Karnataka Reservoirs: ಕರ್ನಾಟಕದ ಜಲಾಶಯಗಳಿಗೆ ಭಾರೀ ನೀರು, ಕಬಿನಿ, ಹಾರಂಗಿಯಂದ ಹೊರ ಹರಿವು ಏರಿಕೆ
Karnataka Rain Updates ಕರ್ನಾಟಕದ ಕಾವೇರಿ ಕೊಳ್ಳ, ಮಲೆನಾಡು, ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯದ( Karnataka Dam level) ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಕಾರಣದಿಂದಾಗಿ ಜಲಾನಯನ ಪ್ರದೇಶ ವ್ಯಾಪ್ತಿಯ ದೊಡ್ಡ ಹಾಗೂ ಸಣ್ಣ ಜಲಾಶಯಗಳಿಗೂ ನೀರು ಬರುತ್ತಿದೆ. ಇದರೊಟ್ಟಿಗೆ ಕಬಿನಿ ಹಾಗೂ ಹಾರಂಗಿ ಜಲಾಶಯದಿಂದಲೂ ಭಾರೀ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಕೊಡಗಿನ ಮಳೆ ಹಾಗೂ ಹಾರಂಗಿ ಜಲಾಶಯದಿಂದ ನೀರು ಹೊರ ಬಿಡುತ್ತಿರುವ ಕಾರಣಕ್ಕೆ ಕೃಷ್ಣರಾಜಸಾಗರ ಜಲಾಶಯಕ್ಕೂ ನೀರು ಹರಿದು ಬರುತಿದ್ದು,. ಜಲಾಶಯದ ಮಟ್ಟದಲ್ಲಿ ಹೆಚ್ಚಳ ಆಗುವ ನಿರೀಕ್ಷೆಯಿದೆ. ಅದೇ ರೀತಿ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಒಂದೇ ದಿನಕ್ಕೆ ಎರಡು ಅಡಿ ನೀರು ಹರಿದು ಬಂದಿದೆ. ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ತಗ್ಗಿದ್ದರೂ ಜಲಾಶಯದ ಮಟ್ಟದಲ್ಲಿ ನಿಧಾನವಾಗಿ ಏರು ಗತಿ ಕಂಡಿದೆ. ತುಂಗಭದ್ರಾ ಜಲಾಶಯಕ್ಕೂ ಉತ್ತಮ ನೀರು ಹರಿದು ಬರುತ್ತಿದೆ.
ಕಬಿನಿಯಿಂದ ಭಾರೀ ನೀರು
ಕೇರಳದಲ್ಲಿ ಮೂರ್ನಾಲ್ಕು ದಿನದಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಒಳ ಹರಿವು ಭಾರೀ ಏರಿಕೆಯಾಗಿದೆ. ಜಲಾಶಯವು ಈಗಾಗಲೇ ತುಂಬಿರುವ ಕಾರಣದಿಂದ ಜಲಾಶಯಕ್ಕೆ ಬರುತ್ತಿರುವ ನೀರಿನ ಜತೆಗೆ ಹೆಚ್ಚುವರಿಯಾಗಿ ಹೊರಕ್ಕೆ ಬಿಡಲಾಗುತ್ತಿದೆ. ಕಬಿನಿ ಜಲಾಶಯಕ್ಕೆ ಸೋಮವಾರ ಬೆಳಿಗ್ಗೆ 14697 ಕ್ಯೂಸೆಕ್ ನೀರು ಒಳ ಹರಿವು ಇದೆ. ಹೊರ ಹರಿವಿನ ಪ್ರಮಾಣವು ಎರಡು ದಿನದಿಂದಲೂ 20000 ಕ್ಯೂಸೆಕ್‌ನಷ್ಟಿದೆ. ಜಲಾಶಯದ ನೀರಿನ ಮಟ್ಟವು 2282.46 ಅಡಿಯಷ್ಟಿದೆ. ಗರಿಷ್ಠ ಮಟ್ಟವು 2284 ಅಡಿ ಇದೆ. ಸದ್ಯ 18.52 ಟಿಎಂಸಿ ನೀರನ್ನು ಸಂಗ್ರಹಿಸಲಾಗಿದೆ. 19.52 ಟಿಎಂಸಿ ನೀರನ್ನು ಇಲ್ಲಿ ಸಂಗ್ರಹಿಸಲು ಅವಕಾಶವಿದೆ.
ಕಬಿನಿ ಜಲಾಶಯ ಈಗಾಗಲೇ ತುಂಬಿದೆ. ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಲೆಕ್ಕಾಚಾರದಲ್ಲಿ ಹೊರ ಹರಿವಿನ ಪ್ರಮಾಣ ನಿಗದಿಪಡಿಸಲಾಗಿದೆ. ತಾಂತ್ರಿಕ ಕಾರಣ ಹಾಗೂ ಜಲಾಶಯದ ಸುರಕ್ಷತೆ ಕಾರಣಕ್ಕೆ ಹೊರ ಹರಿವು ಹೆಚ್ಚಿಸಲಾಗಿದೆ. ಕೇರಳದಲ್ಲಿ ಇನ್ನೂ ಮಳೆಯಾಗುತ್ತಿರುವುದರಿಂದ ಒಳ ಹರಿವು ಹೆಚ್ಚುವ ಸಾಧ್ಯತೆಯಿದೆ. ಪರಿಸ್ಥಿತಿ ನೋಡಿಕೊಂಡು ಜಲಾಶಯದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಭದ್ರಾಗೆ ಎರಡು ಅಡಿ ನೀರು
ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ 16041 ಕ್ಯೂಸೆಕ್ಸ್ ನೀರು ನಿರಂತರವಾಗಿ ಬರುತ್ತಿದೆ. ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹಾಗೂ ಜಲಾಶಯದ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಭಾನುವಾರದಂದು ಭದ್ರಾ ಜಲಾಶಯಕ್ಕೆ ಜಲಾಶಯಕ್ಕೆ 14570 ಕ್ಯೂಸೆಕ್ ನೀರು ಹರಿದು ಬಂದಿತ್ತು ಜಲಾಶಯದಿಂದ 162 ಕ್ಯುಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಭಾನುವಾರದಂದು ಜಲಾಶಯದ ಮಟ್ಟ 139.3 ಅಡಿಯಷ್ಟಿತ್ತು. ಇವತ್ತು ಜಲಾಶಯದ ಮಟ್ಟ 141 ಅಡಿಯಷ್ಟಿದ್ದು ಎರಡು ಅಡಿ ನೀರು ಭಾನುವಾರ ಒಂದೇ ದಿನ ಬಂದಿದೆ. ಜಲಾಶಯದ ಗರಿಷ್ಟ ಮಟ್ಟ 184 ಅಡಿ. ಭದ್ರಾ ಜಲಾಶಯವು ಕಳೆದ ಬಾರಿ ತುಂಬಿರಲಿಲ್ಲ. ಈ ಬಾರಿಯೂ ನಿಧಾನವಾಗಿ ತುಂಬುತ್ತಿದೆ.
ಆಲಮಟ್ಟಿ ಮುಕ್ಕಾಲು ಭರ್ತಿ
ಮಹಾರಾಷ್ಟ್ರದಲ್ಲಿ ಕಳೆದ ವಾರ ಸುರಿದ ಭಾರೀ ಮಳೆಗೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಉತ್ತಮ ಪ್ರಮಾಣದಲ್ಲಿಯೇ ನೀರು ಹರಿದು ಬಂದಿದೆ. ಆದರೆ ಮೂರು ದಿನದಿಂದ ಈ ಪ್ರಮಾಣ ಕೊಂಚ ತಗ್ಗಿದೆ. ಜಲಾಶಯಕ್ಕೆ ಸೋಮವಾರವು 25123 ಕ್ಯೂಸೆಕ್ ನೀರು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 517.56 ಮೀಟರ್ ಇದೆ. ಜಲಾಶಯದ ಗರಿಷ್ಠ ಮಟ್ಟವು 519.60 ಮೀಟರ್. ಜಲಾಶಯದಲ್ಲಿ ಸದ್ಯ 91.662 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸಬಹುದು. ಈವರೆಗೂ ಜಲಾಶಯವು ಶೇ. 75ರಷ್ಟು ಭರ್ತಿಯಾಗಿದೆ. ನೀರಿನ ಪ್ರಮಾಣ ಹೆಚ್ಚಿರುವುದರಿಂದ ಹೊರ ಹರಿವನ್ನು ಏರಿಸಲಾಗಿದೆ. ಸೋಮವಾರ ಬೆಳಿಗ್ಗೆ 9730 ಕ್ಯೂಸೆಕ್ ನೀರು ಆಲಮಟ್ಟಿಯಿಂದ ಹೊರ ಹೋಗುತ್ತಿದೆ.
ಕೆಆರ್‌ಎಸ್‌ನಲ್ಲೂ ಏರಿಕೆ
ಕೊಡಗಿನಲ್ಲಿ ಉತ್ತಮ ಮಳೆ ಹಾಗೂ ಹಾರಂಗಿ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಮಂಡ್ಯ ಜಿಲ್ಲೆ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟವು ಹೆಚ್ಚಿದೆ. ಸೋಮವಾರದಂದು ಜಲಾಶಯದ ನೀರಿನ ಮಟ್ಟವು 105.40 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ. ಜಲಾಶಯಕ್ಕೆ 10121 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು ನಾಲೆಗಳಿಗೂ ಸೇರಿ 2260 ಕ್ಯೂಸೆಕ್ ಇದೆ. ಸದ್ಯ 27.347 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. 49.452 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಕೆಆರ್‌ಎಸ್‌ನಲ್ಲಿದೆ.
ಕೊಡಗಿನಲ್ಲಿ ಚೆನ್ನಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಹಾರಂಗಿ ಜಲಾಶಯದಿಂದಲೂ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಬರುತ್ತಿರುವುದರಿಂದ ಜಲಾಶಯಕ್ಕೆ ಈ ವಾರ ಒಳ ಹರಿವು ಹೆಚ್ಚಾಗಲಿದೆ. ಇದರಿಂದ ಜಲಾಶಯದ ನೀರಿನ ಮಟ್ಟವು ಹೆಚ್ಚಬಹುದು. ತುಂಬಲು ಇನ್ನೂ ಇಪ್ಪತ್ತು ಅಡಿ ನೀರು ಬೇಕು. ಆಗಸ್ಟ್‌ನಲ್ಲಿ ಜಲಾಶಯ ತುಂಬುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಹಾರಂಗಿ ಜಲಾಶಯಕ್ಕೆ 8666 ಕ್ಯೂಸೆಕ್ ಹಾಗೂ ಹೇಮಾವತಿ ಜಲಾಶಯಕ್ಕೆ 13,338 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೇಮಾವತಿ ಜಲಾಶಯದ ನೀರಿನ ಮಟ್ಟವು 2904.40 ಅಡಿ ತಲುಪಿದೆ. ಸದ್ಯ 22.651 ಟಿಎಂಸಿ ನೀರು ಸಂಗ್ರಹವಾಗಿದೆ.
