Karnataka Reservoirs: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಮರಳಿದ ಜಲವೈಭವ, ಆಲಮಟ್ಟಿ, ತುಂಗಭದ್ರಕ್ಕೂ ಭಾರೀ ನೀರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಮರಳಿದ ಜಲವೈಭವ, ಆಲಮಟ್ಟಿ, ತುಂಗಭದ್ರಕ್ಕೂ ಭಾರೀ ನೀರು

Karnataka Reservoirs: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಮರಳಿದ ಜಲವೈಭವ, ಆಲಮಟ್ಟಿ, ತುಂಗಭದ್ರಕ್ಕೂ ಭಾರೀ ನೀರು

Karnataka Dam levels ಉತ್ತಮ ಮಳೆ ಕಾರಣಕ್ಕೆ ಕರ್ನಾಟಕದ ಎಲ್ಲಾ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿದೆ. ಅದರಲ್ಲೂ ಆಲಮಟ್ಟಿ, ಕೃಷ್ಣರಾಜಸಾಗರ, ತುಂಗಭದ್ರಾ ಜಲಾಶಯಗಳಿಗೆ ಹೆಚ್ಚಿನ ಒಳ ಹರಿವು ಬರುತ್ತಿದೆ.

ಶಿವಮೊಗ್ಗ ಸಮೀಪದ ತುಂಗಾ ಜಲಾಶಯದ ನೋಟ ಹೀಗಿದೆ.
ಶಿವಮೊಗ್ಗ ಸಮೀಪದ ತುಂಗಾ ಜಲಾಶಯದ ನೋಟ ಹೀಗಿದೆ. (Naveen Reddy)

ಬೆಂಗಳೂರು: ಮುಂಗಾರಿನ ಅಬ್ಬರ ಎಲ್ಲೆಡೆ ಜೋರಾಗಿದೆ. ಕರ್ನಾಟಕದ ಕರಾವಳಿ,ಮಲೆನಾಡು, ಕೊಡಗು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಇದರೊಟ್ಟಿಗೆ ನೆರೆಯ ಕೇರಳ ಹಾಗೂ ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗುತ್ತಿದೆ. ಇದು ಕರ್ನಾಟಕದ ಜಲಾಶಯಗಳಲ್ಲಿ ಕಾಣುತ್ತಿದೆ. ಈಗಾಗಲೇ ಮೂರು ವಾರಗಳಿಂದ ಎಲ್ಲಾ ಜಲಾಶಯಗಳಿಗೆ ನೀರು ಯಥೇಚ್ಛವಾಗಿ ಹರಿದು ಬರುತ್ತಿದೆ. ಅದರಲ್ಲೂ ತುಂಗಾ, ಕಬಿನಿ ಸಹಿತ ಹಲವು ಜಲಾಶಯಗಳು ತುಂಬಿವೆ. ಈಗ ಹಾರಂಗಿ ಕೂಡ ಭರ್ತಯಾಗಿದೆ. ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ಹೊರ ಹರಿವಿನ ಪ್ರಮಾಣವೇ ಈಗ 70 ಸಾವಿರ ಕ್ಯೂಸೆಕ್‌ನಷ್ಟಿದೆ. ಬಿಡುವಿನ ನಂತರ ಆಲಮಟ್ಟಿ ಜಲಾಶಯ ಒಳಹರಿವಿನ ಪ್ರಮಾಣದಲ್ಲಿ ಮತ್ತೆ ಏರಿಕೆಯಾಗಿದೆ. ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೂ ಜಲ ಕಳೆ ಬಂದಿದೆ.

ಕಾವೇರಿ ಕಣಿವೆ

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ (KRS) 25,933 ಕ್ಯೂಸೆಕ್‌ ಕಬಿನಿ ಜಲಾಶಯಕ್ಕೆ (Kabini) 22,840 ಕ್ಯೂಸೆಕ್‌ ,ಹೇಮಾವತಿ ಜಲಾಶಯಕ್ಕೆ (Hemavathi) 14,027 ಕ್ಯೂಸೆಕ್‌ , ಹಾರಂಗಿ ಜಲಾಶಯಕ್ಕೆ (Harangi) 12,827 ಕ್ಯೂಸೆಕ್‌ ನೀರು ಮಂಗಳವಾರ ಬೆಳಿಗ್ಗೆ ಹರಿದು ಬರುತ್ತಿದೆ. ಈ ಜಲಾಶಯಗಳಲ್ಲಿ ಕಬಿನಿ ಹಾಗೂ ಹಾರಂಗಿ ತುಂಬಿರುವುದರಿಂದ ಭಾರೀ ಪ್ರಮಾಣದಲ್ಲಿಯೇ ಹೊರ ಹರಿವು ಹೆಚ್ಚಿಸಲಾಗಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ 107.60 ಅಡಿ ನೀರು ಸಂಗ್ರಹವಾಗಿದೆ. ಮೂರು ದಿನದಲ್ಲಿಯೇ ಏಳು ಅಡಿ ನೀರು ಬಂದಿರುವುದು ವಿಶೇಷ. ಸದ್ಯ ಜಲಾಶಯದಿಮದ 2289 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ಇದರಲ್ಲಿ ವಿಸಿ ನಾಲೆಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಜಲಾಶಯದಲ್ಲಿ ಸದ್ಯ 29.378 ಟಿಎಂಸಿ ನೀರು ಸಂಗ್ರಹವಾಗಿದೆ. ಈಗ ಶೇ. 60ರಷ್ಟು ಜಲಾಶಯ ತುಂಬಿದಂತಾಗಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ಮಟ್ಟದಲ್ಲಿ ಗಣನೀಯ ಏರಿಕೆ ಕಂಡಿದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ 2282.36 ಅಡಿ ನೀರು ಸಂಗ್ರಹವಾಗಿ ಬಹುತೇಕ ತುಂಬಿದೆ. ಸದ್ಯ 18.46 ಟಿಎಂಸಿ ನೀರು ಸಂಗ್ರಹವಾಗಿದೆ. ಕೇರಳದಲ್ಲಿ ಈಗಲೂ ಮಳೆಯಾಗುತ್ತಿದೆ. ಇದರಿಂದಾಗಿ ಒಳ ಹರಿವು ಏರಿಕೆ ಕಂಡಿದೆ. ಸದ್ಯ ಜಲಾಶಯದಿಂದ 23,333 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಸದ್ಯ 2906.10 ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟವು 2922 ಅಡಿ. ಜಲಾಶಯದಿಂದ 250 ಕ್ಯೂಸೆಕ್‌ ನೀರು ಮಾತ್ರ ಹೊರ ಬಿಡಲಾಗುತ್ತಿದೆ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಒಳ ಹರಿವಿನಲ್ಲಿ ಏರಿಕೆ ಕಂಡಿದೆ. ಜಲಾಶಯ ತುಂಬಲು ಇನ್ನೂ 12 ಅಡಿ ನೀರು ಬೇಕು. ಸದ್ಯ ಇಲ್ಲಿ 23.838 ಟಿಎಂಸಿ ನೀರು ಸಂಗ್ರಹವಾಗಿದೆ.

ತುಂಗಾ ಜಲಾಶಯದಿಂದ 60 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ

ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮವಾಗಿ ಶಿವಮೊಗ್ಗದ ತುಂಗಾ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಈಗಾಗಲೇ ಜಲಾಶಯ ತುಂಬಿರುವುದರಿಂದ ಬಂದಷ್ಟೇ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಶಿವಮೊಗ್ಗ ನಗರದ ಬಳಿ ಪ್ರವಾಹದ ಸನ್ನಿವೇಶ ಎದುರಾಗಿದೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ ತುಂಗ ನದಿಗೆ 61757 ಕ್ಯೂಸೆಕ್ ನೀರು ನಿರಂತರವಾಗಿ ಹರಿದ ಬರುತ್ತಿದೆ. ಒಳ ಹರಿವಿನ ಪ್ರಮಾಣವೂ ಅಷ್ಟೇ ಇದೆ. ಜಲಾಶಯದ ನೀರಿನ ಮಟ್ಟವು 588.24 ಮೀಟರ್‌ ನಷ್ಟಿದೆ. ಸದ್ಯ 3.24 ಟಿಎಂಸಿ ನೀರು ಸಂಗ್ರಹವಾಗಿದೆ.

ಭದ್ರಾಗೂ ಭಾರೀ ನೀರು

ಚಿಕ್ಕಮಗಳೂರು ಭಾಗದಲ್ಲಿ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಭದ್ರಾ ಜಲಾಶಯಕ್ಕೂ ಒಳ ಹರಿವು ಮಂಗಳವಾರವೂ ಅಧಿಕವಾಗಿದೆ. 27839 ಕ್ಯೂಸೆಕ್

ಇದ್ದರೆ ಹೊರ ಹರಿವು 166 ಕ್ಯೂಸೆಕ್ ಮಾತ್ರ ಇದೆ. ಜಲಾಶಯದ ನೀರಿನ ಮಟ್ಟವು 144.7 ಅಡಿ ಯಷ್ಟಿದೆ. ಜಲಾಶಯ ತುಂಬಲು186 ಅಡಿ ತಲುಪಬೇಕು. ಜಲಾಶಯದಲ್ಲಿ 71.5 ಟಿಎಂಸಿ ನೀರು ಸಂಗ್ರಹಿಸಬಹುದಾಗಿದ್ದು, ಸದ್ಯ 30.142 ಟಿಎಂಸಿ ನೀರು ಸಂಗ್ರಹವಾಗಿದೆ.

ಜುಲೈ 8ರಂದು ಜಲಾಶಯದಲ್ಲಿ 133.1 ಅಡಿ ನೀರಿತ್ತು. ಮಂಗಳವಾರದ ಲೆಕ್ಕಾಚಾರದಂತೆ 144.7 ಅಡಿಗೆ ತಲುಲಿದೆ. ವಾರದ ಅಂತರದಲ್ಲೇ 11 ಅಡಿ ನೀರು ಸೊರಗಿದ್ದ ಭದ್ರಾ ಜಲಾಶಯ ಸೇರಿರುವುದು ವಿಶೇಷ.

ಆಲಮಟ್ಟಿ ಹೊರ ಹರಿವು ಏರಿಕೆ

ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು. ಹೊರ ಹರಿವನ್ನು ಏರಿಸಲಾಗಿದೆ. ಸದ್ಯ 61683 ಕ್ಯೂಸೆಕ್ ನೀರು ಜಲಾಶಯಕ್ಕೆ ಬರುತ್ತಿದ್ದು, ಹೊರ ಹರಿವಿನ ಪ್ರಮಾಣವು 17563 ಕ್ಯೂಸೆಕ್‌ ನಷ್ಟಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟವು :519.60 ಮೀಟರ್‌ ಇದ್ದು. ಸದ್ಯ 517.84 ಮೀಟರ್‌ ಇದೆ. ಒಟ್ಟು 95.474 ಟಿಎಂಸಿ ನೀರು ಜಲಾಶಯದಲ್ಲಿ ಈವರೆಗೂ ಸಂಗ್ರಹವಾಗಿದೆ. ಇಲ್ಲಿ 123.081 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ.

ತುಂಗಭದ್ರಾದಲ್ಲೂ ಹೆಚ್ಚಳ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೂ ಮಂಗಳವಾರ ಒಳಹರಿವು ಅಧಿಕವಾಗಿದೆ. ಸದ್ಯ 27,390 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಸದ್ಯ 35.216 ಟಿಎಂಸಿ ನೀರು ಮಾತ್ರ ಇಲ್ಲಿ ಸಂಗ್ರಹವಾಗಿದೆ. ತುಂಗಭದ್ರಾ ಜಲಾಶಯದಲ್ಲಿ 100.85 ಟಿಎಂಸಿ ನೀರು ಸಂಗ್ರಹಿಸಬಹುದು. ಮಲೆನಾಡಿನಲ್ಲಿ ಭಾರೀ ಮಳೆಯಾಗಿ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದಿಂದ ಜಲಾಶಯದ ಒಳ ಹರಿವು ಬುಧವಾರ ಹೊತ್ತಿಗೆ ಮತ್ತಷ್ಟು ಹೆಚ್ಚಲಿದೆ.

Whats_app_banner