕಬಿನಿ ಜಲಾಶಯ, ಹೊರ ಹರಿವು ಹೆಚ್ಚಳ, ಆಲಮಟ್ಟಿಗೂ ಭಾರೀ ನೀರು

Dam Levels ಕರ್ನಾಟಕದ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಈಗಾಗಲೇ ತುಂಗಾ, ಕಬಿನಿ ಜಲಾಶಯಗಳು ಭರ್ತಿಯಾಗಿವೆ. ಹೊರ ಹರಿವಿನ ಪ್ರಮಾಣವನ್ನೂ ಏರಿಸಲಾಗಿದೆ.

ಕಬಿನಿ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ನಿಧಾನವಾಗಿ ಏರಿಕೆ ಮಾಡಲಾಗುತ್ತಿದೆ.
ಕಬಿನಿ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ನಿಧಾನವಾಗಿ ಏರಿಕೆ ಮಾಡಲಾಗುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಅತಿ ದೊಡ್ಡ ಜಲಾಶಯ ಆಲಮಟ್ಟಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕೇರಳದಲ್ಲಿನ ಉತ್ತಮಮಳೆಯಿಂದಾಗಿ ಈಗಾಗಲೇ ತುಂಬಿರುವ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣವನ್ನು ಏರಿಸಲಾಗಿದೆ. ಸದ್ಯ 5 ಸಾವಿರ ಕ್ಯೂಸೆಕ್‌ ನಷ್ಟು ನೀರು ಕಪಿಲಾ ನದಿ ಮೂಲಕ ಹೊರ ಹೋಗುತ್ತಿದೆ. ಕಬಿನಿ ಜಲಾಶಯಕ್ಕೆ ಹರಿದು ಬರುವ ನೀರಿನ ಒಳಹರಿವು ನೋಡಿಕೊಂಡು ಹೊರ ಬಿಡುವ ನೀರಿನ ಪ್ರಮಾಣ ಹೆಚ್ಚಿಸುವ ಸಾಧ್ಯತೆಯಿದೆ. ಅದೇ ರೀತಿ ಹಾರಂಗಿ ಜಲಾಶಯದಿಂದಲೂ ಈಗಾಗಲೇ ಹೊರಬಿಡಲಾಗುತ್ತಿದೆ.

ಕಬಿನಿ ಜಲಾಶಯ

ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯವೂ ತುಂಬಿದೆ. ಜಲಾಶಯದ ನೀರಿನ ಮಟ್ಟವು ಬುಧವಾರ ಬೆಳಿಗ್ಗೆ ಹೊತ್ತಿಗೆ 2282.68 ಅಡಿಯಷ್ಟಿತ್ತು. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಜಲಾಶಯದ ಸುರಕ್ಷತೆ ಹಾಗೂ ನೀರಿನ ನಿರ್ವಹಣೆ ಕಾರಣದಿಂದ ಇನ್ನೂ ಎರಡು ಇದ್ದಾಗಲೇ ಜಲಾಶಯದಿಂದ ನೀರು ಹೊರ ಬಿಡಲಾಗುತ್ತದೆ. ಅದೇ ರೀತಿ ತುಂಬಿರುವ ಕಬಿನಿ ಜಲಾಶಯದಿಂದ ಈಗಾಗಲೇ ನೀರು ಹೊರ ಹರಿಸಲಾಗುತ್ತಿದೆ. ಬುಧವಾರ ಬೆಳಿಗ್ಗೆ 4667 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಸದ್ಯ ಜಲಾಶಯಕ್ಕೆ 6453 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಈವರೆಗೂ 18.66 ಟಿಎಂಸಿ ನೀರನ್ನು ಕಬಿನಿಯಲ್ಲಿ ಸಂಗ್ರಹಿಸಲಾಗಿದೆ. ಇಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸಬಹುದು. ಕೇರಳದಲ್ಲಿ ಮಳೆ ಪ್ರಮಾಣವೂ ತಗ್ಗಿರುವ ಕಾರಣದಿಂದ ನೀರಿನ ಒಳ ಹರಿವು ಕಡಿಮೆಯಾಗಿದೆ. ಮತ್ತೆ ವಾರಾಂತ್ಯಕ್ಕೆ ಮಳೆ ಚುರುಕುಗೊಳ್ಳುವ ನಿರೀಕ್ಷೆಯಿದ್ದು. ಇದರಿಂದ ಜಲಾಶಯಕ್ಕೆ ಮತ್ತಷ್ಟು ನೀರು ಬರಲಿದೆ.

ಕಬಿನಿ ಜಲಾಶಯ ಬಹುತೇಕ ತುಂಬಿದೆ. ಈಗ ಬರುತ್ತಿರುವ ಒಳ ಹರಿವಿನ ಲೆಕ್ಕಾಚಾರದಲ್ಲಿ ಜಲಾಶಯ ತುಂಬಿರುವುದನ್ನು ಹೇಳಬಹುದು. ಇದೇ ಕಾರಣದಿಂದಲೇ ಹೊರ ಹರಿವನ್ನು ಹೆಚ್ಚಿಸಲಾಗಿದೆ. ಇನ್ನೂ ಹೆಚ್ಚಿನ ನೀರು ಹರಿದು ಬಂದರೆ ಹೊರ ಹರಿವು ಹೆಚ್ಚಲಿದೆ. ಇತ್ತೀಚಿನ ವರ್ಷಗಳಲ್ಲಿ ಕಬಿನಿ ಜಲಾಶಯಕ್ಕೆ ಇಷ್ಟು ನೀರು ಕಡಿಮೆ ಅವಧಿಯಲ್ಲಿ ಬಂದಿರುವುದು ಮೊದಲ ಬಾರಿ ಇರಬಹುದು ಎನ್ನುತ್ತಾರೆ ಅಧಿಕಾರಿಗಳು.

ಆಲಮಟ್ಟಿಗೆ ಒಂದೇ ದಿನ ಏಳು ಟಿಎಂಸಿ ನೀರು

ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಲಾಶಯವಾಗಿರುವ ವಿಜಯಪುರ ಜಿಲ್ಲೆ ಆಲಮಟ್ಟಿಯ ಲಾಲ್‌ ಬಹದ್ದೂರು ಶಾಸ್ತ್ರಿ ಜಲಾಶಯಕ್ಕೆ ಒಂದೇ ದಿನ ಏಳು ಟಿಎಂಸಿ ನೀರು ಹರಿದು ಬಂದಿದೆ. ಮಹಾರಾಷ್ಟ್ರ ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣದಿಂದಾಗಿ ಆಲಮಟ್ಟಿ ಒಳ ಹರಿವು ಬುಧವಾರ ಬೆಳಿಗ್ಗೆಗೆ 84645 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಹೊರ ಹರಿವಿನ ಪ್ರಮಾಣ 430 ಕ್ಯೂಸೆಕ್‌ ಮಾತ್ರ ಇದೆ. ಜಲಾಶಯದಲ್ಲಿ ಸದ್ಯ 516.51 ಅಡಿ ನೀರಿದೆ. ಗರಿಷ್ಠ ಮಟ್ಟ 519.60 ಅಡಿ. ಜಲಾಶಯದಲ್ಲಿ 78.618 ಟಿಸಿಎಂ ನೀರು ಈವರೆಗೂ ಸಂಗ್ರಹವಾಗಿದೆ.

ಕೆಆರ್‌ಎಸ್‌ನಲ್ಲೂ ಏರಿಕೆ

ಕೊಡಗಿನಲ್ಲಿ ಕಳೆದ ವಾರ ನಿರಂತರ ಮಳೆಯಾಗಿದ್ದರಿಂದ ಮಂಡ್ಯದ ಕೃಷ್ಣರಾಜಸಾಗರ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಈಗಲೂ 5666 ಕ್ಯೂಸೆಕ್‌ ನೀರಿನ ಒಳ ಹರಿವು ಇದೆ. ಜಲಾಶಯದ ನೀರಿನ ಮಟ್ಟವು 103.90 ಅಡಿ ಇದೆ. ಗರಿಷ್ಠ ಮಟ್ಟ 124.80 ಅಡಿ. ಸದ್ಯ 26.023 ಟಿಎಂಸಿ ನೀರು ಜಲಾಶಯದಲ್ಲಿದೆ. ಇಲ್ಲಿ 49.452 ಟಿಎಂಸಿ ನೀರನ್ನು ಸಂಗ್ರಹಿಸಲು ಅವಕಾಶವಿದೆ. ಹೊರ ಹರಿವಿನ ಪ್ರಮಾಣ 581 ಕ್ಯೂಸೆಕ್‌ ಮಾತ್ರ ಇದೆ. ಕೊಡಗಿನಲ್ಲಿ ಇನ್ನಷ್ಟು ಮಳೆಯಾದರೆ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಬಹುದು. ಈಗಾಗಲೇ ಹಾರಂಗಿ ಜಲಾಶಯದಿಂದಲೂ ನೀರು ಹರಿಸಲಾಗಿದ್ದು. ಅದೂ ಕೂಡ ಕೆಆರ್‌ಎಸ್‌ ಅನ್ನು ಸೇರುತ್ತಿರುವುದರಿಂದ ಜಲಾಶಯದ ಮಟ್ಟ ಈ ವಾರದಲ್ಲಿ ಇನ್ನಷ್ಟು ಹೆಚ್ಚಬಹುದು ಎನ್ನುವುದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವಿವರಣೆ.

ಹೇಮಾವತಿ ಅರ್ಧ ಭರ್ತಿ

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಯಥಾರೀತಿಯಲ್ಲಿದೆ. ಸದ್ಯ 6767 ಕ್ಯೂಸಕ್‌ ನೀರು ಹರಿದು ಬರುತ್ತಿದೆ. ಜಲಾಶಯದ ಮಟ್ಟವು ಬುಧವಾರದಂದು 2899.30 ಅಡಿಯಷ್ಟಿದೆ. ಜಲಾಶಯದ ಗರಿಷ್ಠ ಮಟ್ಟವು 2922 ಅಡಿ. ಹೊರ ಹರಿವಿನ ಪ್ರಮಾಣ ಬರೀ 250 ಕ್ಯೂಸೆಕ್‌ ಇದೆ. ಜಲಾಶಯದಲ್ಲಿ 19.369 ಟಿಎಂಸಿ ನೀರಿದ್ದು, ಒಟ್ಟು 37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಹೇಮಾವತಿ ಇನ್ನೂ ಅರ್ಧ ತುಂಬುವುದು ಬಾಕಿಯಿದೆ.

ಕೊಡಗಿನ ಹಾರಂಗಿ ಜಲಾಶಯಕ್ಕೂ ಒಳಹರಿವು 2121 ಕ್ಯೂಸೆಕ್‌ ಇದ್ದು. ಹೊರಹರಿವು ಒಂದು ಸಾವಿರ ಕ್ಯೂಸೆಕ್‌ ಆಸುಪಾಸಿನಲ್ಲಿದೆ. ಸದ್ಯ ಜಲಾಶಯದಲ್ಲಿ 2849.3 ಅಡಿ ನೀರಿದ್ದು ತುಂಬಲು ಇನ್ನೂ 9 ಅಡಿ ನೀರು ಬೇಕು.

Whats_app_banner