Karnataka Reservoirs: ಕಬಿನಿ ಜಲಾಶಯದಿಂದ ಹೆಚ್ಚಿನ ನೀರು ಹೊರಕ್ಕೆ, ಆಲಮಟ್ಟಿಗೆ ಬಂತು ಭಾರೀ ಒಳಹರಿವು
Karnataka Dam levels ಕರ್ನಾಟಕದ ಬಹುತೇಕ ಜಲಾಶಯಗಳಿಗೆ ನೀರಿನ ಒಳಹರಿವು ಪ್ರಮಾಣ ಏರಿಕೆಯಾಗಿದೆ. ಕೆಲವು ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ.

ಬೆಂಗಳೂರು: ಕರ್ನಾಟಕದ ಜಲಾಶಯಗಳು( Karnataka Reservoirs) ಜುಲೈ ತಿಂಗಳಿನಲ್ಲಿಯೇ ಜಲ ವೈಭವ ಕಂಡಿವೆ. ಈ ಬಾರಿ ಮುಂಗಾರು( Monsoon) ಬೇಗನೇ ಆರಂಭವಾಗಿದ್ದರಿಂದ ಉತ್ತಮ ಮಳೆಯಾಗಿ ಜಲಾಶಯಗಳಿಗೆ ನೀರು ಹರಿದು ಬಂದಿದೆ. ತುಂಗಾ, ಕಬಿನಿ, ಕದ್ರಾ ಸಹಿತ ಹಲವು ಜಲಾಶಯಗಳು ಬಹುತೇಕ ತುಂಬಿವೆ. ಆಲಮಟ್ಟಿ, ಕೆಆರ್‌ಎಸ್, ಭದ್ರಾ, ತುಂಗಭದ್ರಾ ಸಹಿತ ಹಲವು ಜಲಾಶಯಗಳು ಅರ್ಧ ಮಟ್ಟ ದಾಟಿವೆ. ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ತುಂಬಿರುವುದರಿಂದ ಹೊರ ಹರಿವಿನ ಪ್ರಮಾಣವನ್ನು ಏರಿಸಲಾಗಿದೆ. ಗುರುವಾರದಂದು ಕಬಿನಿ ಹೊರ ಹರಿವು 5 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು. ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಕಬಿನಿ ಜಲಾಶಯ
ಕೇರಳದಲ್ಲಿ ಸುರಿದ ಮಳೆಯಿಂದಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯವು ತುಂಬಿದೆ. ಮಳೆ ಪ್ರಮಾಣ ತಗ್ಗಿದ್ದರೂ ಕಬಿನಿ ಜಲಾಶಯ ಒಳ ಹರಿವಿನ ಪ್ರಮಾಣ ಸಹಜವಾಗಿಯೇ ಇದೆ. ಗುರುವಾರ ಬೆಳಿಗ್ಗೆಯೂ 5118 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವನ್ನು 5000 ಕ್ಯೂಸೆಕ್‌ಗೆ ಏರಿಕೆ ಮಾಡಲಾಗಿದೆ. ಇದರಲ್ಲಿ ನಾಲೆಗೂ ನೀರು ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2282.68 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ. ಜಲಾಶಯದಲ್ಲಿ ಸದ್ಯ 18.66 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2268.57 ಅಡಿ ನೀರು ಸಂಗ್ರಹವಾಗಿತ್ತು ಒಟ್ಟು 10.99 ಟಿಎಂಸಿ ನೀರು ಮಾತ್ರ ಇತ್ತು. ಒಳಹರಿವು 4485 ಕ್ಯೂಸೆಕ್ ಇದ್ದರೆ, ಹೊರ ಹರಿವು ಬರೀ 800 ಕ್ಯೂಸೆಕ್ ಮಾತ್ರ ಇತ್ತು. ಈ ಬಾರಿ ಪರಿಸ್ಥಿತಿ ಮಾತ್ರ ಭಿನ್ನವಾಗಿದೆ.
ಕಬಿನಿ ಜಲಾಶಯ ಕಳೆದ ಬಾರಿ ಹೆಚ್ಚು ಕಾಲ ತುಂಬಿ ಇರಲಿಲ್ಲ. ಒಂದೆರಡು ಬಾರಿ ಮಾತ್ರ ತುಂಬಿತ್ತು. ಈ ಬಾರಿ ಉತ್ತಮ ಮಳೆ ಬೇಗನೇ ಆಗಿದ್ದರಿಂದ ಜಲಾಶಯ ಬಹುತೇಕ ಭರ್ತಿಯಾಗಿದೆ. ತಾಂತ್ರಿಕ ಕಾರಣದಿಂದ ಒಳಹರಿವಿನ ಆಧಾರದಲ್ಲಿ ಹೊರ ಹರಿವಿನ ಪ್ರಮಾಣ ಹೆಚ್ಚಿಸುತ್ತೇವೆ. ಕೇರಳದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ ಸೂಚನೆ ಇರುವುದರಿಂದ ನೀರಿನ ಪ್ರಮಾಣ ಹೆಚ್ಚುವ ನಿರೀಕ್ಷೆಯಲ್ಲಿದ್ದೇವೆ ಎಂದು ಕಬಿನಿ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಆಲಮಟ್ಟಿಗೂ ನೀರು
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಕಡಿಮೆಯಾದರೂ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಇದರಿಂದ ನದಿ ಮೂಲಕ ಹರಿದು ಬರುತ್ತಿರುವ ಒಳ ಹರಿವು 69492 ಕ್ಯೂಸೆಕ್‌ನಷ್ಟಿದೆ. ಆದರೆ ನಿರಂತರವಾಗಿ ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಈಗಾಗಲೇ ಶೇ.70ರಷ್ಟು ತುಂಬಿದೆ. ಜಲಾಶಯದ ನೀರಿನ ಮಟ್ಟವು ಗುರುವಾರದಂದು 517.01 ಮೀಟರ್ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟವು 519.60 ಮೀಟರ್. ಜಲಾಶಯ ತುಂಬಲು ಇನ್ನು ಎರಡು ಮೀಟರ್ ನೀರು ಬೇಕು. ಈ ಪ್ರಮಾಣ ದೊಡ್ಡದಿರುವುದರಿಂದ ಜಲಾಶಯದ ಒಳ ಹರಿವು ಹೆಚ್ಚಿದರೆ ಮಾತ್ರ ಸಾಧ್ಯ. ಆದರೂ ಮಹಾರಾಷ್ಟ್ರದಲ್ಲಿ ಮಳೆಯಾಗುವ ಸೂಚನೆ ಇರುವ ಕಾರಣದಿಂದ ಇನ್ನಷ್ಟು ನೀರನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಬಹುದು.ಸದ್ಯ 84.585 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ 40 ಟಿಎಂಸಿ ನೀರು ಬಂದರೆ ಜಲಾಶಯ ತುಂಬಲಿದೆ. ಆಗಸ್ಟ್ ಮೊದಲ ವಾರದ ಹೊತ್ತಿಗೆ ಆಲಮಟ್ಟಿ ಜಲಾಶಯ ತುಂಬಬಹುದು ಎನ್ನುವುದು ಅಧಿಕಾರಿಗಳ ವಿಶ್ವಾಸದ ನುಡಿ.
ಕೆಆರ್‌ಎಸ್‌ನಿಂದ ನಾಲೆಗೆ ನೀರು
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆ ಕಂಡಿದೆ. ಇನ್ನು 20 ಅಡಿ ನೀರು ಬಂದರೆ ಜಲಾಶಯ ತುಂಬಲಿದೆ. ಕೊಡಗಿನಲ್ಲಿ ಈಗಲೂ ಮಳೆಯಾಗುತ್ತಿರುವುದರಿಂದ ನೀರಿನ ಒಳಹರಿವು ಇದ್ದರೂ ಕಳೆದ ವಾರಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಗುರುವಾರ ಜಲಾಶಯಕ್ಕೆ 6146 ಕ್ಯೂಸೆಕ್ ನೀರು ಬರುತ್ತಿದೆ. ಜಲಾಶಯದ ನೀರಿನ ಮಟ್ಟ104.30 ಅಡಿಯಿದೆ. ಜಲಾಶಯದಲ್ಲಿ 26.372 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, 49.452 ಅಡಿ ನೀರು ತುಂಬಿಸಬಹುದು. ಸದ್ಯ ನಾಲೆಗಳು ಹಾಗೂ ಕುಡಿಯುವ ನೀರು ಸೇರಿ 1972 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
