Karnataka Reservoirs: ಆಲಮಟ್ಟಿ. ಕಬಿನಿ, ತುಂಗಾ ಹಾರಂಗಿ ಜಲಾಶಯದಿಂದ ಹರಿದ ಭಾರೀ ನೀರು, ಕೆಆರ್‌ಎಸ್, ಭದ್ರಾ ಒಳಹರಿವು ಹೆಚ್ಚಳ
Karnataka Dam levels ಕರ್ನಾಟಕದ ನಾನಾ ಭಾಗ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳ ಹರಿವು ಅಧಿಕವಾಗಿ ಹೊರ ಹರಿವು ಕೂಡ ಹೆಚ್ಚಿಸಲಾಗುತ್ತಿದೆ.
ಬೆಂಗಳೂರು: ಕರ್ನಾಟಕದ ಬಹುತೇಕ ಎಲ್ಲಾ ಜಲಾಶಯಗಳಿಗೆ( Karnataka Reservoirs) ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅದೇ ರೀತಿಯಲ್ಲಿ ಹೊರ ಹರಿವಿನ ಪ್ರಮಾಣವನ್ನೂ ಕೂಡ ಏರಿಕೆ ಮಾಡಲಾಗುತ್ತಿದೆ. ಆಲಮಟ್ಟಿ,ಕೃಷ್ಣರಾಜಸಾಗರ, ಭದ್ರಾ, ಕಬಿನಿ, ತುಂಗಭದ್ರಾ, ಹಾರಂಗಿ, ಭದ್ರಾ, ಹೇಮಾವತಿ, ತುಂಗಾ ಸೇರಿದಂತೆ ಬಹುತೇಕ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಾಣುತ್ತಲೇ ಇದೆ. ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ( Karnataka Rains) ಎಡಬಿಡದೇ ಮಳೆಯಾಗುತ್ತಿದೆ.ನೆರೆಯ ಮಹಾರಾಷ್ಟ್ರ( Maharashtra Rains) ಹಾಗೂ ಕೇರಳದಲ್ಲೂ( Kerala Rains) ಮಳೆಯಾಗಿರುವುದರಿಂದ ಜಲಾಶಯಗಳಿಗೆ ಕಳೆ ಬಂದಿದೆ. ಭಾರೀ ಮಳೆಯಿಂದ ಅಲ್ಲಲ್ಲಿ ಅನಾಹುತಗಳು ಉಂಟಾಗಿದ್ದು.ನದಿ ಪಾತ್ರಗಳಲ್ಲೂ ಅಪಾಯ ಇರುವುದರಿಂದ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಕೆಆರ್‌ಎಸ್‌ಗೆ ಭಾರೀ ನೀರು
ಕಾವೇರಿ ಕಣಿವೆಯ ದೊಡ್ಡ ಜಲಾಶಯ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಕೊಡಗಿನಲ್ಲಿ ಮಳೆಯಾಗುತ್ತಿರುವ ಜತೆಗೆ ಹಾರಂಗಿ ಜಲಾಶಯದಿಂದಲೂ ನೀರು ಬರುತ್ತಿರುವುದು ಒಳಹರಿವಿನ ಪ್ರಮಾಣ ಹೆಚ್ಚಿಸಿದೆ. ಇದರಿಂದಾಗಿ ಜಲಾಶಯ ನೀರಿ ನ ಮಟ್ಟದಲ್ಲೂ ಏರಿಕೆ ಕಂಡು ಬಂದಿದೆ. ಜಲಾಶಯಕ್ಕೆ ಬುಧವಾರ ಬೆಳಿಗ್ಗೆ 36674 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟವು 110.60 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ. ಜಲಾಶಯದಲ್ಲಿ 32.33ಟಿಎಂಸಿ ನೀರು ಸಂಗ್ರಹವಾಗಿದೆ. ಇಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸುವ ಅವಕಾಶವಿದೆ. ಜಲಾಶಯದಿಂದ 2361 ಕ್ಯೂಸೆಕ್ ನೀರು ಮಾತ್ರ ಹೊರ ಹೋಗುತ್ತಿದೆ.
ಕಬಿನಿಯಿಂದ ಭಾರೀ ನೀರು ಹೊರಕ್ಕೆ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ತುಂಬಿ ಒಳ ಹರಿವಿನ ಪ್ರಮಾಣವೂ ಏರಿಕೆಯಾಗಿರುವುದರಿಂದ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ನಂಜನಗೂಡು ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕಬಿನಿ ಜಲಾಶಯಕ್ಕೆ ಬುಧವಾರ ಬೆಳಿಗ್ಗೆ 33640 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು,. ಹೊರ ಹರಿವಿನ ಪ್ರಮಾಣವನ್ನು 40ಸಾವಿರ ಕ್ಯೂಸೆಕ್‌ಗೆ ಏರಿಕೆ ಮಾಡಲಾಗಿದೆ. ಈ ಅವಧಿಯಲ್ಲಿ ಇಷ್ಟು ಪ್ರಮಾಣದಲ್ಲಿ ನೀರು ಬರುತ್ತಿರುವುದು ಹಾಗೂ ಹೊರ ಹೋಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.ಜಲಾಶಯದ ನೀರಿನ ಮಟ್ಟವು 2282.33 ಅಡಿಯಷ್ಟಿದೆ. ಗರಿಷ್ಠ ಮಟ್ಟ2284 ಅಡಿ. ಜಲಾಶಯದಲ್ಲಿ 18.44. ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಬೇಗನೇ ತುಂಬಿರುವುದರಿಂದ ಕಪಿಲಾ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಭಾರೀ ನೀರು ಹರಿದು ಹೋಗಿ ಕಾವೇರಿ ಗದ್ದಲ ತಗ್ಗಿದಂತಾಗಿದೆ. ಕೇರಳದಲ್ಲಿನ ಮಳೆಯಿಂದಾಗಿ ಕಬಿನಿಗೆ ಭಾರೀ ನೀರು ಹರಿದು ಬರುತ್ತಿದ್ದು, ಇದು ಇನ್ನೂ ಹೆಚ್ಚುವ ಅಂದಾಜಿದೆ.
ಆಲಮಟ್ಟಿಗೆ ಲಕ್ಷ ಕ್ಯೂಸೆಕ್ ನೀರು
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಬರುತ್ತಿರುವ ಒಳ ಹರಿವಿನ ಪ್ರಮಾಣ ಒಂದು ಲಕ್ಷ ಕ್ಯೂಸೆಕ್ ತಲುಪಿದೆ. ಬುಧವಾರ ಬೆಳಿಗ್ಗೆ ಹೊತ್ತಿಗೆ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದ್ದರಿಂದ ಹೊರ ಹರಿವನ್ನು ಹೆಚ್ಚಿಸಲಾಗಿದೆ. ಈಗಾಗಲೇ ಜಲಾಶಯದ ನೀರಿನ ಮಟ್ಟವೂ ಏರಿಕೆಯಾಗಿದೆ. ಇದರಿಂದ ಸದ್ಯ 55063 ಕ್ಯೂಸೆಕ್ ನೀರನ್ನು ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 518.07 ಮೀಟರ್ ತಲುಪಿದೆ. ಗರಿಷ್ಠ ಮಟ್ಟವು 519.60 ಮೀಟರ್.ಜಲಾಶಯದಲ್ಲಿ 98.729 ಟಿಎಂಸಿ ನೀರು ಸಂಗ್ರಹವಾಗಿದ್ದು. 123.081ಟಿಎಂಸಿ ಸಂಗ್ರಹಿಸಲು ಅವಕಾಶವಿದೆ. ಮಹಾರಾಷ್ಟ್ರದಲ್ಲಿನ ಮಳೆ ಕಾರಣದಿಂದ ಆಲಮಟ್ಟಿ ಜಲಾಶಯಕ್ಕೆ ಈ ವರ್ಷ ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಹೊರ ಬರುತ್ತಿದೆ.
ಭದ್ರಾ ಮಟ್ಟದಲ್ಲಿ ನಿಧಾನ ಏರಿಕೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ನಿಧಾನಕ್ಕೆ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಬಹುತೇಕ ತಳ ಹಿಡಿದಿದ್ದ ಜಲಾಶಯ ಈಗ ಒಂದಷ್ಟು ನೀರು ಕಂಡಿದೆ. ಭದ್ರಾ ಜಲಾಶಯಕ್ಕೆ ಬುಧವಾರ ಬೆಳಿಗ್ಗೆ 34544 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು ಇನ್ನೂ 169 ಕ್ಯೂಸೆಕ್ ಇದೆ. ಜಲಾಶಯದಲ್ಲಿ 148 .6 ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟವು 186 ಅಡಿ. ಜಲಾಶಯದಲ್ಲಿ 33.112 ಟಿಎಂಸಿ ನೀರು ಸಂಗ್ರಹವಾಗಿದೆ.ಇಲ್ಲಿ 71.5 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.
ಹಾರಂಗಿ ಜಲಾಶಯ
ಕೊಡಗಿನ ಹಾರಂಗಿ ಜಲಾಶಯಕ್ಕೆ ಸದ್ಯ 12,472 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 10,000 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2852.60 ಅಡಿ ತಲುಪಿದೆ. ಇಲ್ಲಿನ ಗರಿಷ್ಠ ಮಟ್ಟವು 2859 ಅಡಿ. ಜಲಾಶಯದಲ್ಲಿ 6.49 ಟಿಎಂಸಿ ನೀರು ಸಂಗ್ರಹಿಸಲಾಗಿದೆ.
ಹೇಮಾವತಿ ಜಲಾಶಯ
ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿರುವ ಹೇಮಾವತಿ ಜಲಾಶಯಕ್ಕೆ ಬುಧವಾರ 25,862 ಕ್ಯೂಸೆಕ್ ನೀರು ಹರಿದು ಬರುತ್ತಿದೆ, ಹೊರ ಹರಿವು 250 ಕ್ಯೂಸೆಕ್ ಮಾತ್ರ ಇದೆ. ಜಲಾಶಯದ ನೀರಿನ ಮಟ್ಟವು 2909.15ಅಡಿಗೆ ತಲುಪಿದೆ. ಜಲಾಶಯದಲ್ಲಿ 2922 ಅಡಿ ನೀರು ಸಂಗ್ರಹಿಸಬಹುದು. ಸದ್ಯ 26.047ಟಿಎಂಸಿ ನೀರು ಹೇಮಾವತಿಯಲ್ಲಿ ಸಂಗ್ರಹವಿದೆ. ಇಲ್ಲಿ 37.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.